Advertisement

Heritage Village: ಗತವೈಭವ ಸಾರುವ ಹೆರಿಟೇಜ್‌ ವಿಲೇಜ್‌

11:09 AM Jun 24, 2024 | Team Udayavani |

ಶ್ರೀಗಂಧದ ನಾಡಾದ ಕರ್ನಾಟಕವು ಸಂಸ್ಕೃತಿ, ಕಲೆಗಳ ಬೀಡು. ಶ್ರೀಮಂತ ಪರಂಪರೆಯುಳ್ಳ ನಮ್ಮ ನಾಡು ವಿವಿಧ ಸಾಹಿತ್ಯ, ಕಲೆ, ಸಂಸ್ಕೃತಿ, ಭಾಷೆ ಮತ್ತು ಜೀವನ ಶೈಲಿಯನ್ನು ಒಳಗೊಂಡಿದೆ. ಈ ಎಲ್ಲ ವಿವಿಧತೆಯನ್ನು ಒಂದೇ ಜಾಗದಲ್ಲಿ ಅದೂ ಮಣಿಪಾಲದಲ್ಲಿ ನೋಡಲು ಸಾಧ್ಯವಿದೆ. ಹೌದು ಶಿಕ್ಷಣ ಸಂಸ್ಥೆಯಿಂದಲೇ ಜಗತ್ತಪ್ರಸಿದ್ಧಿಯಾಗಿರುವ ಮಣಿಪಾಲದಲ್ಲಿರುವ ಹಸ್ತ ಶಿಲ್ಪ ಹೆರಿಟೇಜ್‌ ವಿಲೇಜ್‌ ಸಂಗ್ರಹಾಲಯದಲ್ಲಿ ವಿವಿಧ ರೀತಿಯ ವಾಸ್ತುಶಿಲ್ಪದ ಪರಂಪರೆಯನ್ನು ನೋಡಬಹುದು.

Advertisement

ಈ ಸಂಗ್ರಹಾಲಯವು ಆರು ಎಕ್ರೆ ಜಾಗದಲ್ಲಿ ಹರಡಿಕೊಂಡಿದ್ದು, ಹಲವಾರು ಶತಮಾನ ಹಿಂದಿನ ಕಾಲದ ಪುನರ್‌ನಿರ್ಮಿತ ಮನೆಗಳು ಮತ್ತು ದೇವಾಲಯಗಳನ್ನು ಇಲ್ಲಿ ನೋಡಬಹುದು. ಈ ಸಂಗ್ರಹಾಲಯವು ಉಡುಪಿಯವರಾದ  ದಿ| ವಿಜಯನಾಥ ಶೆಣೈ ಅವರ ಪ್ರೀತಿಯ ಕೊಡುಗೆಯಾಗಿದೆ. ಇವರ 20 ವರ್ಷಗಳ ಪರಿಶ್ರಮದ ಫ‌ಲವಾಗಿದೆ ಇದು ನಿರ್ಮಾಣಗೊಂಡಿದೆ. ಈ ಸಂಗ್ರಹಾಲಯದಲ್ಲಿ ಹಲವಾರು ಸಾಂಪ್ರದಾಯಿಕ ಮನೆ, ಐತಿಹಾಸಿಕ ಕಟ್ಟಡಗಳು ಮತ್ತು ಗುಡಿಗಳನ್ನು ಇರಸಲಾಗಿದ್ದು, ಕಲೆ, ಕರಕುಶಲ ವಸ್ತುಗಳು, ಜವುಳಿ, ಪಾತ್ರೆಗಳು, ಉಪಕರಣಗಳು, ಪೀಠೊಪಕರಣಗಳು ಮತ್ತು ಆಟಿಕೆಗಳ ಆನೇಕ ಗ್ಯಾಲರಿಗಳನ್ನು ಹೊಂದಿದೆ. ಶೆಣೈ ಅವರು ಭವಿಷ್ಯದ ಪೀಳಿಗೆಗಾಗಿ ಅಳಿವಿನಂಚಿನಲ್ಲಿರುವ ಅನೇಕ ಶಾಸ್ತ್ರೀಯ ಮತ್ತು ಜಾನಪದ ಸಂಪ್ರದಾಯಗಳನ್ನು ಇಲ್ಲಿ ಕಾಪಾಡುವ ಕೆಲಸವನ್ನು ಮಾಡಿದ್ದಾರೆ.

