ಕಟಪಾಡಿ: ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಪನಬೆಟ್ಟು ಅಂಗನವಾಡಿ ಬಳಿಯ ಸುಮತಿ ಪೂಜಾರಿ ಎಂಬವರ ಮನೆಯ ಮೇಲೆ ಬೃಹತ್ ಗಾತ್ರದ ಮರವೊಂದು ಬುಡ ಸಮೇತ ಉರುಳಿ ಬಿದ್ದು ಮನೆಗೆ ಹಾನಿ ಉಂಟಾದ ಘಟನೆ ಜು.22ರಂದು ನಡೆದಿದೆ.
ಮನೆಯ ಮೇಲ್ಛಾವಣಿ, ವಿದ್ಯುತ್ ಸಂಪರ್ಕ, ಸಿಂಟೆಕ್ಸ್ ಟ್ಯಾಂಕ್, ಸ್ಟಾ ್ಯಂಡ್ ಸಹಿತ ಮತ್ತಿತರ ಸೊತ್ತುಗಳು ಹಾನಿಗೊಳಗಾಗಿದ್ದು ಸುಮಾರು 50 ಸಾವಿರ ರೂ.ಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಸೋಮವಾರ ಬೆಳಗ್ಗೆ ಎಂಟೂ ಮುಕ್ಕಾಲರ ಸುಮಾರಿಗೆ ಮನೆ ಮಂದಿಯಾದ ಸುಮತಿ ಪೂಜಾರಿ, ಯೋಗೀಶ್, ಸೌಮ್ಯಾ, ಸೃಜನ್ ಮತ್ತು ಮಗು ವೇದಿಕ್ ಮನೆಯಲ್ಲಿ ಇರುವ ವೇಳೆಯೇ ಈ ಅವಘಡ ಸಂಭವಿಸಿತ್ತು. ಕೆಲಸಗಳನ್ನು ಪೂರೈಸಿ ಮನೆಮಂದಿ ಕೆಲಸಕ್ಕೆ ಹೊರಡಲು ಅಣಿಯಾಗುತ್ತಿದ್ದಂತೆಯೇ ಸುಮತಿ ಪೂಜಾರಿ ಅಡುಗೆಯ ತಯಾರಿ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ.
ಈ ಸಂದರ್ಭ ಮನೆಯ ನೀರಿನ ಸಂಪರ್ಕಕ್ಕಾಗಿ ಅಳವಡಿಸಲಾದ ಕಬ್ಬಿಣದ ಸ್ಟಾ ್ಯಂಡ್ ಮತ್ತು ಸಿಂಟೆಕ್ಸ್ ಟ್ಯಾಂಕ್ ಮೇಲೆರಗಿದ್ದು ಅನಂತರದಲ್ಲಿ ಮನೆಯ ಮೇಲೆ ಉರುಳಿ ಬಿದ್ದುದರಿಂದ ಮನೆಯೊಳಗಿದ್ದ ಮನೆ ಮಂದಿ ಸಂಭಾವ್ಯ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮನೆಯೊಳಗಿದ್ದ ಸೌಮ್ಯಾ ಕೆಲಸಕ್ಕೆ ತೆರಳಲು ಅಣಿಯಾಗುತ್ತಿದ್ದಂತೆಯೇ ಸಿಡಿಲು ಬಡಿದಂತಹ ಶಬ್ದ ಉಂಟಾಗಿದ್ದು ಸಣ್ಣ ಮಗುವೂ ಮನೆಯೊಳಗಿದ್ದ ಕಾರಣ ಹೆಚ್ಚು ದಿಗ್ಭ್ರಮೆಗೊಂಡಿದೆ. ಮನೆಯಿಂದ ಹೊರಗೋಡಿ ಬಂದು ನೋಡಿದಾಗ ಮರ ಮನೆಯ ಮೇಲೆ ಬಿದ್ದಿದ್ದು ಗಮನಕ್ಕೆ ಬಂದಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಗಂಧಿಶೇಖರ್, ಸದಸ್ಯರಾದ ವಿಲ್ಸನ್ ರಾಜ್‌ಕುಮಾರ್, ಜಯಂತೀ, ಜಿತೇಂದ್ರ ಶೆಟ್ಟಿ, ಕಿರಣ್ ಕುಮಾರ್, ಪಿಡಿಒ ರಮಾನಂದ ಪುರಾಣಿಕ್, ಪಂಚಾಯತ್ ಸಿಬಂದಿಗಳಾದ ನಾರಾಯಣ, ಸಂದೀಪ್, ಗ್ರಾಮ ಸಹಾಯಕ ರಾಜ, ಮೆಸ್ಕಾಂ ಸಿಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮರ ತೆರವುಗೊಳಿಸುವಲ್ಲಿ ಮಾರ್ಗದರ್ಶನ ನೀಡಿರುತ್ತಾರೆ.