Advertisement

ಮನೆ ಕಟ್ಟಲೊಂದು ಟೈಮ್‌ ಟೇಬಲ್‌

12:04 PM Jul 02, 2019 | Sriram |

ಒಂದು ಮನೆ ನಿರ್ಮಾಣದ ಕೆಲಸ “ಇಂತಿಷ್ಟು ದಿನಗಳಲ್ಲಿ’ ಮುಗಿಯಬೇಕೆಂದರೆ ಎಷ್ಟು ಜನ ಕೆಲಸಗಾರರು ಬೇಕು? ಅಂದುಕೊಂಡದ್ದಕ್ಕಿಂತ ಮೂವರು ಕೆಲಸಗಾರರು ಕಡಿಮೆಯಾದರೆ ಎಷ್ಟು ದಿನಗಳ ಕೆಲಸ ಹೆಚ್ಚಾಗುತ್ತದೆ? ಇಟ್ಟಿಗೆ ಗೋಡೆ ಹಾಕಲು ಎಷ್ಟು ದಿನ ಬೇಕು? ಇವೆಲ್ಲದರ ಲೆಕ್ಕಾಚಾರವಿದ್ದರೆ ಒಳ್ಳೆಯದು…

Advertisement

ಮನೆ ಕಟ್ಟುವಾಗ ಎಲ್ಲರಿಗೂ ಆತುರ ಇದ್ದದ್ದೇ. ಆದಷ್ಟು ಬೇಗ ಮುಗಿಸಿಬಿಡಬೇಕು ಎಂಬ ಧಾವಂತ. ಕೆಲವೊಮ್ಮೆ ಕೆಲಸ ಬಿರುಸಿನಿಂದ ಸಾಗುತ್ತಿದೆ ಎನ್ನಿಸಿದರೆ ಸಂತೋಷ ಆದರೂ ಬಹುತೇಕ ನಿಧಾನವಾಗಿ ಆಗುತ್ತಿದೆಯೆಂದು ಅನ್ನಿಸಿದಾಗ ಕುಶಲಕರ್ಮಿಗಳಿಗೆ ಬೇಗಬೇಗನೆ ಮಾಡಿ ಎಂದು ಪದೇಪದೇ ಹೇಳುವುದು ಇದ್ದದ್ದೇ. ಪಾಯದಿಂದ ಹಿಡಿದು ಬಣ್ಣಬಳಿಯುವುದರ ತನಕವೂ ವಿವಿಧ ಹಂತದ ಕೆಲಸಕ್ಕೆ ತಿಂಗಳುಗಳೇ ಕಳೆದುಹೋಗುತ್ತವೆ. ಪ್ರತಿ ಹಂತದ ಅಂದಾಜು ಪ್ರಗತಿ, ಒಂದೊಂದು ಕೆಲಸ ಎಷ್ಟೆಷ್ಟು ವೇಳೆ ತೆಗೆದುಕೊಳ್ಳುತ್ತದೆ ಎಂಬುದರ ಒಂದು ಲೆಕ್ಕಾಚಾರ ಇದ್ದರೆ, ನಮಗೆ ಮನೆ ಕಟ್ಟುವಿಕೆಯ ನಿಜವಾದ ವೇಗದ ಅರಿವಾಗುತ್ತದೆ. ಹತ್ತು ಚದರ ಅಂದರೆ, ಒಂದು ಸಾವಿರ ಚದರ ಅಡಿಯ ಮನೆಯನ್ನು ಎಷ್ಟು ಜನ, ಎಷ್ಟು ದಿನಗಳಲ್ಲಿ, ವಿವಿಧ ಹಂತಗಳನ್ನು ಪೂರೈಸಲು ಸಾಧ್ಯ? ಹೆಚ್ಚು ಜನರನ್ನು ನಿಯೋಜಿಸಿದರೆ ಕೆಲಸ ಬೇಗನೆ ಮುಗಿಯಬಹುದೆ? ಕಡಿಮೆ ಜನ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರೆ ಅದು ಎಷ್ಟರಮಟ್ಟಿಗೆ ಕಡಿಮೆ ಇರಬೇಕು ಎಂಬುದನ್ನು ನಿರ್ಧರಿಸಲು ನಾವು ವಿವಿಧ ಹಂತಗಳ ಮಿತಿಗಳನ್ನು ಅರಿಯಬೇಕಾಗುತ್ತದೆ.

