Advertisement

ಒಂದು ನಗುವಿನ ಹಪಹಪಿಕೆ

11:37 AM Nov 03, 2017 | |

ಇಂಜಿನಿಯರಿಂಗ್‌ ಓದುತ್ತಿದ್ದ ದಿನಗಳವು, ಫಿಸಿಕ್ಸ್‌ ಮತ್ತು ಕೆಮೆಸ್ಟ್ರಿ ಸೈಕಲ್‌ ಸರಿಯಾಗಿ ತುಳಿದು ಉಇ ಬ್ರಾಂಚ್‌ಗೆ ಎಂಟ್ರಿ ಆಗಿತ್ತು. ನಾನೊಬ್ಬ ಕಾರ್ನರ್‌ನ ಹುಡುಗ, ನನ್ನಷ್ಟಕ್ಕೆ  ನಾನು ಕಾಲೇಜಿಗೆ ಬರ್ತಾ ಇದ್ದೆ. ಕಾರ್ನರ್‌ ಸೀಟ್‌ನಲ್ಲಿ ಕೂರ್ತಾ ಇದ್ದೆ. ಲೆಕ್ಚರರ್ಸ್‌ಗಳ ಪಾಠ ಇಷ್ಟ ಆದ್ರೆ ಕೇಳ್ತಾ ಇದ್ದೆ, ಇಲ್ಲದಿದ್ದರೆ ನನ್ನ ಕಲ್ಪನಾಲೋಕದಲ್ಲಿ ನನ್ನನ್ನು ನಾನು ಕಳೆದುಕೊಂಡು ಹಾಸ್ಟೆಲಿಗೆ ಹೋಗಿ ಬಿದ್ದುಕೊಳ್ಳುತ್ತ ಇದ್ದೆ. ಹನುಮಂತನ ವಂಶದವರು ನಾವು. ಹಾಗಾಗಿ, ಕಾಲೇಜು ಆರಂಭವಾಗಿ ಎರಡು ಸೆಮ್‌ ಕಳೆದರೂ ಹುಡುಗರನ್ನು ಬಿಟ್ಟು , ಹುಡುಗಿಯರ ಹತ್ರ ಅಷ್ಟಾಗಿ ಮಾತಾಡೋದು ಇರಲಿ, ಹುಡುಗಿಯರ ಕಡೆ ನೋಡೋದು ಕಮ್ಮಿ ಇತ್ತು. ಹುಟ್ಟಿನಿಂದ ಬಾಯ್ಸ… ಸ್ಕೂಲ್‌ನಲ್ಲಿ ಕಲಿತಿದ್ದಕ್ಕೆನೋ, ಗೊತ್ತಿಲ್ಲ , ಹುಡುಗಿಯರ ಹತ್ತಿರ ಮಾತನಾಡಲಿಕ್ಕೆ ಸ್ವಲ್ಪ ಮುಜುಗರ ಜಾಸ್ತಿ.

Advertisement

ಹೀಗೆ ನಡೆಯುತ್ತಿರಬೇಕಾದರೆ ಒಂದು ದಿನ ಮೇಡಂ ಕೇಳಿದ ಪ್ರಶ್ನೆಗೆ ಉತ್ತರ ಹೇಳಲಿಕ್ಕೆ, ಹುಡುಗಿಯರ ಕಡೆಯಿಂದ ಒಬ್ಬಳು ಎದ್ದು ನಿಂತಳು. ಯಾರು ನೋಡೋಣ ಅಂತ ತಿರುಗಿದೆ, ಕತ್ತು ಉಳುಕಿತೋ ಏನೋ ಗೊತ್ತಿಲ್ಲ, ಹೇಳಿಕೇಳಿ ಕಾರ್ನರ್‌ ಸೀಟ್‌ ನೋಡಿ, ಈ ಕಡೆ ತಿರುಗಲೇ ಇಲ್ಲ, ನೋಡಿಕೊಂಡೇ ಕುಳಿತುಕೊಂಡೆ. ಅವತ್ತು ರಾತ್ರಿ ಯಾಕೋ ಜಾಸ್ತಿನೇ ನಿದ್ದೆ ಬರಲಿಲ್ಲ. ಮುಂದಿನ ದಿನದಿಂದ ಕಾಲೇಜಿಗೆ ಹೋಗಲಿಕ್ಕೆ ಯಾಕೋ ಜಾಸ್ತಿ ಖುಷಿ.  ಹೇಗೆ ಹೇಗೋ ಹೋಗ್ತಾ ಇದ್ದವನು ಸ್ವಲ್ಪ ಸ್ಮಾರ್ಟ್‌ ಆಗಿ ಹೋಗ್ಲಿಕ್ಕೆ ಸ್ಟಾರ್ಟ್‌ ಮಾಡಿದೆ. ಎಲ್ಲಿ ಬಿದ್ದೆ ಅಂತ ಯೋಚನೆ ಮಾಡುವುದರೊಳಗೆ, ನನ್ನ ಕಾಲುಗಳು ಅವಳನ್ನು ಹಿಂಬಾಲಿಸಲಿಕ್ಕೆ, ನನ್ನ ಕಣ್ಣುಗಳು ಅವಳನ್ನು ಹುಡುಕಲಿಕ್ಕೆ ಆರಂಭಿಸಿದ್ದವು.

