Advertisement

ಕೂಗಳತೆಯಲ್ಲಿದ್ದರೂ ಪ್ರಯೋಜನವಾಗದ ಕೆರೆ

12:48 PM Jun 07, 2019 | Suhan S |

ಬನಹಟ್ಟಿ: ರೈತರ ಜೀವಜಲವಾಗಿರುವ ಬನಹಟ್ಟಿಯ ಕೆರೆಯಿಂದ ಜಗದಾಳ, ನಾವಲಗಿ, ಚಿಮ್ಮಡ, ಬಂಡಿಗಣಿ, ಯಲ್ಲಟ್ಟಿ ಸೇರಿದಂತೆ ಮುಧೋಳ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅಂತರ್ಜಲಮಟ್ಟ ಹೆಚ್ಚಳವಾಗಿದ್ದರೆ, ಕೂಗಳತೆಯಲ್ಲಿರುವ ರಬಕವಿ-ಬನಹಟ್ಟಿ ಪಟ್ಟಣಕ್ಕೆ ಪ್ರಯೋಜನವಾಗದಿರುವುದು ವಿಪರ್ಯಾಸವೇ ಸರಿ.

Advertisement

ಶತಮಾನದ ಇತಿಹಾಸ ಹೊಂದಿರುವ ಬನಹಟ್ಟಿಯ ಬೃಹತ್‌ ಕೆರೆ ಸುಮಾರು 64 ಎಕರೆ ವಿಸ್ತೀರ್ಣ ಹೊಂದಿದ್ದು, ಅದು ತುಂಬಿ ನಿಂತರೆ ಅಕ್ಕಪಕ್ಕದ ಸಾವಿರಾರು ಎಕರೆ ಜಮೀನುಗಳಿಗೆ ಅನುಕೂಲವಾಗುತ್ತದೆ. 8-10 ಗ್ರಾಮಗಳ ದೂರದವರೆಗೆ ಇರುವ ಕೊಳವೆಬಾವಿಗಳಲ್ಲಿ ಸದಾ ನೀರು ಶೇಖರಣೆಯಾಗಲು ಈ ಕೆರೆ ಕಾರಣವಾಗಿದೆ. ಆದರೆ ರಬಕವಿ-ಬನಹಟ್ಟಿಗೆ ಯಾವುದೇ ರೀತಿಯ ಅನುಕೂಲವಾಗಿಲ್ಲ. ಕಾರಣ ಇದಕ್ಕೆ ಮಹತ್ವದ ಯೋಜನೆ ರೂಪಿಸಿ ರಬಕವಿ-ಬನಹಟ್ಟಿ ಅವಳಿ ಪಟ್ಟಣದಲ್ಲಿರುವ ಲಕ್ಷಕ್ಕೂ ಅಧಿಕ ಜನರಿಗೆ ಪ್ರಯೋಜನವಾಗುವಂತೆ ಮಾಡಬೇಕಿದೆ.

ನೀರಿದ್ದರೂ ಇಲ್ಲ ಪ್ರಯೋಜನ: ಘಟಪ್ರಭಾ ಎಡದಂಡೆ ಕಾಲುವೆ ಮೂಲಕ ನೀರು ಹರಿದು ಬಂದರೆ ಬನಹಟ್ಟಿ ಕೆರೆ ತುಂಬುತ್ತದೆ. ಕೆರೆ ಒಮ್ಮೆ ಭರಪೂರ ಭರ್ತಿಯಾದರೆ ಸುಮಾರು 0.75 ಟಿಎಂಸಿ ನೀರು ಶೇಖರಣೆಯಾಗುತ್ತದೆ. ಈ ನೀರನ್ನು ಬೇಸಿಗೆ ದಿನಗಳಲ್ಲಿ ರಬಕವಿ-ಬನಹಟ್ಟಿ ಅವಳಿನಗರಕ್ಕೆ ಪೂರೈಸಬಹುದು. ಇದರಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ನೀರಿನ ಸಮಸ್ಯೆ ನೀಗಿಸಬಹುದಾಗಿದ್ದು, ಈ ಕುರಿತು ಜನಪ್ರತಿನಿಧಿಗಳು ಆಲೋಚನೆ ಮಾಡದಿರುವುದು ದುರದೃಷ್ಟಕರ.

