ಭಾರತೀಯ ಚಿತ್ರರಂಗದಲ್ಲಿ ಈ ಸ್ಟಾರ್ ನಟ ತನ್ನದೇ ಛಾಪನ್ನು ಬೆಳ್ಳಿಪರದೆಯಲ್ಲಿ ಮೂಡಿಸಿದ್ದರು. ಸಿನಿಮಾರಂಗದಲ್ಲಿ ಪ್ರಣಯ ರಾಜ ಎಂದೇ ಖ್ಯಾತಿ ಪಡೆದಿದ್ದರು. ಅದೇ ರೀತಿ ವೈಯಕ್ತಿಕ ಬದುಕಿನಲ್ಲೂ ಪ್ರಣಯ ರಾಜ ಆಗಿದ್ದರು! ಸ್ಕೂಲ್ ಮಾಸ್ಟರ್, ಸಂದರ್ಭ ಸೇರಿದಂತೆ ಕೆಲವು ಕನ್ನಡ ಸಿನಿಮಾ, ತಮಿಳು, ಹಿಂದಿ, ಮಲಯಾಳಂ, ತೆಲುಗು ಭಾಷೆ ಚಿತ್ರಗಳಲ್ಲಿ ರಾಮಸ್ವಾಮಿ ಗಣೇಶನ್ ನಟಿಸಿದ್ದರು. ಪ್ರಣಯ ರಾಜ, ಕಾದಲ್ ಮನ್ನಾನ್ ಎಂದೇ ಖ್ಯಾತಿಯಾದ ಈ ನಟ ಬೇರಾರು ಅಲ್ಲ ಜೆಮಿನಿ ಗಣೇಶನ್!
1925ರಲ್ಲಿ ತಮಿಳುನಾಡು ಪುದುಕೋಟೈನಲ್ಲಿ ಗಣೇಶನ್ ಜನಿಸಿದ್ದರು. ಗಣೇಶನ್ ಅಜ್ಜ ನಾರಾಯಣಸ್ವಾಮಿ ಬ್ರಾಹ್ಮಣ ಯುವತಿಯನ್ನು ವಿವಾಹವಾಗಿದ್ದರು. ನಂತರ ದೇವದಾಸಿ ಜನಾಂಗದ ಚಂದ್ರಮ್ಮ ಎಂಬಾಕೆ ಜೊತೆ ಸಂಬಂಧ ಇಟ್ಟುಕೊಂಡಿದ್ದರು.
ನಾರಾಯಣಸ್ವಾಮಿ ದಂಪತಿಗೆ ಮುತ್ತುಲಕ್ಷಿ ಮತ್ತು ರಾಮಸ್ವಾಮಿ ಎಂಬ ಮಕ್ಕಳು ಜನಿಸಿದ್ದರು. ರಾಮಸ್ವಾಮಿ ಹಾಗೂ ಭಾಗಿರಥಿ ದಂಪತಿ ಪುತ್ರನೇ ಗಣೇಶನ್ ರಾಮಸ್ವಾಮಿ. ಪ್ರಾಥಮಿಕ ವಿದ್ಯಾಭ್ಯಾಸ(6ನೇ ತರಗತಿ) ಕಲಿಯುತ್ತಿದ್ದಾಗಲೇ ಅಜ್ಜ ಸಾವನ್ನಪ್ಪಿದ್ದರು. ತದನಂತರ ತಂದೆ ರಾಮಸ್ವಾಮಿ ಕೂಡಾ ವಿಧಿವಶರಾಗಿದ್ದರು. ಇದರಿಂದ ಕಂಗಾಲಾದ ಭಾಗೀರಥಿ ಮಗನನ್ನು ಕರೆದುಕೊಂಡು ಮದ್ರಾಸ್ ನಲ್ಲಿರುವ ಮುತ್ತುಲಕ್ಷ್ಮಿ(ಗಣೇಶನ್ ಅತ್ತೆ) ಮನೆಗೆ ಆಶ್ರಯ ಕೇಳಿ ಬಂದಿದ್ದರು. ಅಂತೂ ತನ್ನ ತಾಯಿ ಚಂದ್ರಮ್ಮ ಮತ್ತು ಭಾಗೀರಥಿ, ಪುಟ್ಟ ಬಾಲಕ ಗಣೇಶನ್ ಗೆ ಮನೆಯಲ್ಲಿ ಇರುವಂತೆ ಹೇಳಿದ್ದರು. ಆದರೆ ಆ ಪ್ರೀತಿ ಹೆಚ್ಚು ದಿನ ಉಳಿಯಲಿಲ್ಲ. ತಾಯಿ ಮತ್ತು ಭಾಗ್ಯಲಕ್ಷ್ಮಿಯನ್ನು ನಿರ್ಲಕ್ಷಿಸಲು ಆರಂಭಿಸಿದ್ದಲ್ಲದೆ, ದೇವದಾಸಿಯರು ಎಂದು ನಿಂದಿಸತೊಡಗಿದ್ದರು. ಇದರಿಂದ ಬೇಸತ್ತ ಭಾಗೀರಥಿ, ಚಂದ್ರಮ್ಮ ಮತ್ತೆ ತಮ್ಮ(ಪುದುಕೋಟೈ) ಊರಿಗೆ ಹೊರಟು ಹೋಗಿದ್ದರು.