ಅವಳ ಉದ್ದ ಜಡೆ, ಅವಳ ದುಂಡು ಮುಖ, ಅವಳ ಬೆಕ್ಕಿನ ಕಣ್ಣು, ಅವಳ ನಗು, ಅವಳಿಗಿದ್ದ ಜಂಭ ಎಲ್ಲಾ ಸೇರಿ ನನಗೆ ಮಾಟ ಮಾಡಿಸಿ ಬಿಟ್ಟಿದ್ದೂ ಕಾಣಿಸುತ್ತೆ. ನನಗಿಂತ ಸ್ವಲ್ಪ ಹೈಟ್‌ ಜಾಸ್ತಿ ಆದ್ರೂ ಪರ್ವಾಗಿಲ್ಲ ಅಂತ ನನ್ನ ಹೃದಯ ಸಿಗ್ನಲ್‌ ಟ್ರಾನ್ಸ್‌ಮಿಟ್‌ ಮಾಡಲಿಕ್ಕೆ ಆರಂಭ ಮಾಡಿತ್ತು. ಆದರೆ, ಆ ಕಡೆಯಿಂದ ಯಾವುದೇ ಸಿಗ್ನಲ್‌ ಬಂದಿರಲಿಲ್ಲ, ಅಥವಾ ಸಿಗ್ನಲ್‌ ಸಿಕ್ಕಿದ್ರೂ ರಿಟರ್ನ್ಸ್ ಟ್ರಾನ್ಸ್‌ಮಿಟ್‌ ಮಾಡ್ತಾ ಇರಲಿಲ್ಲ. ಏನೂ ಗೊತ್ತಿಲ್ಲ, ಅವಳನ್ನೇ ಕೇಳಬೇಕು. ಆದ್ರೆ ಅವಳ ಜೊತೆ ಮಾತನಾಡಲಿಕ್ಕೆ ನಾನು ಸದಾ ಹಂಬಲಿಸುತ್ತಿದ್ದೆ.

