ಜೀವನದಲ್ಲಿ ಒದಗಿಬರುವ ಸಾಂದರ್ಭಿಕ ಸಮಸ್ಯೆಗಳನ್ನೇ ನಾವು ಜೀವನವಿಡೀ ಒದಗಿಬಂದಿರುವ ಸಮಸ್ಯೆಗಳು ಎಂಬಂತೆ ಚಿಂತಿಸುತ್ತೇವೆ. ಇನ್ನೇನು ಜೀವನವೇ ಮುಗಿಯಿತು ಎಂಬ ನಿರಾಶಾವಾದದೊಂದಿಗೆ ಹೆಜ್ಜೆ ಹಾಕುತ್ತೇವೆ. ಇದು ತಪ್ಪು. ನಿರಾಸೆಯ ಕಾರ್ಮೋಡಗಳ ನಡುವೆ ಭರವಸೆಯ ಕೋಲ್ಮಿಂಚು ಇರುತ್ತದೆ ಎಂಬ ಮಾತಿನಂತೆ ನಮ್ಮ ಬದುಕಿನಲ್ಲಿ ಬರುವ ಸಾಂದರ್ಭಿಕ ಕಷ್ಟಗಳಿಗೆ ವೃಥಾ ಮರುಗುವುದಕ್ಕಿಂತ ಅವುಗಳನ್ನು ಎದುರಿಸುವ ಶಕ್ತಿ ನಮ್ಮಲ್ಲಿ ಬೆಳೆಸಿಕೊಳ್ಳಬೇಕು. ಎಲ್ಲವನ್ನು ಒಂದೇ ದೃಷ್ಟಿಯಿಂದ ನೋಡುವ ನಮ್ಮ ಸಂಕುಚಿತ ಮನೋಭಾವವನ್ನು ದೂರ ಮಾಡಬೇಕು. ನಮ್ಮ ಕಷ್ಟ-ನಷ್ಟಗಳು, ನೋವು-ನಲಿವುಗಳನ್ನು ಏಕಮುಖವಾಗಿ ನೋಡಬಾರದು, ಬದಲಿಗೆ ಗೂಡಾರ್ಥವಾಗಿ ಯೋಚಿಸಿದಾಗ ಅದು ನಮ್ಮ ಒಳಿತಿಗೆ ಒದಗಿಬಂದಿರುವ
ಆಪದ್ಬಾಂಧವ ಎನಿಸುತ್ತದೆ.
ಇಂತಹದ್ದೇ ಆಲೋಚನೆ ಕುರಿತು ಆಧ್ಯಾತ್ಮಿಕ ಗುರು ಓಶೋ ಒಂದು ನೀತಿ ಕಥೆಯ ಮೂಲಕ ವಿವರಿಸುತ್ತಾರೆ. ಒಬ್ಬ ಶಿಷ್ಯನ ಏಕಮುಖ ಚಿಂತನೆಯನ್ನು ಅವರ ಗುರುಗಳು ಹೇಗೆ ನಿವಾರಿಸುತ್ತಾರೆ ಎಂಬ ಅರ್ಥ ಇರುವ ಕಥೆಯಾಗಿದೆ. ಓರ್ವ ತರುಣ ಶಿಷ್ಯನೂ ತನ್ನ ಆಧ್ಯಾತ್ಮಿಕ ಸಾಧನೆಗಾಗಿ ಕಠಿನ ತಪಸ್ಸು, ಅಧ್ಯಯನ ಮಾಡಿ ತನಗೆ ಮಾರ್ಗದರ್ಶನ ಮಾಡಲು ಓರ್ವ ಗುರುವನ್ನು ಹುಡುಕುತ್ತಿರುತ್ತಾನೆ. ನಿರಂತರ ಹುಡುಕಾಟದ ನಡುವೆ ಕೊನೆಗೆ ಒಂದು ಕಾಡಿನಲ್ಲಿ ಓರ್ವ ವೃದ್ಧ ಮುನಿಗಳು ದೊರೆಯುತ್ತಾರೆ. ವೃದ್ಧ ಮುನಿಯು ತಮ್ಮ ಶಿಷ್ಯನಾಗಿ ಮಾಡಿಕೊಳ್ಳಲು ಒಪ್ಪಿಕೊಳ್ಳತ್ತಾರಾದರೂ ಆತನಿಗೆ ಒಂದು ಷರತ್ತು ವಿಧಿಸಿ, ಇದನ್ನು ಪರಿಪಾಲನೆ ಮಾಡುವುದಾದರೆ ಮಾತ್ರ ನಿನ್ನನ್ನು ಶಿಷ್ಯನಾಗಿ ಸ್ವೀಕರಿಸುತ್ತೇನೆ ಎಂದಾಗ ಶಿಷ್ಯನು ಕೂಡ ತಲೆಬಾಗಿ ಒಪ್ಪಿಕೊಳ್ಳುತ್ತಾನೆ.
