ಬೆಂಗಳೂರು: ತಾಯಿಗೆ ಅವಾಚ್ಯ ಶಬ್ಧ ಗಳಿಂದ ನಿಂದಿಸಿದ ಗಾರೆ ಕೆಲಸಗಾರರನ್ನು ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ನಡೆದಿದೆ.
ವಲ್ಲಿಪುರ ನಿವಾಸಿ ಪನ್ನೀರ್ ಸೆಲ್ವಂ(36) ಕೊಲೆಯಾದವ. ಕೃತ್ಯ ಎಸಗಿದ ಪ್ರೇಮ್ ಕುಮಾರ್(21) ಮತ್ತು ಮದನ್(23) ಎಂಬವರನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ.
ಗಾರೆ ಕೆಲಸ ಮಾಡಿ ಕೊಂಡಿದ್ದ ಪನ್ನೀರ್‌ಸೆಲ್ವಂ ಪತ್ನಿ ಮಕ್ಕಳ ಜತೆ ವಲ್ಲಿಪುರನಲ್ಲಿ ವಾಸವಾಗಿದ್ದು, ಮದ್ಯ ವ್ಯಸನಿಯಾಗಿದ್ದ ಈತ, ಪ್ರತಿನಿತ್ಯ ಸಂಜೆ ಮದ್ಯದ ಅಮಲಿನಲ್ಲಿ ಅಕ್ಕ-ಪಕ್ಕದ ನಿವಾಸಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ. ಈ ಮಧ್ಯೆ ಭಾನುವಾರ ಬೆಳಗ್ಗೆ ಪನ್ನೀರ್ ಸೆಲ್ವಂ ಮದ್ಯದ ನಶೆಯಲ್ಲಿ ಪ್ರೇಮ್‌ಕುಮಾರ್ ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅದೇ ವಿಚಾರವಾಗಿ ಪನ್ನೀರ್ ಸೆಲ್ವಂ ಹಾಗೂ ಆರೋಪಿಗಳ ನಡುವೆ ಮಾರಾಮಾರಿ ನಡೆದಿದೆ. ಬಳಿಕ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಆ ಬಳಿಕ ಮಧ್ಯಾಹ್ನವೂ ಇಬ್ಬರ ನಡುವೆ ಗಲಾಟೆಯಾಗಿದೆ. ಆರೋಪಿಗಳು ಗಾರೆ ಕೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.
ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆ: ಘಟನೆಯಿಂದ ಆಕ್ರೋಶಗೊಂಡಿದ್ದ ಆರೋಪಿಗಳು ಸಂಜೆ 4 ಗಂಟೆಗೆ ಪನ್ನೀರ್ ಸೆಲ್ವಂಗೆ ಕರೆ ಮಾಡಿ, ಕೆ.ಸಿ.ಜನರಲ್ ಆಸ್ಪತ್ರೆ ಆವರಣದ ಹಿಂಭಾಗದಲ್ಲಿರುವ ಪಾರ್ಕ್‌ಗೆ ಬರುವಂತೆ ಹೇಳಿದ್ದಾರೆ.
ಅದರಂತೆ ಪನ್ನೀರ್ ಸೆಲ್ವಂ ಪಾರ್ಕ್ ಬಂದಾಗ, ಬೆಳಗ್ಗೆಯ ಗಲಾಟೆ ಬಗ್ಗೆ ಪ್ರಸ್ತಾಪಿಸಿ ವಾಗ್ವಾದ ನಡೆಸಿದ್ದಾರೆ. ಅದು ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ಆರೋಪಿಗಳು ಅಲ್ಲೆ ಇದ್ದ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಪನ್ನೀರ್ ಸೆಲ್ವಂನನ್ನು ಹತ್ಯೆಗೈದು ಪರಾರಿಯಾಗಿದ್ದರು. ಮುಖದ ಮೇಲೆ ಕಲ್ಲು ಎತ್ತಿಹಾಕಿದ್ದರಿಂದ ಆರಂಭದಲ್ಲಿ ಮೃತನ ಗುರುತು ಪತ್ತೆಯಾಗಿರಲಿಲ್ಲ. ತನಿಖೆ ನಡೆಸಿದಾಗ ಆರೋಪಿಗಳ ಕೃತ್ಯ ಗೊತ್ತಾಗಿ ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದಕ್ಕೆ ಹತ್ಯೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.
ಕೊಲೆಯಾದ ಪನ್ನೀರ್ ಸೆಲ್ವಂ ವಿರುದ್ಧ 2018ರಲ್ಲಿ ಪೋಕೊÕà ಪ್ರಕರಣ ದಾಖಲಾಗಿತ್ತು. 2019ರಲ್ಲಿ ಹಲ್ಲೆ, 2024ರಲ್ಲಿ ಬೆದರಿಕೆ ಹಾಕಿದ ಪ್ರಕರಣ ದಾಖಲಾಗಿದ್ದು, ಜೈಲು ಹೋಗಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.