Advertisement

ಆರೋಗ್ಯಕರ ದಿನಚರಿ ಮತ್ತು ಆರೋಗ್ಯಕರ ಮನಸ್ಸು

09:10 PM May 16, 2020 | Sriram |

ಒಬ್ಬ ಮನುಷ್ಯನ ಜೀವನದಲ್ಲಿ ದಿನಚರಿಯು ತುಂಬಾ ಮುಖ್ಯವಾದದ್ದು. ದಿನಚರಿಯು ಪ್ರತಿಯೊಬ್ಬ ವ್ಯಕ್ತಿಯ ದೈನಂದಿನ ಚಟುವಟಿಕೆಗಳು, ಕೆಲಸ-ಕಾರ್ಯಗಳು ಮತ್ತು ಹವ್ಯಾಸಗಳನ್ನು ಒಳಗೊಂಡಿದೆ. ಇವು ಎಲ್ಲರ ಜೀವನದ ಅತ್ಯಂತ ಮಹತ್ವದ ಅಂಶಗಳು. ಸಂಶೋಧಕರ ಪ್ರಕಾರ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ನಿರೀಕ್ಷಿಸಬಹುದಾದ, ಪುನರಾವರ್ತಿತ ದಿನಚರಿಯು ಅವನ ಮಾನಸಿಕ ನೆಮ್ಮದಿಯ ಸಮತೋಲನವನ್ನು ಮತ್ತು ಆತಂಕವನ್ನು ಕಡಿಮೆಗೊಳಿಸಲು ಸಹಾಯಕಾರಿ. ಹಾಗೆಯೇ ಉತ್ತಮ ದಿನಚರಿಯು ನಮ್ಮೆಲ್ಲರ ದೈನಂದಿನ ಕೆಲಸಕಾರ್ಯಗಳ ಮೇಲೆ ಹಿಡಿತವನ್ನು ಕಾಯ್ದುಕೊಳ್ಳಲು ಮತ್ತು ಅನಂತರದ ಜೀವನ ಶೈಲಿಯ ಮೇಲೂ ಒಂದು ರೀತಿಯ ಹಿಡಿತವನ್ನು ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.

Advertisement

ನಾವೆಲ್ಲರೂ ಈಗ ವಿಷಮ ಸ್ಥಿತಿ ಮತ್ತು ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯ ಪರಿಣಾಮವನ್ನು ಅನುಭವಿಸುತ್ತಿದ್ದೇವೆ. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕ ಒತ್ತಡ ಮತ್ತು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ಎಲ್ಲರ ದಿನಚರಿಯಲ್ಲಿಯೂ ಬದಲಾವಣೆಯಾಗಿದೆ. ಈ ಎಲ್ಲ ಕಾರಣಗಳು ನಮ್ಮ ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿವೆ.

ಇಂತಹ ಸಮಯವನ್ನು ನಾವೆಲ್ಲರೂ ಹೇಗೆ ಎದುರಿಸಬಹುದು ಮತ್ತು ಆರೋಗ್ಯಕರ ದೈನಂದಿನ ಚಟುವಟಿಕೆಯನ್ನು ಹೇಗೆ ಕಾಪಾಡಿಕೊಳ್ಳಬಹುದು? ಮಾನಸಿಕ ಆರೋಗ್ಯವನ್ನು ದೈನಂದಿನ ಚಟುವಟಿಕೆಗಳ ಮೂಲಕ ಹೇಗೆ ಕಾಪಾಡಿಕೊಳ್ಳಬಹುದು?

– ಇವೆಲ್ಲ ಯೋಚನೆಗಳು ನಮ್ಮೆಲ್ಲರಲ್ಲಿ ಬರೀ ಪ್ರಶ್ನೆಯಾಗಿ ಉಳಿಯದೆ ಇವಕ್ಕೆಲ್ಲ ಪರಿಹಾರ ಕಂಡುಕೊಳ್ಳಲೇ ಬೇಕಾದ ಆವಶ್ಯತೆ ಇದೆ.

ನಮ್ಮ ದಿನಚರಿ ಒಳಗೊಳ್ಳುವ ಚಟುವಟಿಕೆಗಳ ಆರೋಗ್ಯಕರ ಉಪಾಯಗಳ ಬಗೆಗಿನ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಇವೆಲ್ಲ ಚಟುವಟಿಕೆಗಳನ್ನು ನಾವು ಉತ್ಸಾಹದಿಂದ ನಡೆಸಲು ಯಾವ ರೀತಿ ಮನೋಭಾವ ಬೆಳೆಸಿಕೊಳ್ಳಬಹುದು ಎನ್ನುವ ಬಗೆಗೂ ನೋಡೋಣ.

