Advertisement

ಮಹಿಳೆಯರ ಕೈಯಲ್ಲಿ ಅರಳಿದ ಕಲಾಕೃತಿ

11:31 PM Oct 11, 2019 | Team Udayavani |

ಉಡುಪಿ: ಮಹಿಳೆಯರು ಎಂದಾಕ್ಷಣ ಅಡುಗೆ ಕೋಣೆ ನೆನಪಾಗುತ್ತದೆ. ಜತೆಗೆ ಟಿವಿ ಎದುರು ಗಂಟೆಗಟ್ಟಲೆ ಕುಳಿತು ಧಾರಾವಾಹಿ ನೋಡುತ್ತಾರೆ ಎನ್ನುವ ಭಾವ ಮೂಡುತ್ತದೆ. ಅದರೆ, ಇದನ್ನು ಹುಸಿಗೊಳಿಸಿರುವ ಈ ಮಹಿಳೆಯರು ತಮ್ಮೊಳಗಿನ ಕಲಾಕೃತಿ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಬೆರಗು ಮೂಡಿಸಿದ್ದಾರೆ.

Advertisement

ವೇದಿಕೆ ಮುಖ್ಯ
ಮಹಿಳೆಯರಿಗೆ ಮನೆ ಕೆಲಸ, ಮಕ್ಕಳ ಜವಾಬ್ದಾರಿ ನಿಭಾಯಿಸಿಕೊಂಡು ಕೆಲಸಕ್ಕೆ ಹೋಗುವುದರ ಜತೆಗೆ ಹವ್ಯಾಸದ ಕಡೆ ಗಮನ ಹರಿಸುವುದು ಅಷ್ಟು ಸರಳ ಕೆಲಸವಲ್ಲ. ಅವಳಲ್ಲಿನ ನಿಗೂಢ ಕಲೆ ಅಭಿವ್ಯಕ್ತವಾಗಬೇಕಾದರೆ ಪ್ರೋತ್ಸಾಹ ಹಾಗೂ ವೇದಿಕೆ ಮುಖ್ಯ. ಅನೇಕರಿಗೆ ಸರಿಯಾದ ವೇದಿಕೆ ದೊರಕದೆ ಅದೆಷ್ಟೋ ಪ್ರತಿಭೆಗಳು ಕಣ್ಮರೆಯಾಗಿದೆ.

ಎರಡು ದಿನಗಳ ಶಿಬಿರ
ಮಣಿಪಾಲ ತ್ರಿವರ್ಣ ಕಲಾ ಕೇಂದ್ರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಆವೆಮಣ್ಣಿನ ಕಲಾಕೃತಿ ಶಿಬಿರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಕಲಾಕೃತಿ ಸೃಷ್ಟಿಸಿ ಸಂಭ್ರಮಿಸಿದರು
ಮಹಿಳೆಯರು ತಮ್ಮ ನಿತ್ಯ ಕೆಲಸವನ್ನು ಬದಿಗಿಟ್ಟು ಬಹಳ ಖುಷಿಯಿಂದ ತಮ್ಮ ಸ್ಮತಿಪಟಲದಲ್ಲಿ ದಾಖಲಾಗಿದ್ದ ಪ್ರಾಣಿ, ಪಕ್ಷಿ , ಹಣ್ಣು, ದೇವರ ಮೂರ್ತಿ, ಹೂವು ಸೇರಿದಂತೆ ವಿವಿಧ ವಸ್ತುಗಳನ್ನು ಅವರ ಸಾಮರ್ಥ್ಯ ಅನುಗುಣವಾಗಿ ಕಲಾಕೃತಿಗಳನ್ನು ಸೃಷ್ಟಿಸಿ ಸಂಭ್ರಮಿಸಿದರು.

