Advertisement

ಹಸಿವು ಕಲಿಸಿದ ಪಾಠ

06:00 AM Dec 27, 2018 | |

ರಾಜಕುಮಾರ ರಾಜ್ಯಪರ್ಯಟನೆಗೆ ಹೊರಟನೆಂದರೆ ಆತನ ಜೊತೆ ಒಬ್ಬ ಅಂಗರಕ್ಷಕ ಆಹಾರ, ನೀರನ್ನು ಮನೆಯಿಂದ ಕಟ್ಟಿಕೊಂಡು ಹೋಗಬೇಕಾಗಿತ್ತು. ಏಕೆಂದರೆ ಅಪ್ಪಿತಪ್ಪಿಯೂ ರಾಜಕುಮಾರ ದಾರಿಯಲ್ಲಿ ಸಿಗುವ ಹೊಳೆಯ ನೀರು ಅಥವಾ ಅರಣ್ಯದಲ್ಲಿ ಸಿಗುವ ಹಣ್ಣುಹಂಪಲನ್ನು ಸೇವಿಸುತ್ತಿರಲಿಲ್ಲ. 

Advertisement

ಕಾಶಂಭಿ ರಾಜ್ಯದಲ್ಲಿ ಸುಶ್ರುತನೆಂಬ ರಾಜಕುಮಾರನಿದ್ದ. ಅವನಿಗೆ ಸ್ವಚ್ಛತೆ ಮತ್ತು ಸೌಂದರ್ಯದ ಮೇಲೆ ಅತಿಯಾದ ಕಾಳಜಿ. ಒಂದು ವಸ್ತುವನ್ನು ಮುಟ್ಟುವುದಕ್ಕೂ ಆತ ಹಿಂದೆ ಮುಂದೆ ನೋಡುತ್ತಿದ್ದ. ಮುಟ್ಟಿದರೆ ಎಲ್ಲಿ ತನಗೆ ಯಾವುದಾದರೂ ರೋಗ ಅಂಟಿಬಿಡುವುದೋ ಎಂಬ ಭಯ ಅವನದ್ದು. ರಾಜನಿಗೆ ವಯಸ್ಸಾಗಿತ್ತು. ವಯಸ್ಸಿಗೆ ಬಂದ ರಾಜಕುಮಾರ ತನ್ನ ಜಾಗ ತುಂಬಿ ಪ್ರಜೆಗಳ ಯೋಗಕ್ಷೇಮ ವಿಚಾರಿಸಲಿ ಎಂಬುದು ಅವನ ಯೋಚನೆಯಾಗಿತ್ತು. ಹೀಗಾಗಿ “ರಾಜನಾದವನು ಪ್ರಜೆಗಳ ಕಷ್ಟ ಸುಖಗಳನ್ನು ವಿಚಾರಿಸಬೇಕಾದುದು ನ್ಯಾಯ. ಹೀಗಾಗಿ ಇನ್ನು ಮುಂದೆ ತಿಂಗಳಿಗೊಮ್ಮೆ ರಾಜ್ಯ ಪರ್ಯಟನೆ ಮಾಡಿ ಬಾ’ ಎಂದ. ಅದರಂತೆ ರಾಜಕುಮಾರ ಪ್ರಜೆಗಳ ಬಳಿ ಹೊರಟ. 

ರಾಜಕುಮಾರನ ಜೊತೆ ಅಂಗ ರಕ್ಷಕರೂ ಇದ್ದರು. ಅವರಿಗೆ ಪ್ರಜೆಗಳ ಯೋಗ ಕ್ಷೇಮ ವಿಚಾರಿಸುವ ಬದಲು ರಾಜಕುಮಾರನ ಯೋಗಕ್ಷೇಮ ನೋಡುವುದೇ ದೊಡ್ಡ ಸಾಹಸವಾಯಿತು. ರಾಜಕುಮಾರ ಹೊರಟನೆಂದರೆ ಆತನ ಜೊತೆ ಒಬ್ಬ ಆಹಾರ-ನೀರು ಎಲ್ಲವನ್ನೂ ಮನೆಯಿಂದ ಕಟ್ಟಿಕೊಂಡು ಹೋಗಬೇಕಾಗಿತ್ತು. ಯಾಕೆಂದರೆ, ಅಪ್ಪಿತಪ್ಪಿಯೂ ರಾಜಕುಮಾರ ದಾರಿಯಲ್ಲಿ ಸಿಗುವ ಹೊಳೆಯ ನೀರು ಅಥವಾ ಅರಣ್ಯದಲ್ಲಿ ಸಿಗುವ ಹಣ್ಣು-ಹಂಪಲನ್ನು ಸೇವಿಸುತ್ತಿರಲಿಲ್ಲ. ಅತಿಯಾದರೆ ಅಮೃತ ಕೂಡಾ ವಿಷವಾದಂತೆ ರಾಜಕುಮಾರನ ವರ್ತನೆ ದಿನ ದಿನಕ್ಕೂ ಮಿತಿ ಮೀರಿತು. ಇದು ರಾಜನಿಗೆ ದೊಡ್ಡ ಸಮಸ್ಯೆ ಆಯಿತು. ಹೀಗೇ ಆದರೆ ರಾಜ್ಯದ ಗತಿ ಏನು? ರಾಜ್ಯ ಪರ್ಯಟನೆ ಮಾಡಿ ಪ್ರಜೆಗಳನ್ನು ನೋಡಿಕೊಳ್ಳುವುದು ಹೇಗೆಂದು ತನ್ನ ದುಃಖವನ್ನು ಮಂತ್ರಿಯ ಬಳಿ ತೋಡಿಕೊಂಡ. ಆಗ ಮಂತ್ರಿಯು ಇದಕ್ಕೊಂದು ಉಪಾಯ ಸೂಚಿಸಿದ. 

