Advertisement

ಜಿಯೋ ಟಿವಿಯಲ್ಲೂ ವಿದ್ಯಾರ್ಥಿಗಳಿಗೆ ಪಾಠ

01:14 AM Jan 18, 2021 | Team Udayavani |

ಬೆಂಗಳೂರು: ಆನ್‌ಲೈನ್‌, ಆಫ್ಲೈನ್‌ ತರಗತಿಗಳ ಜತೆಗೆ ಇನ್ನು ಮುಂದೆ  ವಿದ್ಯಾರ್ಥಿಗಳಿಗೆ ಜಿಯೋ ಟೀವಿ ಮೂಲಕವೂ ಪಾಠ ಸಿಗಲಿದೆ.

Advertisement

ಐದರಿಂದ ಎಸೆಸೆಲ್ಸಿ ತರಗತಿವರೆಗಿನ ರಾಜ್ಯ  ಪಠ್ಯ ಕ್ರಮದ ವಿದ್ಯಾರ್ಥಿಗಳಿಗೆ ಇನ್ನಷ್ಟು ಅನುಕೂಲ ಮಾಡಿ ಕೊಡುವ ನಿಟ್ಟಿನಲ್ಲಿ ಜಿಯೋ ಟಿವಿಯಲ್ಲೂ  ಶೀಘ್ರ ಪಾಠ ಪ್ರಸಾರವಾಗಲಿದೆ. ಈಗಾಗಲೇ ಸಂವೇದಾ  ಮೂಲಕ  ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಜಿಯೋ ಟಿ.ವಿ. ಮೂಲಕವೂ  ತರಗತಿಗಳು ಲಭ್ಯವಾಗಲಿವೆ .

ಈಗಾಗಲೇ, ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಿದ್ದರೂ ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ಸಂವೇದಾ ತರಗತಿಗಳು ನಿರಂತರವಾಗಿ ಸಾಗುತ್ತಿವೆ. ಹಾಗೆಯೇ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮವೂ ನಡೆಯುತ್ತಿದೆ.  ಈ ವಿದ್ಯಾರ್ಥಿಗಳಿಗೂ ಸಂವೇದಾ ಪಾಠ ಯಥಾಪ್ರಕಾರ (ಸಮಯದಲ್ಲಿ ಬದಲಾವಣೆಯಾಗಿದೆ) ಮುಂದುವರಿದಿದೆ. 1ರಿಂದ 5ನೇ ತರಗತಿ ಮಕ್ಕಳಿಗೆ ರೇಡಿಯೋ ಪಾಠವೂ ನಡೆಯುತ್ತಿದೆ.

ಹಿಂದೆಯೇ ಇತ್ತು ಚಿಂತನೆ :

ಲಾಕ್‌ಡೌನ್‌ ಅವಧಿಯಲ್ಲಿ   ಸರಕಾರಿ ಶಾಲಾ ಮಕ್ಕಳ ಕಲಿಕೆ ಮುಂದುವರಿಸಲು ವಿವಿಧ ಮಾರ್ಗ ಅನುಸರಿಸಲಾಗಿತ್ತು. ವಿದ್ಯಾಗಮ ಅನುಷ್ಠಾನ, ದೂರದರ್ಶನದ ಸಂವೇದಾ ಪಾಠ, ವಾಟ್ಸ್‌ ಆ್ಯಪ್‌ ಗ್ರೂಪ್‌ ಮೂಲಕ ಕಲಿಕಾ ಸಾಮಗ್ರಿ ಒದಗಿಸುವುದು  ಮುಂತಾದವುಗಳನ್ನು ಸ್ಥಳೀಯ ಆವಶ್ಯಕತೆ, ತಂತ್ರಾಂಶ ಲಭ್ಯತೆ ಆಧಾರದಲ್ಲಿ ಅನುಷ್ಠಾನ ಮಾಡಿಕೊಳ್ಳಲಾಗಿತ್ತು. ಇದೇ ವೇಳೆ ಸ್ಥಳೀಯ ಕೇಬಲ್‌ ಚಾಲನ್‌ಗಳಲ್ಲೂ ಪಾಠ ಪ್ರಸಾರಕ್ಕೆ ಶಿಕ್ಷಣ ಇಲಾಖೆ  ಪ್ರಯತ್ನಿಸಿತ್ತು. ಅಲ್ಲದೆ, ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಸ್ಥಳೀಯ ಕೇಬಲ್‌ ಆಪರೇಟರ್ ಜತೆಗೂ  ಚರ್ಚಿಸಿದ್ದರು.  ಆದರೆ,  ಆ ಕಾರ್ಯ ಸಾಕಾರವಾಗಿರಲಿಲ್ಲ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ(ಡಿಎಸ್‌ಇಆರ್‌ಟಿ) ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಜಿಯೋ ಆ್ಯಪ್‌ ಬೇಕು :

