ಮಹಾನಗರ, ಎ. 26: ಮೀನು ಸಾಗಾಟ ಲಾರಿಗಳಿಂದ ತ್ಯಾಜ್ಯ ನೀರು ರಸ್ತೆಗೆ ಸೋರಿಕೆಯಾಗಿ ನಗರದ ಮಾಲಿನ್ಯಕ್ಕೆ ಕಾರಣವಾಗುವ ಬಗೆಗಿನ ದೂರುಗಳನ್ನು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎ. 29ರಂದು ಮೀನು ಸಾಗಾಟ ಲಾರಿ ಮಾಲಕರ ಸಭೆ ಕರೆಯಲು ನಿರ್ಧರಿಸಿದ್ದಾರೆ.
ಶುಕ್ರವಾರ ಕಮಿಷನರ್ ಕಚೇರಿಯಲ್ಲಿ ನಡೆದ ಫೋನ್-ಇನ್ ಕಾರ್ಯಕ್ರಮದ ವೇಳೆ ಅವರು ಈ ವಿಷಯ ತಿಳಿಸಿದರು.
ಹಳೆ ಬಂದರು ಧಕ್ಕೆ ಪ್ರದೇಶದಿಂದ ನಸುಕಿನ ಜಾವದಿಂದಲೇ ಮೀನಿನ ಲಾರಿಗಳು ಮೀನು ಪೇರಿಸಿಕೊಂಡು ಜಪ್ಪು ಮಾರ್ಕೆಟ್- ಮೋರ್ಗನ್ಸ್ ಗೇಟ್ ಮಾರ್ಗವಾಗಿ ಸಂಚರಿಸುತ್ತಿವೆ. ಈ ವೇಳೆ ಲಾರಿಯಿಂದ ಐಸ್ ಕರಗಿದ ತ್ಯಾಜ್ಯ ನೀರು ರಸ್ತೆಯುದ್ದಕ್ಕೂ ಚೆಲ್ಲುತ್ತಾ ಹೋಗುತ್ತದೆ. ಇದರಿಂದ ಪರಿಸರ ಪೂರ್ತಿ ದುರ್ನಾತ ಬೀರುತ್ತದೆ. ಮುಂಜಾನೆಯೇ ದುರ್ಗಂಧದ ವಾತಾವರಣವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಪಾಂಡೇಶ್ವರದ ನಾಗರಿಕರೊಬ್ಬರು ಕರೆ ಮಾಡಿ ಅಹವಾಲು ಸಲ್ಲಿಸಿದರು.
ಮೀನು ಸಾಗಿಸುವ ಲಾರಿಗಳ ತ್ಯಾಜ್ಯಕ್ಕೆ ಲಗಾಮು ಹಾಕಬೇಕು. ಇಲ್ಲದಿದ್ದರೆ ದ್ವಿಚಕ್ರ ಸವಾರರು, ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದವರು ಹೇಳಿದರು. ಇದಕ್ಕೆ ಸ್ಪಂದಿಸಿದ ಕಮಿಷನರ್ ಸಂದೀಪ್ ಪಾಟೀಲ್, ಮೀನಿನ ಲಾರಿಗಳಿಂದ ತ್ಯಾಜ್ಯ ನೀರು ಸೋರಿಕೆಯಾಗಿ ಮಾಲಿನ್ಯಕ್ಕೆ ಕಾರಣವಾಗುವ ಆರೋಪ ಹಲವು ಸಮಯದಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಈಗಾಗಲೇ ಕೆಲವು ಕ್ರಮಗಳನ್ನು ಕೈಗೊಂಡಿದ್ದರೂ ಪ್ರಯೋಜನವಾಗುತ್ತಿಲ್ಲ. ಪಾಂಡೇಶ್ವರದಲ್ಲಿರುವ ನನ್ನ ನಿವಾಸ ಬಳಿಯೂ ಇದೇ ಮಾಲಿನ್ಯ ಸಮಸ್ಯೆ ಕಂಡು ಬಂದಿದೆ. ಸೋಮವಾರ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ಮೀನು ಸಾಗಾಟ ಲಾರಿ ಮಾಲಕರ ಸಭೆಯನ್ನು ನಡೆಸಿ ಮೀನು ಸಾಗಾಟ ಲಾರಿಯ ತ್ಯಾಜ್ಯ ಸೋರಿಕೆ ತಡೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ಲಿಂಗತ್ವ ಅಲ್ಪ ಸಂಖ್ಯಾಕರ ಕಿರುಕುಳ:
ನಗರ, ಟೋಲ್ಗೇಟ್‌ಗಳಲ್ಲಿ ನಾಗರಿಕ ರಿಗೆ ಮತ್ತು ವಾಹನ ಚಾಲಕ/ಮಾಲಕರಿಗೆ ಲಿಂಗತ್ವ ಅಲ್ಪಸಂಖ್ಯಾಕರು ತೊಂದರೆ ನೀಡುತ್ತಿರುವ ಬಗ್ಗೆ ನಾಗರಿಕರಿಂದ ದೂರು ಕೇಳಿ ಬಂತು.
••ಎಲ್ಲೆಂದರಲ್ಲಿ ಬ್ಯಾರಿಕೇಡ್
•ಬಸ್‌ಗಳಲ್ಲಿ ಟಿಕೇಟ್ ನೀಡುತ್ತಿಲ್ಲ
•ಸಾರ್ವಜನಿಕರಿಂದ ಹಲವು ದೂರು
ಸ್ಟೇಟ್ ಬ್ಯಾಂಕ್, ಸೆಂಟ್ರಲ್ ಮಾರ್ಕೆಟ್ ಪರಿಸರದಲ್ಲಿ ಫುಟ್ಪಾತ್‌ನಲ್ಲಿ ಮತ್ತು ಕೆಲವು ಕಡೆ ರಸ್ತೆಯಲ್ಲಿಯೇ ವ್ಯಾಪಾರ ಮಾಡುತ್ತಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ಅವಕಾಶ ಇಲ್ಲದಂತಾಗಿದೆ. ಕಾವೂರಿನಲ್ಲಿ ಫುಟ್ಪಾತ್‌ನಲ್ಲಿ ದ್ವಿಚಕ್ರ ವಾಹನ ಪಾರ್ಕ್ ಮಾಡುತ್ತಾರೆ ಎಂದು ನಾಗರಿಕರು ದೂರಿದರು. ಫುಟ್ಪಾತ್‌ನಲ್ಲಿ ವ್ಯಾಪಾರ ಮಾಡುವವರಿಗೆ ಪ್ರತ್ಯೇಕ ಜಾಗ ನಿಗದಿಪಡಿಸುವ ಬಗ್ಗೆ ಪಾಲಿಕೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಕಮಿಷನರ್ ತಿಳಿಸಿದರು.