Advertisement

ಮತದಾರರಿಗೆ ಮುಂಬೈನಿಂದಲೇ ಅತೃಪ್ತರ ಪತ್ರ

11:31 PM Jul 14, 2019 | Lakshmi GovindaRaj |

ಬೆಂಗಳೂರು: ಮೈತ್ರಿ ಸರ್ಕಾರದ ಮೇಲೆ ಮುನಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ತಮ್ಮ ಕ್ಷೇತ್ರದ ಮತದಾರರಿಗೆ ತಮ್ಮ ರಾಜೀನಾಮೆಗೆ ಕಾರಣವೇನು ಎನ್ನುವ ಕಾರಣ ನೀಡಿ ಪತ್ರ ಬರೆದು, ಮನವಿ ಮಾಡಿಕೊಂಡಿದ್ದಾರೆ.

Advertisement

ಕ್ಷೇತ್ರದ ಮತದಾರರಿಗೆ ಮಾಡಿಕೊಂಡಿರುವ ಮನವಿಯಲ್ಲಿ ತಮ್ಮ ರಾಜೀನಾಮೆಗೆ 12 ಕಾರಣಗಳನ್ನು ನೀಡಿರುವ ಅತೃಪ್ತರು, ಮತದಾರರ ಅನುಕಂಪ ಗಳಿಸುವ ಯತ್ನ ನಡೆಸಿದ್ದಾರೆ. ಅತೃಪ್ತ ಶಾಸಕರು ತಮ್ಮ ಕ್ಷೇತ್ರದ ಮತದಾರರಿಗೆ ಬರೆದಿರುವ ಪತ್ರ ಮಾಧ್ಯಮಗಳಿಗೆ ದೊರೆತಿದ್ದು, ಪತ್ರದ ಸಾರಾಂಶ ಹೀಗಿದೆ.

ಪ್ರೀತಿಯ ಕ್ಷೇತ್ರದ ಮತದಾರರುಗಳೇ…
* ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟು ಪ್ರಾರಂಭವಾಗಿದ್ದು ಬೆಳಗಾವಿ ಜಿಲ್ಲೆಯ ಮಹಿಳಾ ಶಾಸಕಿಯಿಂದ. ಅದೀಗ ಇಲ್ಲಿಯವರೆಗೂ ಬಂದು ನಿಂತಿದೆ.

* ಬೆಳಗಾವಿ ಜಿಲ್ಲೆಯ ಸಮಸ್ಯೆ ಬಗೆಹರಿಸಲು ಯಾವ ನಾಯಕರು ಪ್ರಯತ್ನ ಮಾಡಲಿಲ್ಲ. ಸಮನ್ವಯ ಸಮಿತಿಯ ಅಧ್ಯಕ್ಷರಾಗಲಿ, ಕೆಪಿಸಿಸಿ ಅಧ್ಯಕ್ಷರಾಗಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಲಿ, ಉಸ್ತುವಾರಿ ಕರ್ನಾಟಕ ಇವರಾಗಲಿ ಯಾವುದೇ ಪ್ರಯತ್ನ ಮಾಡಲಿಲ್ಲ. ಈ ಸಮಸ್ಯೆ ಹೆಮ್ಮರವಾಗಿ ಬೆಳೆದು ಈಗ ಸರ್ಕಾರವನ್ನು ಬಲಿಕೊಡುವ ಹಂತಕ್ಕೆ ಬಂದು ನಿಂತಿದೆ.

* ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಪ್ರಭಾವಿ ಸಚಿವರ ಹಸ್ತಕ್ಷೇಪದಿಂದ ಇಡಿ ಜಿಲ್ಲೆಯ ನಾಯಕರು ಬೇಸತ್ತರು.

Advertisement

* ಕಳೆದ ಒಂದು ವರ್ಷದಿಂದ ಕಾಂಗ್ರೆಸ್‌ ಶಾಸಕರಾದ ನಾವು ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯ ಬಗ್ಗೆ, ನಮ್ಮ ಸಮಸ್ಯೆಗಳ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷರು, ಉಪಮುಖ್ಯಮಂತ್ರಿ, ಕೆ.ಸಿ.ವೇಣುಗೋಪಾಲ್ ಸೇರಿ ಇನ್ನಿತರ ಹೈಕಮಾಂಡ್‌ ನಾಯಕರಿಗೆ ಅನೇಕ ಬಾರಿ ಪ್ರಸ್ತಾಪಿಸಿದರೂ ಕೂಡ ಯಾರೂ ಸ್ಪಂದಿಸಲಿಲ್ಲ.

* ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಕಚೇರಿಯಲ್ಲಿ ಶಾಸಕರ ಪತ್ರಗಳಿಗೆ ಮಾನ್ಯತೆ ದೊರಕುತ್ತಿರಲಿಲ್ಲ.

