Advertisement

ಅಂದು ಕಾರ್ಮಿಕ, ಚಹಾ ವ್ಯಾಪಾರಿ, ಇಂದು ಖ್ಯಾತ ಲೇಖಕ

09:55 AM Oct 03, 2019 | Suhan S |

ಜೀವನದಲ್ಲಿ ಎಷ್ಟೇ ಕಷ್ಟಗಳು ಬರಲಿ, ಅದನ್ನು ‌ಮೆಟ್ಟಿ ನಿಂತು ಎದ್ದು ಬರುವವನು ಒಬ್ಬ ಸಾಧಕನೇ ಆಗಿರುತ್ತಾನೆ. ಆ ಸಾಧಕ‌ ನಾಲ್ಕು ಜನರ ಮುಂದೆ ತನ್ನ ವ್ಯಥೆಯನ್ನು ಕಥೆಯ ರೂಪದಲ್ಲಿ ಹೇಳಿದರೆ ಆತ ಒಬ್ಬ ಲೇಖಕನಾಗುತ್ತಾನೆ.

Advertisement

ಇದು ದಿಲ್ಲಿಯ ಐ.ಟಿ.ಓ. ಹಿಂದಿ ಭವನದ ಎದುರು ಕಳೆದ 40 ವರ್ಷಗಳಿಂದ ಚಹಾ ಮಾರುತ್ತಾ, 25 ಕ್ಕೂ ಹೆಚ್ಚಿನ ಪುಸ್ತಕಗಳನ್ನು ಬರೆದು ಲೇಖಕನಾಗಿರುವ ಲಕ್ಷ್ಮಣ್ ರಾವ್ ಎನ್ನುವವರ ಸ್ಪೂರ್ತಿದಾಯಕ ಯಶೋಗಾಥೆ.

ಕಷ್ಟಪಟ್ಟು ದುಡಿದು ತಿನ್ನುವ ಒಡೆಯ :  ಲಕ್ಷ್ಮಣ್ ರಾವ್ ಬಾಲ್ಯದಿಂದಲೇ ಬಡತನದ ಪರಿಸ್ಥಿತಿ ಹಾಗೂ ಪರಿಸರದಲ್ಲಿ ಬೆಳೆದವರು. ಹತ್ತನೇ ಕ್ಲಾಸ್ ಮುಗಿದ ಮೇಲೆ ಸಣ್ಣ ವಯಸ್ಸಿನಿಂದಲೇ ಕೆಲಸದ ಜವಾಬ್ದಾರಿಯನ್ನು ಹೊತ್ತು ‌ಅಮರಾವತಿಯ ಒಂದು ಟೆಕ್ಸ್ಟ್ ಟೆಲ್ ಮಿಲ್ ನಲ್ಲಿ ದುಡಿಯಲು ಆರಂಭಿಸಿದ ಲಕ್ಷ್ಮಣ್  ಅಲ್ಲಿಂದ ತನ್ನ ಊರು ಮಹಾರಾಷ್ಟ್ರಕ್ಕೆ ಬಂದು ನೆಲೆಸುತ್ತಾರೆ. ಅಲ್ಲಿ ಅಪ್ಪನೊಟ್ಟಿಗೆ ಗದ್ದೆಯ ಕೆಲಸವನ್ನು ಮಾಡಲು ಆರಂಭಿಸುತ್ತಾರೆ.

ಅಲ್ಲಿಂದ ತನ್ನ ತಂದೆ ಬಳಿಯಿಂದ ಕೇವಲ 40 ರೂಪಾಯಿ ಪಡೆದು ಭೋಪಾಲ್ ಗೆ  ಬಂದು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಮುಂದೆ ದಿಲ್ಲಿಗೆ ಬಂದು ದೇವಾಲಯದ ಧರ್ಮಶಾಲೆಯಲ್ಲಿ  ರಾತ್ರಿ‌  ಕಳೆದು, ಹಗಲು ಕೆಲಸ ಹುಡುಕಲು ಹೊರಡುತ್ತಾರೆ.  ಆಗ ಲಕ್ಷ್ಮಣ್  22ರ ಯುವಕ. ನಗರದ ಡಾಭಾದಲ್ಲಿ ಒಂದು ವರ್ಷ ತಟ್ಟೆ ತೊಳೆಯುವ ಕೆಲಸ‌ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.

