Advertisement

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

01:28 AM Oct 04, 2024 | Team Udayavani |

ಮಂಗಳೂರು/ ಉಡುಪಿ: ಕರಾವಳಿಯಲ್ಲಿ ನವರಾತ್ರಿ ಹಬ್ಬದಾಚರಣೆಗೆ ಸಂಭ್ರಮದಿಂದ ಚಾಲನೆ ಸಿಕ್ಕಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ದಿಂದ ಶರನ್ನವರಾತ್ರಿ ಮಹೋತ್ಸವ ಆರಂ ಭವಾಗಿದ್ದು, ದೇವಿ ಆಲಯಗಳಲ್ಲಿ ಸಂಭ್ರ ಮದ ವಾತಾವರಣ ಕಂಡುಬರುತ್ತಿದೆ.

“ಮಂಗಳೂರು ದಸರಾ’ ಎಂದೇ ಪ್ರಖ್ಯಾತಿ ಪಡೆದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ಮಹೋತ್ಸವಕ್ಕೆ ಚಾಲನೆ ನೀಡಿದರು.

ದೇಗುಲದ ದರ್ಬಾರ್‌ ಮಂಟಪದಲ್ಲಿ ಶಾರದೆ, ಆದಿ ಶಕ್ತಿ, ಗಣಪತಿ ಸಹಿತ ನವದುರ್ಗೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.

ಜಿಲ್ಲೆಯ ಪ್ರಮುಖ ದೇವಿ ಆಲಯ ಗಳಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರ, ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ಕ್ಷೇತ್ರ ಸಹಿತ ವಿವಿಧ ದೇವಾಲಯಗಳಲ್ಲಿ ನವರಾತ್ರಿ ಉತ್ಸವ ಆರಂಭಗೊಂಡಿತು.

Advertisement

ಮಂಗಳೂರಿನ ಮಹತೋಭಾರ ಶ್ರೀ ಮಂಗಳಾದೇವಿ ದೇವಾಲಯದಲ್ಲಿ ಕ್ಷೇತ್ರದ ತಂತ್ರಿಗಳಾದ ವೇ| ಮೂ| ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳು ನವರಾತ್ರಿ ಮಹೋತ್ಸವವನ್ನು ಉದ್ಘಾಟಿಸಿದರು.

ಮುಂಜಾನೆಯಿಂದಲೇ ವಿಶೇಷ ಪೂಜೆಗಳು, ಭಜನೆ, ಮಧ್ಯಾಹ್ನ ಮಹಾ ಪೂಜೆ, ಅನ್ನ ಸಂತರ್ಪಣೆಗಳು ನಡೆದವು. ಎಲ್ಲ ದೇವಾಯಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಮೊದಲ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಎರಡನೇ ದಿನ ಶುಕ್ರವಾರವಾಗಿರುವ ಹಿನ್ನೆಲೆಯಲ್ಲಿ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಇಮ್ಮಡಿಯಾಗುವ ಸಾಧ್ಯತೆಯಿದೆ.

ಉಡುಪಿ ಜಿಲ್ಲೆಯಲ್ಲೂ ದಸರಾ
ಜಿಲ್ಲಾದ್ಯಂತ ದೇವಿ ದೇವಸ್ಥಾನಗಳಲ್ಲಿ ಗುರುವಾರದಿಂದ ನವರಾತ್ರಿ ಉತ್ಸವ, ವೈಭವ ಆರಂಭಗೊಂಡಿದೆ.

