ಶ್ರೀನಗರ: ಇಲ್ಲಿ ಬುಧವಾರ(ಸೆ25 ) ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆಗಳನ್ನು ವೀಕ್ಷಿಸಲು ವಿವಿಧ ದೇಶಗಳ ಹಿರಿಯ ರಾಜತಾಂತ್ರಿಕರ ಉನ್ನತ ಮಟ್ಟದ ನಿಯೋಗ ಬಂದಿದೆ.
ಅಮೆರಿಕ, ಮೆಕ್ಸಿಕೋ, ಗಯಾನಾ, ದಕ್ಷಿಣ ಕೊರಿಯಾ, ಸೊಮಾಲಿಯಾ, ಪನಾಮ, ಸಿಂಗಾಪುರ್, ನೈಜೀರಿಯಾ, ಸ್ಪೇನ್, ದಕ್ಷಿಣ ಆಫ್ರಿಕಾ, ನಾರ್ವೆ, ತಾಂಜಾನಿಯಾ, ರುವಾಂಡಾ, ಅಲ್ಜೀರಿಯಾ ಮತ್ತು ಫಿಲಿಪೈನ್ಸ್ ದೇಶಗಳ ರಾಯಭಾರ ಕಚೇರಿಗಳು ಅವುಗಳ CdA/DCM ಪ್ರತಿನಿಧಿಗಳನ್ನೂ ಕಳುಹಿಸಿದ್ದು, ಸಚಿವರು ಸಮಾಲೋಚಕ ಶ್ರೇಣಿಯಲ್ಲಿರುವ ರಾಜಕೀಯ ಅಧಿಕಾರಿಗಳು ಪ್ರತಿನಿಧಿಸುತ್ತಿದ್ದಾರೆ.
ಕೇಂದ್ರಾಡಳಿತ ಪ್ರದೇಶದ ಆರು ಜಿಲ್ಲೆಗಳ 26 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಶ್ರೀನಗರದ ಬೆಮಿನಾ ಪ್ರದೇಶ, ಬದ್ಗಾಮ್ ಪ್ರದೇಶದ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆಗೆ ಸಾಕ್ಷಿಯಾದರು. ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ.
ದಕ್ಷಿಣ ಆಫ್ರಿಕಾದ ರಾಜತಾಂತ್ರಿಕ ಲಾರಾ ಸ್ವಾರ್ಟ್ ಮಾತನಾಡಿ”ನಾವು 15 ದೇಶಗಳಿಂದ ಬಂದಿದ್ದು, ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದೇನೆ. ವಿದೇಶಾಂಗ ಸಚಿವಾಲಯವು ಮತದಾನ ಕೇಂದ್ರಗಳಿಗೆ ಬಂದು ಭೇಟಿ ನೀಡಲು ಆಹ್ವಾನಿಸಿರುವುದು ನಿಜವಾಗಿಯೂ ವಿಶೇಷವಾಗಿದೆ” ಎಂದು ಹೇಳಿದರು.
ಎರಡನೇ ಹಂತದ ಮತದಾನದಲ್ಲಿ ಬೆಳಗ್ಗೆ 9 ಗಂಟೆಗೆ 10.22 % ಮತದಾನವಾಗಿದೆ. ಮತಗಟ್ಟೆಗಳಲ್ಲಿ ಉದ್ದನೆಯ ಸಾಲುಗಳು ಕಂಡುಬಂದಿವೆ.