ಡಿಎಸ್‌ಇಆರ್‌ಟಿ ಎಲ್ಲ ಸಿದ್ಧತೆಯಾಗಿ ಜಿಯೋ ಟಿವಿಯಲ್ಲಿ ಪಾಠ ಪ್ರಸಾರ ಮಾಡಲು ಆರಂಭಿಸಿದ ಬಳಿಕ ಆ ಪಾಠಗಳನ್ನು ನಿತ್ಯವೂ ವಿದ್ಯಾರ್ಥಿಗಳು ತಮ್ಮ ಪಾಲಕ, ಪೋಷಕರ ಮೊಬೈಲ್‌ ಮೂಲಕ ಅಥವಾ ಸ್ಮಾರ್ಟ್‌ ಟಿ.ವಿ. (ಇಂಟರ್‌ನೆಟ್‌ ಸಂಪರ್ಕ ನೀಡಬಲ್ಲ ಅಥವಾ ಆ್ಯಂಡ್ರಾಯಿಡ್‌ ಆಪ್‌ ಬಳಸಲು ಸಾಧ್ಯವಿರುವ)ಗಳ ಮೂಲಕ  ಆಲಿಸಬಹುದು. ಇದಕ್ಕಾಗಿ ಜಿಯೋ ಟಿವಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ನೋಂದಣಿ ಮಾಡಿದ ಬಳಿಕ ನಿತ್ಯದ ತರಗತಿಗಳನ್ನು ಆಯಾ ಸಮಯದ ಆಧಾರದಲ್ಲಿ ನೋಡಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಿಯೋ ಟಿವಿಯಲ್ಲಿ ಉಚಿತವಾಗಿ ಪಾಠ ಪ್ರಸಾರ ಮಾಡುವ ಸಂಬಂಧ ಡಿಎಸ್‌ಇಆರ್‌ಟಿ ಹಾಗೂ ಜಿಯೋ ಟಿವಿಯೊಂದಿಗೆ  ಒಡಂಬಡಿಕೆ  ಪೂರ್ಣಗೊಂಡಿದೆ. ಗ್ರಾಮೀಣ ಭಾಗದಲ್ಲಿ ಜಿಯೋ ಟಿವಿ ಲಭ್ಯತೆ ಹಾಗೂ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಜಿಯೋ ಟಿವಿ ಮೂಲಕ ಹೇಗೆ ತಲುಪಬಹುದು. ಇದರಿಂದ ಎದುರಾಗಬಹುದಾದ ತಾಂತ್ರಿಕ ಸಮಸ್ಯೆ ಇತ್ಯಾದಿಗಳ ಮಾಹಿತಿ ಸಂಗ್ರಹಿಸು ತ್ತಿದ್ದೇವೆ. ಸಂವೇದಾ ತರಗತಿಗಳ ಜತೆಗೆ ಜಿಯೋ ಟಿವಿ ಯಲ್ಲೂ ತರಗತಿ ಪ್ರಸಾರ ಮಾಡುವುದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಒಪ್ಪಂದ  ಮಾಡಿಕೊಂಡಿದ್ದೇವೆ.  -ಎಂ.ಆರ್‌. ಮಾರುತಿ  ನಿರ್ದೇಶಕ , ಡಿಎಸ್‌ಇಆರ್‌ಟಿ

 

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next