ಇಟ್ಟಿಗೆ ಗೋಡೆಗಳ ವೇಗ
ನೀವೂ ಗಮನಿಸಿರಬಹುದು, ಸಾಮಾನ್ಯವಾಗಿ ಇಟ್ಟಿಗೆ ಗೋಡೆಗಳನ್ನು ಸುಮಾರು ಎರಡು ಅಡಿಗಳಷ್ಟು ಮಾತ್ರ ಪ್ರತಿದಿನ ಕಟ್ಟಲಾಗುತ್ತದೆ. ಇನ್ನೊಂದೆರಡು ಮಂದಿಯನ್ನು ಹೆಚ್ಚಿಗೆ ಹಾಕಿ ದಿನಕ್ಕೆ ನಾಲ್ಕು ಅಡಿ ಕಟ್ಟಿಬಿಟ್ಟರೆ ಹೇಗೆ? ಎಂಬ ಪ್ರಶ್ನೆ ಎದ್ದಿರಲೂಬಹುದು. ಆದರೆ ನಾವು ಎಲ್ಲವನ್ನೂ ಅವಸರದಲ್ಲಿ ಮಾಡಲು ಆಗುವುದಿಲ್ಲ. ಇಟ್ಟಿಗೆಗಳನ್ನು ಬೆಸೆದು ಗೋಡೆಗಳಾಗಿ, ಇಡೀ ಮನೆಯ ಭಾರ ಹೊರುವಂತೆ ಮಾಡುವುದು ಅವುಗಳ ಮಧ್ಯೆ ಹಾಕಲಾಗುವ ಸಿಮೆಂಟ್‌ ಗಾರೆ ಮಿಶ್ರಣ. ಇದು ಸುಮಾರು ಮುಕ್ಕಾಲು ಇಂಚು ದಪ್ಪ ಇದ್ದು, ಎರಡು ಅಡಿಗೆ ಸುಮಾರು ಆರೇಳು ಪದರಗಳಲ್ಲಿ ಇರುತ್ತದೆ. ಈ ಪ್ರತಿ ಪದರ ಗಟ್ಟಿಗೊಳ್ಳಲು ಕಡೇ ಪಕ್ಷ ಒಂದು ದಿನವಾದರೂ ಬೇಕಾಗುತ್ತದೆ. ನಾವು ಎರಡು ಅಡಿಗಿಂತ ಹೆಚ್ಚು ಎತ್ತರಕ್ಕೆ ಕಟ್ಟಲು ಹೊರಟರೆ, ಹಸಿ ಗೋಡೆ ತನ್ನ ಭಾರವನ್ನೂ ಹೊರಲಾರದೆ ವಾಲುವುದು ಇಲ್ಲವೇ ಏರುಪೇರಾಗಿ ಹೋಗಬಹುದು. ಆದುದರಿಂದ, ನಾವು ಇಟ್ಟಿಗೆ ಗೋಡೆಗಳನ್ನು ಎರಡು ಅಡಿಗಳಿಗಿಂತ ಹೆಚ್ಚು ಎತ್ತರಕ್ಕೆ ಒಂದು ದಿನದಲ್ಲಿ ಕಟ್ಟಲು ಆಗುವುದಿಲ್ಲ! ಹೆಚ್ಚು ಜನರನ್ನು ನಿಯೋಜಿಸಿದರೂ, ಗೋಡೆಯನ್ನು ಎರಡು ಅಡಿಗಳಿಗಿಂತ ಎತ್ತರಕ್ಕೆ ಕಟ್ಟುವುದು ಗುಣಮಟ್ಟದ ದೃಷ್ಟಿಯಿಂದ ಸರಿಯಲ್ಲ. ಹಾಗಾಗಿ, ಮನೆಯ ಗೋಡೆಗಳು ಏಳುವ ಗರಿಷ್ಠ ಮಿತಿ ಕೇವಲ ಎರಡು ಅಡಿಗಳಷ್ಟು ಮಾತ್ರ.

