ದೋಟಿಹಾಳ: ಸರಕಾರಿ ವಿದ್ಯಾರ್ಥಿಗಳ ವಸತಿ ನಿಲಯಗಳೆಂದರೆ ಅವ್ಯವಸ್ಥೆಯ ಆಗರ ಎಂದುಕೊಳ್ಳುವವರಿಗೆ ಇಲ್ಲೊಂದು ಮಾದರಿ ಹಾಸ್ಟೆಲ್ ಇದೆ.
ಸರಕಾರಿ ಡಾ. ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಅನೇಕ ಸರಕಾರಿ ಸೌಲಭ್ಯಗಳ ಮೂಲಕ ಒಂದು ಸುಂದರ ಹಸಿರ ಉದ್ಯಾನದ ಮಡಿಲಲ್ಲಿ ತಾಲೂಕಿನಲ್ಲಿ ಭಿನ್ನವಾಗಿ ಗಮನ ಸೆಳೆಯುತ್ತದೆ.
ಗ್ರಾಮದ ಮುದೇನೂರ ರಸ್ತೆ ಪಕ್ಕದಲ್ಲಿರುವ ಈ ವಸತಿ ನಿಲಯ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರನ್ನು ತನ್ನತ್ತ ಗಮನ ಸೆಳೆಯುತ್ತಿದೆ. ವಸತಿ ನಿಲಯದ ಆವರಣಕ್ಕೆ ಕಾಲಿಡುತ್ತಿದ್ದಂತೆ ಗಿಡ ಮರಗಳು ಸ್ವಾಗತಿಸುತ್ತೇವೆ. ಈ ಆವರಣದಲ್ಲಿ ಹೊಂಗೆ, ಬದಾಮಿ, ಸಂಪಿಗೆ, ನೆರಳೆ ಮತ್ತು ಅಲಂಕಾರಿಕ ಸಸ್ಯರಾಶಿಯ ಹಚ್ಚ ಹಸುರಿನ ಪರಿಸರವು ಕಣ್ಣಿಗೆ ಮುದ ನೀಡುತ್ತವೆ.
ಸ್ಥಳೀಯ ಗ್ರಾ.ಪಂ. ಆಡಳಿತ ಮಂಡಳಿಯ ವೈಯಕ್ತಿಕ ಕಾಳಜಿಯಿಂದ 2022-23ನೇ ಸಾಲಿನ ನರೇಗಾ ಯೋಜನೆಯಡಿ ಈ ವಸತಿ ನಿಲಯದಲ್ಲಿ ಉದ್ಯಾನವನ ನಿರ್ಮಿಸಿದ್ದಾರೆ. ನೂರಕ್ಕೂ ಅಧಿಕ ಸಸಿ ನೆಟ್ಟು ಸುಂದರವಾಗಿ ಉದ್ಯಾನ ಕಂಗೊಳಿಸುವಂತೆ ಮಾಡಿದ್ದಾರೆ.
ನಿಲಯದ ಮಕ್ಕಳಿಗೆ ನೆನಪಿನ ಶಕ್ತಿ ವೃದ್ಧಿಸುವ ಬ್ರಾಹ್ಮ ಸಸಿ, ಮಾಂಗನಿ, ಮಧುನಾಶಿನಿ, ಮಂಗರವಳಿ, ಹಿಪ್ಪಿ ಚಕ್ರಮನಿ, ಕೃಷ್ಣ ತುಳಸಿ ಹೀಗೆ 30ಕ್ಕೂ ಅಧಿಕ ಔಷಧಿ, ವನಸ್ಪತಿ ಸಸ್ಯಗಳು ಈ ವನದಲ್ಲಿ ಬೆಳಸಲಾಗಿದೆ. ಉದ್ಯಾನ ಮಧ್ಯದಲ್ಲಿ ಸಂಚಾರಕ್ಕೆ ಕಾಂಕ್ರಿಟ್ ವ್ಯವಸ್ಥೆ ಮಾಡಲಾಗಿದೆ.
