Advertisement

ಮರುಜನ್ಮ ಪಡೆದ ಮಾಯಾವತಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

08:14 PM Jul 16, 2019 | sudhir |

ಮಂಜೇಶ್ವರ: ಸೋಮವಾರ ಸ್ನೇಹಾಲಯದ ಪಾಲಿಗೆ ಸಂತೋಷದ ದಿನವಾಗಿತ್ತು….. ಅಲ್ಲಿನ ಸರ್ವ ನಿವಾಸಿಗಳ ಪಾಲಿಗೆ ಪ್ರೀತಿಪಾತ್ರರಾಗಿದ್ದ   ಆ ಸಹೋದರಿಯು ಸ್ನೇಹಾಲಯದಿಂದ ನಿರ್ಗಮಿಸುವ ದುಗುಡದ ಮೌನ ಅಲ್ಲಿ ಆವರಿಸಿತ್ತು. ಆದರೆ ಪೂರ್ಣ ಗುಣಮುಖರಾಗಿ ಸಂಸಾರಕ್ಕೆ ಮರಳುತ್ತಿರುವ ಸಂತೋಷದ ಸಮಯವೂ ಆಗಿತ್ತು. ಹೌದು…. ಅದೊಂದು ವರ್ಣಿಸಲಾರದ       ನಿಮಿಷವಾಗಿತ್ತು¤ …..

Advertisement

ಆ ಮಹಿಳೆ ಕಳೆದ ಐದು ತಿಂಗಳುಗಳಿಂದ ಸ್ನೇಹಾಲಯ ಮಾನಸಿಕ ಅಸ್ವಸ್ಥೆ ಮಹಿಳೆಯರ ಪುನಶ್ಚೇತನ ಕೇಂದ್ರದ ನಿವಾಸಿ ಯಾಗಿದ್ದರು. ಉಪ್ಪಿನಂಗಡಿಯಲ್ಲಿ ಚಿಂದಿ ಬಟ್ಟೆಯಲ್ಲಿ ರಸ್ತೆ ಬದಿಯಲ್ಲಿ ನಡೆದಾಡುತ್ತಿದ್ದರು. ಮಾನಸಿಕ ಅಸ್ವಸ್ಥಳೆಂಬ ಸಮಾಜದ ಮೂದಲಿಕೆಯಿಂದ ಆಕೆಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು.

ಉಪ್ಪಿನಂಗಡಿ ಪೊಲೀಸರು ಆಕೆಯನ್ನು ಸ್ನೇಹಾಲಯಕ್ಕೆ ಕರೆ ತಂದಿದ್ದರು. ಅದು ಆಕೆಯ ಮರುಜನ್ಮಕ್ಕೆ ನಾಂದಿಯಾಯಿತು. ಅಂದಿನಿಂದ ಆಕೆಯು ಸ್ನೇಹ ಮಂದಿರದ ಪ್ರೀತಿಯಲ್ಲಿ ಕಳೆಯತೊಡಗಿದರು. ಅಲ್ಪಾವಧಿ ಚಿಕಿತ್ಸೆಯಲ್ಲೇ ಮನೋಸ್ತಿಮಿತ ಮರಳಿ ಗಳಿಸಿದ್ದರು. ಮುದುಡಿ ಮೂಲೆ ಸೇರುತ್ತಿದ್ದ ಆಕೆ ಲವಲವಿಕೆಯಿಂದ ಓಡಾಡತೊಡಗಿದಳು. ಮಾನಸಿಕ ಲಯ ತಪ್ಪಿದ ಅಲ್ಲಿನ 32ರಷ್ಟು ಮಹಿಳಾ ನಿವಾಸಿಗಳ ಪ್ರೀತಿ ಪಾತ್ರರಾದರು. ಹಾಸಿಗೆ ಹಿಡಿದಿರುವ ರೋಗಿಗಳ ಆರೈಕೆಯನ್ನೂ ಮಾಡುತ್ತಿದ್ದರು. ಹಾಗಯೇ ಅವರು ಸ್ನೇಹಾಲಯದ ಒಂದು ಭಾಗವೇ ಆಗಿ ಹೋಗಿದ್ದರು.

