ಸವಣೂರು: ಭಾರೀ ಗಾಳಿಯ ಪರಿಣಾಮ ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಚೆನ್ನಾವರ ಪಟ್ಟೆ ಪಿ.ಎಸ್. ವಿಶ್ವನಾಥ ರೈ ಅವರ ತೋಟಕ್ಕೆ ಬೃಹತ್ ಹುಣಸೆಮರ ಉರುಳಿ 40ಕ್ಕೂ ಅಧಿಕ ಅಡಿಕೆ ಮರಗಳು, 2 ತೆಂಗಿನ ಮರ ಮುರಿದು ಅಪಾರ ನಷ್ಟ ಸಂಭವಿಸಿದೆ. ಸವಣೂರು ಗ್ರಾ.ಪಂ. ಸದಸ್ಯೆ ವಿನೋದಾ ರೈ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕೆಲವೆಡೆ ಸಾಧಾರಣ ಮಳೆ
ಮಂಗಳೂರು/ ಉಡುಪಿ/ ಸುಳ್ಯ: ಕರಾವಳಿಯಲ್ಲಿ ರವಿವಾರವೂ ಮಳೆಯ ತೀವ್ರತೆ ಕಡಿಮೆಯಿತ್ತು. ಸುಳ್ಯ ತಾಲೂಕಿನಲ್ಲಿ ರವಿವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಸಾಧಾರಣ ಮಳೆಯಾಗಿದೆ. ಉಳಿದಂತೆ ಕರಾವಳಿಯ ಹೆಚ್ಚಿದ ಕಡೆ ಬಿಸಿಲಿನಿಂದ ಕೂಡಿದ ವಾತಾವರಣ ಮುಂದುವರಿದಿದೆ.
ಭಾರತೀಯ ಹವಾಮಾನ ಇಲಾಖೆಯು ಯಾವುದೇ ಅಲರ್ಟ್ ಘೋಷಣೆ ಮಾಡಿಲ್ಲ. ಮಂಗಳೂರಿನಲ್ಲಿ 29 ಡಿ.ಸೆ. ಗರಿಷ್ಠ ಮತ್ತು 24 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.