Advertisement

ಸಾವು ಸಮೀಪಿಸಿದಾಗ, ಅವರ ಬಳಿ ಯಾರೂ ಇರಲಿಲ್ಲ ; ಜೊತೆಗಿದ್ದ ನರ್ಸ್ ವಿಡಿಯೋ ಕಟ್ ಮಾಡಿ ಹೋದಳು!

11:57 AM Apr 20, 2020 | Hari Prasad |

ಇನ್ನೊಬ್ಬ ರೋಗಿಯ ಆರೋಗ್ಯ ಹದಗೆಟ್ಟಿದ್ದರಿಂದ ನರ್ಸ್‌ ವಿಡಿಯೋ ಕಟ್‌ ಮಾಡಿ ಅತ್ತ ಹೋಗಬೇಕಾಯಿತಂತೆ. ನನ್ನ ಗೆಳೆಯನ ತಂದೆ, ಒಂಟಿಯಾಗಿ ಸತ್ತರು. ಕೊನೆಯ ಕ್ಷಣದಲ್ಲಿ ಅವರ ಕೈಹಿಡಿದುಕೊಳ್ಳಲೂ ಮನೆಯವರಿಗೆ ಅವಕಾಶ ಸಿಗಲೇ ಇಲ್ಲ. ನ್ಯೂಯಾರ್ಕ್‌ನಂತೆಯೇ, ಜಗತ್ತಿನ ವಿವಿಧ ಭಾಗಗಳ ಆಸ್ಪತ್ರೆಗಳಲ್ಲೂ ಇಂಥದ್ದೇ ನೋವು, ಹತಾಶೆಯ ವಾತಾವರಣವಿದೆ.

Advertisement

– ಡಾ| ಸಮೀರ್‌ ಗುಪ್ತಾ, ದಿಲ್ಲಿ ಉಮ್ಕಲ್‌ ಆಸ್ಪತ್ರೆ ನಿರ್ದೇಶಕ

ನಾವು ಸಾವಿನ ಬಗ್ಗೆ ಬಹಳ ಯೋಚಿಸುವುದಕ್ಕೆ ಹೋಗುವುದಿಲ್ಲ. ಆದರೆ, ಅದರ ಬಗ್ಗೆ ಯೋಚನೆ ಬಂದಾಗಲೆಲ್ಲ, ಹೆಚ್ಚು ತೊಂದರೆಯಿಲ್ಲದೇ, ಕುಟುಂಬಸ್ಥರು, ಪ್ರೀತಿಪಾತ್ರರು, ಗೆಳೆಯರು ಸುತ್ತಲೂ ಇರುವಾಗ ನಮ್ಮ ಜೀವನ ಅಂತ್ಯವಾಗಬೇಕು ಎಂದು ಆಶಿಸುತ್ತೇವೆ. ಆದರೆ, ನಮ್ಮ ಈ ಯೋಚನೆಯ ಮೂಲಕ್ಕೇ ಸವಾಲು ಎಸೆಯಲಾರಂಭಿಸಿದೆ, ಜಾಗತಿಕ ಸಾಂಕ್ರಾಮಿಕ ಕೋವಿಡ್‌-19!

ನ್ಯೂಯಾರ್ಕ್‌ನಲ್ಲಿ ಸರ್ಜನ್‌ ಆಗಿ ಕೆಲಸ ಮಾಡುತ್ತಿರುವ ನನ್ನ ಗೆಳೆಯನೊಬ್ಬನ ಜತೆ ನಡೆಸಿದ ಹೃದಯವಿದ್ರಾವಕ ಸಂಭಾಷಣೆಯ ನಂತರ ನನಗೆ ಕೋವಿಡ್‌-19 ಎಸೆಯುತ್ತಿರುವ ಈ ಸವಾಲು ಸ್ಪಷ್ಟವಾಯಿತು. ಒಂದೆಡೆ ನನ್ನ ಸ್ನೇಹಿತ, ಕೋವಿಡ್ ಪೀಡಿತರನ್ನು ರಕ್ಷಿಸುವಲ್ಲಿ ನಿರತನಾಗಿದ್ದ ಸಂದರ್ಭದಲ್ಲೇ, ಇನ್ನೊಂದೆಡೆ ಆತನ ತಂದೆ ಸನಿಹದ ಆಸ್ಪತ್ರೆಯೊಂದರಲ್ಲಿ ಜೀವ ಬಿಟ್ಟರು. ಆ ಹಿರಿಯ ಜೀವ ಪ್ರಾಣ ಬಿಡುವಾಗ ಅವರ ಬಳಿ ಯಾರೂ ಇರಲಿಲ್ಲವಂತೆ.

