ನಿನ್ನ ಕೊನೆಯೆಂದರೆ ನಿನ್ನ ಸಮಸ್ಯೆಗಳ ಕೊನೆಯಾಗಲು ಸಾಧ್ಯವೆ ಹೇಳು. ನಿನ್ನ ಅವಲಂಬಿತರ ಗತಿಯೇನು ಅಂತ ಗಳಿಗೆ ಯೋಚಿಸು. ನೀನು ಪಡುತ್ತಿರುವ ಬವಣೆಗಳ ಹತ್ತು ಪಟ್ಟು ನಿನ್ನನ್ನು ನೆಚ್ಚಿಕೊಂಡವರು ಎದುರಿಸಬೇಕಾದೀತು. ಸರ್ಕಾರ ಕೊಡುವ ಪರಿಹಾರಕ್ಕೆ ನಿನ್ನನ್ನು ತೂಗಲಾದೀತೆ? ನಿನ್ನ ಅಗಲಿಕೆಯನ್ನು ಅವರು ಏನನ್ನೇ ಕೊಟ್ಟರೂ ಭರಿಸಲಾರರು.
ಪ್ರಿಯ ರೈತ ಬಂಧು,
ರಸಋಷಿ ಕುವೆಂಪು ನಿನ್ನನ್ನು ಉಳುವ ಯೋಗಿಯ ನೋಡಲ್ಲಿ ಎಂದು ಸಂಬೋದಿಸಿ ಎಲ್ಲರ ಗಮನ ನಿನ್ನ ಅನುಪಮ ಕಾಯಕದತ್ತ ಸೆಳೆದಿದ್ದಾರೆ. ಕೋಟಿ ವಿದ್ಯೆಗಿಂತ ಮೇಟಿವಿದ್ಯೆ ಮೇಲೆಂಬ ನುಡಿ ಅದೆಷ್ಟು ದಿಟವೆಂದು ಎಳೆಯ ಕೂಸಿಗೂ ಗೊತ್ತು. “ಅನ್ನವಲ್ಲದೆ ಚಿನ್ನವನು ತಿನ್ನುವುದು ಸಾಧ್ಯವೇನು?’ ಎನ್ನುವ ಹಳೆಯ ಅರ್ಥಪೂರ್ಣ ಸಿನಿಮಾ ಹಾಡು ನೆನಪಾಗುತ್ತದೆ. ಅಮೆರಿಕದ ಪ್ರಸಿದ್ಧ ನಟ, ಅಂಕಣಕಾರನಾಗಿದ್ದ ವಿಲ್ ರೋಜರ್ಸ್ “ರೈತ ಆಶಾವಾದಿ ಆಗಿರಬೇಕು ಇಲ್ಲವೆ ಆತ ರೈತನಾಗಿರಬಾರದು’ ಅಂತ ಖಡಕ್ಕಾಗಿ ನುಡಿದಿದ್ದಾನೆ. ಈ ಮಾತಿನ ಹಿಂದೆ ಅತೀವ ಕಾಳಜಿಯಿದೆ. ಮಣ್ಣು ಸಜೀವ ಪರಿಸರ ಅಭಿಯಾನ. ಕೃಷಿಕ ಅತ್ಯಮೂಲ್ಯ ಆಸ್ತಿ. ನಿನಗೂ ನಿನ್ನ ಜಮೀನಿಗೂ ಭಾವನಾತ್ಮಕ ನಂಟಿದೆ. ಎಂದಮೇಲೆ ಒಬ್ಬ ತಾನು ಬೆಳೆದ ಬೆಳೆಗೆ ಬೆಲೆ ಬರಲಿಲ್ಲವೆಂಬ ಕಾರಣಕ್ಕೆ ಖನ್ನನಾಗಿ ಅದನ್ನು ರಸ್ತೆಗೆ, ಚರಂಡಿಗೆ ಒಗೆಯುವುದು ಎಂಥ ಬಾಲಿಶ? ಇದು ನಿನಗೆ ನೀನೇ ಸೃಷ್ಟಿಸಿಕೊಳ್ಳುವ ದುರಂತ. ಈ ವಿಪರ್ಯಾಸ ಯಾವ ಹಂತ ತಲುಪಿದೆಯೆಂದರೆ ಬೆಳೆಗೆ ಬೆಂಕಿ ಹಚ್ಚುವ ಅತಿರೇಕಗಳೂ ನಡೆದಿವೆ! ಹತಾಶೆ, ನಿರಾಸೆ ದಾಟಿ ಕಬ್ಬು ಹಲವರ ಬಾಯನ್ನು ಸಿಹಿಯಾಗಿಸಬಹುದಿತ್ತು.