ಆದರೆ ಮಗನ ಭವಿಷ್ಯದ ಹಿನ್ನೆಲೆಯಲ್ಲಿ ಬಾಲಕ ಗಣೇಶನ್ ನನ್ನು ಅತ್ತೆ ಮುತ್ತುಲಕ್ಷ್ಮಿ ಬಳಿಯೇ ಬಿಡಲು ತೀರ್ಮಾನಿಸಿದ್ದರು. ಯಾಕೆಂದರೆ ಆಕೆಗೆ ಮಕ್ಕಳಿಲ್ಲದ ಕಾರಣ. ಚೆನ್ನೈಯಲ್ಲಿ ಒಳ್ಳೆಯ ವಿದ್ಯಾಭ್ಯಾಸ ಕಲಿಯಲಿ ಎಂಬುದು ತಾಯಿಯ ಆಸೆಯಾಗಿತ್ತು.
ಡಾಕ್ಟರ್ ಆಗಬೇಕೆಂಬ ಕನಸು ನನಸಾಗಲೇ ಇಲ್ಲ…!
ಮುತ್ತುಲಕ್ಷ್ಮಿ ಶ್ರೀರಾಮಕೃಷ್ಣ ಪರಮಹಂಸರ ಅಭಿಮಾನಿಯಾಗಿದ್ದರಿಂದ ಗಣೇಶನ್ ಅವರನ್ನು ರಾಮಕೃಷ್ಣ ಮಿಷನ್ ಹೋಮ್ ಗೆ ಸೇರಿಸಿದ್ದರು. ಅಲ್ಲಿ ಯೋಗ, ಸಂಸ್ಕೃತ, ಉಪನಿಷತ್, ವೇದ ಹಾಗೂ ಭಗವದ್ಗೀತೆಗಳನ್ನು ಅಭ್ಯಸಿಸಲು ಗಣೇಶನ್ ಗೆ ಸಹಾಯಕವಾಗಿತ್ತು. ಶಿಸ್ತಿನ ಜೀವನ ಕಲಿಕೆ ಕ್ರಮ ಕಲಿತ ಗಣೇಶನ್ ಗೆ ತಾಯಿಯನ್ನು ಬಿಟ್ಟಿರಲು ಸಾಧ್ಯವಾಗದೆ ಮತ್ತೆ ಪುದುಕೋಟೈಗೆ ಹೋಗಿ ಪ್ರೌಢಶಿಕ್ಷಣ ಪಡೆದಿದ್ದರು. ಬಳಿಕ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ಶಿಕ್ಷಣ. ಅಂತೂ ತಾನು ಕಲಿತು ವೈದ್ಯನಾಗಬೇಕೆಂಬ ಕನಸು ಕಂಡಿದ್ದ ಗಣೇಶನ್ 1940ರಲ್ಲಿ ಟಿಆರ್ ಅಲಮೇಲುವನ್ನು ನೋಡುವ ಕಾತುರದಿಂದ ತಿರುಚ್ಚಿಗೆ ಹೋಗಿದ್ದರು. ಆ ವೇಳೆ ಅಲಮೇಲು ತಂದೆ ತನ್ನ ಮಗಳನ್ನು ಮದುವೆಯಾದರೆ ಮೆಡಿಕಲ್ ಸೀಟು(ಪದವಿ ಶಿಕ್ಷಣ ಮುಗಿದ ಮೇಲೆ) ಕೊಡಿಸುವುದಾಗಿ ಭರವಸೆ ನೀಡಿದ್ದರು! ಅದಕ್ಕೆ ಒಪ್ಪಿಗೆ ಸೂಚಿಸಿದ ಗಣೇಶನ್ 1940ರಲ್ಲಿ ಅಲಮೇಲುವನ್ನು ವಿವಾಹವಾಗಿದ್ದರು!