ಆ ಪ್ರದೇಶದಲ್ಲಿ ಎಲ್ಲಾ ಆಸ್ಪತ್ರೆಗಳೂ ಈಗ ಕೋವಿಡ್ ರೋಗಿಗಳಿಂದ ತುಂಬಿಹೋಗಿವೆ. ಈ ಕಾರಣಕ್ಕಾಗಿಯೇ, ಪ್ರತಿಯೊಂದು ಆಸ್ಪತ್ರೆಯೂ ರೋಗಿಯನ್ನು ಹೊರತುಪಡಿಸಿ, ಇನ್ಯಾರೂ ಒಳಬರುವಂತಿಲ್ಲ ಎಂಬ ಪಾಲಿಸಿ ರೂಪಿಸಿಬಿಟ್ಟಿವೆ. ಆ ಹಿರಿಯರ ಜತೆ ಅವರ ಪತ್ನಿ, ಮಕ್ಕಳಿಗೆ ಆಸ್ಪತ್ರೆಗೆ ಹೋಗುವುದಿರಲಿ, ಆ್ಯಂಬುಲೆನ್ಸ್‌ನಲ್ಲಿ ಕೂಡುವುದಕ್ಕೂ ಅನುಮತಿ ಸಿಗಲಿಲ್ಲವಂತೆ. ಗೆಳೆಯನ ತಂದೆಯ ಸ್ಥಿತಿ 24 ಗಂಟೆಯಲ್ಲೇ ಗಂಭೀರವಾಗಿ ಐಸಿಯುಗೆ ಸೇರಿಸಿದರಂತೆ. ಮರುದಿನವೇ ನಿಧನರಾದರು.

Advertisement

ತನ್ನ ತಂದೆ ನಿಧನವಾದ ನೋವಷ್ಟೇ ಅಲ್ಲ, ಅವರ ಕಡೆಯ ಸಮಯದಲ್ಲಿ ಜತೆಗಿರಲೂ ಸಾಧ್ಯವಾಗಲಿಲ್ಲವಲ್ಲ ಎಂಬ ವಿಷಾದವೂ ಗೆಳೆಯನನ್ನು ಆತನ ಕುಟುಂಬದವರನ್ನು ಅತೀವವಾಗಿ ಕಾಡುತ್ತಿದೆ. ಒಬ್ಬ ಹೃದ್ರೋಗ ತಜ್ಞನಾಗಿ, ಆಲ್ಮೋಸ್ಟ್‌ ಪ್ರತಿ ದಿನವೂ ಜನರ ಜೀವ ಉಳಿಸುವಂಥ ಸರ್ಜರಿಗಳನ್ನು ಮಾಡುತ್ತಿರುವ ನಾನು, ಒಂದು ಸಂಗತಿಯನ್ನು ಅರ್ಥಮಾಡಿಕೊಂಡಿದ್ದೇನೆ. ಮನುಷ್ಯನ ಕೊನೆಯ ಕ್ಷಣಗಳಿರುತ್ತವಲ್ಲ, ಅದು ಆ ರೋಗಿಗೆ ಮತ್ತು ಆತನ ಕುಟುಂಬಕ್ಕೆ ಅತ್ಯಂತ ಮುಖ್ಯವಾದ ಸಮಯವಾಗಿರುತ್ತದೆ.