ಬೆಳಗ್ಗಿನಿಂದಲೇ ದೇವಿಯ ಆಲಯ ಗಳಲ್ಲಿ ವಿಶೇಷ ಪೂಜೆ, ಹೋಮ, ಹವನ, ದುರ್ಗಾನಮಸ್ಕಾರ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಕಮಲಶಿಲೆಯ ಶ್ರೀ ಬ್ರಾಹ್ಮಿದುರ್ಗಾಪರಮೇಶ್ವರಿ ದೇವಸ್ಥಾನ, ಕುಂಜಾರು ಶ್ರೀ ಮಹಿಷ ಮರ್ದಿನಿ ದೇವಸ್ಥಾನ, ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಡಿಯಾಳಿ ಶ್ರೀ ಮಹಿಷಾ ಮರ್ದಿನಿ ದೇವಸ್ಥಾನ, ಇಂದ್ರಾಳಿಯ ಇಂದ್ರಾಣಿ ಶ್ರೀ ಪಂಚದುರ್ಗಾಪರಮೇಶ್ವರಿ, ಬೈಲೂರಿನ ಶ್ರೀ ಮಹಿಷಮರ್ದಿನಿ, ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ, ಪುತ್ತೂರಿನ ಭಗವತಿ ಶ್ರೀ ದುರ್ಗಾಪರಮೇಶ್ವರಿ, ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳಿ ಸಹಿತವಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ದುರ್ಗಾಲಯಗಳಲ್ಲಿ ನವರಾತ್ರಿ ಉತ್ಸವ ಆರಂಭಗೊಂಡಿದೆ.

ವಿವಿಧ ಭಾಗಗಳಿಂದ ಭಕ್ತರು ಬೆಳಗ್ಗಿನಿಂದಲೇ ದೇವಸ್ಥಾನಗಳಿಗೆ ಆಗ ಮಿಸಿದ್ದರು. ದೇವಸ್ಥಾನಗಳನ್ನು ವಿವಿಧ ಪ್ರಕಾರದ ವಿದ್ಯುತ್‌ ದೀಪಾಲಂಕಾರ, ಹೂವುಗಳ ಮೂಲಕ ಅಲಂಕರಿಸಲಾಗಿತ್ತು. ದೇವರಿಗೆ ವಿಶೇಷ ಅಲಂಕಾರವನ್ನೂ ಮಾಡಲಾಗಿತ್ತು.
ದೇವಸ್ಥಾನವಷ್ಟೇ ಅಲ್ಲದೆ ದೇವಸ್ಥಾನ ಸಂಪರ್ಕ ಕಲ್ಪಿಸುವ ರಸ್ತೆಯ ಆಸುಪಾಸು ಗಳ ಮಾರ್ಗಗಳಲ್ಲೂ ವಿದ್ಯುತ್‌ ದೀಪಾ ಲಂಕಾರ ಕೈಗೊಳ್ಳಲಾಗಿತ್ತು. ಕೆಲವು ಮನೆಗಳಲ್ಲಿ ಕದಿರು ಕಟ್ಟುವ ಪ್ರಕ್ರಿಯೆಯೂ ನಡೆಯಿತು.ವಿವಿಧ ದೇವಸ್ಥಾನಗಳಲ್ಲಿ ಮಧ್ಯಾಹ್ನದ ವೇಳೆ ಸಾವಿರಾರು ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ಕೊಲ್ಲೂರಿನಲ್ಲಿ ನವರಾತ್ರಿಗೆ ಚಾಲನೆ
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಅ. 3ರಂದು ಬೆಳಗ್ಗೆ ಧಾರ್ಮಿಕ ವಿಧಿಗಳೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ದೇಗುಲದ ಅರ್ಚಕ ಕೆ.ಎನ್‌. ಸುಬ್ರಹ್ಮಣ್ಯ ಅಡಿಗರ ನೇತೃತ್ವದಲ್ಲಿ ಉದಯ ಪೂಜೆ, ಸ್ತಂಭ ಗಣಪತಿ ಪೂಜೆ, ನಾಂದಿಪುಣ್ಯಾಹ, ಪ್ರದೋಷ ಪೂಜೆ, ನವರಾತ್ರಿ ಕಲಶ ಸ್ಥಾಪನೆ, ಕಲ್ಫೋಕ್ತ ಪೂಜೆ ಮಹಾ ಮಂಗಳಾರತಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next