ವಿಧಿ ವಿಪರ್ಯಾಸ ಹೇಗಿತ್ತು ಅಂದರೆ ಗಣೇಶನ್, ಅಲಮೇಲು ಮದುವೆಯಾಗಿ ಒಂದು ತಿಂಗಳಲ್ಲಿಯೇ ಆಕೆಯ ತಂದೆ ಸಾವನ್ನಪ್ಪಿದ್ದರು. ಇದರೊಂದಿಗೆ ಗಣೇಶನ್ ಡಾಕ್ಟರ್ ಆಗಬೇಕೆಂಬ ಕನಸು ನುಚ್ಚುನೂರಾಗಿ ಹೋಗಿತ್ತು. ಇಡೀ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದದ್ದು ಗಣೇಶನ್ ಒಬ್ಬರೇ..ಹೀಗಾಗಿ ಹೊಸದೊಂದು ಕೆಲಸ ಹುಡುಕಲೇಬೇಕಾದ ಅನಿರ್ವಾಯತೆ ಎದುರಾಗಿತ್ತು. ಪತ್ನಿಯ ವಿರೋಧದ ನಡುವೆಯೂ ದೆಹಲಿಗೆ ತೆರಳಿದ್ದ ಗಣೇಶನ್ ಭಾರತೀಯ ವಾಯುಪಡೆಯಲ್ಲಿ ಸಂದರ್ಶನ ಎದುರಿಸಿದ್ದರು. ದೆಹಲಿಯಲ್ಲಿ ಚಿಕ್ಕಪ್ಪ ನಾರಾಯಣಸ್ವಾಮಿ ಗಣೇಶನ್ ಅವರಿಗೊಂದು ಸಲಹೆ ನೀಡುತ್ತಾರೆ..ನೀನು ಶಿಕ್ಷಕ ಹುದ್ದೆಗೆ ಸೇರಿಕೋ ಎಂದು. ಕೊನೆಗೂ ತಾನು ಕಲಿತ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ಕೆಮೆಸ್ಟ್ರಿ ಡಿಪಾರ್ಟ್ ಮೆಂಟ್ ನಲ್ಲಿ ಉಪನ್ಯಾಸಕನಾಗಿ ಸೇರಿಕೊಂಡಿದ್ದರು!
ಗಣೇಶನ್ “ಜೆಮಿನಿ” ಆಗಿದ್ದು ಹೇಗೆ ಗೊತ್ತಾ?
ಉಪನ್ಯಾಸಕನಾಗಿ ಕೆಲಸ ಮಾಡಿದ ನಂತರ ಗಣೇಶನ್…1947ರಲ್ಲಿ ಪ್ರಸಿದ್ಧ ಜೆಮಿನಿ ಸ್ಟುಡಿಯೋದಲ್ಲಿ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ ಕೆಲಸ ನಿರ್ವಹಿಸಲು ಆರಂಭಿಸಿದ್ದರು..ಹೀಗೆ ಜೆಮಿನಿ ಗಣೇಶನ್ ಎಂದೇ ಹೆಸರು ಗಳಿಸುವಂತಾಗಿತ್ತು. ಈ ಸ್ಟುಡಿಯೋದಲ್ಲಿರುವಾಗಲೇ ಸಿನಿಮಾರಂಗಕ್ಕೆ ಸೇರಲು ಅವಕಾಶವಾಗಿತ್ತಂತೆ.
ಸೋಲನ್ನೇ ಕಂಡಿದ್ದ ಜೆಮಿನಿ ಸ್ಟಾರ್ ನಟನಾಗಿ ಮಿಂಚಿದ್ದರು!