ಅವಳು ಕ್ಲಾಸಿಗೆ ಟಾಪರ್‌ ಆಗಿದ್ದಳು, ನಾನೇನೂ ಓದುವುದರಲ್ಲಿ ಕಮ್ಮಿ ಇರಲಿಲ್ಲ. ಸರಿಯಾಗೇ ಸ್ಪರ್ಧೆ ಕೊಡ್ತಾ ಇದ್ದೆ. ಆದ್ರೆ ಮೀರಿಸಲಿಕ್ಕೆ ಆಗ್ತಾ ಇರಲಿಲ್ಲ. ಆದ್ರೂ ಅವಳೆದುರು ಕ್ಲಾಸ್‌ನಲ್ಲಿ ಶೋಆಫ್ಗಳು ನಡೀತಾನೇ ಇತ್ತು. ಥರ್ಡ್‌ ಸೆಮ್‌ನದ್ದು ಫೈನಲ್‌ ಲ್ಯಾಬ್‌ ಎಕ್ಸಾಮ್‌ ನಡೀತಾ ಇತ್ತು. ನನ್ನ ಲ್ಯಾಬ್‌ ಬ್ಯಾಚ°ಲ್ಲಿ ಅವಳು ಕೂಡ ಇದ್ದಳು, ನನ್‌ ಪಕ್ಕದಲ್ಲಿ ನಿಂತಿದ್ಲು. ಅವಳು ನನ್ನ ಮುಖ ನೋಡಿ ಏನೋ ಹೇಳ್ಳೋದಕ್ಕೆ ಹಂಬಲಿಸುತ್ತ ಇದ್ದಳು. ಆಚೆ-ಈಚೆ ನೋಡಿ ಯಾರು ನೋಡ್ತಾ ಇಲ್ಲ ಅಂತ ಕನ್‌ಫ‌ರ್ಮ್ ಮಾಡಿಕೊಂಡು ನನ್ನ ಹತ್ತಿರ ಬಂದು, “”ನನ್ನ ಪ್ರೋಗ್ರಾಮಿನಲ್ಲಿ ಒಂದೆರಡು ಲೈನ್‌ ಮರ್ತಿದೀನಿ. ಸ್ವಲ್ಪ ಹೆಲ್ಪ… ಮಾಡ್ತೀಯಾ?” ಅಂತ ಕೇಳಿದ್ಲು. ಹುಡುಗಿಯರು ಕೇಳಿದ್ರೆ ನನ್ನ ಎದೆ ಮಿಡಿಯುತ್ತೆ. ಪ್ರೋಗ್ರಾಮಿನಲ್ಲಿ  ರಾಂಗ್‌ ಆಗಿದ್ದ ಲೈನ್‌ ಅನ್ನು ಸರಿ ಮಾಡಿಕೊಟ್ಟೆ. ಆವತ್ತು ಲ್ಯಾಬಿನಿಂದ ಹೊರಗಡೆ ಬರುವಾಗ ಪ್ರೌಡ್‌ ಫೀಲಿಂಗ್‌ ನನ್ನಲ್ಲಿತ್ತು. ರೂಮಿಗೆ ಹೋಗಿ ರೂಮ್‌ಮೇಟ್‌ ಹತ್ರ ಎಲ್ಲಾ ಹೇಳಿದೆ, “ಅಷ್ಟು ಹೆಲ್ಪ… ಮಾಡಿದ್ದಕ್ಕೆ ಒಂದು ಥಾಂಕ್ಸ್‌ ಹೇಳಲಿಲ್ಲ’ ಅಂದೆ. ಅದಕ್ಕವನು, “ಎಕ್ಸಾಮ್‌ ಅಲ್ವಾ, ಎಲ್ಲಾ ನೋಡ್ತಾರೆ ಅಂತ ಮನಸ್ಸಿನಲ್ಲಿ ಹೇಳಿಕೊಂಡಿರುತ್ತಾಳೆ ಬಿಡೋ’ ಅಂದ. ನಾನು ಹಾಗೆ ಅಂದುಕೊಂಡೆ. ನಮ್ಮ ಹುಡುಗಿಯನ್ನು ಮಾತಾಡಿಸಿದ್ದು ಒಂದು ಖುಷಿಯಾದ್ರೆ, ಅವಳಿಗೆ ಸಹಾಯ ಮಾಡಿದ್ದು ಇನ್ನೊಂದು ಖುಷಿ ಆಗಿತ್ತು. ಅವಳ ಥ್ಯಾಂಕ್ಸ್‌ಗೊಸ್ಕರ ನಾನು ಕಾಯ್ತಾ ಇದ್ದೆ. ಇನ್ನೊಂದ್‌ ಸಾರಿ ಯಾವಾಗ ಮಾತಾಡೋದು ಅಂತ ನನ್ನ ಮನಸ್ಸು ಕೂಡ ಹಂಬಲಿಸುತ್ತಿತ್ತು.

