ಮಳೆ ಕಾಣದೆ ಭೂಮಿ ಒಣಗಿದೆ. ಇದ್ದ ಎರಡು ಎಕರೆ ತೋಟದಲ್ಲಿ ಹಸಿರು ಚಿಗುರವ ಭರವಸೆಯಿಲ್ಲ. ನೀರಿಗಾಗಿ ಕೊರೆಸಿದ ಕೊಳವೆಬಾವಿಯಿಂದ ಸಿಕ್ಕಿದ್ದು 6 ಲಕ್ಷ ರೂ. ಸಾಲದ ಬವಣೆ ಮಾತ್ರ. ಇಂಥ ಸಂದರ್ಭ ಎದುರಾದಾಗ ಹೆದರಿ, ಪ್ರಾಣ ಕಳೆದುಕೊಳ್ಳುವವರು ಅದೆಷ್ಟು ಜನರೋ. ಆದರೆ, ಸುಧಾ ಅವರು ಹಾಗೆ ಮಾಡಲಿಲ್ಲ. ಕಮರಿದ ಬದುಕನ್ನು ಮತ್ತೆ ಹಸನು ಮಾಡಲು ಸ್ವ ಉದ್ಯೋಗ ಶುರು ಮಾಡಿದ ಗಟ್ಟಿಗಿತ್ತಿ ಈಕೆ.
ಭೀಮಸಮುದ್ರ ಸಮೀಪದ ತೋಡ್ರನಳ್ ಗ್ರಾಮದ ಸುಧಾ, ಕಳೆದೊಂದು ವರ್ಷದಿಂದ ರೊಟ್ಟಿ-ಬುತ್ತಿ ತಯಾರಿಸಿ ಸಂಸಾರ ನಡೆಸುತ್ತಿದ್ದಾರೆ. ಎರಡು ವರ್ಷಗಳಿಂದ ಊರಿನಲ್ಲಿ ಮಳೆ ಬಾರದೆ, ಕೃಷಿ ಮಾಡುವುದು ಕಷ್ಟವಾದಾಗ, ಸುಧಾರಿಗೆ ಹೊಳೆದದ್ದು ರೊಟ್ಟಿ ತಯಾರಿಕೆ ಕೆಲಸ. ಇವರಿಗೆ ಮೂವರು ಹೆಣ್ಣು ಮಕ್ಕಳು, ಒಬ್ಬ ಮಗ ಇದ್ದು, ರೊಟ್ಟಿ ತಟ್ಟಿದ ಆದಾಯದಿಂದಲೇ ಮನೆ ನಡೆಯುತ್ತಿದೆ. ಸುಧಾ ಅವರಿಗೆ ಪತಿ ರೇವಣಸಿದ್ದಪ್ಪ, ಅತ್ತೆ ಅಂಕಳಜ್ಜರ ಬಸಮ್ಮನವರೂ ಸಹಾಯ ಮಾಡುತ್ತಾರೆ.
ಬ್ಯಾಂಕ್‌ನಲ್ಲಿ 50 ಸಾವಿರ ಸಾಲ ಪಡೆದು ರೊಟ್ಟಿ ಮಾಡುವ ಮಷಿನ್ ಖರೀದಿಸಿದ ಸುಧಾ, ಈಗ ದಿನಕ್ಕೆ 400 ರೊಟ್ಟಿಗಳನ್ನು ತಯಾರಿಸುತ್ತಿದ್ದಾರೆ. ಮುಂಜಾನೆ ನಾಲ್ಕಕ್ಕೇ ಎದ್ದು, ರೊಟ್ಟಿ ಮಾಡಲು ಬೇಕಾದ ಸಿದ್ಧತೆಗಳನ್ನು ಮಾಡುತ್ತಾರೆ. ಅವರು ತಯಾರಿಸುವ ಖಡಕ್ ರೊಟ್ಟಿ, ಸಜ್ಜೆ ರೊಟ್ಟಿ, ರಾಗಿ ರೊಟ್ಟಿ, ಸಾದಾ ರೊಟ್ಟಿಗಳು ಚಿತ್ರದುರ್ಗದ ಖಾನಾವಳಿಗಳನ್ನು ತಲುಪುತ್ತವೆ. ಇದರಿಂದ ದಿನಕ್ಕೆ 900 ರೂ. ಆದಾಯ ಗಳಿಸಬಹುದು ಎನ್ನುತ್ತಾರೆ ಸುಧಾ.
ಬರ ಬಂದಿದೆ ಅಂತ ಜನರೆಲ್ಲ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಹೋಗು?¤ದ್ದಾರೆ. ಆದರೆ, ನಾವು ನಮ್ಮ ಊರಿನಲ್ಲಿಯೇ ಜೀವನ ಸಾಗಿಸಬೇಕು ಅಂದುಕೊಂಡಿದ್ದೇವೆ. ಈಗ ರೊಟ್ಟಿ ಕೆಲಸದ ಜೊತೆಗೆ, 2 ಹಸುಗಳನ್ನು ಸಾಕಿದ್ದೇನೆ. ಅದರಲ್ಲಿ ಬರುವ ಅಲ್ಪ ಆದಾಯವು ಕೂಡ ಮನೆಯ ಜೀವನಕ್ಕೆ ಆಸರೆಯಾಗಿದೆ.
-ಸುಧಾ
-ವೇದಮೂರ್ತಿ