1947ರಲ್ಲಿ ಮಿಸ್ ಮಾಲಿನಿ ಎಂಬ ತಮಿಳು ಚಿತ್ರದಲ್ಲಿ ಜೆಮಿನಿಗೆ ಚಿಕ್ಕದೊಂದು ಪಾತ್ರ ಸಿಕ್ಕಿತ್ತು. ಈ ಸಿನಿಮಾಕ್ಕೆ ಚಿತ್ರಕಥೆ ಬರೆದಿದ್ದು ಆರ್.ಕೆ.ನಾರಾಯಣ್! ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿತ್ತು. ತದನಂತರ ಚಕ್ರಧಾರಿ ಸಿನಿಮಾದಲ್ಲಿ ಜೆಮಿನಿ ಕೃಷ್ಣನ ಪಾತ್ರ ಮಾಡಿದ್ದರು. ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಗಳಿಕೆ ಕಂಡಿದ್ದರೂ, ಜೆಮಿನಿ ನಟನೆ ಹೆಚ್ಚು ಪ್ರಚಾರಕ್ಕೆ ಬರಲೇ ಇಲ್ಲವಂತೆ! 1953ರವರೆಗೆ ಅದೃಷ್ಟ ಜೆಮಿನಿ ಕೈಹಿಡಿಯಲಿಲ್ಲವಾಗಿತ್ತು. ಅಂದಹಾಗೆ ತಾಯ್ ಉಳ್ಳಂ ಸಿನಿಮಾದಲ್ಲಿ ಜೆಮಿನಿಯ ವಿಲನ್ ಪಾತ್ರ ದೊಡ್ಡ ಹೆಸರು ತಂದುಕೊಟ್ಟಿತ್ತು. ಜೆಮಿನಿ ಸ್ಟುಡಿಯೋ ಪ್ರೊಡಕ್ಷನ್ ನ ಮೂಂಡ್ರೂ ಪಿಳ್ಳೈಗಳ್ ಸಿನಿಮಾ ಕೂಡಾ ಸೋತಿತ್ತು. ಬಳಿಕ ಮನಂ ಪೋಲಾ ಮಾಂಗಲ್ಯಂ ಸಿನಿಮಾ ಜೆಮಿನಿ ಬದುಕಿನಲ್ಲೊಂದು ಮೈಲಿಗಲ್ಲಾಗಿಬಿಟ್ಟಿತ್ತು. ಸಾವಿತ್ರಿ ಹಾಗೂ ಜೆಮಿನಿ ನಟನೆಯ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು.
ಐದು ದಶಕಗಳ ಕಾಲ ಸುಮಾರು 200 ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಮಿಂಚಿದ್ದ ಜೆಮಿನಿ ಎಂಜಿಆರ್, ಶಿವಾಜಿ ಗಣೇಶನ್ ನಡುವೆ ಸ್ಟಾರ್ ನಟನಾಗಿ, ಪ್ರಣಯ ರಾಜನಾಗಿ ಮೆರೆದಿದ್ದರು.
ಮದುವೆ…ಮದುವೆ..ಅಕ್ರಮ ಸಂಬಂಧ!
ವೈದ್ಯನಾಗಬೇಕೆಂಬ ಹಂಬಲದಿಂದ ಜೆಮಿನಿ 19ನೇ ವಯಸ್ಸಿಗೆ ಅಲಮೇಲುವನ್ನು ವಿವಾಹವಾಗಿಬಿಟ್ಟಿದ್ದರು! ನಂತರ ಸ್ಪುರದ್ರೂಪಿ, ಮಹಾನಟಿ ಎಂದೇ ಹೆಸರಾಗಿದ್ದ ಸಾವಿತ್ರಿಯನ್ನು 1952ರಲ್ಲಿ ಜೆಮಿನಿ ವಿವಾಹವಾಗಿದ್ದರು. 1997ರಲ್ಲಿ ಜೂಲಿಯಾನಾ ಆ್ಯಂಡ್ರ್ಯೂ ಎಂಬಾಕೆಯನ್ನು ಕೊನೆಗಾಲದಲ್ಲಿ ಮದುವೆಯಾಗಿದ್ದ ಜೆಮಿನಿ ಚೆನ್ನೈನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಏತನ್ಮಧ್ಯೆ ಸಾವಿತ್ರಿ, ಅಲಮೇಲು ಮದುವೆಯಾದ ಹೊತ್ತಲ್ಲಿಯೂ ಜೆಮಿನಿ ಅನೇಕ ನಟಿಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಈ ಬಗ್ಗೆ ದೊಡ್ಡ ವಿವಾದಗಳ ಪಟ್ಟಿಯೇ ಇದೆ.