ಹೀಗಿರಬೇಕಾದರೆ ಯುಗಾದಿ ಹಬ್ಬದ ಹಿಂದಿನ ದಿನ ಎಲ್ಲರೂ ಕ್ಲಾಸ್‌ಗಳಿಗೆ ಬಂಕ್‌ ಹಾಕಿ ಮನೆಗೆ ಹೊರಟಿದ್ದೆವು. ನಾನು ಮತ್ತು ನನ್ನ ಫ್ರೆಂಡ್‌ ಕೂಡ ನಮ್ಮ ಊರುಗಳಿಗೆ ಹೊರಟಿದ್ದೆವು. ಇಬ್ಬರು ಬ್ಯಾಗ್‌ ಪ್ಯಾಕ್‌ ಮಾಡಿಕೊಂಡು, ರಿಕ್ಷಾ ಹಿಡಿದುಕೊಂಡು, ಬಸ್‌ಸ್ಟಾಂಡಿಗೆ ಬಂದು ನೋಡಿದ್ರೆ ಒಂದು ಆಶ್ಚರ್ಯ ಕಾದಿತ್ತು. ನನ್ನ ಹುಡುಗಿ ಕೂಡ ಬಸ್‌ಸ್ಟಾಂಡ್‌ನ‌ಲ್ಲಿ ಅವಳ ಫ್ರೆಂಡ್‌ ಜೊತೆ ನಿಂತಿದು. ನನ್ನ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಆರಂಭವಾದವು. ಇವಳಾಕೆ ಇಲ್ಲಿದ್ದಾಳೆ, ಇವಳು ನನ್ನ ಬಸ್ಸಿಗೆ ಬರಬಹುದಾ, ಇವಳ ಊರು ಯಾವುದು, ನಮ್ಮ ಬಸ್ಸಿಗೆ ಬಂದ್ರೆ ಏನ್‌ ಮಾತಾಡೋದು ಅಂತ.

Advertisement

ಹೀಗೆ ನೂರಾರು ಪ್ರಶ್ನೆಗಳು ನನ್ನ ತಲೆಯಲ್ಲಿ ಓಡಾಡ್ತಾ ಇರಬೇಕಾದ್ರೆ, ಇದಕ್ಕೆೆಲ್ಲಾ ಉತ್ತರದಂತೆ ನಮ್ಮೂರಿನ ಬಸ್ಸು  ಬಂದಿತ್ತು. ಅವಳು ನನಗಿಂತ ಮುಂಚೆ ಬಸ್‌ ಹತ್ತಿ, ಸೀಟ್‌ ಹಿಡಿದು ಕೂತಿದ್ಲು. ಅವಳ ಹಿಂದಿನ ಸೀಟಿನಲ್ಲಿ ನಾನು ಮತ್ತೆ ನನ್ನ ಫ್ರೆಂಡ್ಸ್‌ ಕೂಡ ಕೂತಿದ್ದೆವು.  ನನ್ನ ಫ್ರೆಂಡ್‌ಗೆ ಅವಳ ಪರಿಚಯ ಇದ್ದಿದ್ದರಿಂದ ಅವರ ನಡುವೆ ಮಾತುಕತೆ ನಡೀತಾ ಇತ್ತು, ನನ್ನ ಹೊಟ್ಟೆಯಲ್ಲಿ ಒಂದು ಚೂರು ಬೆಂಕಿ ಬಿದ್ದಿತ್ತು. ನನ್ನ ಕಡೆ ಒಂದು ಸ್ಮೈಲ್ ಎಸೆದ್ಲು . ಆದ್ರೆ ಮಾತಾಡಲಿಲ್ಲ. ಅವಳೇ ಮಾತಾಡ್ತಳಾ ನೋಡೋಣ, ಇಲ್ಲದಿದ್ರೆ ಹೇಗಾದ್ರೂ ಮಾಡಿ ನಾನಾದ್ರು ಮಾತಾಡಬೇಕು ಅಂತ ಆ ಸಮಯಕ್ಕೋಸ್ಕರ ಕಾದಿದ್ದೆ. ಬಸ್ಸು ರಸ್ತೆಯಲ್ಲಿನ ಹೊಂಡಗಳಲ್ಲಿ ಇಳಿದು, ಹಂಪುಗಳಲ್ಲಿ ಏರಿ, ಕೆರೆ-ಗದ್ದೆಗಳ ಅಂಚಿನ ಮೇಲೆ, ಕಿರಿದಾದ ರಸ್ತೆಗಳಲ್ಲಿ ತಾನೊಂದು ಪ್ರೇಮಕಥೆಗೆ ಸಾಕ್ಷಿಯಾಗುತ್ತಿದ್ದೇನೆ ಎನ್ನುವುದನ್ನು ಮರೆತು, ನಮ್ಮ ಊರಿಗೆ ನಮ್ಮನ್ನು ಕರೆದೊಯ್ಯುತ್ತಿತ್ತು.