ನೀನು ಕೇವಲ ಬೆಳೆಗಾರ ಮಾತ್ರವಲ್ಲ. ನಿನ್ನ ಹೊಲ,ಗದ್ದೆಯ ನಳನಳಿಸುವ ಹಸಿರು ಬೆಳೆ ನಯನಮನೋಹರ. ಬೆಳೆ ಬೆಳೆದು ಅಂತರ್ಜಲ ಸಂಗ್ರಹಕ್ಕೂ ನೀನು ಕೊಡುಗೆ ನೀಡುತ್ತಿದ್ದೀಯೆ. ಅಂತೆಯೆ ವನ್ಯಜೀವಿ ಸಂರಕ್ಷಣೆಗೂ ನಿನ್ನ ಕೈಂಕರ್ಯ ಪೂರಕ. ಈಚೆಗಂತೂ ಕಾಂಕ್ರೀಟುರಹಿತ ಬಯಲೇ ಪ್ರೇಕ್ಷಣೀಯ ತಾಣವೆನ್ನಿಸಿದೆ! ಜಮೀನು ಖಾಲಿಯಿದ್ದರೂ ಸರಿಯೆ ಅದೂ ಒಂದು ಘನವೆ. ಒಂದು ಪ್ರಸಂಗ ನೆನಪಾಗುತ್ತದೆ. ಒಂದು ಹಳ್ಳಿಗೆ ಕಾಲೇಜು ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಬರುತ್ತಾರೆ. “ಧೋ ಧೋ’ ಎಂದು ಮಳೆ ದಿಢೀರನೆ ಸುರಿಯುತ್ತದೆ. ಆ ತಂಡದ ನಾಯಕ ಪೆಚ್ಚಾಗಿ ಜೋಪಡಿಯಡಿ ನಿಂತವರಿಗೆ ಹೇಳುತ್ತಾನೆ; “ಮಳೆ ನಮ್ಮ ಪ್ರವಾಸಕ್ಕೆ ಭಂಗ ತಂದಿರಬಹುದು. ರೈತನ ಬೆಳೆ ಉಳಿಸುವುದಾದರೆ ಮಳೆ ಸುರಿಯದಿರು ಎನ್ನಲು ನಾವು ಯಾರು?’
ನೀನೇನೊ ಸಾಲ ಬಾಧೆಯಿಂದಲೊ, ಬೆಳೆ ಬರಲಿಲ್ಲವೆಂದೊ ಇಲ್ಲವೆ ಮಳೆ ಕೈಕೊಟ್ಟಿತೆಂದೊ ನೇಣಿಗೆ ಸರದಿಯಲ್ಲಿ ನಿಂತುಬಿಡುತ್ತಿ ಅನ್ನು. ನಿನ್ನ ಕೊನೆಯೆಂದರೆ ನಿನ್ನ ಸಮಸ್ಯೆಗಳ ಕೊನೆಯಾಗಲು ಸಾಧ್ಯವೆ ಹೇಳು. ನಿನ್ನ ಅವಲಂಬಿತರ ಗತಿಯೇನು ಅಂತ ಗಳಿಗೆ ಯೋಚಿಸು. ನೀನು ಪಡುತ್ತಿರುವ ಬವಣೆಗಳ ಹತ್ತು ಪಟ್ಟು ನಿನ್ನನ್ನು ನೆಚ್ಚಿಕೊಂಡವರು ಎದುರಿಸಬೇಕಾದೀತು. ಸರ್ಕಾರ ಕೊಡುವ ಪರಿಹಾರಕ್ಕೆ ನಿನ್ನನ್ನು ತೂಗಲಾದೀತೆ? ನಿನ್ನ ಅಗಲಿಕೆಯನ್ನು ಅವರು ಏನನ್ನೇ ಕೊಟ್ಟರೂ ಭರಿಸಲಾರರು. ಬಹುತೇಕ ನಮ್ಮ ಬೇಸಾಯ ಪ್ರಕೃತಿಯವಲಂಬಿತ. ಎಲ್ಲೆಡೆ ನೀರಾವರಿ ನಿರೀಕ್ಷಿಸಲಾದೀತೆ? ಅಂದಹಾಗೆ ನೀರಿನ ಅಭಾವಕ್ಕಿಂತಲೂ ಅದರ ನಿರ್ವಹಣೆಯೇ ಗಂಭೀರ ಸವಾಲು. ಆದರೆ ಲಭ್ಯವಿರುವ ತಂತ್ರಜ್ಞಾನ ನೀನು ಬಳಸಿಕೊಂಡರೆ ನಿನ್ನ ತಲ್ಲಣ, ತವಕಗಳು ಸಾಕಷ್ಟು ಹಗುರಗೊಂಡಾವು. ಮೊನ್ನೆ ಟಿ.ವಿ.ಯಲ್ಲಿ ನೋಡಿದೆ. ಯುವಕನೊಬ್ಬ ರಿಮೋಟ್ ಬಳಸಿ ಹೊಲ ಉಳುವ ಯಂತ್ರ ಸಿದ್ಧಪಡಿಸಿದ್ದಾನೆ. ಮೊಬೈಲಿನಿಂದ ಪಂಪ್‌ಸೆಟ್ ಚಾಲೂಗೊಳಿಸಬಹುದು. ಸರಾಗವಾಗಿ ಮರವೇರಿಸುವ ಯಂತ್ರಗಳುಂಟು. ಆಗಿಂದಾಗ್ಗೆ ನೀನು ತಾಂತ್ರಿಕ ಪ್ರಗತಿಯ ಮಾಹಿತಿ ಪಡೆದುಕೊಡರೆ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆಗಳನ್ನಿಡುತ್ತಿ.