Advertisement

ಶುಚಿತ್ವದ ಕಡೆಗೆ ಗಮನ ಸದಾ ಇರಲಿ
ಮೊದಲನೆಯದಾಗಿ, ನಮ್ಮ ದಿನನಿತ್ಯ ಚಟುವಟಿಕೆಯಲ್ಲಿ ಅತೀ ಮುಖ್ಯವಾದ ದೈನಂದಿನ ಚಟುವಟಿಕೆ ಎಂದರೆ ನಮ್ಮನ್ನು ನಾವು ಶುಚಿಯಾಗಿ ಇಟ್ಟುಕೊಳ್ಳುವುದು. ದಿನಾಲೂ ಸ್ನಾನ ಮಾಡುವುದು ನಮ್ಮ ದಿನಚರಿಯ ಅವಿಭಾಜ್ಯ ಅಂಗ. ಒಂದು ವೇಳೆ ಬೆಳಗ್ಗೆ ಸ್ನಾನ ಮಾಡಿ ಕೆಲಸಕ್ಕೆ ಹೋಗುವವರಾಗಿದ್ದಲ್ಲಿ, ಈಗಲೂ ಅದೇ ರೀತಿ ಸ್ನಾನ ಮಾಡಿ ವರ್ಕ್‌ ಫ್ರಮ್ ‌ ಹೋಮ್‌ ಮಾಡುವುದು ಉತ್ತಮ. ಒಂದು ವೇಳೆ ರಾತ್ರಿ ಸ್ನಾನ ಮಾಡುವವರಾಗಿದ್ದರೆ ಅದನ್ನೇ ಮುಂದುವರಿಸುವುದು ಉತ್ತಮ. ಏಕೆಂದರೆ ಇದು ನಮ್ಮಲ್ಲಿ ಶುಭ್ರ ಭಾವನೆ ಮತ್ತು ಉತ್ಸಾಹದಿಂದ ಎಲ್ಲ ಕೆಲಸಗಳನ್ನು ಮಾಡಲು ಸಹಾಯಕಾರಿ. ಅದೇ ರೀತಿ ನಾವು ಮತ್ತೆ ಕೆಲಸಕ್ಕೆ ಮರಳಿದಾಗ ಅದನ್ನು ವ್ಯವಸ್ಥಿತ ರೀತಿಯಲ್ಲಿ ಮುಂದುವರಿಸಲು ಮತ್ತು ಯಾವುದೇ ಅವ್ಯವಸ್ಥೆ ಉಂಟಾಗದಂತೆ ನೋಡಿಕೊಳ್ಳಲು ಇದರಿಂದ ಸಾಧ್ಯವಾಗಬಹುದು. ಒಂದು ವೇಳೆ ಈಗಿರುವ ಕಡಿಮೆ ಕಷ್ಟಕರ ವೇಳಾಪಟ್ಟಿಯಿಂದ ನಿಮಗೆ ಜಡತ್ವ ಉಂಟಾಗಿರುವಂತೆ ಭಾಸವಾದಲ್ಲಿ ಸ್ನಾನ ಮಾಡಿದಾಗ ಮತ್ತೆ ಎಚ್ಚೆತ್ತುಕೊಳ್ಳಲು ಸಾಧ್ಯವಾಗುತ್ತದೆ.

ಉಡುಗೆ ತೊಡುಗೆ ಚೊಕ್ಕಟವಾಗಿರಲಿ
ನಮ್ಮ ದಿನಚರಿಯಲ್ಲಿ ಇನ್ನೊಂದು ಮುಖ್ಯವಾದ ಚಟುವಟಿಕೆ ಅಂದರೆ ಬಟ್ಟೆ ಧರಿಸುವಿಕೆ. ಒಂದು ವೇಳೆ ವರ್ಕ್‌ ಫ‌Åಮ್‌ ಹೋಮ್‌ ನಡೆಸಲು ಪ್ರೇರಣೆಯ ಕೊರತೆ ಇದೆ ಎನ್ನಿಸಿದರೆ ಹಿಂದೆ ಕಚೇರಿಗೆ ಹೋಗುವ ಸಂದರ್ಭದಲ್ಲಿ ಮಾಡುತ್ತಿದ್ದಂತೆಯೇ ಬಟ್ಟೆ ಧರಿಸಬಹುದು. ಹೀಗೆ ಮಾಡುವುದರಿಂದ ನಮಗೆ ಕೆಲಸ ಮಾಡುವ ಒಂದು ರೀತಿಯ ಹುಮ್ಮಸ್ಸು ಬರಲು ಸಹಾಯವಾಗುತ್ತದೆ. ಇದರಿಂದ ಅಪೇಕ್ಷಿತ ಕೆಲಸ ಮಾಡುವ ಉತ್ಸಾಹ ಹೆಚ್ಚುತ್ತದೆ.

ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಅತೀ ಮುಖ್ಯವಾದ ದೈನಂದಿನ ಚಟುವಟಿಕೆ ಎಂದರೆ ಆಹಾರ ಸೇವನೆ. ದಿನನಿತ್ಯದ ಊಟ ಉಪಚಾರಗಳನ್ನು ಕೂಡ ಹಿಂದೆ ನಾವು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಹೇಗೆ ಸಮಯಕ್ಕೆ ಸರಿಯಾಗಿ ಮಾಡುತ್ತಿದ್ದೆವೆಯೋ ಹಾಗೆಯೇ ಮಾಡಿದರೆ ಉತ್ತಮ. ಇದರಿಂದ ಅನಿಯಮಿತ ಆಹಾರ ಸೇವನೆ ಕಡಿಮೆ ಮಾಡಲು ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಶುಚಿತ್ವ ಕಾಪಾಡಿಕೊಳ್ಳಿ
ನಾವೆಲ್ಲರೂ ಅತೀ ಮುಖ್ಯವಾಗಿ ಪಾಲಿಸಬೇಕಾದ ಇನ್ನೊಂದು ಅಂಶ ಎಂದರೆ ಶುಚಿತ್ವ ಕಾಪಾಡಿಕೊಳ್ಳುವುದು. ಯಾವುದೇ ವಸ್ತು ಅಥವಾ ವ್ಯಕ್ತಿಯ ಸಂಪರ್ಕ ಮಾಡುವ ಮುನ್ನ ಮತ್ತು ಅನಂತರ ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಹಾಗೆಯೇ ಉಗುರುಗಳ ಶುಚಿತ್ವ, ಹಲ್ಲಿನ ಶುಚಿತ್ವ ಮತ್ತು ಕೈಗಳ ಶುಚಿತ್ವ ಕಾಪಾಡುವುದು ಅತೀ ಆವಶ್ಯಕ. ಇದರಿಂದ ಕ್ರಿಮಿ ಕೀಟಾಣುಗಳು ಹರಡುವುದನ್ನು ತಡೆಗಟ್ಟಬಹುದು. ಈಗಿರುವ ವಿಷಮ ಪರಿಸ್ಥಿತಿಯಲ್ಲಿ ಅಂತರ ಕಾಯ್ದುಕೊಳ್ಳುವುದು ಬಹುಮುಖ್ಯ. ಶುಚಿತ್ವ ಕಾಪಾಡಿಕೊಳ್ಳುವುದಕ್ಕೆ ಸಂಬಂಧಿಸಿದ ಈ ವಿಚಾರಗಳು ಇಷ್ಟಕ್ಕೆ ಸೀಮಿತವಲ್ಲ, ಇನ್ನೂ ಹಲವಾರು ಅಂಶಗಳನ್ನು ಒಳಗೊಂಡಿರಬಹುದು ಮತ್ತು ಅವರವರ ಸಂದರ್ಭ ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ಬದಲಾಗಲೂಬಹುದು.