* ಸಮ್ಮಿಶ್ರ ಸರ್ಕಾರದಲ್ಲಿ ನಾವು ಒಂದು ವರ್ಷದಿಂದ ಶಾಸಕರಾಗಿ ಕಾರ್ಯ ನಿರ್ವಹಣೆ ಮಾಡುವ ಸಂದರ್ಭದಲ್ಲಿ ಪ್ರತಿ ಬಾರಿಯೂ ನಮ್ಮ ಪರಿಚಯವನ್ನು ಹೇಳಿಕೊಳ್ಳಬೇಕಾಗಿತ್ತು. ಅಂತಹ ಅನನುಭವಿ ಅಧಿಕಾರಿಗಳು ಮತ್ತು ಸ್ವಜಾತಿ ಬಾಂಧವರನ್ನು ನೇಮಿಸಿಕೊಂಡಿದ್ದರು. ಹಾಗಾಗಿ, ನಮ್ಮ ಮನವಿಗೆ ಕಿವಿಗೊಡುತ್ತಿರಲಿಲ್ಲ.

* ಎಚ್‌.ಡಿ ರೇವಣ್ಣ ಮತ್ತು ನಮ್ಮ ಪಕ್ಷದ ಪ್ರಭಾವಿ ಸಚಿವರೊಬ್ಬರ ಸ್ವಹಿತಾಸಕ್ತಿಯಿಂದ ಮತ್ತು ಎಲ್ಲಾ ಇಲಾಖೆಗಳಲ್ಲಿ ಅವರು ನಡೆಸುತ್ತಿದ್ದ ಹಸ್ತಕ್ಷೇಪದಿಂದ ಕೆಲಸಗಳಿಗೆ ಅಡಚಣೆ ಉಂಟಾಯಿತು.

* ಕಳೆದ ಒಂದು ವರ್ಷದಿಂದ ಸಮನ್ವಯ ಸಮಿತಿ ಅಧ್ಯಕ್ಷರಾಗಲಿ, ಉಪಮುಖ್ಯಮಂತ್ರಿಯಾಗಲಿ, ಇಂದು ಮುಂಚೂಣಿಯಲ್ಲಿರುವ ಡಿ.ಕೆ.ಶಿವಕುಮಾರ್‌ ಆಗಲಿ ಶಾಸಕರ ಕ್ಷೇತ್ರದ ಅಭಿವೃದ್ಧಿ ಮತ್ತು ಇನ್ನಿತರ ವಿಚಾರಗಳ ಬಗ್ಗೆ ಸೌಜನ್ಯಕ್ಕೂ ಒಂದು ದಿನ ಸಹ ಶಾಸಕರನ್ನು ಕರೆದು ಮಾತನಾಡಿಸಿಲ್ಲ.

* ನಾವು ಅನೇಕ ಬಾರಿ ಕ್ಷೇತ್ರದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಆದರೂ ಪ್ರಯೋಜನವಾಗಲಿಲ್ಲ.

* ಅದೇ ರೀತಿ ಸರ್ಕಾರದಲ್ಲಿ ನಮ್ಮ ಪಕ್ಷದ ಉಪಮುಖ್ಯಮಂತ್ರಿಗಳ ಹತ್ತಿರ ಕೂಡ ಹಲವು ವಿಚಾರ ಪ್ರಸ್ತಾಪ ಮಾಡಿದ್ದೇವು. ಅವರು ಕೂಡ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

* ಕೆಪಿಸಿಸಿ ಅಧ್ಯಕ್ಷರು ಕೂಡ ನಮ್ಮ ಮನವಿಗೆ ಕಿವಿಗೊಡಲಿಲ್ಲ. ಅವರ ಕಾರ್ಯವೈಖರಿ, ಜಿಲ್ಲಾಧ್ಯಕ್ಷರ ರೀತಿಯಲ್ಲಿತ್ತು.

* ಈ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು.

ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನಾವು ಅತ್ಯಂತ ಭಾರವಾದ ಹೃದಯದಿಂದ ಎಲ್ಲಾ ಸಾಧಕ-ಬಾಧಕಗಳನ್ನು ಪರಿಶೀಲಿಸಿ ನಮಗೆ ಮತ ನೀಡಿದ ಕ್ಷೇತ್ರದ ಮತದಾರರ ಹಿತದೃಷ್ಟಿಯಿಂದ ಮತ್ತು ಕ್ಷೇತ್ರದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಎಲ್ಲಾ ಸಮಾನ ಮನಸ್ಕ ಶಾಸಕರು ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ. ಶಾಸಕ ಸ್ಥಾನಕ್ಕೆ ಅನಿವಾರ್ಯವಾಗಿ, ಅತ್ಯಂತ ದುಃಖದಿಂದ ರಾಜೀನಾಮೆ ನೀಡಿದ್ದೇವೆ.

ಇಂತಿ
ನೊಂದು ರಾಜೀನಾಮೆ ನೀಡಿರುವ ಶಾಸಕರುಗಳು

Advertisement

Udayavani is now on Telegram. Click here to join our channel and stay updated with the latest news.

Next