ಓದುವ ಹುಚ್ಚಿತ್ತು , ಬರೆಯುವ ತುಡಿತ ಇತ್ತು :  ಲಕ್ಷ್ಮಣ್ ರಾವ್  ಶಾಲೆಗೆ ಹೋಗುವಾಗ  ಹಳ್ಳಿಯಿಂದ  ನಗರಕ್ಕೆ ಪಯಣ ಬೆಳೆಸಿ, ವಾಪಸು ಬರುವಾಗ ಅವರ ಬಳಿ ಇದ್ದ ಪುಸ್ತಕಗಳನ್ನು ಓದಿ ಕೊಡುವ ನೆಪದಲ್ಲಿ ಪಡೆದು ಓದುವ ಹುಚ್ಚಿಗೆ ಒಂದು ಸಣ್ಣ ಕಿಡಿ ಹಚ್ಚುತ್ತಾರೆ. ಆ ಸಣ್ಣ ಕಿಡಿ ಮುಂದೆ ನಂದಿಸಲಾಗದ ಬೆಂಕಿ ಆಗುತ್ತದೆ. ಅಲ್ಲಿ ಇಲ್ಲಿ ಕೆಲಸ ಮಾಡಿ ಉಳಿಸಿಕೊಂಡ ದುಡ್ಡಿನಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಪುಸ್ತಕಗಳನ್ನು ಪಡೆದು ಓದಲು ಆರಂಭಿಸುತ್ತಾರೆ. ಆ ಸಮಯದಲ್ಲಿ ಇವರ ಮೇಲೆ ಹೆಚ್ಚು ಪ್ರಭಾವ ಬೀರಿದ್ದು ಖ್ಯಾತ ಲೇಖಕ ಗುಲ್ಶಾನ್ ನಂದಾ. ಸಿಕ್ಕಿದೆಲ್ಲವನ್ನೂ ಓದಲು ಆರಂಭಿಸುತ್ತಾರೆ. ತಾನು ಮುಂದೊಂದು ದಿನ ಗುಲ್ಶಾನ್ ನಂದಾರ ಹಾಗೆ ಲೇಖಕನಾಗ ಬೇಕು ಅನ್ನುವ ಆಸೆ ಲಕ್ಷ್ಮಣ್ ಅವರಲ್ಲಿ ಚಿಗುರಲು ಶುರುವಾಗುತ್ತದೆ. ಮುಂದೆ ದಿಲ್ಲಿಯ ದಿಗಂಬರ್ ಮಾರ್ಗದಲ್ಲಿ ಪಾನ್ ಸ್ಟಾಲ್ ವೊಂದನ್ನು ಪ್ರಾರಂಭಿಸುತ್ತಾರೆ. ಅಲ್ಲಿ ತನ್ನ ಮೊದಲ ಪುಸ್ತಕವನ್ನು ಬರೆಯಲು ಶುರು ಮಾಡುತ್ತಾರೆ.

Advertisement

ಪ್ರಕಟನೆಗೆ ಪ್ರಕಾಶಕರಿಲ್ಲದೆಪರದಾಟ :  ಲಕ್ಷ್ಮಣ್ ರಾವ್ ದಿಲ್ಲಿಯ ಐ.ಟಿ.ಓ ಹಿಂದಿ ಭವನದ ಮುಂಭಾಗದ ರಸ್ತೆ ಬಳಿಯ ಮರದಡಿಯಲ್ಲಿ ಚಹಾದ ಅಂಗಡಿಯನ್ನು ನಡೆಸುತ್ತಾರೆ. ತನ್ನ ಶಾಲೆಯ ಸ್ನೇಹಿತ ರಾಮ್ ದಾಸ್ ಎನ್ನುವ ಹುಡುಗನ ಕುರಿತು ಮೊದಲ ಪುಸ್ತಕ ‘ರಾಮ್ ದಾಸ್’ ಎನ್ನುವ ಕಾದಂಬರಿಯನ್ನು ಬರೆದು ದಿಲ್ಲಿಯ ಬೀದಿ ಬೀದಿ ಅಲೆದು ಪ್ರಕಟನೆಗೆ ಪ್ರಕಾಶಕರಲ್ಲಿ ವಿನಂತಿ ಮಾಡಿಕೊಳ್ಳುತ್ತಾರೆ. ಆದರೆ ಎಲ್ಲಾ ಪ್ರಕಾಶಕರು ಹಣ ನೀಡದೇ ಪ್ರಕಟಿಸುವುದಿಲ್ಲ ಎಂದು ನಿರಾಕರಿಸುತ್ತಾರೆ. ಒಬ್ಬರಂತೂ ಚಹಾ ಮಾರುತ್ತಾನೆ ಅನ್ನುವ ಕಾರಣಕ್ಕೆ ಹೀಯಾಳಿಸಿ, ಅವಮಾನ ಮಾಡಿ ಕಳುಹಿಸುತ್ತಾರೆ.

