Advertisement

Gundlupete: ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ

03:07 PM Jan 20, 2024 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿರುವ ಘಟನೆ ತಾಲೂಕಿನ ಕುಂದಕೆರೆ ಅರಣ್ಯ ವಲಯ ವ್ಯಾಪ್ತಿಯ ಬಾಚಹಳ್ಳಿ ಸಮೀಪ ನಡೆದಿದೆ.

Advertisement

ಬಾಚಹಳ್ಳಿ ಗ್ರಾಮದ ಮುದ್ದಪ್ಪ ಎಂಬವರಿಗೆ ಸೇರಿದ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸುಮಾರು 5-6 ವರ್ಷ ವಯಸ್ಸಿನ ಚಿರತೆ ಸೆರೆಯಾಗಿದೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಬೊಮ್ಮಲಾಪುರ ಗ್ರಾಮದ ಗೋಪಾಲ ನಾಯಕ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕುರಿ‌‌ ಮೇಲೆ ಚಿರತರ ದಾಳಿ‌ ನಡೆಸಿ‌‌ ಕೊಂದು ಹಾಕಿತ್ತು. ಅದಲ್ಲದೇ ಬಾಚಹಳ್ಳಿ, ಅಂಕಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಜನರು ಹಾಗೂ ರೈತರಲ್ಲಿ ಆತಂಕ ಸೃಷ್ಟಿ ಮಾಡಿತ್ತು.

ಈ ಹಿನ್ನೆಲೆ ರೈತರು ಮತ್ತು ಸ್ಥಳೀಯರ ಒತ್ತಾಯದ ಮೇರೆಗೆ ಕುಂದಕೆರೆ ವಲಯದ ಆರ್.ಎಫ್‌.ಓ. ನವೀನ ಕುಮಾರ್ ‌ನೇತೃತ್ವದಲ್ಲಿ ಬೋನು ಇರಿಸಲಾಗಿತ್ತು. ಇದೀಗ ಆ ಬೋನಿಗೆ ಚಿರತೆ ಬಿದ್ದಿದೆ.

Advertisement

ಬೋನಿಗೆ ಚಿರತೆ ಬಿದ್ದ ಮಾಹಿತಿ ಅರಿತ ಅರಣ್ಯಾಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೆರೆಯಾದ ಚಿರತೆಯನ್ನು ಬಂಡೀಪುರದ ಮೂಲೆ ಹೊಳೆ ಅರಣ್ಯ ಪ್ರದೇಶದ ಒಳಗೆ ಬಿಡಲು ಚಿಂತಿಸಲಾಗಿದೆ ಎಂದು ಕುಂದಕೆರೆ ವಲಯದ ಅರಣ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ವೇಳೆ ಕುಂದಕೆರೆ ವಲಯದ ಆರ್.ಎಫ್.ಓ ನವೀನ್ ಕುಮಾರ್, ಅರಣ್ಯಾಧಿಕಾರಿ ‌ಮನೋಹರ್, ಮಹೇಶ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next