Advertisement

ಅಪಾಯ ಸೂಚಿಸುವ ಹಂಪ್‌; ಮಳೆ ಕಡಿಮೆಯಾದರೂ ಬಣ್ಣ ಬಳಿದಿಲ್ಲ

12:22 PM Oct 18, 2022 | Team Udayavani |

ಮಹಾನಗರ: ನಗರದಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ಹಂಪ್‌ ಗಳಿಗೆ ಇನ್ನೂ ಬಣ್ಣ ಹಚ್ಚುವ ಕೆಲಸವನ್ನು ಸ್ಥಳೀಯಾಡಳಿತ ನಿರ್ವಹಿಸುತ್ತಿಲ್ಲ. ಕಳೆದ ಅನೇಕ ತಿಂಗಳುಗಳಿಂದ ನಗರದಲ್ಲಿರುವ ಬಹುತೇಕ ಹಂಪ್ಸ್‌ಗಳಲ್ಲಿ ಬಣ್ಣ ಮಾಯವಾಗಿದೆ. ಮಳೆ ಬಿಡುವು ನೀಡಿದ ತತ್‌ಕ್ಷಣ ಬಣ್ಣ ಬಳಿಯುವ ಕೆಲಸ ಆರಂಭಿಸುವ ಭರವಸೆ ನೀಡಿದ್ದ ಸ್ಥಳೀಯಾಡಳಿತ ಇನ್ನೂ ಕಾಮಗಾರಿ ಆರಂಭಿಸಿಲ್ಲ. ಪರಿಣಾಮ, ಬಹುತೇಕ ಹಂಪ್‌ಗಳು ಅಪಾಯದ ಸ್ಪಾಟ್‌ ಆಗಿ ಬದಲಾಗುತ್ತಿವೆ.

Advertisement

ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ, ಕೊಟ್ಟಾರ, ಕಾಪಿಕಾಡ್‌ ಬಳಿ, ಬಲ್ಲಾಳ್‌ ಬಾಗ್‌, ಉರ್ವಸ್ಟೋರ್‌, ಚಿಲಿಂಬಿ ಸಹಿತ ನಗರದ ವಿವಿಧ ಕಡೆಗಳಲ್ಲಿ ಇರುವ ಹಂಪ್‌ ಗಳಿಗೆ ಬಳಿದ ಬಣ್ಣ ಅಳಿಸಿಹೋಗಿದೆ. ಅದರಲ್ಲೂ ರಾತ್ರಿ ವೇಳೆ ತೆರಳುವ ವಾಹನ ಸವಾರರು ಹಂಪ್ಸ್‌ ಕಾಣದೆ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೆಲವು ಸಮಯದ ಹಿಂದೆ ನಗರದಲ್ಲಿ ಕೆಲವೊಂದು ಸ್ವಯಂಸೇವಕ ಸಂಘಟನೆಗಳ ಕಾರ್ಯಕರ್ತರೇ ಹಂಪ್‌ ಗಳಿಗೆ ಬಣ್ಣ ಬಳೆದಿದ್ದರು. ಅವುಗಳೂ ಮಾಸಿ ಹೋಗಿದ್ದು, ಪಾಲಿಕೆ ತತ್‌ಕ್ಷಣ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯವಿದೆ.

ನಗರದ ವಿವಿಧ ಕಡೆಗಳಲ್ಲಿ ಅವೈಜ್ಞಾನಿಕ ಹಂಪ್‌ಗಳು ಈ ಹಿಂದೆ ಅಪಘಾತಕ್ಕೆ ಕಾರಣವಾಗುತ್ತಿತ್ತು. ಇದೀಗ ಬಹುತೇಕ ಕಡೆಗಳಲ್ಲಿ ವೈಜ್ಞಾನಿಕ ರೀತಿಯ ಐಆರ್‌ಸಿ ಮಾದರಿಯ ಹಂಪ್‌ಗಳನ್ನು ಅಳವಡಿಸಲಾಗಿದೆ. ಇನ್ನು, ರಬ್ಬರ್‌ ಹಂಪ್‌ಗ್ಳನ್ನು ತೆರವು ಮಾಡಲಾಗಿದ್ದು, ಕೆಲವೆಡೆ ಹೊಸ ಹಂಪ್ಸ್‌ ನಿರ್ಮಾಣವಾದರೆ ಇನ್ನೂ ಕೆಲವೆಡೆ ಹಂಪ್ಸ್‌ ನಿರ್ಮಿಸಬೇಕಷ್ಟೆ. ಅದಕ್ಕೂ ಮುನ್ನ ಈಗಿರುವ ಹಂಪ್ಸ್‌ ಸುಸ್ಥಿತಿಯಲ್ಲಿರಬೇಕಾದ ಅನಿವಾರ್ಯ ಎದುರಾಗಿದೆ.

ಡಿವೈಡರ್‌ಗಳಿಗೆ ಬಣ್ಣ

ನಗರದಲ್ಲಿ ಡಿವೈಡರ್‌ಗಳಿಗೆ ಬಣ್ಣ ಬಳಿ ಯುವ ಕೆಲಸ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅದೇ ರೀತಿ, ಹಂಪ್‌ ಗಳಿಯೂ ಬಣ್ಣ ಬಳಿಯಬೇಕಿದೆ. ಪಾದಚಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ, ಅತೀ ಹೆಚ್ಚು ಜನ ಸೇರುವ ಕಡೆಗಳಲ್ಲಿ ಝೀಬ್ರಾ ಕ್ರಾಸ್‌ ಅನ್ನು ಅಳವಡಿಸಲಾಗಿದೆ. ಆದರೆ ಬಹುತೇಕ ಕಡೆ ಝೀಬ್ರಾ ಕ್ರಾಸ್‌ಗಳ ಬಣ್ಣ ಮಾಸಿದೆ. ಸಿಗ್ನಲ್‌ಗ‌ಳಲ್ಲಿ ವಾಹನಗಳು ನಿಲ್ಲಿಸಲು ಸೂಚನೆ ಸಿಗದಂತಾಗಿದೆ. ಇನ್ನು, ಸಾರ್ವಜನಿಕರು ಕೂಡ ರಸ್ತೆ ದಾಟಲು ಕಷ್ಟಪಡುವಂತಾಗಿದೆ.

Advertisement

ಮಾಸಿದ ಮಾರ್ಗಸೂಚಿ ಫಲಕ

ಅದೇ ರೀತಿ, ನಗರಕ್ಕೆ ಆಗಮಿಸಿದ ಮಂದಿಗೆ ವಿವಿಧ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳ ರಸ್ತೆಯ ಮಾಹಿತಿಗಾಗಿ ನಗರದಲ್ಲಿ ಅಳವಡಿಸಿದ ಮಾರ್ಗಸೂಚಿ ಫಲಕಗಳಲ್ಲಿ ಕೆಲವು ಕಡೆ ಅಕ್ಷರಗಳೇ ಕಾಣಿಸುತ್ತಿಲ್ಲ. ಕರಾವಳಿಯ ವಾತಾವರಣ, ಬಿಸಿಲಿನ ಬೇಗೆಗೆ ಅಕ್ಷರಗಳು ಮಾಸಿ ಹೋಗಿವೆ. ಇನ್ನು, ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಲ್ಲಿ ಮಹತ್ವ ತಿಳಿಸುವ ಬೋರ್ಡ್‌ಗಳಿವೆ. ಆದರೆ ಕೆಲವೆಡೆ ಆ ಬೋರ್ಡ್‌ ನಲ್ಲಿರುವ ಅಕ್ಷರಗಳು ಕಾಣಿಸುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕಾದ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next