ಲಕ್ಷ್ಮಣ್ ರಾವ್ ಅವರಿಗೆ ಇದು ತುಂಬಾ ಬೇಸರವನ್ನುಂಟು ಮಾಡುತ್ತದೆ. ಬರೆದವರಿಗೆ ಮಹತ್ವ ನೀಡದ ಇಂಥ ವ್ಯಕ್ತಿಗಳ ಬಗ್ಗೆ ಅಸಮಾಧಾನ ಪಟ್ಟುಕೊಂಡು ತನ್ನ ಪುಸ್ತಕವನ್ನು ತಾನೇ ಪ್ರಕಟಿಸಬೇಕು ಅನ್ನುವ ಪಣತೊಟ್ಟು, ಪ್ರತಿದಿನ ಉಳಿದ ಹಣವನ್ನು ಸಂಗ್ರಹಿಸಿಕೊಂಡು 7 ಸಾವಿರ ಮಾಡಿ ಸ್ವಂತ ಪ್ರಕಾಶನವನ್ನು ಆರಂಭಿಸುತ್ತಾರೆ.

ಪ್ರಶಸ್ತಿಗಳಿಸಿದರಾಮ್ ದಾಸ್‘ :  ಲಕ್ಷ್ಮಣ್ ರಾವ್ ಅವರ ಮೊದಲ ಪುಸ್ತಕ ಎಲ್ಲೆಡೆಯೂ ಜನಪ್ರಿಯಗಳಿಸಿಕೊಂಡು ಮಾರಾಟವಾಗುತ್ತದೆ. ಲಕ್ಷ್ಮಣ್ ರಾವ್ ಮೊದಲ ಪುಸ್ತಕ ರಾಮ್ ದಾಸ್ ‘ಇಂದ್ರಪ್ರಸ್ಥ ಸಾಹಿತ್ಯ ಭಾರತಿ’ ಪ್ರಶಸ್ತಿಯನ್ನುಗಳಿಸುತ್ತದೆ. 2001 ರಲ್ಲಿ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಲಕ್ಷ್ಮಣ್ ರಾವ್ ಅವರನ್ನು ಕರೆಸಿ ರಾಷ್ಟ್ರಪತಿ ಭವನದಲ್ಲಿ ಬರವಣಿಗೆಯನ್ನು ಮೆಚ್ಚಿಕೊಂಡು ಅಭಿನಂದನೆ ಸಲ್ಲಿಸಿದ್ದರು.

ಅವಮಾನ, ಅನುಭವ, ಸನ್ಮಾನವನ್ನೇ ಕತೆಯಾಗಿಸಿದರು :  ಲಕ್ಷ್ಮಣ್ ರಾವ್ ಅವರು ತಮ್ಮ ಪ್ರಕಾಶನವನ್ನು ಆರಂಭಿಸಿದ ಮೇಲೆ ಪುಸ್ತಕಗಳನ್ನು ಬರೆಯುತ್ತಾ ಹೋದರು ‘ನಹೀ ದುನಿಯಾ ಕೀ ನಹೀ ಕಹಾನಿ” ಎನ್ನುವ ತನ್ನ ಎರಡನೇ ಕಾದಂಬರಿಯನ್ನು ಬರೆದ ಲಕ್ಷ್ಮಣ್ ರಾವ್ ಮೊದ ಮೊದಲು ತನ್ನ ‌ಪುಸ್ತಕಗಳ‌ನ್ನು ಮಾರಾಟ ಮಾಡಲು‌ ಸೈಕಲ್ ತುಳಿಯುತ್ತಾ ದಿಲ್ಲಿಯ ನಾನಾ ಶಾಲಾ ಗೇಟಿನ ಹೊರಭಾಗದಲ್ಲಿ ನಿಲ್ಲುತ್ತಿದ್ದರು. ಲಕ್ಷ್ಮಣ್ ರಾವ್ ಅವರ ಬಹುತೇಕ ಪುಸ್ತಕಗಳು ತಮ್ಮ ಸ್ವಂತ ಅನುಭವ ಹಾಗೂ ಚಹಾ ಕೊಳ್ಳಲು ಬರುವ ಗ್ರಾಹಕರ ಜೀವನದ ಮೇಲೆ ಆಧಾರಿತವಾಗಿವೆ. ಇಷ್ಟು ಮಾತ್ರವಲ್ಲದೇ ಸಣ್ಣ ಕಥೆಗಳು, ನಾಟಕಗಳು ಹಾಗೂ  ಸಂಶೋಧನಾ ಗ್ರಂಥಗಳು, ಕಾದಂಬರಿಗಳನ್ನು ಬರೆದಿದ್ದಾರೆ.