ಒಂದು ವರ್ಷ ಹಿಂದೆ ಮಾಯಾವತಿ ಮನೆಯಿಂದ ಮಾಯವಾಗಿದ್ದರು. ಪತಿ, ಸಂಬಂಧಿಕರು ಎಲ್ಲೆಡೆ ಹುಡುಕಾಡಿದ್ದರು. ಸ್ಥಳೀಯ ಪೊಲೀಸರಿಗೂ ದೂರು ಸಲ್ಲಿಸಲಾಗಿ ತಿಂಗಳುಗಳ ಕಾಲ ಹುಡುಕಾಡಿಯೂ ಫಲ ಶೂನ್ಯ. ಹೌದು…. ವರ್ಷದ ಹಿಂದೆ ಕಣ್ಮರೆಯಾದ ಮಾಯಾವತಿ ಐದು ತಿಂಗಳುಗಳಿಂದ ಸ್ನೇಹಾಲಯದ ಆರೈಕೆಯಿಂದಾಗಿ ಮತ್ತೆ ಬದುಕಿನೆಡೆಗೆ ಸ್ವಸ್ಥ ಹೆಜ್ಜೆಯಿರಿಸಿದ್ದಾರೆ. ತನ್ನ ಬದುಕಿನಲ್ಲಿ ಸಂಭವಿಸಿದ್ದೆಲ್ಲವೂ ಆಕಸ್ಮಿಕ, ಅದು ನಡೆದು ಹೋಗಿದೆ. ಚಿಂತಿಸಿ ಫಲವಿಲ್ಲ. ಮುಂದಿನ ಬದುಕನ್ನು ಸುಖಕರವಾಗಿ ಸಾಗಿಸಬೇಕು ಎಂಬುವುದನ್ನು ಅರ್ಥೈಸಿದ್ದಾರೆ. ಮಾಯಾವತಿ ತಿಳಿಸಿದ ವಿಳಾಸಕ್ಕೆ ಸ್ನೇಹಾಲಯದಿಂದ‌ ಪತ್ರ ಸಂದೇಶ ರವಾನೆಯಾಗಿತ್ತು.

ಮಾಹಿತಿ ಅರಿತ ಕೂಡಲೇ ಅವರ ಪತಿ ಯಶವಂತ ಮತ್ತು ಮಿತ್ರರೋರ್ವರು ಕಳೆದ ದಿನ ಸ್ನೇಹಾಲಯಕ್ಕೆ ತಲುಪಿದ್ದಾರೆ.

Advertisement

ಸತ್ತೇ ಹೋಗಿರಬಹುದೆಂದು ಭಾವಿಸಿದ್ದ ಪತ್ನಿಯನ್ನು ಕಣ್ಣೆದುರು ಕಂಡಾಗ ಕೈಹಿಡಿದಾತನ ಆನಂದಕ್ಕೆ ಪಾರಮ್ಯವೇ ಇರಲಿಲ್ಲ. ಆನಂದಬಾಷ್ಪ ಸುರಿಸಿ ಬೀಳ್ಕೊಟ್ಟ ಸ್ನೇಹಾಲಯದ ಎಲ್ಲ ಸಹೋದರಿಯರನ್ನು ಮಾಯಾವತಿ ತಬ್ಬಿ, ಮುತ್ತಿಕ್ಕಿದರು. ಸ್ನೇಹನಿಧಿ ಜೋಸೆಫ್‌ ಅವರ ಮುಂದೆ ಕೈ ಮುಗಿದು “ನನಗೆ ಮರುಜನ್ಮ ನೀಡಿರುವಿರಿ, ಪತಿ, ಮಕ್ಕಳ ಬಳಿ ಮರಳಿಸಿದಿರಿ. ಕೋಟಿ ಕೋಟಿ ಪ್ರಣಾಮಗಳು ನಿಮಗೆ, ಏಳೇಳು ಜನ್ಮದಲ್ಲಿಯೂ ನಿಮ್ಮನ್ನು ಮರೆಯಲಾರೆ’ ಎಂದು ತನ್ನ ಮನದಾಳವನ್ನು ವ್ಯಕ್ತಪಡಿಸಿ ಆಕೆ ಸ್ನೇಹಾಲಯದಿಂದ ಸ್ವಾಲಯಕ್ಕೆ ಪಯಣ ಬೆಳೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next