ನನ್ನ ಅಜ್ಜನಿಗೆ ಕ್ಯಾನ್ಸರ್‌ ಕೊನೆಯ ಹಂತ ತಲುಪಿ, ಅವರನ್ನು ಆಸ್ಪತ್ರೆಗೆ ಅಡ್ಮಿಟ್‌ ಮಾಡಿದಾಗ ನಾನು ಅಮೆರಿಕದಲ್ಲಿದ್ದೆ. ವಿಪರೀತ ಕೆಲಸದ (ಫೆಲೋಶಿಪ್‌) ನಡುವೆಯೇ ಬಿಡುವು ಮಾಡಿಕೊಂಡು, ಅಜ್ಜನ ಜತೆಗಿರಲು ಭಾರತಕ್ಕೆ ಬಂದಿದ್ದೆ. ಅಜ್ಜನ ಜೀವನದ ಕೊನೆಯ ದಿನದಂದು ಆತನ ಪಕ್ಕದಲ್ಲೇ ಇದ್ದೆ. ಆ ಸಮಯವನ್ನು ಮರೆಯಲು ಎಂದಿಗೂ ಸಾಧ್ಯವಾಗದು. ಕುಟುಂಬವೊಂದಕ್ಕೆ ತಮ್ಮ ಪ್ರೀತಿಪಾತ್ರರಿಗೆ ಅಂತಿಮ ವಿದಾಯ ಹೇಳುವ ಅವಕಾಶವೂ ಸಿಗದಂತಾಗುವುದು ಅತ್ಯಂತ ದೌರ್ಭಾಗ್ಯದ ವಿಷಯ.

ಒಂದು ವೇಳೆ ಕೋವಿಡ್ 19 ವೈರಸ್ ಏನಾದರೂ ನಿಯಂತ್ರಣಕ್ಕೆ ಸಿಗದೇ ಹುಚ್ಚು ಓಟ ಆರಂಭಿಸಿತೆಂದರೆ (ಹಾಗೆ ಆಗದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ), ನಮ್ಮಲ್ಲೂ ಇಂಥ ಸನ್ನಿವೇಶವೇ ನಿರ್ಮಾಣವಾಗಬಹುದು. ಈ ರೋಗ ಹೇಗಿದೆಯೆಂದರೆ, ರೋಗಿಯೊಬ್ಬ ಗುಣವಾಗುತ್ತಿದ್ದಾನೆ ಎಂದು ಅನಿಸುತ್ತಿರುವಂತೆಯೇ, ಏಕಾಏಕಿ ಆತನ ಆರೋಗ್ಯ ಸ್ಥಿತಿ ಹದಗೆಟ್ಟುಬಿಡುತ್ತದೆ. ಹಾಗಾಗಿ, ಆತನನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ.

ಒಂದು ವೇಳೆ ಚಿಕಿತ್ಸೆಯೇನಾದರೂ ಕೆಲಸ ಮಾಡದೇ ಇದ್ದರೆ, ತೀವ್ರವಾಗಿ ಪೀಡಿತರಾಗಿರುವ ರೋಗಿಯನ್ನು ಸಂಪೂರ್ಣವಾಗಿ ಪ್ರತ್ಯೇಕವಾಗಿ ಇರಿಸಬೇಕಾಗುತ್ತದೆ. ಸಾಮಾನ್ಯವಾಗಿ, ರೋಗಿಯೊಬ್ಬ ಕ್ರಿಟಿಕಲ್‌ ಪರಿಸ್ಥಿತಿಯಲ್ಲಿ ಇದ್ದಾಗ ವೈದ್ಯರು ಮತ್ತು ನರ್ಸ್‌ಗಳು ಆತನ ಪಕ್ಕ ಇರಲು ಪ್ರಯತ್ನಿಸುತ್ತಾರೆ. ಆದರೆ ಈ ಸಮಯದಲ್ಲಿ ರೋಗ ಹರಡುವಿಕೆಯ ಅಪಾಯವೂ ಇರುವುದರಿಂದ ಮತ್ತು ಅಪಾರ ಸಂಖ್ಯೆಯ ರೋಗಿಗಳನ್ನೂ ನೋಡಬೇಕಾದ ಅಗತ್ಯವಿರುವುದರಿಂದ, ಅವರಿಗೆ ಹೀಗೆ ಮಾಡಲು ಸಾಧ್ಯವಾಗುತ್ತಿಲ್ಲ.

