Advertisement

ದೊಡ್ಡಪಟ್ಟಣಗೆರೆಯಲ್ಲಿ ರಾಸುಗಳ ಬೃಹತ್‌ ಜಾತ್ರೆ

07:43 AM Mar 22, 2019 | Team Udayavani |

ಕಡೂರು: ಬಯಲು ಸೀಮೆಯ ದೊಡ್ಡಪಟ್ಟಣಗೆರೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಶ್ರೀ ಕಟ್ಟೆಹೊಳೆಯಮ್ಮನವರ ಜಾತ್ರಾ
ಮಹೋತ್ಸವದಿಂದ 30 ದಿನಗಳ ಕಾಲ ದನಗಳ ಜಾತ್ರೆ ನಡೆಯಲಿದೆ. ಸಾವಿರಾರು ರಾಸುಗಳ ಪ್ರದರ್ಶನ ಮಾರಾಟ ನಡೆಯುತ್ತದೆ ಎಂದು ಶ್ರೀ ಕಟ್ಟೆಹೊಳೆಯಮ್ಮ ದೇವಾಲಯ ಸಮಿತಿ ಅಧ್ಯಕ್ಷ ಎಸ್‌.ಬಿ. ಹನುಮಂತಪ್ಪ ತಿಳಿಸಿದರು.

Advertisement

ಅವರು ಪಟ್ಟಣಗೆರೆಯ ಕುರುಬಗೆರೆ ಮೈದಾನದಲ್ಲಿ ದನಗಳ ಜಾತ್ರೆಗೆ ಮಾಡಿರುವ ವ್ಯವಸ್ಥೆ ಪರಿಶೀಲಿಸಿ ಮಾತನಾಡಿದರು.
61 ವರ್ಷಗಳಿಂದ ಅಮ್ಮನವರ ರಥೋತ್ಸವ ನಡೆದ ಬಳಿಕ ದನಗಳ ಜಾತ್ರೆಯನ್ನು ಆಯೋಜಿಸುತ್ತಿದೆ. ದೇವಾಲಯ ಸಮಿತಿಗೆ ಒಳಪಡುವ 14 ಗ್ರಾಮಗಳ ರಾಸುಗಳನ್ನು ಜಾತ್ರೆಯಲ್ಲಿ ಮಾರಾಟ ಮಾಡಲಾಗುತ್ತದೆ. ದೂರದ ಹಾಸನ, ಗಂಡಸಿ, ಅಜ್ಜಂಪುರ, ತರೀಕೆರೆ ಭಾಗಗಳ ರೈತರು ತಮ್ಮ ರಾಸುಗಳನ್ನು ಸಹ ಮಾರಾಟ ಮಾಡುತ್ತಾರೆ ಎಂದರು.

ಸುಮಾರು 80 ಸಾವಿರದಿಂದ 1 ಲಕ್ಷದವರೆಗೂ ಒಂದು ಜೊತೆ ಎತ್ತುಗಳಿಗೆ ಬೆಲೆ ನೀಡಿ ಖರೀದಿಸುತ್ತಾರೆ. ದಿನಕ್ಕೆ ಲಕ್ಷಾಂತರ ರೂ. ಗಳ ವ್ಯವಹಾರ ನಡೆಯುತ್ತದೆ. ಬರುವ ರೈತರಿಗೆ ದೇವಾಲಯ ಸಮಿತಿಯಿಂದ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತದೆ. ದನ-ಕರುಗಳಿಗೆ ನೀರಿನ ತೊಟ್ಟಿಗಳ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿರುತ್ತೇವೆ. ಮೇವು ಮತ್ತು ನೆರಳಿನ ವ್ಯವಸ್ಥೆಯನ್ನು ಅವರೇ ಮಾಡಿಕೊಳ್ಳುತ್ತಾರೆ.