ಉತ್ಸಾಹ ಮತ್ತು ವಿಶ್ರಾಂತಿ
ನಾವು ಯಾವಾಗಲೂ ಎಚ್ಚರದಿಂದ ಮತ್ತು ಉತ್ಸಾಹದಿಂದ ಇರಬೇಕು ಎಂದು ಎಲ್ಲರೂ ಹೇಳುವುದು ಕೇಳುತ್ತಿರುತ್ತೇವೆ. ಹೀಗೆ ಇರಬೇಕಾದರೆ ನಮ್ಮೆಲ್ಲರಿಗೆ ಒಳ್ಳೆಯ ವಿಶ್ರಾಂತಿಯ ಅಗತ್ಯವೂ ಇದೆ. ವಿಶ್ರಾಂತಿಯನ್ನು ಪಡೆದುಕೊಳ್ಳಲು ವಿವಿಧ ಮಾರ್ಗಗಳಿವೆ. ಅವುಗಳೆಂದರೆ ಪುಸ್ತಕ ಓದುವುದು, ಧ್ಯಾನ ಮಾಡುವುದು, ಯೋಗಾಭ್ಯಾಸ, ಟಿವಿ ನೋಡುವುದು ಇತ್ಯಾದಿ. ಈಗಿರುವ ಕಾಲ ಪರಿಸ್ಥಿತಿಯಲ್ಲಿ ಇವೆಲ್ಲವೂ ಅತೀ ಆವಶ್ಯಕ ಎನಿಸುತ್ತಿದೆ. ಹಾಗೆ ನೋಡಿದರೆ, ಒಳ್ಳೆಯ ನಿದ್ದೆಯೂ ಮನುಷ್ಯನ ಜೀವನದಲ್ಲಿ ಆವಶ್ಯಕವೇ. ದಿನನಿತ್ಯ ಒಂದು ನಿಗದಿತ ಸಮಯವನ್ನು ನಾವು ನಿದ್ರೆ ಮಾಡಲು ಇರಿಸಿಕೊಂಡಿದ್ದಲ್ಲಿ ಈಗಲೂ ಅದೇ ಸಮಯಕ್ಕೆ ಸರಿಯಾಗಿ ಮಲಗುವುದು ಮತ್ತು ಏಳುವುದು ಉತ್ತಮ. ಒಂದು ವೇಳೆ ಕೆಲಸಕ್ಕೆ ಹೋಗುವವರಾಗಿದ್ದಲ್ಲಿ, ಇದರಿಂದ ಮುಂದೆ ಕೆಲಸಕ್ಕೆ ವಾಪಸಾಗುವ ಸಂದರ್ಭದಲ್ಲಿ ಉತ್ಸಾಹದಿಂದ ಕೆಲಸ ಮಾಡಲು ಇದು ಸಹಾಯವಾಗಬಹುದು. ಜತೆಗೆ ಉತ್ತಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲೂ ಸಾಧ್ಯ. ಈ ಮೇಲೆ ಹೇಳಿರುವ ದೈನಂದಿನ ಚಟುವಟಿಕೆಗಳು ಮಾತ್ರವಲ್ಲದೆ ಇನ್ನೂ ಹಲವಾರು ಚಟುವಟಿಕೆಗಳ ಕಡೆಗೂ ನಾವು ಗಮನಹರಿಸಿ ಅವುಗಳನ್ನು ಉತ್ತಮವಾಗಿ ನಿಭಾಯಿಸುವುದು ಒಳಿತು. ಹೀಗೆ ಮಾಡಿದಾಗ ಒಂದು ಆರೋಗ್ಯಕರ ದಿನಚರಿಯನ್ನು ಒಳಗೊಂಡ ದೈನಂದಿನ ಚಟುವಟಿಕೆಗಳು ಹಾಗೂ ಹವ್ಯಾಸವನ್ನು ನಮ್ಮದಾಗಿಸಿಕೊಳ್ಳಬಹುದು. ಆರೋಗ್ಯಕರ ದಿನಚರಿಯು ಸುರಕ್ಷಿತ ದಿನಚರಿಯಾಗಿರುತ್ತದೆ. ನಾವೆಲ್ಲರೂ ಆರೋಗ್ಯಕರ ದಿನಚರಿಯನ್ನು ಪಾಲಿಸೋಣ ಮತ್ತು ಸುರಕ್ಷಿತವಾಗಿ ಇರೋಣ.

-ಲಾವಣ್ಯಾ ಪದ್ಮಶಾಲಿ
ಕ್ಲಿನಿಕಲ್‌ ಸೂಪರ್‌ವೈಸರ್‌,
ಡಿಪಾರ್ಟ್‌ಮೆಂಟ್‌ ಆಫ್ ಆಕ್ಯುಪೇಶನಲ್‌ ಥೆರಪಿ, ಮಣಿಪಾಲ ಕಾಲೇಜ್‌ ಆಫ್ ಹೆಲ್ತ್‌ ಪ್ರೊಫೆಶ®Õ…,
ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next