ಯಾವಾಗ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಅಧಿಕವಾಗುತ್ತಾ ಬೆಡ್‌ಗಳು ತುಂಬಲಾರಂಭಿಸುತ್ತವೋ, ಆಗ ಆಸ್ಪತ್ರೆಗಳು ರೋಗಿಯ ಕುಟುಂಬದವರಿಗೆ ಪ್ರವೇಶ ನಿರಾಕರಿಸಲಾರಂಭಿಸುತ್ತವೆ. ಏಕೆಂದರೆ, ಸಂದರ್ಶಕರಿಗೆಲ್ಲ ಒದಗಿಸುವಷ್ಟು ಸುರಕ್ಷಾ ಸಂಪನ್ಮೂಲಗಳಾಗಲಿ, ಅಥವಾ ಸಮಯವಾಗಲಿ ಆಸ್ಪತ್ರೆಗಳಿಗೆ ಇರುವುದಿಲ್ಲ.

ಒಂದು ವೇಳೆ ಕೋವಿಡ್ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಲೇ ಸಾಗಿತೆಂದರೆ, ರೋಗಿಗೆ ಭಾವನಾತ್ಮಕ ಬೆಂಬಲ ಕೊಡಲು ಅಥವಾ ಸಾಂತ್ವನ ಹೇಳಲು ಸಹ ವೈದ್ಯಕೀಯ ಸಿಬಂದಿಗೆ  ಸಾಧ್ಯವಾಗುವುದಿಲ್ಲ. ನ್ಯೂಯಾರ್ಕ್‌ನಲ್ಲಿ ನನ್ನ ಗೆಳೆಯನ ತಂದೆಗೆ ಇದೇ ಆಗಿದ್ದು. ಅವರು ಅಡ್ಮಿಟ್‌ ಆದ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಅಧಿಕವಿದ್ದ ಕಾರಣ, ಇತರರು ಪ್ರವೇಶಿಸಿದರೆ ಸೋಂಕು ಹರಡುವ ಸಾಧ್ಯತೆ ಅಧಿಕವಿರುತ್ತದೆ.

ಅದಕ್ಕಾಗಿಯೇ ರೋಗಿಗಳ ಸಂಬಂಧಿಕರಿಗೆ, ಮನೆಯವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಅವರ ಅಂತಿಮ ಕ್ಷಣಗಳು ಎದುರಾಗುತ್ತಿರುವ ವೇಳೆಯಲ್ಲಿ, ಆ ಆಸ್ಪತ್ರೆಯ ನರ್ಸ್‌ ಒಬ್ಬರು ಗೆಳೆಯನಿಗೆ ವಿಡಿಯೋ ಕಾಲ್‌ ಮಾಡಿ, ಅವರ ತಂದೆಯನ್ನು ತೋರಿಸಿದರಂತೆ. ಆದರೆ ಅದೂ ಕೂಡ ಕೇವಲ ಒಂದೇ ನಿಮಿಷವಷ್ಟೇ!

ಏಕೆಂದರೆ, ಇನ್ನೊಬ್ಬ ರೋಗಿಯ ಆರೋಗ್ಯ ಹದಗೆಟ್ಟಿದ್ದರಿಂದ ನರ್ಸ್‌ ವಿಡಿಯೋ ಕಟ್‌ ಮಾಡಿ ಅತ್ತ ಹೋಗಬೇಕಾಯಿತಂತೆ. ನನ್ನ ಗೆಳೆಯನ ತಂದೆ, ಒಂಟಿಯಾಗಿ ಸತ್ತರು. ಕೊನೆಯ ಕ್ಷಣದಲ್ಲಿ ಅವರ ಕೈಹಿಡಿದುಕೊಳ್ಳಲೂ ಮನೆಯವರಿಗೆ ಅವಕಾಶ ಸಿಗಲೇ ಇಲ್ಲ.

ನ್ಯೂಯಾರ್ಕ್‌ನಂತೆಯೇ, ಜಗತ್ತಿನ ವಿವಿಧ ಭಾಗಗಳ ಆಸ್ಪತ್ರೆಗಳಲ್ಲೂ ಇಂಥದ್ದೇ ನೋವು, ಹತಾಶೆಯ ಕೆಟ್ಟ ವಾತಾವರಣವಿದೆ. ಸ್ಪೇನ್‌ ಮತ್ತು ಇಟಲಿಯಂಥ ಐರೋಪ್ಯ ರಾಷ್ಟ್ರಗಳು, ಜಗತ್ತಿನ ಅತ್ಯುತ್ತಮ ಆರೋಗ್ಯ ವ್ಯವಸ್ಥೆಗೆ ಖ್ಯಾತಿಯಾಗಿದ್ದವು. ಅಂಥ ದೇಶಗಳಲ್ಲಿನ ಆಸ್ಪತ್ರೆಗಳೂ ಈಗ ತುಂಬಿ ತುಳುಕುತ್ತಿವೆ. ಎಲ್ಲಾ ರೋಗಿಗಳಿಗೂ ಬೆಡ್‌ ಸಿಗುತ್ತಿಲ್ಲ.