ವೃದ್ಧ ಮುನಿಗಳು ತೆಗೆದುಕೊಳ್ಳುವ ನಿರ್ಧಾರಗಳು, ಕಾರ್ಯಗಳನ್ನು ಯಾವುದೇ ರೀತಿಯಲ್ಲಿ ಶಿಷ್ಯನೂ ಪ್ರಶ್ನಿಸಬಾರದು ಎಂಬುದು ಷರತ್ತು ಆಗಿರುತ್ತದೆ. ಕಾಡಿನಲ್ಲಿ ಒಂದು ನದಿಯನ್ನು ದಾಟುವ ಸಂದರ್ಭ ಬಂದಾಗ ಅಂಬಿಗನೂ ಸಂನ್ಯಾಸಿಗಳನ್ನು ಕಂಡು ಅವರನ್ನು ಉಚಿತವಾಗಿಯೇ ದಡ ದಾಟಿಸಲು ಒಪ್ಪಿಕೊಳ್ಳುತ್ತಾನೆ. ನದಿ ದಾಟಬೇಕಾದರೆ ವೃದ್ಧ ಮುನಿಯು ಆ ದೋಣಿಯಲ್ಲಿ ರಂಧ್ರ ಕೊರೆಯುವುದನ್ನು ಈ ಶಿಷ್ಯ ನೋಡುತ್ತಾನೆ. ಅನಂತರ ದಡ ದಾಟಿದ ಮೇಲೆ ಶಿಷ್ಯ ಗುರುವನ್ನು ಪ್ರಶ್ನಿಸಿಯೇ ಬಿಡುತ್ತಾನೆ. ಗುರುಗಳೇ ನೀವು ಮಾಡಿದ್ದು ತಪ್ಪಲ್ಲವೇ, ಅಂಬಿಗನೂ ನಮ್ಮನ್ನು ಗೌರವದಿಂದ ಉಚಿತವಾಗಿಯೇ ನದಿ ದಾಟಿಸಿದರೆ ನಿವೇಕೆ ಆತನ ದೋಣಿಗೆ ರಂಧ್ರವನ್ನು ಕೊರೆದಿರಿ, ಇದು ತಪ್ಪಲ್ಲವೇ ಎಂದು ಸಂಯಮ ಕಳೆದಕೊಂಡ ಶಿಷ್ಯನ ಪ್ರಶ್ನೆಗೆ ಗುರುಗಳು ಉತ್ತರಿಸುವ ಬದಲು ನಾನು ನಿನಗೆ ಮೊದಲೇ ತಿಳಿಸಿದ್ದೇನೆ, ನನ್ನ ಯಾವುದೇ ನಡೆಯನ್ನು ನೀನು ವಿರೋಧಿಸಬಾರದು ಮತ್ತು ಪ್ರಶ್ನಿಸಬಾರದು ಎಂದು. ನಿನಗೆ ಉತ್ತರ ಬೇಕಾದರೆ ನಾನು ನೀಡುವೆ. ನೀನು ಇಲ್ಲಿಂದಲೇ ನನ್ನ ಶಿಷ್ಯತ್ವವನ್ನು ತೊರೆದು ಹೋಗಬೇಕು ಎಂಬ ಕಠಿನ ಮಾತಿಗೆ ಶಿಷ್ಯನು ಅಳುಕುಗೊಂಡು ಸುಮ್ಮನಾಗಿ ಮುನ್ನಡೆಯುತ್ತಾನೆ.
