ಪಡುಬಿದ್ರಿ: ಸಮಾಜಕ್ಕೆ ಸ್ಪಂದಿಸುವುದೇ ದೇವರ ನಿಜವಾದ ಪೂಜೆಯಾಗಿದೆ. ಈಗ ಕೋವಿಡ್-19 ಮಹಾಮಾರಿಯೇ ಜನರ ಕಷ್ಟ ಕಾರ್ಪಣ್ಯಗಳಿಗೆ ಮುಖ್ಯ ಕಾರಣ. ಇಂಥ ಸಮಯದಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಮಕ್ಕಳ ಹೆತ್ತವರ ಸಹಾಯಾರ್ಥ ಮಕ್ಕಳ ಶಾಲಾ ಶುಲ್ಕವನ್ನು ನಮ್ಮ ವತಿಯಿಂದಲೇ ಭರಿಸಲು ತೀರ್ಮಾನ ಕೈಗೊಂಡಿದ್ದೇವೆ.
ಉಡುಪಿಯ ಶ್ರೀ ವಿಬುಧೇಶತೀರ್ಥ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಮೂಲಕ 21 ಲಕ್ಷ ರೂ. ಗಳನ್ನು ಇದಕ್ಕೆ ವಿನಿಯೋಗಿಸುತ್ತಿರುವುದಾಗಿ ಉಡುಪಿ ಪರ್ಯಾಯ ಶ್ರೀ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥರು ನುಡಿದರು.ಅವರು ಅದಮಾರು ಶ್ರೀ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸಾಂಕೇತಿಕವಾಗಿ ಶಾಲಾ ಶುಲ್ಕವನ್ನು ಹಸ್ತಾಂತರಿಸಿ ಮಾತನಾಡಿದರು.
ಅದಮಾರು ಶಿಕ್ಷಣ ಸಂಸ್ಥೆಯ ಕೆಜಿ ಮಕ್ಕಳಿಂದ ತೊಡಗಿ ಪ್ರೌಢಶಾಲಾ ತರಗತಿಯ ವರೆಗೆ, ಹಾಲಿ ಮತ್ತು ಹೊಸದಾಗಿ ಸೇರ್ಪಡೆಗೊಳ್ಳುವ ಪಿಯು ವಿದ್ಯಾರ್ಥಿಗಳ ಒಂದು ತಿಂಗಳ ಶಾಲಾ ಶುಲ್ಕ ಹಾಗೂ ಪಡುಬಿದ್ರಿಯ ಗಣಪತಿ ಪ್ರೌಢಶಾಲೆಯ ಎಲ್ಲ ವಿದ್ಯಾರ್ಥಿಗಳ ಪೂರ್ಣ ವರ್ಷದ ಶಾಲಾ ಶುಲ್ಕವನ್ನು ಈ ಮೂಲಕ ಭರಿಸಲಾಗುತ್ತಿದೆ. ಇದನ್ನು ನಾವು ಆಚಾರ್ಯ ಮಧ್ವರ, ಶ್ರೀ ಕೃಷ್ಣನ ಸಂದೇಶದ ಅನುಸಾರ ಕಾರ್ಯರೂಪಕ್ಕಿಳಿಸಿದ್ದೇವೆ ಎಂದರು.
ಅದಮಾರು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮಾತನಾಡಿ, ತಮ್ಮ ವಿದ್ಯಾಸಂಸ್ಥೆಗಳನ್ನು ಅತೀವ ಪ್ರೀತಿಸುವ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ತಮ್ಮ ಗುರುಗಳಾದ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಆರಂಭಿಸಿದ ವಿದ್ಯಾಸಂಸ್ಥೆಗಳನ್ನು ಗಜಗಾತ್ರಕ್ಕೆ ಬೆಳೆಸಿದ್ದಾರೆ. ಪ್ರಸ್ತುತ 38 ವಿದ್ಯಾಸಂಸ್ಥೆಗಳು ಉತ್ತಮ ಶೈಕ್ಷಣಿಕ ಬೆಳವಣಿಗೆ ದಾಖಲಿಸುತ್ತಿವೆ ಎಂದರು.
ಅದಮಾರು ಪೂರ್ಣಪ್ರಜ್ಞ ಪ.ಪೂ. ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಪೈ ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಒಲಿವಿಟಾ ಡಿ’ಸೋಜಾ ಅವರು ಕಾರ್ಯಕ್ರಮ ನಿರ್ವಹಿಸಿದರು.