ಕಟ್ಟಹೊಳೆಯಮ್ಮನವರ ದನಗಳ ಜಾತ್ರೆಗೆ ಬಂದು ಒಂದು ದಿನವಾದರೂ ರಾಸುಗಳನ್ನು ಕಟ್ಟಿದರೆ ಯಾವುದೇ ಕಾಯಿಲೆ
ಬರುವುದಿಲ್ಲ ಎಂಬ ಪ್ರತೀತಿ ಮೊದಲಿನಿಂದಲು ನಡೆದುಕೊಂಡು ಬಂದಿದೆ. ಆಕರ್ಷಕವಾದ ಒಂದು ಜೋಡಿಗೆ ಸಮಿತಿಯಿಂದ ಆಕರ್ಷಕ ಬಹುಮಾನವನ್ನು ನೀಡುತ್ತೇವೆ ಎಂದರು.

ಕಟ್ಟೆಹೊಳೆಯಮ್ಮದೇವಿಯವರಿಗೆ ಸೇರಿರುವ ಭೂಮಿಯಲ್ಲಿ ಜಾತ್ರಾ ಮಹೋತ್ಸವ ಮತ್ತು ದನಗಳ ಜಾತ್ರೆ ನಡೆಯುತ್ತಾ ಬಂದಿದೆ. ಇದಕ್ಕೆ 14 ಹಳ್ಳಿಗಳ ಸದಸ್ಯರು, ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ. ಯಾವುದೇ ಸಮಸ್ಯೆಗಳಿಲ್ಲದೆ ಹೊಳೆಯಮ್ಮ ಸುಸೂತ್ರವಾಗಿ ದನಗಳ ಜಾತ್ರೆ ನಡೆಸಿಕೊಂಡು ಬಂದಿದ್ದೇವೆ ಎಂದರು.

Advertisement

ರಥೋತ್ಸವವಾದ ನಂತರ ಪ್ರತಿ ದಿನ 14 ಹಳ್ಳಿಯ ಗ್ರಾಮಸ್ಥರು ರಾತ್ರಿ ಕಟ್ಟೆಹೊಳೆಯಮ್ಮನವರ ಉತ್ಸವ ಮಾಡುವುದು ವಾಡಿಕೆಯಾಗಿದೆ. ಹರಕೆ ತೀರಿಸುವ ಭಕ್ತರು ದೇವಾಲಯಕ್ಕೆ ಬಂದು ಹೋಗುತ್ತಿರುತ್ತಾರೆ ಎಂದರು.  ದೇವಾಲಯ ಸಮಿತಿ ಉಪಾಧ್ಯಕ್ಷ ವೆಂಕಟೇಶ್‌, ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ಖಜಾಂಚಿ ಮರಿಯಪ್ಪ ಮತ್ತು 14 ಹಳ್ಳಿಯ ಸಮಿತಿ ಸದಸ್ಯರು ಇದ್ದರು. 

ಸುಮಾರು ಹತ್ತಾರು ಬಾರಿ ನಾನು ನಮ್ಮ ರಾಸುಗಳನ್ನು ತಂದು ಮಾರಾಟ ಮಾಡಿ ಉತ್ತಮ ಬೆಲೆ ಪಡೆದಿದ್ದೇನೆ. ಜೊತೆಯಲ್ಲಿ ದೂರದಿಂದ ಬಂದಿರುವ ರೈತರ ಸಂಪರ್ಕದಿಂದ ಅಲ್ಲಿನ ವ್ಯವಸಾಯ, ಹೈನುಗಾರಿಕೆ ವಿಷಯಗಳ ವಿನಿಮಯ ಮಾಡಿಕೊಳ್ಳುವುದರಿಂದ ನಮ್ಮಗಳ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ.
 ರಮೇಶ್‌, ಯರೆಹಳ್ಳಿಯ ರೈತ 

Advertisement

Udayavani is now on Telegram. Click here to join our channel and stay updated with the latest news.

Next