ವರದಿ: ಮಂಜುನಾಥ ಮಹಾಲಿಂಗಪುರ
ಕುಷ್ಟಗಿ: ಮಕ್ಕಳಿಗೆ ಆಟಿಕೆ, ಗೊಂಬೆಗಳಿಂದ ವಿಜ್ಞಾನ-ಗಣಿತದ ಪಾಠ ಮಾಡುವ ಮಾದರಿ ಶಿಕ್ಷಕರು ಕುಷ್ಟಗಿಯಲ್ಲಿದ್ದಾರೆ. ಶಿಕ್ಷಕ ಸೇವೆಯಿಂದ ನಿವೃತ್ತರಾಗಿದ್ದರೂ ಶಾಲಾ ಮಕ್ಕಳ ಮನಸ್ಸನ್ನು ಜಾಗೃತಗೊಳಿಸಿ ಕಲಿಕಾಸಕ್ತರನ್ನಾಗಿಸುವ ಶ್ಯಾಮಣ್ಣ ಸರ್ ಅವರ ಸೇವೆ ವಿಭಿನ್ನವಾಗಿದೆ.
ನಿವೃತ್ತ ಶಿಕ್ಷಕ ಶ್ಯಾಮರಾವ್ ಕುಲಕರ್ಣಿ ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದವರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿ, ಸಂಪನ್ಮೂಲ ವ್ಯಕ್ತಿಯಾಗಿ ಪ್ರೌಢಶಾಲಾ ಶಿಕ್ಷಕರಾಗಿ 2016ರಲ್ಲಿ ನಿವೃತ್ತರಾಗಿದ್ದಾರೆ. ಅವರ ಪತ್ನಿ ಸಹ ಶಿಕ್ಷಕಿಯಾಗಿದ್ದು, ಕುಷ್ಟಗಿ ತಾಲೂಕಿನ ಶಾಖಾಪುರ ಶಾಲೆಯಲ್ಲಿ ಸೇವೆಯಲ್ಲಿದ್ದಾರೆ. ಹೀಗಾಗಿ ಈ ದಂಪತಿ ಕುಷ್ಟಗಿಯಲ್ಲಿ ವಾಸವಾಗಿದ್ದಾರೆ. ಶ್ಯಾಮರಾವ್ ಕುಲಕರ್ಣಿ ಅವರು ಶಾಮಣ್ಣ ಸರ್ ಎಂದೇ ಪರಿಚಿತರು. ಗೊಂಬೆಗಳನ್ನು ಸಂಗ್ರಹಿಸುವುದು ಅವರ ವಿಶಿಷ್ಟ ಹವ್ಯಾಸ. ಅವರು ಎಲ್ಲಿಯೇ ಪ್ರವಾಸಕ್ಕೆ ಹೋದರು ಗೊಂಬೆಗಳನ್ನು ಖರೀದಿಸದೇ ವಾಪಸ್ಸಾಗುವುದಿಲ್ಲ. ಗೊಂಬೆಗಳು ಎಷ್ಟೇ ದುಬಾರಿಯಾಗಿದ್ದರೂ ಖರೀದಿಸಿ ಮನೆಗೆ ತಂದು ಜತನವಾಗಿಟ್ಟಿದ್ದಾರೆ. ಅವರು ಇಲ್ಲಿಯವರೆಗೂ 12 ಲಕ್ಷ ರೂ. ಮೊತ್ತದ ಆಟಿಕೆ, ಗೊಂಬೆ ಖರೀದಿಸಿದ್ದಾರೆ. ಇದರಲ್ಲಿ ವಿಜ್ಞಾನ, ಗಣಿತ ವೈಜ್ಞಾನಿಕ ಆಟಿಕೆಗಳು 3ರಿಂದ 4 ಲಕ್ಷ ರೂ. ವೆಚ್ಚವಾಗುತ್ತಿದ್ದು, ಅವರು ಈ ಆಟಿಕೆಗಳ ಖರೀ ದಿ ವಿಷಯದಲ್ಲಿ ವೆಚ್ಚಕ್ಕೆ ಲೆಕ್ಕ ಇಟ್ಟಿಲ್ಲ.
