Advertisement

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ನೆರವಿಗೆ ಸಹಾಯವಾಣಿ ಆರಂಭ

06:58 AM Jun 24, 2020 | Suhan S |

ಹುಬ್ಬಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮುಂದಾಗುವ ವಿದ್ಯಾರ್ಥಿಗಳಿಗೆ ಮನೋಬಲ ತುಂಬಲು ಹಾಗೂ ಹಲವು ಸಮಸ್ಯೆಗಳ ಪರಿಹಾರ ದೃಷ್ಟಿಯಿಂದ ಕೆ.ಎಚ್‌.ಪಾಟೀಲ ಪಿಯು ವಿಜ್ಞಾನ ಕಾಲೇಜು ಉಚಿತ ಸಹಾಯವಾಣಿ ಆರಂಭಿಸಿದೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾಲೇಜು ಪ್ರಾಂಶುಪಾಲ ಎಸ್‌.ಬಿ.ಸಣಗೌಡರ, 2019-20ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜೂನ್‌ 25ರಿಂದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಆರಂಭವಾಗಲಿದ್ದು, ಈ ದಿಸೆಯಲ್ಲಿ ವಿದ್ಯಾರ್ಥಿಗಳು ತಯಾರಿ ನಡೆಸಿದ್ದಾರೆ. ಆದರೆ ವಿದ್ಯಾರ್ಥಿಗಳು ಸುದೀರ್ಘ‌ ಅವಧಿಯ ರಜೆಯಿಂದ ಪಠ್ಯದ ಜತೆಗೆ ಸಂಪರ್ಕ ಅಷ್ಟಾಗಿ ಇರಲ್ಲ. ಅಲ್ಲದೇ ಓದುವಾಗ ಕೆಲ ಅಂಶಗಳು ತಿಳಿಯದೇ ಹೋಗಬಹುದು. ಈ ದಿಸೆಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸಿ ಅವರಲ್ಲಿ ಮನೋಬಲ ಹೆಚ್ಚಿಸಲು ನಗರದಲ್ಲಿನ ನುರಿತ ಶಿಕ್ಷಕರಿಂದ ಸತತ 24 ಗಂಟೆಗಳ ಸಹಾಯವಾಣಿ ತೆರೆಯಲಾಗುವುದು. ಆ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಗೆ ಸಂಬಂಧಿಸಿದ ವಿಷಯದ ಮೇಲಿನ ಪ್ರಶ್ನೆಗಳಿಗೆ ನೇರವಾಗಿ ಫೋನ್‌ ಮುಖಾಂತರ ಉತ್ತರಿಸಿ, ಅವರ ಪ್ರಶ್ನೆ, ಆತಂಕಗಳಿಗೆ ನೆರವು ನೀಡಲಾಗುವುದು. ಈ ಸಹಾಯವಾಣಿಯು ಆಯಾ ವಿಷಯದ ಪರೀಕ್ಷೆಯ ಹಿಂದಿನ ದಿನ ಬೆಳಗ್ಗೆ 8:00ರಿಂದ ಮರುದಿನ ಬೆಳಗ್ಗೆ 8:00 ಗಂಟೆವರೆಗೆ ದಿನದ 24 ತಾಸು ಕಾರ್ಯ ನಿರ್ವಹಿಸಲಿದೆ ಎಂದರು.

ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಹಾಯವಾಣಿ ಬಹಳ ಅನುಕೂಲವಾಗಲಿದೆ. ಆ ಮೂಲಕ ಅವರು ಧೈರ್ಯ, ಆತ್ಮಸ್ಥೆçರ್ಯದಿಂದ ಪರೀಕ್ಷೆ ಎದುರಿಸಬಹುದಾಗಿದೆ. ಪ್ರತಿ ವಿಷಯಕ್ಕೆ ಮೂವರು ಪರಿಣಿತ ಶಿಕ್ಷಕರು ಇರುತ್ತಾರೆ. ಸಹಾಯವಾಣಿಯಲ್ಲಿ ಒಟ್ಟು ಐದು ಲೈನ್‌ಗಳು ಲಭ್ಯವಿರಲಿವೆ. ವಿದ್ಯಾರ್ಥಿಗಳು ಸಹಾಯವಾಣಿ ಸಂಖ್ಯೆ 7204593414, 7204593415, 7204593416 ಹಾಗೂ 9481855789, 9343807216ಗೆ ಸಂಪರ್ಕಿಸುವ ಮೂಲಕ ಸದುಪಯೋಗ ಪಡೆಯಬೇಕೆಂದು ಕೋರಿದರು. ವೇಮನ ವಿದ್ಯಾವರ್ಧಕ ಸಂಸ್ಥೆ ಕಾರ್ಯದರ್ಶಿ ಶಂಕರಕುಮಾರ ಕುಂಬಾರ, ಕಚೇರಿ ಅಧೀಕ್ಷಕ ರಾಜಣ್ಣ ಗುಡಿಮನಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next