ನಿನಗೆ ನಿಷ್ಟುರ ಪ್ರಶ್ನೆಗಳಿವು. ಎಂದಾದರೂ ನೀನು ಕೃಷಿ ಸಂಶೋಧನಾಲಯ ಸ್ಥಾಪಿಸಿ. ಕಾಳು, ಹಣ್ಣು,ತರಕಾರಿ ಸಂಸ್ಕರಣ ಘಟಕ ಆರಂಭಿಸಿ. ಕೃಷಿ ಗ್ರಂಥಾಲಯ ಇಲ್ಲವೆ ಮಾಹಿತಿ ಕೇಂದ್ರ ತೆರೆಯಿರಿ ಅಂತ ಆಗ್ರಹಿಸಿದ್ದೀಯ? ಪ್ರಚಲಿತ ಸಮಸ್ಯೆಗಳು, ಆಧುನಿಕ ತಂತ್ರಜಾnನ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರ ಬಗ್ಗೆ ತರಬೇತಿ, ಕಮ್ಮಟ, ಸಂವಾದ ಏರ್ಪಡಿಸಿ ಎಂದು ಒತ್ತಾಯಸಿದ್ದೀಯ? ಗುಳೆ ಹೋಗುವೆ ಎನ್ನುವೆ. ನೀನು ದೂರ ಸರಿದರೆ ಸಂದಿಗ್ಧಳೇನೂ ಗುಳೆ ಹೋಗುವುದಿಲ್ಲವಲ್ಲ? ಅರ್ಥಮಾಡಿಕೊ. ಆಕಾಶವಾಣಿಯಲ್ಲಿ ರೈತರಿಗೆ ಮನಮುಟ್ಟುವಂತೆ ಮಳೆ, ನಾಟಿ, ಬಿತ್ತನೆ, ಬೆಳೆ, ಮಾರುಕಟ್ಟೆ…ಏನೆಲ್ಲ ವಿಷಯ ತಿಳಿಸಿ ತಕ್ಕ ಸಲಹೆ, ಸೂಚನೆ ನೀಡುತ್ತಿದ್ದರಲ್ಲ ನೆನಪಿಸಿಕೊ. ಈಗಲೂ ಅಂಥ ಅವಕಾಶಗಳಿವೆ. ನೀನು ಬಳಸಿಕೊ. ನಿನ್ನ ಇತಿಮಿತಿಯಲ್ಲಿ ಹವಾಮಾನ ಇಲಾಖೆ ತಜ್ಞರೊಡನೆ ಚರ್ಚಿಸಬಹುದು. ಮಳೆ, ಆ ಕುರಿತ ಅತಿವೃಷ್ಟಿ, ಅನಾವೃಷ್ಟಿ ಸಂಭಾವ್ಯತೆ ಅರಿಯಬಹುದು. ಜಗತ್ತು ಕಿರಿದಾಗುತ್ತಿದೆ. ಬೇಸಾಯಪ್ರದಾನ ದೇಶಗಳಿಗೆ ಭೇಟಿ ನೀಡಿ ತಿಳಿವಳಿಕೆ ಪಡೆಯುವುದು ಹನುಮ ಸಂಜೀವಿನಿ ತಂದಷ್ಟು ತ್ರಾಸವೆ ಹೇಳು. ನಿಮ್ಮ ಒಂದು ತಂಡವೋ, ನಿನ್ನ ಮಕ್ಕಳ್ಳೋ ಆ ಅಭಿಯಾನ ಕೈಗೊಳ್ಳಬಹುದು.
ಅರಣ್ಯ ಇಲಾಖೆಯೊಂದಿಗೆ ನೀನು ಸಂಪರ್ಕ ವಿಟ್ಟುಕೊಂಡರೆ ನಿನ್ನ ಹೊಲ, ಗದ್ದೆಗೆ ಕಾಡು ಮೃಗಗಳು ದಾಳಿಯಿಟ್ಟಾಗ ಕನಿಷ್ಟ ನೀನು ಮಾಡಬಹುದಾದುದೇನು ಗೊತ್ತಾದೀತು. ಒಟ್ಟಾರೆ ಮನೋಬಲವೇ ಮಹಾಬಲ. ನಿನಗೆ ಈ ದಾಸೋಕ್ತಿ ಸ್ಫೂರ್ತಿ ತರಲಿ.
“ನೆಟ್ಟ ಸಸಿ ಫಲ ಬರುವತನಕ ಶಾಂತಿಯ ತಾಳು
ಕಟ್ಟು ಬುತ್ತಿಯ ಮುಂದೆ ಉಣಲುಂಟು ತಾಳು’
– ಬಿಂಡಿಗನವಿಲೆ ಭಗವಾನ್