Advertisement
ನಾನು ದಿನಾ ಬೆಳಿಗ್ಗೆ ಎದ್ದು ಮೊದಲು ಪಾರಿವಾಳವನ್ನು ನೋಡುತ್ತ ನನ್ನ ಬೆರಳು ಅದಕ್ಕೆ ಸ್ವಲ್ಪ ಸ್ವಲ್ಪ ಮುಟ್ಟಿಸುತ್ತಿದ್ದೆ. ಅದು ಕೂಡ ನನ್ನ ಬೆರಳಿಗೆ ಕೊಕ್ಕಿನಿಂದ ಮೆಲ್ಲನೆ ಕಚ್ಚುತ್ತಿತ್ತು. ಆಗ ನನಗೂ ತುಂಬಾ ಖುಷಿ ಆಗಿ ಅದಕ್ಕೆ ತಿನ್ನಲು ಅನ್ನ ಹಾಗೂ ಅಕ್ಕಿ ಕೊಡುತ್ತಿದ್ದೆ. ಆಗ ಅಜ್ಜಿ ಉಪ್ಪು ಮಾತ್ರ ತಿನ್ನಲು ಕೊಡಬಾರದೆಂದೂ, ಉಪ್ಪು ತಿಂದರೆ ಸಾಯುತ್ತವೆ ಎಂದೂ ಆಗಾಗ ಹೇಳುತ್ತಿದ್ದರು. ದಿವಸಗಳು ಕಳೆಯುತ್ತಿದ್ದಂತೆ ಪಾರಿವಾಳವನ್ನು ಗೂಡಿನಿಂದ ಹೊರಗೆ ಬಿಡುತ್ತಿದ್ದೆ. ಅದು ಖುಷಿಯಿಂದ ಅಂಗಳದಲ್ಲಿ ಹಾರಾಟ ಮಾಡಿ ನಮ್ಮ ಹತ್ತಿರ ಬಂದು ಭುಜದ ಮೇಲೋ, ತಲೆಯ ಮೇಲೋ ಕುಳಿತು ತನ್ನ ರೆಕ್ಕೆಯನ್ನು ಬಿಚ್ಚುತ್ತ ನಲಿಯುತ್ತಿತ್ತು. ನಮ್ಮ ನಾಯಿ ಕೂಡ ಅದಕ್ಕೆ ಏನೂ ತೊಂದರೆ ಮಾಡುತ್ತಿರಲಿಲ್ಲ. ಅಲ್ಲದೆ, ಬೆಳಿಗ್ಗೆ ದನವನ್ನು ಹಟ್ಟಿಯಿಂದ ಮೇಯಲು ಗುಡ್ಡೆಗೆ ಬಿಡುವಾಗ, ಪಾರಿವಾಳ ಕೂಡ ಹಾರಿ ಬಂದು ದನದ ಬೆನ್ನಿನ ಮೇಲೆ ಕುಳಿತು ಖುಷಿಯಿಂದ ನಲಿಯುತ್ತಿತ್ತು. ಕಾಗೆಯಂಥ ದೊಡ್ಡ ಪಕ್ಷಿ ನೋಡಿದ ತಕ್ಷಣ ಹಾರಿಕೊಂಡು ನಮ್ಮ ಹತ್ತಿರ ಬರುತ್ತಿತ್ತು. ಅಲ್ಲದೆ ಬೇರೆ ಪರಿಚಯ ಇಲ್ಲದವರ ಹತ್ತಿರ ಹೋಗುತ್ತಿರಲಿಲ್ಲ. ಮನೆಯ ಬೆಕ್ಕು ಕೂಡ ದೂರ ಕುಳಿತು ಓರೆಗಣ್ಣಿನಿಂದ ನೋಡಿ ಇದನ್ನು ಹಿಡಿಯಲು ಹೊಂಚು ಹಾಕುತ್ತ ಇರುವಾಗ ಒಂದು ದಿವಸ ನನ್ನ ಅಮ್ಮ ಬೆಕ್ಕಿನ ಬೆನ್ನಿಗೆ ಒಂದು ಪೆಟ್ಟು ಕೊಟ್ಟರು. ಮತ್ತೆ ಯಾವತ್ತೂ ಪಾರಿವಾಳವನ್ನು ಹಿಡಿಯಲು ಹೊಂಚು ಹಾಕುತ್ತಿರಲಿಲ್ಲ. ನಾನು ಮನೆಯಲ್ಲಿ ಓದುವಾಗ ಬರೆಯುವಾಗ ನನ್ನ ಹತ್ತಿರ ಕುಳಿತು ನನ್ನನ್ನೊಮ್ಮೆ ಪುಸ್ತಕವನ್ನೊಮ್ಮೆ ನೋಡುತ್ತ ಇರುವಾಗ ನನಗೆ ತುಂಬ ಖುಷಿ ಆಗಿ ಪಾರಿವಾಳದ ಕೊಕ್ಕಿಗೆ ಬರೆಯುವ ಪೆನ್ಸಿಲು ಕೊಡುವಾಗ ಅದನ್ನು ಕಚ್ಚಿಕೊಂಡು ಹಿಡಿದು ಅಜ್ಜಿಯವರಲ್ಲಿ ಕೊಟ್ಟು ಬರುವುದನ್ನು ನೋಡುವುದೇ ಒಂದು ಆಟ ಆಗಿತ್ತು.
ದ್ವಿತೀಯ ಪಿಯುಸಿ, ಸ್ವಾಮಿ ವಿವೇಕಾನಂದ ಕಾಲೇಜು, ತೆಂಕಎಡಪದವು