ಹೂಳು ತೆಗೆದರೆ ಇನ್ನಷ್ಟು ಅನುಕೂಲ: ಕೆರೆಯಲ್ಲಿ ಹೂಳು ತೆಗೆದರೆ ಇನ್ನಷ್ಟು ಆಳವಾಗಿ ನೀರು ಸಂಗ್ರಹಣೆಯಾಗುತ್ತದೆ. ಸರಕಾರ ಈ ಕೆರೆಯನ್ನು ಹೂಳು ತೆಗೆದು ಸಾಕಷ್ಟು ನೀರು ನಿಲ್ಲುವಂತೆ ಮಾಡಿದರೆ ಸಾಕಷ್ಟು ಅನುಕೂಲವಾಗುತ್ತದೆ. ನೀರಿನ ಬವಣೆ ನೀಗಿದಂತಾಗುತ್ತದೆ. ಇಂತಹ ಕೆರೆಯನ್ನು ಸದ್ಬಳಕೆ ಮಾಡಿಕೊಳ್ಳದೇ ಮತ್ತೆ ಟ್ಯಾಂಕರ್‌, ಕೊಳವೆ ಬಾವಿ ಸೇರಿದಂತೆ ಇತರೆ ಹರಸಾಹಸ ಮಾಡುವುದರ ಮೂಲಕ ಕಸರತ್ತು ನಡೆಸುತ್ತಿದೆ.

ಕೆರೆ ಒತ್ತುವರಿ: 64 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆ ಸದ್ಯ ಭೂಗಳ್ಳರ ಪಾಲಾಗಿ ಅಂದಾಜು 10 ಎಕರೆ ಪ್ರದೇಶ ಖಾಸಗಿ ವ್ಯಕ್ತಿಗಳ ಪಾಲಾಗಿದೆ. ಈ ಒತ್ತುವರಿ ಪ್ರದೇಶವನ್ನು ವಾಪಸ್‌ ಪಡೆಯುವತ್ತ ಸರ್ಕಾರ ಪ್ರಮುಖ ಹೆಜ್ಜೆ ಇಡಬೇಕಿದೆ.

Advertisement

ಪೂರಕ ಕೆರೆ ನಿರ್ಮಾಣವಾದ್ರೆ ಅನುಕೂಲ:

ಇರುವ ಬೃಹತ್‌ ಕೆರೆಯೊಂದಿಗೆ ಇನ್ನೊಂದು ಪೂರಕ ಕೆರೆಯೊಂದನ್ನು ನಿರ್ಮಿಸಬೇಕೆಂಬುದು ಇಲ್ಲಿಯ ನಾಗರಿಕರ ಆಗ್ರಹವಾಗಿದೆ. ಈಗಾಗಲೇ ಕೆಲವರು ಕಳೆದೆರಡು ದಶಕಗಳಿಂದ ಈ ಬೇಡಿಕೆಯನ್ನು ಇಟ್ಟಿದ್ದರೂ ಗಮನ ಹರಿಸಿಲ್ಲ. ಪಟ್ಟಣಕ್ಕೆ ಅಂಟಿಕೊಂಡು ಕೆರೆ ನಿರ್ಮಾಣವಾದರೆ ಅನುಕೂಲವಾಗಲಿದೆ. ಕೊಳವೆ ಬಾವಿಗಳು ಬತ್ತುವ ಪ್ರಮೇಯವೇ ಬರುವುದಿಲ್ಲ. ಸದ್ಯ ಶೇ.50ಕ್ಕೂ ಅಧಿಕ ಕೊಳವೆ ಬಾವಿಗಳು ಅಂತರ್ಜಲ ಕುಸಿತದಿಂದ ತಮ್ಮ ಕಾರ್ಯ ಸ್ಥಗಿತಗೊಳಿಸಿವೆ. ಪೂರಕ ಕೆರೆ ನಿರ್ಮಾಣವಾದರೆ ಅಂತರ್ಜಲ ಹೆಚ್ಚಿಸುವುದರೊಂದಿಗೆ ನಗರ ಸೌಂದರ್ಯವೂ ಹೆಚ್ಚಲಿದೆ.]
•ಕಿರಣ ಶ್ರೀಶೈಲ ಆಳಗಿ
Advertisement

Udayavani is now on Telegram. Click here to join our channel and stay updated with the latest news.

Next