ಬಾಗಲಕೋಟೆ: ಆಲಮಟ್ಟಿ ಜಲಾಶಯ ನಿರ್ಮಾಣದ ಬಳಿಕ ಅತಿಹೆಚ್ಚು ಗ್ರಾಮಗಳನ್ನು ಕಳೆದುಕೊಂಡ, ಬಹುತೇಕ ಪುನರ್‌ವಸತಿ ಕೇಂದ್ರಗಳಿರುವ, ಭೌಗೋಳಿಕವಾಗಿ ಜಿಲ್ಲೆಯಲ್ಲಿ ಸಣ್ಣ ತಾಲೂಕು ಎಂಬ ಖ್ಯಾತಿ ಪಡೆದ ಬೀಳಗಿ ತಾಲೂಕಿನ ಗ್ರಾಪಂಗಳಿಂದ ಹೆಸ್ಕಾಂಗೆ ಬರೋಬ್ಬರಿ 9.22 ಕೋಟಿ ಬಾಕಿ ಬರಬೇಕಿದೆ.
ವಿಸ್ತಾರವಾದ ಅರಣ್ಯ ಪ್ರದೇಶ, ವಿಶಾಲವಾಗಿ ಹರಡಿಕೊಂಡ ಹಿನ್ನೀರು, ಘಟಪ್ರಭಾ ಮತ್ತು ಕೃಷ್ಣೆ ಕೂಡಿಕೊಳ್ಳುವ ಚಿಕ್ಕಸಂಗಮ ಎಂಬ ಪ್ರವಾಸಿ ತಾಣ.. ಹೀಗೆ ಹಲವು ಖ್ಯಾತಿ ಪಡೆದ ಬೀಳಗಿ ತಾಲೂಕು, ಡಾ| ಡಿ.ಎಂ. ನಂಜುಂಡಪ್ಪ ವರದಿ ಪ್ರಕಾರ, ರಾಜ್ಯದಲ್ಲೇ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕೂಡ ಕಟ್ಟಿಕೊಂಡಿತ್ತು. ಇದೀಗ ನೀರು, ನೀರಾವರಿ, ಅಭಿವೃದ್ಧಿ ವಿಷದಯಲ್ಲಿ ಒಂದಷ್ಟು ಮುನ್ನೆಲೆಗೆ ಬರುತ್ತಿದೆ. ಆದರೆ, ಬಹುತೇಕ ಆದಾಯ ತರುವ ಗ್ರಾ.ಪಂ.ಗಳೇ ಇಲ್ಲಿದ್ದು, ಸೂಕ್ತ ತೆರಿಗೆ ವಸೂಲಿ, ಅಗತ್ಯತೆಯಂತೆ ನಿರ್ವಹಣೆಯ ಕೊರತೆಯಿಂದ ಹೆಸ್ಕಾಂಗೆ ಕೋಟಿ ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಕೋಲೂರ ಗ್ರಾ.ಪಂ.ನಿಂದ 1.81 ಕೋಟಿ ಬಾಕಿ: ತಲಾ 10 ಲಕ್ಷಕ್ಕೂ ಅಧಿಕ ಮೊತ್ತದ ಬಾಕಿ ಉಳಿಸಿಕೊಂಡ ಗ್ರಾಪಂಗಳಲ್ಲಿ, ಬೀಳಗಿ ತಾಲೂಕಿನ ಕೋಲೂರ ಗ್ರಾಪಂ ಮೊದಲ ಸ್ಥಾನದಲ್ಲಿದೆ. ಈ ಗ್ರಾಪಂನಿಗೆ ಹೆಸ್ಕಾಂಗೆ ಬರೋಬ್ಬರಿ 181.98 ಲಕ್ಷ ಬರಬೇಕಿದ್ದು, ಈ ಬಾಕಿ ವಸೂಲಿಗೆ ಹೆಸ್ಕಾಂನಿಂದ ಈಗಾಗಲೇ ಹಲವು ಬಾರಿ ನೋಟಿಸ್ ನೀಡಲಾಗಿದೆ. ಇದೇ ನ.16ರೊಳಗಾಗಿ ಬಾಕಿ ಪಾವತಿಸದಿದ್ದರೆ, ಜಿಲ್ಲೆಯಲ್ಲಿ 10 ಲಕ್ಷಕ್ಕೂ ಅಧಿಕ ಬಾಕಿ ಉಳಿಸಿಕೊಂಡ ಗ್ರಾಪಂಗಳಲ್ಲಿ ಬೀದಿದೀಪ ಮತ್ತು ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಕಲ್ಪಿಸಿದ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ. ಅದರಲ್ಲೂ ಕೋಲೂರ ಗ್ರಾ.ಪಂ.ಗೂ ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಿವೆ.
ಕೋಲೂರ ಗ್ರಾಪಂನಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಯಡಿ 49 ವಿದ್ಯುತ್ ಸ್ಥಾವರಗಳಿದ್ದು ಅವುಗಳಿಂದ ಸೆಪ್ಟಂಬರ್ ಅಂತ್ಯದವರೆಗೆ 140.62 ಲಕ್ಷ ಬಾಕಿ, 37.10 ಲಕ್ಷ ಬಡ್ಡಿ ಬಾಕಿ ಇತ್ತು. ಅದರಲ್ಲಿ ಒಂದಷ್ಟು ಹಣ ಪಾವತಿ ಮಾಡಿದ್ದು, ಅದನ್ನು ಬಡ್ಡಿಗೆ ತೆಗೆದುಕೊಳ್ಳಲಾಗಿದೆ. ಹೀಗಾಗಿ ಒಟ್ಟು 181.52 ಲಕ್ಷ ಕುಡಿಯುವ ನೀರು ಯೋಜನೆ, ಬೀದಿದೀಪಗಳ ವಿದ್ಯುತ್ ಪೂರೈಕೆಯಿಂದ 45 ಸಾವಿರ ಬಾಕಿ ಇದೆ.
ಏತ ನೀರಾವರಿ ಯೋಜನೆಗಳಿಂದ ದೊಡ್ಡ ಬಾಕಿ ಉಳಿದಿದ್ದು, ಬೀಳಗಿ ತಾಲೂಕಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ, ಸಣ್ಣ ನೀರಾವರಿ ಇಲಾಖೆಗಳ ಅಡಿಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ, ಏತ ನೀರಾವರಿ ಯೋಜನೆಗಳೂ ನಡೆಯುತ್ತಿದ್ದು, ಇವುಗಳಿಂದ 56,13,895 ರೂ. ಬಾಕಿ ಬಂದಿಲ್ಲ.
-ಶ್ರೀಶೈಲ ಕೆ. ಬಿರಾದಾರ