ಸಸಿಗೆ ನೀರಿನ ಕೊರತೆ ಉಂಟಾಗದಂತೆ ಸಣ್ಣನೀರು ಸಂಗ್ರಹದ ತೊಟ್ಟಿ ನಿರ್ಮಿಸಿ, ಡ್ರಿಪ್ ಮೂಲಕ ನೀರು ಹರಿಸಲಾಗುತ್ತಿದೆ. ವಸತಿ ನಿಯಲದ ಆವರಣದ ಸುತ್ತಲೂ ಸಾಕಷ್ಟು ಗಿಡ ಮರ ಬೆಳೆದು ನಿಂತಿವೆ.
ನಿಲಯದ ಬೋರ್‌ವೆಲ್ ಮೂಲಕ ಹಾಗೂ ಎರಡು ಗ್ರಾ.ಪಂ.ನವರು ಪೂರೈಸುವ ನೀರನ್ನು ಸಿಂಟೆಕ್ ನಲ್ಲಿ ಸಂಗ್ರಹಿಸಿಕೊಂಡು ಸಸಿಗೆ ನೀರುಣಿಸಲಾಗುತ್ತಿದೆ. ವಾರ್ಡ್‌ನ್ ಮತ್ತು ಸಿಬ್ಬಂದಿ ಸಸಿಗಳನ್ನು ಪೋಷಿಸಿ ಬೆಳಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಸ್ವಾಗತಾರ್ಹ.
ವಾರ್ಡನ್ ಮಲ್ಲಪ್ಪ ಬಿರಾದರ ಮತ್ತು ಸಿಬ್ಬಂದಿ, ಮಕ್ಕಳ ಊಟ, ವಸತಿ, ಶಿಕ್ಷಣದ ಜತೆಗೆ ಸಸಿಯನ್ನು ಸಂರಕ್ಷಿಸಿ ಬೆಳೆಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.
ಕುಷ್ಟಗಿ ತಾಲೂಕಿನಿಂದ 12 ಕಿ.ಮೀ. ದೂರದ ದೋಟಿಹಾಳ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ನಿಲಯ ಶುಚಿತ್ವ, ರುಚಿಕರ ಆಹಾರದ ಜತೆಗೆ ಸುಂದರ ಉದ್ಯಾನ ಒಳಗೊಂಡು ಸುಂದರ ಪರಿಸರದಿಂದ ಗಮನ ಸೆಳೆಯುವಂತಿದೆ.
ಇದಕ್ಕೆ ಪೂರಕವಾಗಿ ವಸತಿ ನಿಲಯದ ಸಿಬ್ಬಂದಿ ಜಾಕೀರ್ ಹುಸೇನ್ ನೀಲಗಾರ ವಿದ್ಯಾರ್ಥಿಗಳಿಗೆ ಸಹಾಯ ಮತ್ತು ಸಹಕಾರದಿಂದ ಒಂದು ಸುಂದರ ಉದ್ಯಾನ ವನ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.
ಉತ್ತಮ ಪರಿಸರದಲ್ಲಿ ಸ್ವಚ್ಛಂದ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಸತಿ ನಿಲಯದ ಆವರಣದಲ್ಲಿ ಒಂದು ಮನೋಹರ ಉದ್ಯಾನವನ್ನು ಬೆಳೆಸುತ್ತಿದ್ದಾರೆ.
ಗ್ರಾ.ಪಂ. ಮತ್ತು ತೊಟಗಾರಿಕೆ ಇಲಾಖೆ ಸಹಯೋಗದಲ್ಲಿ ನಮ್ಮ ವಸತಿ ನಿಲಯದಲ್ಲಿ ಒಂದು ಉತ್ತಮ ಪರಿಸರದ ಉದ್ಯಾನ ನಿರ್ಮಿಸಲಾಗಿದೆ. ನಿಲಯದ ಮಕ್ಕಳು ಹಾಗೂ ಸಿಬ್ಬಂದಿಗಳ ಸರ್ಕಾರದಿಂದ ಇದು ಸಾಧ್ಯವಾಗಿದೆ. ನಿಲಯದ ಮಕ್ಕಳು ಉತ್ತಮ ಪರಿಸರ ಮಧ್ಯದಲ್ಲಿ ಕುಳಿತು ಅಭ್ಯಾಸ ಮಾಡುತ್ತಾರೆ. –
ಮಲ್ಲಪ್ಪ ಬಿರದಾರ, ವಸತಿ ನಿಲಯದ ವಾರ್ಡನ್ ದೋಟಿಹಾಳ,
ವರದಿ: ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