ಪಾಯ ವಿಭಜಕಗಳ ಲೆಕ್ಕಾಚಾರ
ಇಡೀ ಮನೆಯ ಪಾಯ ಒಂದೇ ಮಟ್ಟದಲ್ಲಿ ಇದ್ದರೆ, ಎಲ್ಲವನ್ನೂ ಒಟ್ಟೊಟ್ಟಿಗೆ ಶುರು ಮಾಡಲು ಸಾಧ್ಯ, ಆದರೆ ಸಾಮಾನ್ಯವಾಗಿ ಹೊರ ಹಾಗೂ ಮಧ್ಯದ ಗೋಡೆಗಳಿಗೆ ಹೆಚ್ಚಿನ ಅಗಲ- ಆಳದ ಪಾಯ ಹಾಕಲಾಗುತ್ತದೆ. ಇವು ಭಾರ ಹೊರುವ ಹಾಗೂ ಹೊರಗಿನ ವಾತಾವರಣದ ಸಂಪರ್ಕದಲ್ಲಿ ಇರುವ ಕಾರಣ ಹೆಚ್ಚುವರಿ ಕಾಳಜಿ ಕೇಳುತ್ತವೆ. ಆದರೆ ಅಡ್ಡಡ್ಡ ಬರುವ ಪಾಯ- ಇವು ಪಾರ್ಟಿಷನ್‌- ವಿಭಜಕ ಗೋಡೆಗಳಿಗೆ ಹಾಕುವ ಪಾಯ ಅಷ್ಟೊಂದು ಆಳ ಇರುವ ಅಗತ್ಯವಿಲ್ಲ. ಹಾಗಾಗಿ ಇವನ್ನು ಮುಖ್ಯ ಪಾಯ ಹಾಕಿದ ಮೇಲೆಯೇ ಹಾಕಲಾಗುತ್ತದೆ. ಮನೆಯಲ್ಲಿ ವಿವಿಧ ಪಾಯಗಳ ಆಳ ಹೆಚ್ಚಾ ಕಡಿಮೆ ಇದ್ದಷ್ಟೂ, ಪ್ರತಿ ಹಂತವನ್ನೂ ಮುಗಿಸಿಯೇ ಮುಂದಕ್ಕೆ ಸಾಗಬೇಕಾಗಿರುವುದರಿಂದ, ಹೆಚ್ಚುವರಿ ವೇಳೆ ತೆಗೆದುಕೊಳ್ಳುತ್ತದೆ. ಇಲ್ಲಿ ಅವಸರ ಮಾಡಲು ಆಗುವುದಿಲ್ಲ. ಕೆಳಗಿನ ಪಾಯ ಭದ್ರಗೊಂಡ ನಂತರವೇ ಅದರ ಮೇಲಿನ ಮಟ್ಟದ ಪಾಯವನ್ನು ಹಾಕಲು ಸಾಧ್ಯವಾಗುವುದು. ಕೆಲವೊಮ್ಮೆ ಕಾರ್‌ ಗ್ಯಾರೇಜ್‌, ಸಂಪ್‌ ಇತ್ಯಾದಿ ಬಂದರೆ ಪಾಯ ಮತ್ತೂಂದಷ್ಟು ಹಂತ ನೋಡಬೇಕಾಗುತ್ತದೆ. ಹಾಗೆಯೇ ಕಾಲಂಗಳ ಪಾಯ ಆಳವಾಗಿದ್ದರೆ, ಅವುಗಳ ಫ‌ುಟಿಂಗ್‌ ಹಾಕಿದ ನಂತರವೇ ನಾವು ಗೋಡೆಗಳ ಪಾಯ ಹಾಕಲು ಆಗುವುದು.

ಕೆಲವೊಮ್ಮೆ ಅಕ್ಕಪಕ್ಕದ ಮನೆಯ ಗೋಡೆಗಳು ನಮ್ಮ ಪಾಯದ ಪಕ್ಕದಲ್ಲೇ ಇದ್ದರೆ, ಅವುಗಳ ಆಳ ನಮ್ಮ ಪಾಯಕ್ಕಿಂತ ಕಡಿಮೆ ಇದ್ದರೆ, ಆಗ ನಾವು ಎಲ್ಲ ಗುಂಡಿಗಳನ್ನೂ ಒಟ್ಟಿಗೆ ತೆಗೆಸಿ ಪಕ್ಕದ ಮನೆಯ ಪಾಯವನ್ನು ದುರ್ಬಲಗೊಳಿಸುವ ಬದಲು, ಒಂದೊಂದೇ ಪಾಯ ಅಗೆದು, ಭರ್ತಿ ಮಾಡಿ, ನಂತರ ಮತ್ತೂಂದಕ್ಕೆ ತಯಾರಿ ಮಾಡಬೇಕಾಗುತ್ತದೆ. ಮಳೆಗಾಲದಲ್ಲಿಯೂ ನಾವು ಎಲ್ಲ ಪಾಯವನ್ನೂ ಒಟ್ಟೊಟ್ಟಿಗೆ ಅಗೆದುಬಿಟ್ಟರೆ, ನೀರು ತುಂಬಿ ಮಣ್ಣು ಕುಸಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಹಂತಹಂತವಾಗಿ, ನಿಧಾನವಾದರೂ ಸುರಕ್ಷಿತವಾಗಿ ಮುಂದುವರಿಯುವುದು ಉತ್ತಮ.