ಈ ಮಾರುದದ್ದ ಮೌನಪಯಣಕ್ಕೆ ಬ್ರೇಕ್‌ ನೀಡಿದ್ದು ನನ್ನ ಗೆಳೆಯನ ಊರು. ನನ್ನ ಜೊತೆ ಬಂದಿದ್ದ ನನ್ನ ಗೆಳೆಯನ ಊರು ಬಂದಿದ್ದರಿಂದ ಅವನು ಅವಳ ಜೊತೆ ಮಾತಾಡೋದನ್ನು ಬಿಟ್ಟು ಇಳಿಯಬೇಕಾಯಿತು. ನನಗೆ ಯುಗಾದಿ ಹಬ್ಬದ ಪಾಯಸ ಹಿಂದಿನ ದಿನವೇ ಸಿಕ್ಕಿದ ಹಾಗಾಯಿತು. ಬಸ್ಸು ಕೂಡ ಆ ಊರಿನಲ್ಲಿ ಖಾಲಿಯಾಗಿದ್ದರಿಂದ, ಬಸ್ಸಿನ ಕಡೆಯ ಸೀಟುಗಳಲ್ಲಿ ಕುಳಿತ್ತಿದ್ದ ನನ್ನ ಹುಡುಗಿ ಮತ್ತೆ ಅವಳ ಗೆಳತಿ ಮುಂದಿನ ಸೀಟುಗಳಿಗೆ ಹೋಗಿ ಕುಳಿತುಕೊಂಡರು. “ಛೇ, ಈ ಚಾನ್ಸ್‌ ಕೂಡ ಮಿಸ್‌ ಆಯ್ತಲ್ಲ ‘ ಅಂತ ನಾನು ಯೋಚಿಸುತ್ತಿರಬೇಕಾದ್ರೆ, ನನ್ನ ಹುಡುಗಿ ಹಿಂದೆ ತಿರುಗಿ, “ಗಣೇಶ್‌, ಬಾ ಇಲ್ಲೊಂದ್‌ ಸೀಟ್‌ ಖಾಲಿ ಇದೆ’ ಅಂತ ಕರೆದ್ಲು. ನನ್ನ ಹೃದಯದಲ್ಲಿ ಬೇಸಿಗೆ ಕಾಲದಲ್ಲಿ ಹೋದ ಕರೆಂಟ್‌ ಬಂದ ಹಾಗಾಯ್ತು. ಇನ್ನೇನು ಮಾಡೋದು, ಸಿಕ್ಕಿದ್ದೇ ಚಾನ್ಸು ಅಂತ ಹೋಗಿ ಅವಳ ಪಕ್ಕದಲ್ಲಿ ಕುಳಿತುಕೊಂಡೆ. 

