ವಿಧಾನ ಪರಿಷತ್ತು: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಆಡಳಿತ ಪಕ್ಷದ ಸದಸ್ಯ ರವಿಕುಮಾರ್ ಕೂಗಿದ “ಧಿಕ್ಕಾರ’ ಕೂಗು ಬುಧವಾರ ಕೂಡ ಮೇಲ್ಮನೆಯಲ್ಲಿ ಪ್ರತಿಧ್ವನಿಸಿತು. ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಪ್ರಕರಣವನ್ನು ನೀತಿ-ನಿರೂಪಣಾ ಸಮಿತಿಗೆ ವರ್ಗಾಯಿಸುವಂತೆ ಪ್ರತಿಪಕ್ಷಗಳು ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿಗೆ ಮನವಿ ಸಲ್ಲಿಸಿದವು.
ಪ್ರಕರಣವು ಸಮಿತಿಗೆ ವರ್ಗಾಯಿಸಲು ಸೂಕ್ತವೇ ಎಂಬುದನ್ನು ಪರಿಶೀಲಿಸಿ, ತೀರ್ಮಾನ ಕೈಗೊಳ್ಳುವುದಾಗಿ ಸಭಾಪತಿಗಳು ಪ್ರತಿಕ್ರಿಯಿಸಿದರು. ಹಾಗೊಂದು ವೇಳೆ ಪ್ರಕರಣ ವರ್ಗಾವಣೆಯಾದರೆ, ನೀತಿ-ನಿರೂಪಣಾ ಸಮಿತಿಯು ರವಿಕುಮಾರ್ ಅವರ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಬಾವಿಗಿಳಿದು ಪ್ರತಿಭಟನೆ: ಬುಧವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು, ರವಿ ಕುಮಾರ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸುವಂತೆ ಬಾವಿ ಗಿಳಿದು ಪ್ರತಿಭ ಟಿಸಿದರು. ಸರ್ಕಾರದ ಮೊಂಡು ತನದ ಧೋರಣೆ ಇದೇ ರೀತಿ ಮುಂದುವರಿದರೆ, ಬಜೆಟ್ ಅಧಿವೇಶನ ಮುಗಿಯುವವರೆಗೂ ಪ್ರತಿಪಕ್ಷ ಗಳು ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಸಾಕಷ್ಟು ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಿದ್ದು, ಕೂಡಲೇ ಗೊಂದಲ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು.
ಆಗ ಸಭಾಪತಿಗಳ ಸೂಚನೆಯಂತೆ ರವಿಕುಮಾರ್ ಅವರು, ವೀರ ಸಾವರ್ಕರ್ ಅವರ ಹೋರಾಟದ ಹಿನ್ನೆಲೆಯೊಂದಿಗೆ ಸ್ಪಷ್ಟೀಕರಣ ನೀಡಲು ಮುಂದಾದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಆಡಳಿತ ಪಕ್ಷದ ವಿರುದ್ಧ “ಧಿಕ್ಕಾರ’ ಕೂಗಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು, ಅಭಿವ್ಯಕ್ತಿ ಸ್ವಾತಂತ್ರ್ಯ ವಿರೋಧಿಗಳಿಗೆ “ಧಿಕ್ಕಾರ’ ಎಂದು ಘೋಷಣೆ ಹಾಕಿದರು. ಇದರಿಂದ ಸದನ ಗೊಂದಲದ ಗೂಡಾಯಿತು.
ಆಗ, ಪ್ರತಿಪಕ್ಷ ನಾಯಕರಾದ ಎಸ್.ಆರ್. ಪಾಟೀಲ್ ಮತ್ತು ಬಸವರಾಜ ಹೊರಟ್ಟಿ, 242ಬಿ ಅಡಿ ನೀತಿ-ನಿರೂಪಣಾ ಸಮಿತಿಗೆ ಪ್ರಕರಣವನ್ನು ವರ್ಗಾಯಿಸುವಂತೆ ಕೋರಿದರು. ಉದ್ದೇಶಿತ ಈ ಪ್ರಕರಣವನ್ನು ನೀತಿ- ನಿರೂಪಣಾ ಸಮಿತಿಗೆ ವರ್ಗಾಯಿಸಲು ಬರುವು ದಿಲ್ಲ ಎಂದು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಸದಸ್ಯ ಅರುಣ ಶಹಾಪುರ ಸಮಜಾಯಿಷಿ ನೀಡಲು ಮುಂದಾದರು. ಆಗ, “ಪ್ರಕರಣ ವರ್ಗಾವಣೆಗೆ ಸೂಕ್ತವಾಗಿದೆಯೇ ಇಲ್ಲವೇ ಎಂಬುದನ್ನು ನಾನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಸಭಾಪತಿ ಸ್ಪಷ್ಟಪಡಿಸಿದರು.
ಈ ಗೊಂದಲದ ನಡುವೆ ರವಿಕುಮಾರ್ ಅವರು, “ದೊರೆಸ್ವಾಮಿ ಅವರಿಗೆ ನಾಚಿಕೆ ಆಗ ಬೇಕು’ ಎಂದು ಪುನರುತ್ಛರಿಸಿದರು. ಇದು ಕಲಾಪದಲ್ಲಿ ಮತ್ತೆ ಕೋಲಾಹಲಕ್ಕೆ ಕಾರಣವಾ ಯಿತು. ಪ್ರತಿಪಕ್ಷದ ಸದಸ್ಯರಾದ ಎಚ್.ಎಂ.ರೇವಣ್ಣ, ಬೋಜೇಗೌಡ, ಶ್ರೀಕಂಠೇಗೌಡ, ಟಿ.ಎ.ಶರವಣ ಮತ್ತಿತರರು ರವಿಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಮಿತಿ ಏನು ಹೇಳುತ್ತೆ?: ಪರಿಷತ್ತಿನ ಸದಸ್ಯರು ಸದನದ ಒಳಗೆ ಮತ್ತು ಹೊರಗೆ ಹೇಗೆ ನಡೆದುಕೊಳ್ಳ ಬೇಕು ಎಂಬುದನ್ನು ನಿಯಮ “242ಬಿ’ ದಡಿ ಸ್ಪಷ್ಟಪಡಿಸಲಾಗಿದೆ. ಸದಸ್ಯರು ಸದನದ ನಿಯಮಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಾಗ, ಆ ಪ್ರಕರಣವನ್ನು ನೀತಿ-ನಿರೂಪಣಾ ಸಮಿತಿಗೆ ವಹಿಸಬಹುದು. ಈ ಸಮಿತಿಗೆ ಉಪ ಸಭಾಪತಿ ಅಧ್ಯಕ್ಷರಾಗಿರುತ್ತಾರೆ ಹಾಗೂ ವಿವಿಧ ಪಕ್ಷಗಳ ಸದಸ್ಯರು ಇರುತ್ತಾರೆ. ವಿಚಾರಣೆ ನಡೆಸಿ, ಸಮಿತಿಯು ಸದನಕ್ಕೆ ಶಿಫಾರಸು ಮಾಡುತ್ತದೆ.