ಎಂಜಿನಿಯರಿಂಗ್‌ ಪದವೀಧರೆ
ಮಣಿಪಾಲ ಅಂಬಿಕಾ ಶೆಟ್ಟಿ ಎಂಜಿನಿಯರಿಂಗ್‌ ಪದವೀಧರೆ. ಮಗುವಿಗೆ ಎಳೆಯ ಪ್ರಾಯದಲ್ಲಿ ಚಿತ್ರಕಲೆ ಯಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಶಿಬಿರಕ್ಕೆ ಸೇರ್ಪಡೆಯಾಗಿದ್ದಾರೆ. ಬಿಡುವಿನ ಸಮಯದಲ್ಲಿ ಮನೆಯಲ್ಲಿ ಕುಳಿತುಕೊಂಡು ಕಲಾಕೃತಿಯನ್ನು ರಚಿಸುವುದರ ಜತೆಗೆ ಮಗುವಿಗೆ ಕಲಿಸುವ ಉದ್ದೇಶವನ್ನು ಹೊಂದಿದ್ದಾರೆ.

Advertisement

ಬ್ಯಾಂಕರ್‌ಗೆ ಗೃಹಾಲಂಕಾರದ ಗುರಿ
ಬ್ಯಾಂಕ್‌ ಉದ್ಯೋಗಿ ಅನುಷಾ ಅವರಿಗೆ ಬಾಲ್ಯ ದಿಂದಲೂ ಚಿತ್ರಕಲಾ ಕ್ಷೇತ್ರದಲ್ಲಿ ಆಸಕ್ತಿ ಇತ್ತು. ಸಮಯ ಸಿಕ್ಕಾಗ ಚಿತ್ರ ಬಿಡಿಸುತ್ತಾರೆ. ಪ್ರಸ್ತುತ ಪರ್ಕಳ ಬ್ಯಾಂಕ್‌ನಲ್ಲಿ ಉದ್ಯೋಗಿ. ಒತ್ತಡ ಕಡಿಮೆ ಮಾಡಿಕೊಳ್ಳಲು ಕಲಾಕೃತಿ ರಚನಾ ಶಿಬಿರಕ್ಕೆ ಸೇರ್ಪಡೆಯಾಗಿದ್ದಾರೆ. ತಾನು ಸೃಷ್ಟಿಸಿದ ಕಲಾಕೃತಿಯಿಂದ ಮನೆಯನ್ನು ಅಲಂಕರಿಸುವ ಗುರಿ ಹೊಂದಿದ್ದಾರೆ.

ಬಿಡುವಿನ ಅವಧಿಯಲ್ಲಿ ಚಿತ್ರ ಬಿಡಿಸುತ್ತೇನೆ. ಮಣ್ಣಿನಲ್ಲಿ ಕಲಾಕೃತಿಯನ್ನು ರಚಿಸುವ ಬಯಕೆ ಇತ್ತು. ಇದೀಗ ಕಲಾಕೃತಿ ರಚನಾ ಶಿಬಿರ ಹೊಸ ಅವಕಾಶವನ್ನು ನೀಡಿದೆ.
-ಪ್ರಜ್ಞಾ, ವಿದ್ಯಾರ್ಥಿನಿ

ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಶಿಬಿರದಲ್ಲಿ ತರಬೇತಿ ಪಡೆದವರು ಬಿಡುವಿನ ಸಮಯದಲ್ಲಿ ಇಷ್ಟದ ವಸ್ತುಗಳನ್ನು ರಚಿಸಬಹುದು.
-ಹರೀಶ್‌ ಸಾಗ,ತ್ರಿವರ್ಣ ಕಲಾಕೇಂದ್ರ, ಮಾರ್ಗದರ್ಶಕ

75ರಲ್ಲೂ ಕಲಿಕೆಯ ಹಂಬಲ
ಮಣಿಪಾಲದ ನಿವೃತ್ತ ಮುಖ್ಯಶಿಕ್ಷಕ ಡಿ.ವಿ. ಶೆಟ್ಟಿಗಾರ್‌ (75) ಕಳೆದ ಎರಡು ವರ್ಷಗಳಿಂದ ತ್ರಿವರ್ಣ ಚಿತ್ರಕಲಾ ಕೇಂದ್ರದಲ್ಲಿ ಚಿತ್ರಕಲೆ ತರಬೇತಿ ಪಡೆಯುತ್ತಿದ್ದಾರೆ. ನಿವೃತ್ತಿ ಜೀವನವನ್ನು ಲವಲವಿಕೆಯಿಂದ ಕಳೆಯಲು ಮಣ್ಣಿನ ಶಿಬಿರದಲ್ಲಿ ಭಾಗವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next