Advertisement

ಕೆಲಸಗಾರರು ನುರಿತವರಾಗಿರಬೇಕು
ಕೆಲವೊಮ್ಮೆ, ಮನೆಯವರ ಒತ್ತಾಯಕ್ಕೆ ಮಣಿಯುವ ಕುಶಲಕರ್ಮಿಗಳು ಕೈಲಾಗದಿದ್ದರೂ, ಮಾಡಿಯೇ ತೀರುತ್ತೇವೆ ಎಂದು ಅವರ ಮಿತಿ ಮೀರುವಷ್ಟು ಕೆಲಸಕ್ಕೆ ಒಪ್ಪಿಕೊಳ್ಳಲೂಬಹುದು. ಆದರೆ ನಾವು ಕೋಣೆಯ ಉದ್ದ- ಅಗಲ ನೋಡಿಕೊಂಡು, ಕುಶಲಕರ್ಮಿಗಳನ್ನು ನಿಯೋಜಿಸಬೇಕಾಗುತ್ತದೆ. ಗೋಡೆಯ ಪ್ಲಾಸ್ಟರ್‌ ಅಂದರೆ, ಅದಕ್ಕೆ ಬರಿ ಸಿಮೆಂಟ್‌ ಗಾರೆ ಬಳಿದು ಬಿಡುವುದಲ್ಲ, ಗೋಡೆಗಳಲ್ಲಿ ಸಾಮಾನ್ಯವಾಗಿ ಒಂದಷ್ಟು ಮೂಲೆಗಳು ಬಂದಿರುತ್ತವೆ, ಅವುಗಳನ್ನು “ನೀಟಾಗಿ’- ಶುದ್ಧವಾಗಿ ಮಾಡಬೇಕಾಗುತ್ತದೆ. ಇನ್ನು ಕಾರ್ನಿಸ್‌ – ಮೌಲ್ಡಿಂಗ್ಸ್‌ ಅಂದರೆ ವಿವಿಧ ವಿನ್ಯಾಸಗಳ ಪಟ್ಟಿ ಮತ್ತೂಂದು ಬಂದಿದ್ದರೆ, ಆಗಲೂ ಕೆಲಸವನ್ನು ಕಲಾತ್ಮಕವಾಗಿ ಮಾಡಲು ಹೆಚ್ಚುವರಿ ವೇಳೆ ಬೇಕಾಗುತ್ತದೆ.

ಸಾಮಾನ್ಯವಾಗಿ ಒಬ್ಬ ಗಾರೆಯವರು ಒಂದಿಬ್ಬರು ಸಹಾಯಕರ ಜೊತೆಗೂಡಿ ಒಂದರಿಂದ ಒಂದೂಕಾಲು ಚದರ, ಅಂದರೆ ಸುಮಾರು ನೂರರಿಂದ ನೂರ ಇಪ್ಪತೈದು ಅಡಿಗಳಷ್ಟು ಪ್ಲಾಸ್ಟರ್‌ ಪೂಸಲು ಆಗುತ್ತದಾದರೂ, ಮೂಲೆಗಳು ಬಂದಷ್ಟೂ ಚದರ ಕಡಿಮೆ ಆಗುತ್ತದೆ. ನಾವು ಕ್ಲಿಷ್ಟತೆಯನ್ನು ಗಮನದಲ್ಲಿ ಇಟ್ಟುಕೊಂಡು ವಿವಿಧ ಹಂತಗಳ ವೇಗವನ್ನು ನಿರ್ಧರಿಸಬೇಕಾಗುತ್ತದೆ. ಮನೆ ಕಟ್ಟುವಾಗ ವಿವಿಧ ರೀತಿಯ ಕಿರಿಕಿರಿಗಳು ಇರುತ್ತದೆ, ಕಡೇಪಕ್ಷ ನಮಗೆ ಕುಶಲಕರ್ಮಿಗಳು ಎಷ್ಟು ಶೀಘ್ರವಾಗಿ ಸಾಧ್ಯವೋ ಅಷ್ಟು ವೇಗದಲ್ಲಿ ಸಾಗುತ್ತಿದ್ದರೆ, ಇದಕ್ಕಿಂತ ಬೇಗನೆ ಮಾಡಲು ಆಗುವುದಿಲ್ಲ ಎಂಬುದು ತಿಳಿದಿದ್ದರೆ, ಒಂದಷ್ಟು ಸಮಾಧಾನ ಆಗುವುದರಲ್ಲಿ ಸಂಶಯವಿಲ್ಲ!