ನನಗೆ ಮೈಯೆಲ್ಲ ಬೆವರುತ್ತಿತ್ತು. ಅವಳ ಜೊತೆ ಕೂತಿದ್ದ ಪ್ರತಿಯೊಂದು ಕ್ಷಣದಲ್ಲೂ ಹೃದಯದ ಬಡಿತ ಗಡಿಯಾರದ “ಟಿಕ್‌ ಟಿಕ್‌’ ಶಬ್ದದ ತರಹ ಕಿವಿಗೆ ಕೇಳುತ್ತಿತ್ತು. ಆದರೆ ಇಡೀ ಪಯಣ ಬರೀ ಮೌನ, ಮೌನ, ಮೌನ. ಅದ್ಯಾಕೋ ಗೊತ್ತಿಲ್ಲಾ ಅವಳು ತುಟಿ ಬಿಚ್ಚಿಲಿಲ್ಲ, ಎಷ್ಟೋ ದಿನಗಳಿಂದ ಮಾತನಾಡಬೇಕಂತ ಕಾಯುತ್ತಿದ್ದ ನನ್ನ ಗಂಟಲು ಆವತ್ತು ಒಣಗಿತ್ತು. ಹುಡುಗಿಯರ ಹತ್ತಿರ ಜಾಸ್ತಿ ಮಾತನಾಡದ ನನ್ನ ಬಾಯ್ಸ… ಹೈಸ್ಕೂಲ್‌ ನೇಚರಿಗೋ ಏನೋ ಗೊತ್ತಿಲ್ಲ, ಆವತ್ತು ನಾನು ಮೌನಿಯಾಗಿದ್ದೆ. ಅವಳ ಬಳಿ ಮಾತಾಡಲು ನಾನು ಹೆದರಿದೆ. ಕಿಟಕಿಯಲ್ಲಿ ಹೊರಗಿನ ಪ್ರಪಂಚವನ್ನು ನೋಡುವುದರಲ್ಲಿ ಕಳೆದುಹೋದೆ. ಅವಳು ಮಾತು ಆರಂಭ ಮಾಡಲಿ ಅಂತ ನಾನು ಕಾದೆ. ಅವಳು ಸಹ ಅದಕೋಸ್ಕರ ಕಾದಿರಬಹುದಾ? ಗೊತ್ತಿಲ್ಲಾ. ಹುಡುಗನಿಗೆ ಕೊಬ್ಬು ಜಾಸ್ತಿ ಅಂತ ಸಹಾ ಅವಳು ಎಣಿಸಿರಬಹುದು. ನಾನು ತುಂಬಾ ಪ್ರೀತಿಸುವವರ ಮುಂದೆ ನಾಲಗೆ ಹೊರಡಲ್ಲಾ ಅಂತ ಕೇಳಿದ್ದೆ. ಆದರೆ ಅನುಭವ ಆಗಿದ್ದು ಅವತ್ತೇ ಮೊದಲು. ಬಸ್ಸು  “ಮಕ್ಕಳಾ, ಈ ವರ್ಷಕ್ಕೆ ನೀವು ಮಾತಾಡಲ್ಲಾ, ಇನ್ನು ಟೈಂ ಕೊಡಲಿಕ್ಕೆ ನನ್ನಿಂದ ಆಗೋಲ್ಲ’ ಅಂತ, ಅವಳ ಊರಿನಲ್ಲಿ ಹೋಗಿ ನಿಂತುಕೊಂಡೇ ಬಿಡು¤. ಹೇಗಾದ್ರು ಮಾಡಿ ಮಾತಾಡಬೇಕು ಅನ್ನೋ ನನ್ನ ಒಳಗಿನ ಶಕ್ತಿ ನನ್ನನ್ನು ಬಡಿದೆಬ್ಬಿಸಿ ಕಾಲ ಮಿಂಚಿ ಹೋಗುತ್ತಿದೆ ಅನ್ನುವ ಸಂದೇಶವನ್ನು ಕೊಡು¤. “ನಿಮ್ಮ ಮನೆ ಈ ಊರಲ್ಲೇ ಇರೋದ’ ಅಂತ ಕೇಳಿದೆ. ಅದಕ್ಕವಳು “ಇಲ್ಲ, ಹಬ್ಬಕ್ಕೆ ನನ್ನ ಚಿಕ್ಕಮ್ಮನ ಮನೆಗೆ ಹೋಗುತ್ತ ಇದ್ದೀನಿ’ ಅಂತಾ ಹೇಳಿದ್ಲು. “ಬೈ ಬೈ ಸಿಗೋಣ’ ಅಂತ ಸ್ವಲ್ಪ ಸಿಟ್ಟಿನಿಂದ ಬಸ್ಸಿನಿಂದ ಇಳಿದು ಹೋದ್ಲು. ಅಲ್ಲಿಗೆ ಮೌನದ ಪಯಣ ತುಸು ಮಾತಿನೊಂದಿಗೆ ಅಂತ್ಯವಾಯಿತು.

ಏನಾಯಿತು ನನಗೆ, ಒಂದೊಳ್ಳೆಯ ಚಾನ್ಸ್‌ ಮಿಸ್‌ ಮಾಡಿಕೊಂಡೆನಲ್ಲ ಅನ್ನುವ ಕಸಿವಿಸಿ ಒಂದು ಕಡೆ ಆದರೆ, ಸ್ವಲ್ಪವಾದರೂ ಮಾತನಾಡಿದೆನಲ್ಲ ಅನ್ನುವ ಸಮಾಧಾನ ಇನ್ನೊಂದು ಕಡೆ. ಬಸ್ಸು ನನ್ನನ್ನು ಮನೆಗೆ ಸೇರಿಸಿ ಹೊರಟು ಹೋಯಿತು.

ಗಣೇಶ ಬರ್ವೆ

Advertisement

Udayavani is now on Telegram. Click here to join our channel and stay updated with the latest news.

Next