ಹೀಗೆ ಶಿಷ್ಯನ ಸಂಯಮ ಮೀರುವಂಥ ಇನ್ನೊಂದು ಘಟನೆಯೂ ಹೀಗೆ ನಡೆಯುತ್ತದೆ. ಕಾಡಿನಲ್ಲಿ ಗುರು ಶಿಷ್ಯರು ಹೋಗಬೇಕಾದರೆ ರಾಜನೂಬ್ಬ ಇವರನ್ನು ಕಂಡು ನಮಸ್ಕರಿಸಿ ತಮ್ಮ ರಾಜಾಶ್ರಯ ಪಡೆದು ಗೌರವಾತಿಥ್ಯ ಸ್ವೀಕರಿಸಬೇಕು ಎಂದು ಕೇಳಿಕೊಳ್ಳುತ್ತಾನೆ. ಇದಕ್ಕೆ ಒಪ್ಪಿದ ಗುರು-ಶಿಷ್ಯರು ರಾಜನ ಮಗನ ಸಾರೋಟಿನಲ್ಲಿ ಕುಳಿತು ಅರಮನೆಯತ್ತ ಪ್ರಯಾಣ ಬೆಳೆಸುತ್ತಾರೆ. ಅರ್ಧ ದಾರಿಯಲ್ಲಿ ಹೋಗಬೇಕಾದರೆ ಗುರುಗಳು ರಾಜನ ಮಗನ ಕೈ ಮುರಿದು ಶಿಷ್ಯನೊಂದಿಗೆ ಪರಾರಿಯಾಗುತ್ತಾರೆ. ಆಗ ಶಿಷ್ಯನು ಕೋಪಾವೇಶದಿಂದ ಗುರುಗಳ ನಡೆಯನ್ನು ಪ್ರಶ್ನಿಸಿ ಇದಕ್ಕೆ ಉತ್ತರ ನೀಡುವಂತೆ ಕೇಳುತ್ತಾನೆ. ರಾಜರು ಅಷ್ಟು ಗೌರವದಿಂದ ನಮ್ಮಂಥ ಸಾಮಾನ್ಯ ಮುನಿಗಳಿಗೆ ರಾಜಾಶ್ರಯ ನೀಡಲು ಒಪ್ಪಿದರೆ ನೀವ್ಯಾಕೆ ಆ ಯುವರಾಜನ ಕೈ ಮುರಿದು ಬಂದಿರಿ ಎಂದು ಪ್ರಶ್ನಿಸಿದಾಗ. ವೃದ್ಧ ಮುನಿಗಳು ಅಷ್ಟೇ ನಯವಾಗಿ ಈತನಿಗೆ ಉತ್ತರಿಸುತ್ತಾರೆ. ಮೊದಲಿಗೆ ನಾನು ದೋಣಿಗೆ ರಂಧ್ರ ಹಾಕದಿದ್ದರೆ ನಾವು ಬಂದ ಬಳಿಕ ಹಡಗಿನಲ್ಲಿ ಡಕಾಯಿತರು ಹೋಗುವವರಿದ್ದರು. ಅವರು ಹೋಗಿದ್ದರೆ ಇಡೀ ಊರನ್ನೇ ಕೊಳ್ಳೆ ಹೊಡೆಯುತ್ತಿದ್ದರು. ನಾನು ದೋಣಿಗೆ ರಂಧ್ರ ಹಾಕಿದ್ದರಿಂದಾಗಿ ಅವರಿಗೆ ಹೋಗಲು ಅಸಾಧ್ಯವಾಯಿತು. ಇನ್ನು ಈ ಯುವರಾಜನ ಕೈ ಮುರಿದಿದ್ದಕ್ಕೆ ಬಲವಾದ ಕಾರಣವಿದೆ. ಈತನ ತಂದೆಯಾದ ರಾಜ ಲಂಪಟ. ಇಡೀ ರಾಜ್ಯದಲ್ಲಿ ಅತ್ಯಾಚಾರ, ಬಲಾತ್ಕಾರ, ಜನಸಾಮಾನ್ಯರನ್ನು ಹಿಂಸಿಸಿ ತಾನು ಬದುಕುತ್ತಿದ್ದಾನೆ. ಇನ್ನು ಈತನ ಮಗನೂ ಕೂಡ ಇದೇ ದಾರಿ ಹಿಡಿದವ. ಕೆಲವೇ ದಿನಗಳಲ್ಲಿ ರಾಜನಾಗಲಿದ್ದ ಈತನಿಗೆ ನಾನು ಕೈ ಮುರಿದ ಕಾರಣ ದೇಹ ಊನವಾದ ವ್ಯಕ್ತಿ ಯಾವುದೇ ಕಾರಣಕ್ಕೆ ಸಿಂಹಾಸನ ಏರಬಾರದು ಎಂಬುದು ಆ ರಾಜ್ಯದ ಲಿಖೀತ ಆದೇಶ.
ಈ ಕಥೆಯೂ ಸಾಂದರ್ಭಿಕವಾಗಿ ಓಶೋ ಹೇಳಿದ್ದು. ಆದರೆ ನಿಗೂಢವಾದ ಅರ್ಥವನ್ನು ಹೊಂದಿರುವಂತದ್ದಾಗಿದೆ. ಏಕೆಂದರೆ ಶಿಷ್ಯನು ಗುರುಗಳ ನಡೆಯನ್ನು ಪ್ರಶ್ನಿಸಿದ ಮಾತ್ರ ಆತ ದೂರದೃಷ್ಟಿಯಿಂದ ಆಲೋಚಿಸಲಿಲ್ಲ. ಇದು ಆತನ ಕೊರತೆ. ಅಂತೆಯೇ ನಮ್ಮ ಜೀವನದಲ್ಲಿ ಕೂಡ ನಾವು ನೋವುಗಳಿಗೆ ಚಿಂತೆ ಪಡುತ್ತೇವೆ. ಆದರೆ ಚಿಂತನೆ ಮಾಡುವುದಿಲ್ಲ. ಆ ನೋವುಗಳನ್ನು ಎದುರಿಸುವ ಶಕ್ತಿ ನಿಮ್ಮಲ್ಲಿ ಇದೆ. ಅದು ಬಂದಾಗ ನೀವು ಒಬ್ಬ ಬಲಿಷ್ಠರಾಗುತ್ತೀರಿ ಎಂಬ ಕನಿಷ್ಠ ಪ್ರಜ್ಞೆ ನಮ್ಮಲ್ಲಿ ಇರದಿದ್ದರೆ ಅಲ್ಲಿಯವರೆಗೆ ನಮ್ಮ ಬದುಕು ವ್ಯರ್ಥ ಎನಿಸಿಬಿಡುತ್ತದೆ. ಯಾವುದೇ ಘಟನೆ ನಡೆಯಲಿ ಅದನ್ನು ಒಂದೇ ಅರ್ಥದಲ್ಲಿ ಯೋಚಿಸುವುದು ಸಲ್ಲ, ಅದು ಮುಂದಿನ ಯಾವುದೋ ಅನಿರೀಕ್ಷಿತ ಘಟನೆಗೆ ಸಾಕ್ಷಿಯಾಗಲಿದೆ ಎಂಬುದಕ್ಕೆ ವೃದ್ಧ ಮುನಿಯ ನಡೆ ನಮಗೆ ಮಾದರಿಯಾಗಬೇಕು.
-
ಶಿವ ಸ್ಥಾವರಮಠ