ಕಲಿಯಲು ವಯಸ್ಸಲ್ಲ, ಮನಸ್ಸು ಮುಖ್ಯ : ಲಕ್ಷ್ಮಣ್ ರಾವ್ ಮರಾಠಿ ಭಾಷೆಯಲ್ಲಿ 10 ನೇ ತರಗತಿ ಪಾಸು ಮಾಡಿ, ನೇರ ದಿಲ್ಲಿಗೆ ಬಂದು ವ್ಯಾಪಾರ ವಹಿವಾಟು ಆರಂಭಿಸಿದ್ದರು. ಹಿಂದಿ ಭಾಷೆಯ ಮೇಲೆ ಆಸಕ್ತಿ ಹೊಂದಿದ್ದ ಲಕ್ಷ್ಮಣ್ ರಾವ್ ತನ್ನ 37 ನೇ ವಯಸ್ಸಿನಲ್ಲಿ ದ್ವಿತೀಯ ಪಿಯುಸಿಯನ್ನು ಪೂರ್ತಿ ಮಾಡುತ್ತಾರೆ. ಅದರ ಜೊತೆಗೆ ತನ್ನ 50 ನೇ ವಯಸ್ಸಿನಲ್ಲಿ  ದಿಲ್ಲಿ ವಿಶ್ವವಿದ್ಯಾಲಯದಿಂದ ಬಿ.ಎ.ಪದವಿಯನ್ನು ಪಡೆಯುತ್ತಾರೆ. ನಂತರ 60 ನೇ ವಯಸ್ಸಿನಲ್ಲಿ ಎಂ.ಎ ಪದವಿಯನ್ನು ಗಳಿಸುತ್ತಾರೆ. ಇಷ್ಟೆಲ್ಲವನ್ನೂ ಲಕ್ಷ್ಮಣ್ ರಾವ್  ಮಾಡಿದ್ದು, ಬೀದಿ ಬದಿ ಚಹಾ ಮಾರಿ,ಪುಸ್ತಕ ಮಾರಾಟದಿಂದ ಬಂದ ಹಣವನ್ನು ಉಳಿಸಿಕೊಂಡು ಅನ್ನುವುದು ವಿಶೇಷ.

ನೂರಾರು ವೇದಿಕೆ, ಹಲವಾರುಪುಸ್ತಕ, ಸಾವಿರಾರು ಶ್ಲಾಘನೆ : ಲಕ್ಷ್ಮಣ್ ರಾವ್ ಇಂದು 25 ಕ್ಕೂ ಹೆಚ್ಚಿನ ಪುಸ್ತಕಗಳನ್ನು ಬರೆದಿದ್ದಾರೆ. ಇದರಲ್ಲಿ ಹದಿನೆಂಟು ಪುಸ್ತಕಗಳು ಪ್ರಕಟಗೊಂಡಿವೆ, ಅಪಾರ ಜನಪ್ರಿಯಗಳಿಸಿದೆ. ಒಬ್ಬ ಬರಹಗಾರ ‌ಮಾತ್ರವಲ್ಲದೆ ನೂರಾರು ಸಂಘ-ಸಂಸ್ಥೆ ,ಶೈಕ್ಷಣಿಕ ಸಂಸ್ಥೆ, ಖಾಸಗಿ ಸಂಸ್ಥೆಗಳಿಗೆ  ಅತಿಥಿ ಆಗಿ ಲಕ್ಷ್ಮಣ್ ರಾವ್ ಸ್ಫೂರ್ತಿದಾಯಕ ಮಾತುಗಳನ್ನು  ಆಡುತ್ತಾರೆ. ಟೆಡ್ ಎಕ್ಸ್ ನಲ್ಲೂ ಇವರ ಮಾತು ಕೇಳುಗರಿಗೆ ಸ್ಫೂರ್ತಿ ಕೊಟ್ಟಿದೆ.