ಬಾಲಿವುಡ್ ಚೆಲುವೆ ರೇಖಾ ತನ್ನ ಮಗಳು ಎಂಬುದೇ ಜೆಮಿನಿಗೆ ತಿಳಿದಿಲ್ಲವಾಗಿತ್ತಂತೆ!?
ಜೆಮಿನಿ ಮತ್ತು ಅಲಮೇಲು ದಂಪತಿಗೆ ರೇವತಿ, ಕಮಲಾ, ನಾರಾಯಣಿ ಹಾಗೂ ಜಯಲಕ್ಷ್ಮಿ ಸೇರಿದಂತೆ ನಾಲ್ವರು ಹೆಣ್ಣು ಮಕ್ಕಳು. ನಂತರ ಖ್ಯಾತನಟಿ ಸಾವಿತ್ರಿಯನ್ನು 1952ರಲ್ಲಿ ಮದುವೆಯಾಗಿದ್ದರು. ಏತನ್ಮಧ್ಯೆ ಮತ್ತೊಬ್ಬ ನಟಿ ಪುಪ್ಪವಲ್ಲಿ ಜೊತೆ ಸಂಬಂಧ ಹೊಂದಿದ್ದ ಜೆಮಿನಿ, ಪುಪ್ಪವಲ್ಲಿಗೆ 1954ರಲ್ಲಿ ರೇಖಾ, 1955ರಲ್ಲಿ ರಾಧಾ ಜನಿಸಿದ್ದರು. ಅಧಿಕೃತ, ಅನಧಿಕೃತ ವಿವಾಹದ ಜಟಾಪಟಿಯಿಂದಾಗಿ ಪುಪ್ಪವಲ್ಲಿ ಜೆಮಿನಿ ಬದುಕಿನಿಂದ ದೂರ ಸರಿದು ಬಿಟ್ಟಿದ್ದರು. ಇದರಿಂದಾಗಿ ಕೆಲವು ವರ್ಷಗಳವರೆಗೆ ರೇಖಾ ತನ್ನ ಮಗಳು ಎಂಬುದು ಜೆಮಿನಿಗೆ ತಿಳಿದಿರಲಿಲ್ಲವಂತೆ! ಬಾಲಿವುಡ್ ನಲ್ಲಿ ಅದೃಷ್ಟ ಅರಿಸಿ ಹೋಗಿದ್ದ ರೇಖಾ ಮ್ಯಾಗಜಿನ್ ವೊಂದಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ತನ್ನ ಪೋಷಕರ ಬಗ್ಗೆ ಬಾಯ್ಬಿಟ್ಟಿದ್ದರು! ಸಾವಿತ್ರಿ ಮತ್ತು ಜೆಮಿನಿ ದಂಪತಿಗೆ ವಿಜಯ ಚಾಮುಂಡೇಶ್ವರಿ ಹಾಗೂ ಸತೀಶ್ ಕುಮಾರ್ ಸೇರಿದಂತೆ ಇಬ್ಬರು ಮಕ್ಕಳು.
ಅಂದು ರಾಜೀವ್ ಗಾಂಧಿ ರಾಜ್ಯಸಭಾ ಸದಸ್ಯ ಸ್ಥಾನ ಕೊಡುವುದಾಗಿ ಆಫರ್ ಕೊಟ್ಟಾಗಲೂ ಅದನ್ನು ನಯವಾಗಿಯೇ ತಿರಸ್ಕರಿಸಿದ್ದ ಜೆಮಿನಿ..ಯಾವತ್ತೂ ರಾಜಕೀಯದಲ್ಲಿ ತೊಡಗಿಸಿಕೊಂಡಿರಲಿಲ್ಲ. 2005ರ ಮಾರ್ಚ್ 22ರಂದು ಬಹುಅಂಗಾಂಗ ವೈಫಲ್ಯದಿಂದ ಜೆಮಿನಿ ಗಣೇಶನ್ ಮೊದಲ ಪತ್ನಿ ಅಲಮೇಲು ಮನೆಯಲ್ಲಿ ವಿಧಿವಶರಾಗಿದ್ದರು. ಈ ಸಂದರ್ಭದಲ್ಲಿ ಮಗಳು ರೇಖಾಳನ್ನು ಹೊರತುಪಡಿಸಿ ಉಳಿದ ಮಕ್ಕಳು ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು!
*ನಾಗೇಂದ್ರ ತ್ರಾಸಿ