ಈ ವಸ್ತು ಸಂಗ್ರಹಾಲಯಕ್ಕೆ ನಾನು ನನ್ನ ಸ್ನೇಹಿತೆ ಅಂಕಿತಾ ಜತೆ ಹೋಗಿ, 4 ಗಂಟೆಗೂ ಹೆಚ್ಚು ಕಾಲ ಮ್ಯೂಸಿಯಂನ ನೋಟವನ್ನು ಸವಿದೆವು. ಇಲ್ಲಿರುವ ಒಂದೊಂದು ವಸ್ತು ಕೂಡ ಕಥೆಗಳನ್ನು ಹೊಂದಿದೆ, ಒಂದು ಮನೆಗಿಂತ ಇನ್ನೊಂದು ಮನೆ ಅದ್ಭುತವಾಗಿದೆ. ಈ ಮನೆಗಳನ್ನು ಒಮ್ಮೆ ಪ್ರವೇಶಿಸಿದರೆ ಹೊರ ಬರಲು ಮನಸ್ಸಾಗದು.

ದಕ್ಷಿಣ ಕನ್ನಡದ ವಿಶಿಷ್ಟವಾದ ಕೃಷಿಕ ಬ್ರಾಹ್ಮಣನ ಮಿಯಾರು ಮನೆಯನ್ನು ಪ್ರವೇಶ ದ್ವಾರದ ರೀತಿ ಬಳಸಿದ್ದಾರೆ. ಅನಂತರ ಮಲೆನಾಡು ಅರ್ಚಕರ ಮನೆಯಾದ ಶೃಂಗೇರಿ ಮನೆ, ಈಗ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಮರಾಠ ವಂಶದವರ ಮುಧೋಳ ಅರಮನೆ, ಮರಾಠ ವಾಸ್ತು ಶಿಲ್ಪ ಕಲೆಯನ್ನು ಸಾರುವ ಪೆಶ್ವವಾಡ, ಬಜಾರ್‌ ಸ್ಟ್ರೀಟ್, ಕುಕನೂರಿನ ಕಮಲ್‌ ಮಹಲ್‌, ನವಾಬರ ಕುಟುಂಬಕ್ಕೆ ಸೇರಿದ ಡೆಕ್ಕನಿ ನವಾಬ್‌ ಮಹಲ್‌, ಮಂಗಳೂರಿನ ಕ್ರಿಶ್ಚಿಯನ್‌ ಹೌಸ್‌, ಮ್ಯೂಸಿಯಂ ಆಫ್ ಟ್ರೆçಬಲ್‌ ಆರ್ಟ್ಸ್

Advertisement

ನಲ್ಲಿ ಬೃಹತ್‌ ಮರದ ಮುಖವಾಡಗಳು, ಧೋಕ್ರ ಲೋಹದ   ವಿಗ್ರಹಗಳನ್ನು ನೋಡಬಹುದಾಗಿದೆ. ನಂದಿಕೇಶ್ವರ ಗುಡಿ, ವಿಷ್ಣು ಮಂದಿರ, ವೀರ ಶೈವ ಜಂಗಮ ಮಠ, ರಾಮಚಂದ್ರಪುರ ಮಠ, ವಿದ್ಯಾ ಮಂದಿರ, ಕುಂಜೂರು ಚೌಕಿ ಮನೆ, ಭಟ್ಕಳ ನವಯತ್‌ ಮುಸ್ಲಿಂ ಮನೆ, ಗತಕಾಲದ ಮಾರುಕಟ್ಟೆಗಳು, ಬೀದಿಗಳು, ಅಂಗಡಿ ಮುಂಗಟ್ಟುಗಳು, ಸಂಪ್ರದಾಯಿಕ ಮತ್ತು ಸಂಸ್ಕೃತಿಕ ಕಲಾಕೃತಿಗಳು, ಹರಿಹರ ಮಂದಿರ ಹೀಗೆ ಸುಮಾರು 24 ಬಗೆಯ ಮನೆ, ಮಂದಿರ ಮತ್ತು ಐತಿಹಾಸಿಕ ಕಟ್ಟಡವನ್ನು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಅಳಿಯುತ್ತಿರುವ ನಮ್ಮ ಪರಂಪರೆಯನ್ನು ರಕ್ಷಿಸಿ ಮುಂದಿನ ಪೀಳಿಗೆಗ ತಲುಪಿಸುವಲ್ಲಿ ಈ ಸಂಗ್ರಹಾಲಯ ಕಾರ್ಯ ನಿರತವಾಗಿದೆ ಎಂದರೆ ತಪ್ಪಾಗದು. ಬಿಡುವು ಮಾಡಿಕೊಂಡು ನೀವೂ ಒಮ್ಮೆ ಭೇಟಿ ನೀಡಿ ನಮ್ಮ ಸಂಸ್ಕೃತಿ, ಕಲೆಯ ಬಗ್ಗೆ ತಿಳಿದುಕೊಳ್ಳಿ.

-ಕೆ.ಎಂ. ಪವಿತ್ರಾ

ಎಂಜಿಎಂ ಕಾಲೇಜು ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next