ಬಿಬಿಸಿ, ರಿಪಬ್ಲಿಕ್ ವಾಹಿನಿ ಸೇರಿದಂತೆ ಹತ್ತು ಹಲವು ಪತ್ರಿಕೆಗಳಲ್ಲಿ ಇವರ ಬಗ್ಗೆ ಮೆಚ್ಚುಗೆಯ ವರದಿ ಆಗಿದೆ. ದೇಶ ಮಾತ್ರವಲ್ಲದೆ ವಿದೇಶದ ನ್ಯೂಯಾರ್ಕ್ ಟೈಮ್ಸ್, ದ ಗಾರ್ಡಿಯನ್ ಪತ್ರಿಕೆಯಲ್ಲಿ ಇವರ ಸಾಧನೆಯ ಬಗ್ಗೆ ವಿಶೇಷ ಲೇಖನಗಳು ಪ್ರಕಟಗೊಂಡಿವೆ.

ಇಂದಿಗೂ ಲಕ್ಷ್ಮಣ್ ರಾವ್ ಇಷ್ಟು ದೊಡ್ಡ ಲೇಖಕನಾಗಿದರೂ ದಿಲ್ಲಿಯ ಐ.ಟಿ.ಓ ಹಿಂದಿ ಭವನ್ ನ ಎದುರು ಸಣ್ಣ ಚಹಾದ ಅಂಗಡಿಯ ಬದಿ ತನ್ನ ಪುಸ್ತಕಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಾರೆ. ಪ್ರತಿ ತಿಂಗಳು ನೂರಕ್ಕೂ ಹೆಚ್ಚು ಪ್ರತಿಗಳ ಮಾರಾಟವಾಗುತ್ತದೆ. ಹತ್ತು ಸಾವಿರಕ್ಕೂ ಹೆಚ್ಚು ಆದಾಯವನ್ನು ಪುಸ್ತಕ ಮಾರಾಟದಿಂದ ಗಳಿಸುತ್ತಾರೆ. ಅದರಿಂದ ಬಂದ ಆದಾಯದಿಂದ ಮುಂದಿನ ಪುಸ್ತಕದ ಪ್ರಕಟನೆಗೆ ಬಳಸುತ್ತಾರೆ. ಚಹಾ ಮಾರಾಟದಿಂದ ಬಂದ ಆದಾಯದಿಂದ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಾರೆ.

ಶೇಕ್ಸ್‌ಪಿಯರ್‌ ನಂತೆ ತಮ್ಮ ನಾಟಕಗಳು ವೇದಿಕೆಯಲ್ಲಿ ಪ್ರದರ್ಶನವಾಗಬೇಕು ಅನ್ನುವ ಆಸೆ ಇವರದು. ಸದ್ಯ 2001 ರಿಂದ ಬರೆಯಲು ಆರಂಭಿಸಿದ ‘ಬ್ಯಾರಿಸ್ಟರ್ ಗಾಂಧಿ’ ಎನ್ನುವ ಪುಸ್ತಕದ ಕೊನೆಯ ಹಂತ ಬರೆಯುತ್ತಿದ್ದಾರೆ.  ಇವರ ಪುಸ್ತಕ ಹೆಚ್ಚಾಗಿ ಮಾರಾಟವಾಗುವುದು ಆನ್ಲೈನ್ ತಾಣ ಅಮೆಜಾನ್,ಫ್ಲಿಪ್ ಕಾರ್ಟ್ ನಲ್ಲಿ.

ಇವರ ಒಂದು ಮಾತು ಎಷ್ಟು ಇಷ್ಟ ಆಯಿತು ಅಂದರೆ ” ಲೇಖಕನ ಬದುಕು ಆರಂಭವಾಗುವುದು ಐವತ್ತು ವರ್ಷದ ನಂತರ, ಅವನ ಜೀವನ ಇರುವುದು ಅವನ ಮರಣದ ನಂತರ”..!

 

ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next