ಫಿನಿಶಿಂಗ್‌ ಕೆಡಬಾರದು
ಮನೆಗೆ ಲಿವಿಂಗ್‌ ಡೈನಿಂಗ್‌ ಸೇರಿ ನಾಲ್ಕಾರು ಕೋಣೆಗಳಿದ್ದರೆ, ಪ್ರತಿಯೊಂದಕ್ಕೂ ಒಂದೊಂದು ಜೊತೆ ಗಾರೆಯವರನ್ನು ಬಿಟ್ಟು ನಾಲ್ಕಾರು ದಿನಗಳಲ್ಲಿಯೇ ಎಲ್ಲ ಪ್ಲಾಸ್ಟರ್‌ ಕೆಲಸ ಮುಗಿಸಲು ಸಾಧ್ಯವಾಗುತ್ತೆ! ಎಂಬುದು ಸರಳ ಲೆಕ್ಕವಾದರೂ ಅದಕ್ಕೂ ಕೆಲ ಮಿತಿಗಳಿವೆ. ಸಾಮಾನ್ಯವಾಗಿ ಒಂದು ಕೋಣೆಗೆ ಪ್ಲಾಸ್ಟರ್‌ ಮಾಡುವಾಗ, ಅಕ್ಕಪಕ್ಕ ಒಂದಷ್ಟು ಗಾರೆ ಬೀಳುತ್ತದೆ. ಅಲ್ಲಿಯೂ ಗಾರೆ ಹಸಿ ಇದ್ದರೆ, ಅದರ ಫಿನಿಶ್‌ ಕೆಡುತ್ತದೆ. ಇನ್ನು ಕೋಣೆಗಳಿಗೆ ತರಾತುರಿಯಲ್ಲಿ ಸಾಮಾನುಗಳನ್ನು ಪೂರೈಸುವುದೂ ತೊಂದರೆಯೇ. ಜೊತೆಗೆ ನಾವು ಯಾವುದೇ ಫಿನಿಶ್‌ ಕಾರ್ಯ ಮಾಡುವ ಮೊದಲು, ಒಂದು ಗೋಡೆಗೋ ಇಲ್ಲ ಸೂರಿನ ಕೆಳಗೋ ಪ್ಲಾಸ್ಟರ್‌ ಮಾಡಿ, ಅದು ಸರಿಯಾಗಿ ಬಂದಿದೆಯೇ? ಎಂದು ಪರಿಶೀಲಿಸಿಯೇ ಮುಂದುವರಿಯಬೇಕಾಗುತ್ತದೆ. ತರಾತುರಿಯಲ್ಲಿ “ಆ ಕಡೆ ಪ್ಲಾಸ್ಟರ್‌ ಮುಗಿದರೆ ಸಾಕು’ ಎಂದು ಮುಂದುವರಿದರೆ, ಗುಣಮಟ್ಟದಲ್ಲಿ ಕುಸಿತ ಉಂಟಾಗುವುದರಲ್ಲಿ ಸಂಶಯವಿಲ್ಲ! ಹಾಗಾಗಿ ನಾವು ಪ್ರತಿ ಹಂತದಲ್ಲೂ ಎಲ್ಲ ಸಾಧಕ ಬಾಧಕಗಳನ್ನು ನೋಡಿಯೇ ಮನೆ ಕಟ್ಟುವ, ಅದರಲ್ಲೂ ಉತ್ತಮ ಗುಣಮಟ್ಟದ ಫಿನಿಶ್‌ ನೀಡುವತ್ತ ಗಮನ ಹರಿಸಿಯೇ ವೇಗವನ್ನು ನಿರ್ಧರಿಸಬೇಕಾಗುತ್ತದೆ.

-ಆರ್ಕಿಟೆಕ್ಟ್ ಕೆ. ಜಯರಾಮ್‌
ಹೆಚ್ಚಿನ ಮಾಹಿತಿಗೆ ಫೋನ್‌ 98441 32826

Advertisement

Udayavani is now on Telegram. Click here to join our channel and stay updated with the latest news.

Next