ತೀವ್ರ ಅಸ್ವಸ್ಥರಾದ ರೋಗಿಗಳೂ ಹಾಲ್‌ಗಳಲ್ಲಿ ತಮ್ಮ ಸರದಿಗಾಗಿ ಕಾಯುತ್ತಾ ಜೀವನ್ಮರಣದ ನಡುವೆ ಹೊಡೆದಾಡುತ್ತಿದ್ದಾರೆ. ಎಷ್ಟೋ ಜನ ಒಬ್ಬ ಸಂಬಂಧಿಯೂ ಇಲ್ಲದೇ ಸಾವನ್ನಪ್ಪುತ್ತಿದ್ದಾರೆ – ಏಕೆಂದರೆ ಅವರ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳು ಈ ಓವರ್‌ಲೋಡ್‌ ಸಹಿಸಿಕೊಳ್ಳಲು ತಯ್ನಾರಿ ನಡೆಸಿರಲಿಲ್ಲ, ಮುನ್ನೆಚ್ಚರಿಕೆ ಕೈಗೊಂಡಿರಲಿಲ್ಲ. ಇದರಿಂದಾಗಿ, ರೋಗಿಗಳು ಮತ್ತು ಆಸ್ಪತ್ರೆಗಳು ಬೆಲೆ ತೆರುವಂತಾಗಿವೆ.

ಕೇವಲ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳಷ್ಟೇ ಅಲ್ಲ, ಸೋಂಕು ತಗಲಿದ್ದರೂ ಯಾವುದೇ ಲಕ್ಷಣ ಕಾಣಿಸಿಕೊಳ್ಳದವರು, ಅಥವಾ ಸಣ್ಣ ಪ್ರಮಾಣದಲ್ಲಿ ಸೋಂಕು ಹೊಂದಿರುವವರು ಅಥವಾ ಕೋವಿಡ್ ಪೀಡಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರೂ ಕೂಡ ಪ್ರತ್ಯೇಕವಾಗಿ ಇರಬೇಕಾಗುತ್ತದೆ. ಇಂಥ ಸಮಯದಲ್ಲಿ ಅನೇಕರು ತಮಗೆ ಬಹಳ ಒಂಟಿತನ ಕಾಡುತ್ತದೆ ಎಂದು ಈ ಸ್ಥಿತಿಯನ್ನು ವರ್ಣಿಸುತ್ತಾರೆ.

ಭಾರತ ಸರಕಾರದ ಪ್ರಬುದ್ಧ ನಿರ್ಧಾರ
ಈ ಕಾರಣಕ್ಕಾಗಿಯೇ, ಸಂಪೂರ್ಣ ಲಾಕ್‌ ಡೌನ್‌ ಜಾರಿಗೆ ತಂದ ಕೇಂದ್ರ ಸರಕಾರದ ನಿರ್ಧಾರ ಸೂಕ್ತವಾಗಿದೆ. ಇದೊಂದು ಪ್ರಬುದ್ಧ ನಿರ್ಧಾರವಾಗಿದ್ದು, ಅನೇಕ ರಾಷ್ಟ್ರಗಳು ಇಂಥ ನಿರ್ಧಾರಕ್ಕೆ ಬರದೇ, ಈಗ ಬೆಲೆ ತೆರುತ್ತಿವೆ.

