Advertisement
ಕರ್ನಾಟಕದಲ್ಲಿ ಯಾವುದೇ ಸಾರ್ವತ್ರಿಕ ಚುನಾವಣೆ ಬಂದಾಗಲೊಮ್ಮೆ ಗಡಿ ಭಾಗದ ಬೆಳಗಾವಿ ಜಿಲ್ಲೆಯಲ್ಲಿ ನೆರೆಯ ಮಹಾರಾಷ್ಟ್ರದ ಈ ರೀತಿಯ ಕುತಂತ್ರ ರಾಜಕಾರಣ ಇದ್ದೇ ಇರುತ್ತದೆ. ಪ್ರತಿ ಬಾರಿ ಹೊಸ ರೂಪ ಅಥವಾ ಕಾರ್ಯಸೂಚಿಯೊಂದಿಗೆ ಮಹಾರಾಷ್ಟ್ರ ಸರ್ಕಾರ ಅದರಲ್ಲೂ ವಿಶೇಷವಾಗಿ ಶಿವಸೇನೆ ಹಾಗೂ ಅಲ್ಲಿನ ರಾಜಕಾರಣಿಗಳು ಅಖಾಡಕ್ಕೆ ಇಳಿಯುತ್ತಾರೆ.
Related Articles
ಶಿವಸೇನೆಗೂ ಮತ್ತು ಬೆಳಗಾವಿ ಗಡಿ ಭಾಗದ ಚುನಾವಣೆಗೂ ಸುಮಾರು ಐದು ದಶಕಗಳ ಇತಿಹಾಸವಿದೆ. 1960ರ ದಶಕದಲ್ಲಿ ಶಿವಸೇನೆ ವರಿಷ್ಠ ಬಾಳಾಸಾಹೇಬ ಠಾಕ್ರೆ ಮರಾಠಿ ಆಸ್ಮಿತೆ ಇಟ್ಟುಕೊಂಡು ರಾಜಕಾರಣ ