Advertisement
ಕಡಲಲ್ಲಿ ತೇಲುವ ಹೋಟೆಲ್ ಗಳನ್ನು ಕಂಡಿದ್ದೇವೆ. ಕೆಲವೆಡೆ ತೂಗುವ ಹೋಟೆಲುಗಳೂ ಇವೆ. ಆದರೆ ಮಂಗಳೂರಿನಲ್ಲಿ ಆಕಾಶದೆತ್ತರದಲ್ಲಿ ಕುಳಿತು ಆಹಾರ ಸೇವಿಸಲು ಹೋಟೆಲ್ ಸಿದ್ಧವಾಗುತ್ತಿದೆ.
Related Articles
ಈಗಾಗಲೇ “ಸ್ಕೈ ಡೈನಿಂಗ್’ಗೆ ಸಂಬಂಧಿಸಿ ನಿರ್ಮಾಣ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದರ ಪ್ರಧಾನ ಅಂಗವಾಗಿರುವ ಕ್ರೇನ್ ರಚನೆ ಆರಂಭವಾಗಬೇಕಿದೆ. ಅಡುಗೆ ಮನೆಯೂ ನಿರ್ಮಾಣವಾಗಲಿದೆ. ಈ ಕ್ರೇನ್ 120 ಅಡಿಗಳಷ್ಟು ಎತ್ತರಕ್ಕೆ ಪ್ರವಾಸಿಗರನ್ನು ಕರೆದೊಯ್ಯಲಿದೆ. ಒಂದೆಡೆ ಸಮುದ್ರ- ಇನ್ನೊಂದೆಡೆ ಮಂಗಳೂರು ನಗರದ ವಿಹಂಗಮ ದೃಶ್ಯಗಳನ್ನು ಸವಿಯುತ್ತಾ ಆಹಾರ ಸವಿಯಲು ಅವಕಾಶವಿರಲಿದೆ. ಇಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲಾಗುತ್ತಿದೆ. ಸ್ಕೈ ಡೈನಿಂಗ್ ಜತೆಗೆ ಸಾಹಸ ಕ್ರೀಡೆ, ವಾಟರ್ ಸ್ಪೋರ್ಟ್ಸ್, ರೆಸ್ಟೋರೆಂಟ್ ಗಳಿಗೆ ಜಿಲ್ಲಾಡಳಿತ – ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥರಾದ ಲಕ್ಷ್ಮೀಶ್ ಭಂಡಾರಿ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಪಣಂಬೂರು ಬೀಚ್‌ನಲ್ಲಿ ವಿವಿಧ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. “ಸ್ಕೈ ಡೈನಿಂಗ್’ ಕೂಡ ಹೊಸ ಪರಿಕಲ್ಪನೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮಾಣಿಕ್ಯ.
Advertisement
16 ಮಂದಿಗೆ ಅವಕಾಶ-ಒಮ್ಮೆ 16 ಮಂದಿಗೆ ಸಂಗೀತದ ಜತೆಗೆ ತಿನಿಸು ಸವಿಯಲು ಅವಕಾಶ
-ಪ್ರತಿಯೊಬ್ಬರಿಗೂ ಸೇಫ್ಟಿ ಬೆಲ್ಟ್ ಅಳವಡಿಕೆ
-ಪರಿಚಾರಕರಿಗೆ, ತಾಂತ್ರಿಕ ಸಿಬಂದಿಗೆ ಪ್ರತ್ಯೇಕ ಕ್ಯಾಬಿನ್
-ಮೆನು ಆಧರಿಸಿ ಮೊದಲೇ ಆಹಾರ ಕಾದಿರಿಸಬಹುದು
-ಶೀಘ್ರವೇ ದರ ನಿಗದಿ ಏನಿದು “ಸ್ಕೈ ಡೈನಿಂಗ್’?
ನೆಲಕ್ಕಿಂತ ಹಲವು ಅಡಿಗಳಷ್ಟು ಮೇಲ್ಭಾಗದಲ್ಲಿ ಕುಳಿತು ಊಟ ಸವಿಯುವುದು. ಇದೊಂದು ಸಾಹಸವೂ ಹೌದು. ಗಾಜಿನ ಮಾದರಿಯ ಪಾರದರ್ಶಕ ವಸ್ತು ಮತ್ತು ಕಬ್ಬಿಣದಿಂದ ರಚಿಸಲಾದ ಕ್ಯಾಬಿನ್ ಅನ್ನು ಕ್ರೇನ್ ಮೂಲಕ ಮೇಲಕ್ಕೆ ಎತ್ತಲಾಗುತ್ತದೆ. ಇದರಲ್ಲಿ ಟೇಬಲ್, ಚೇರ್ ಸಹಿತ ಎಲ್ಲ ವ್ಯವಸ್ಥೆ ಇರಲಿದೆ. ಸುತ್ತಲಿನ ವಿಹಂಗಮ ದೃಶ್ಯವನ್ನು ನೋಡುತ್ತ ಊಟ/ತಿಂಡಿ ಸವಿಯಬಹುದಾಗಿದೆ.