ರಾಜಕುಮಾರ ಮುಂದಿನ ಬಾರಿ ರಾಜ್ಯ ಪರ್ಯಟನೆಗೆ ಹೋದಾಗ ಯಥಾ ಪ್ರಕಾರ ಅವನ ಜೊತೆ ಒಬ್ಬ ಅಂಗರಕ್ಷಕ ನೀರು ಮತ್ತು ಆಹಾರವನ್ನು ತೆಗೆದುಕೊಂಡು ಹೊರಟ. ದಾರಿಯಲ್ಲಿ ಕಾಡು ಎದುರಾಯಿತು. ರಾಜಕುಮಾರ ಮುಂದೆ ಸಾಗುತ್ತಿದ್ದಂತೆ ಅವನ ಆಪ್ತ ಅಂಗರಕ್ಷಕ, ಮಂತ್ರಿ ಹೇಳಿ ಕೊಟ್ಟಿದ್ದ ಉಪಾಯದಂತೆ ಮರದ ಹಿಂದೆ ಅವಿತು ಕುಳಿತ. ಉಳಿದವರು ರಾಜಕುಮಾರನೊಂದಿಗೆ ಮುಂದೆ ಸಾಗಿದರು.

ರಾಜಕುಮಾರ ಹಿಂದೆ ಉಳಿದ ಅಂಗರಕ್ಷಕನಿಗಾಗಿ ಕಾದ. ಹೊತ್ತು ಉರುಳುತ್ತಿದ್ದಂತೆ ಹಸಿವು ಮತ್ತು ಬಾಯಾರಿಕೆ ತಡೆಯಲಾಗಲಿಲ್ಲ. ಆತ ಬರುವ ಸೂಚನೆಯೂ ಕಾಣಲಿಲ್ಲ. ಮತ್ತೂಬ್ಬ ಅಂಗರಕ್ಷಕ, “ಇಲ್ಲೇ ಹತ್ತಿರದಲ್ಲಿ ಹಳ್ಳಿಯೊಂದಿದೆ. ರಾತ್ರಿ ಅಲ್ಲೇ ಬಿಡಾರ ಹೂಡಬಹುದು’ ಎಂದ. ಕತ್ತಲಾಗುವ ಮೊದಲು ರಾಜಕುಮಾರ ಹಳ್ಳಿ ತಲುಪಿದ. ಹಳ್ಳಿಯ ಜನರು ರಾಜ ಪರಿವಾರವನ್ನು ಆದರದಿಂದ ಬರಮಾಡಿಕೊಂಡರು. ಜನರು ತಮಗಾಗಿ ತಯಾರಿಸಿದ ಊಟದಲ್ಲೇ ಇವರಿಗೂ ಪಾಲು ನೀಡಿದರು. ರಾಜಕುಮಾರನ ಹಸಿವು ಮಿತಿ ಮೀರಿತ್ತು. “ಹಸಿದವನೇ ಬಲ್ಲ ಅನ್ನದ ರುಚಿ’ ಅನ್ನೋ ಹಾಗೆ ರಾಜಕುಮಾರ ಹೊಟ್ಟೆ ತುಂಬಾ ಊಟ ಮಾಡಿದ. ನಂತರ ಸ್ವಲ್ಪ ಹೊತ್ತು ನೆಲಕ್ಕೆ ತಲೆ ಊರಿದ. ದಣಿದಿದ್ದ ಆತನಿಗೆ ಕಣ್ಣು ತುಂಬಾ ನಿದ್ದೆ ಬಂತು. 

Advertisement

ಮರುದಿನ ಹಳ್ಳಿಗೆ ಒಂದು ಸುತ್ತು ಬಂದ. ಅಲ್ಲಿನ ಜೀವನ, ಶ್ರಮದ ಕೆಲಸ, ಅವರ ನೆಮ್ಮದಿ ಎಲ್ಲವನ್ನೂ ಕಣ್ಣಾರೆ ಕಂಡ. ನಂತರ ಕೆಲವೇ ದಿನಗಳಲ್ಲಿ ರಾಜಕುಮಾರ ಬದಲಾದ. ಅಲ್ಲಿನ ವಾತಾವರಣ ಅವನನ್ನು ಬದಲಾಯಿಸಿತು. ಕೊಳದಲ್ಲಿ ನೀರು ಕುಡಿದ, ಅರಣ್ಯದಲ್ಲಿ ಸಿಗುವ ಹಣ್ಣನ್ನು ತಿಂದ. ಮಂತ್ರಿಯ ಉಪಾಯ ಫ‌ಲಿಸಿತ್ತು. ರಾಜಕುಮಾರ ಬದಲಾಗಿದ್ದನ್ನು ಕಂಡು ರಾಜನಿಗೆ ಸಂತೋಷವಾಯಿತು.

 ಪ್ರೇಮಾ ಲಿಂಗದಕೋಣ

Advertisement

Udayavani is now on Telegram. Click here to join our channel and stay updated with the latest news.

Next