ಈ ವೈರಸ್‌ ಚೀನ, ಐರೋಪ್ಯ ರಾಷ್ಟ್ರಗಳು ಮತ್ತು ಅಮೆರಿಕದಲ್ಲಿನ ಮಟ್ಟಕ್ಕೆ ನಮ್ಮಲ್ಲಿ ಹರಡಿಲ್ಲ. ಈ ಲಾಕ್‌ ಡೌನ್‌ನಿಂದಾಗಿ, ಅನೇಕ ಜೀವಗಳು ಉಳಿಯುತ್ತವೆ. ನಮ್ಮಲ್ಲಿ ಅಪಾರ ಪ್ರಮಾಣದಲ್ಲಿ ಜನರು ನಿಯಮಗಳನ್ನು ಪಾಲಿಸುತ್ತಿರುವುದರಿಂದಾಗಿಯೇ ಈ ಅಸಾಧಾರಣ ಕ್ರಮಗಳು ಕೆಲಸ ಮಾಡುತ್ತಿವೆ. ಒಬ್ಬ ಭಾರತೀಯನಾಗಿ ಇದು ನನಗೆ ಹೆಮ್ಮೆಯ ವಿಷಯ.

ಆದಾಗ್ಯೂ, ನಾವ್ಯಾರೂ ಬುಲೆಟ್‌ ಪ್ರೂಫ್ ಗಳಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ. ಒಂದು ವೇಳೆ ಸಾಮಾಜಿಕ ಅಂತರ ಪಾಲಿಸದಿದ್ದರೆ, ನಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯದೇ ಇದ್ದರೆ, ಅಥವಾ ಇನ್ಯಾವುದೇ ರೀತಿಯಲ್ಲೋ ಅಗತ್ಯ ಕ್ರಮಗಳನ್ನು ಪಾಲಿಸದಿದ್ದರೆ, ಭಾರತವೂ ಕೂಡ ಎಂಥ ಸ್ಥಿತಿಗೆ ತಲುಪುತ್ತದೆಂದರೆ, ನಮ್ಮಲ್ಲಿ ಅನೇಕರು ಒಂಟಿಯಾಗಿ ಸಾವನ್ನು ಎದುರಿಸಬೇಕಾಗುತ್ತದೆ.

ಈ ಲಾಕ್‌ಡೌನ್‌ನ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೆಚ್ಚು ಒಡನಾಡಿ. ಅವರೊಂದಿಗೆ ಅರ್ಥಪೂರ್ಣವಾಗಿ ಸಮಯ ಕಳೆಯಿರಿ. ನಮ್ಮ ಪಕ್ಕದಲ್ಲೇ ಅತ್ಯಂತ ಆಪ್ತರು ಇರುವಾಗ ಅವರನ್ನು ಕಡೆಗಣಿಸಿ ಟಿವಿ ನೋಡಿಯೋ ಅಥವಾ ಇನ್ಯಾವುದೋ ಅರ್ಥಹೀನ ಚಟುವಟಿಕೆಯಲ್ಲಿ ತೊಡಗಿಯೋ ಸಮಯ ಹಾಳು ಮಾಡುವುದು ಬೇಡ.

ಒಂದು ವೇಳೆ, ನೀವು ಈಗ ನಿಮ್ಮ ಕುಟುಂಬದಿಂದ ಪ್ರತ್ಯೇಕವಾಗಿ ಇದ್ದೀರಿ ಎಂದರೆ, ಅವರಿಗೆ ವಿಡಿಯೋ ಕಾಲ್‌ ಮಾಡಲು ತಡಮಾಡಬೇಡಿ. ಅವರಿಗೆ ನಿತ್ಯ ಕರೆ ಮಾಡಿ, ನಿಮ್ಮ ಕಾಳಜಿಯನ್ನು ತೋರಿಸಿ. ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ: ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಯಾರಾದರೂ ಸೋಂಕಿತರಾದರೆ, ಅವರ ಕೈಯಲ್ಲಿ ವಿಡಿಯೋ ಕಾಲ್‌  ಸಪೋರ್ಟ್‌ ಮಾಡುವಂಥ ಫೋನ್‌ ಕೊಟ್ಟು ಕಳಿಸಿ, ಅವರನ್ನು ಪ್ರೀತಿಯಿಂದ ಮಾತನಾಡಿಸಿ, ಗುಣಮುಖರಾಗ‌ಲು ಹಾರೈಸಿ.

Advertisement

Udayavani is now on Telegram. Click here to join our channel and stay updated with the latest news.

Next