ಮನೆ ಮಿನಿ ಪ್ರಯೋಗಾಲಯ: ಶ್ಯಾಮಣ್ಣ ಸರ್ ಅವರು ಈ ಗೊಂಬೆಗಳು, ಕಲಿಕಾ ಸಾಮಗ್ರಿಗಳಿಗೆ ಪ್ರತ್ಯೇಕ ಮನೆಯನ್ನು ಬಾಡಿಗೆ ಪಡೆದಿದ್ದು, ಸದ್ಯ ಮನೆ ಮಿನಿ ಪ್ರಾಯೋಗಾಲಯವಾಗಿದೆ. ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್ ವಿಷಯಗಳ ಕಲಿಕಾ ಸಾಮಾಗ್ರಿಗಳಿಂದ ಭರ್ತಿಯಾಗಿದೆ. ಫೈಥಾಗೋರಸ್ ಪ್ರಮೇಯ, ನ್ಯೂಟನ್ ಚಲನೆಯ ಮೂರು ನಿಯಮ, ಬೆಳಕಿನ ವಕ್ರೀಭವನ, ಶಬ್ಧ ಶಕ್ತಿಯ ರೂಪ, ವಾಹಕ ಅವಾಹಕ ಕಲ್ಪನೆ, ಗಣಿತದ ಲ.ಸಾ.ಅ. ಸರಳೀಕರಣದ ಲೆಕ್ಕ ಬಿಡುವ ಕ್ರಮದ ಮಾದರಿ, ಇತ್ಯಾ ದಿ ಕಲಿಕಾ ಉಪಕರಣಗಳಿದ್ದು, ವಿದ್ಯಾರ್ಥಿಗಳಿಗೆ ಕ್ಲಿಷ್ಟದ ವಿಷಯ ಕಠಿಣವಾಗದು ಎನ್ನುವುದು ಅವರ ಮನದಿಂಗಿತವಾಗಿದೆ.
ಕಲಿಸುವಿಕೆ-ಕಲಿಕೆ: ಗೊಂಬೆಗಳ ಮ್ಯೂಸಿಯಂ ಆಗಿರುವ ಅವರ ಮನೆಗೆ ಬರುವ ಅತಿಥಿಗಳಿಗೆ ಗೊಂಬೆಗಳ ಚಲನ, ವಲನ ಅವುಗಳ ವೈಜ್ಞಾನಿಕ ಹಿನ್ನೆಲೆ ತೋರಿಸುವುದೇ ಅವರಿಗೆ ಎಲ್ಲಿಲ್ಲದ ಖುಷಿ. ಅಂತೆಯೇ ಶಾಲೆಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನಕ್ಕೆ ಪೂರಕವಾದ ತರಹೇವಾರಿ ಗೊಂಬೆಗಳು, ಕಲಿಕಾ ಸಾಮಾಗ್ರಿಗಳ ಮೂಲಕ ಕಲಿಕಾಸಕ್ತಿ ಹೆಚ್ಚಿಸಿದ್ದಾರೆ. ಅಲ್ಲದೇ ಕೆಲವು ಕಲಿಕಾ ಸಾಮಾಗ್ರಿಗಳನ್ನು ತಾವೇ ತಯಾರಿಸಿರುವುದು ಇಲ್ಲಿ ಗಮನಾರ್ಹವಾಗಿದೆ.
ವಿಸ್ಮಯವಲ್ಲ: ಹಂಪೆಯ ಶ್ರೀವಿರೂಪಾಕ್ಷ ದೇವಾಲಯದ ಮುಖ್ಯ ಗೋಪುರ ಮೇಲೆ ಸೂರ್ಯ ಬೆಳಕಿಗೆ ಗೋಪುರ ತಲೆ ಕೆಳಗಾಗಿ ಕಾಣುವುದು ಯಾವುದೇ ವಿಸ್ಮಯವಲ್ಲ. ಅದೊಂದು ಬೆಳಕಿನ ಪ್ರಕ್ರಿಯೆಯಾಗಿದೆ. ಸಾಮಾನ್ಯ ರಟ್ಟಿನ ಬಾಕ್ Õಗೆ ಕಿಂಡಿ, ಮಾಡಿ ನೋಡಿದಾಗ ರಟ್ಟಿನ ಬಾಕ್ಸ್‌ನಲ್ಲಿ ಪ್ರವೇಶಿಸಿಸುವ ಬೆಳಕಿನ ಪ್ರತಿಬಿಂಬ ತಲೆ ಕೆಳಗಾಗಿ ಕಾಣುವುದು ಮನೆಯಲ್ಲಿ ಯಾರೂ ಬೇಕಾದರೂ ಮಾಡಬಹುದಾಗಿದೆ. ಆತ್ಮ ಸಂತೃಪ್ತಿಯ ಸೇವೆ: ಶ್ಯಾಮಣ್ಣ ಸರ್ ಅವರು ಶಾಲಾ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸುವ ಅವರ ಈ ಸೇವೆಯಿಂದ ತಮಗೆ ಮಕ್ಕಳಿಲ್ಲ ಎಂಬ ಕೊರಗು ನೀಗಿಸಿಕೊಂಡಿದ್ದಾರೆ. ತಮ್ಮ ಇಳಿವಯಸ್ಸಿನಲ್ಲಿ ಏಕಾಂತವನ್ನು ಈ ನಿರ್ಜಿವ ಗೊಂಬೆಗಳು ದೂರ ಮಾಡಿದ್ದು, ಮಕ್ಕಳ ಸಂತಸದ ಕಲಿಕೆಯಿಂದ ತಮ್ಮ ಈ ಸೇವೆಯಲ್ಲಿ ಆತ್ಮಸಂತೃಪ್ತಿ ಕಂಡುಕೊಂಡಿದ್ದಾರೆ.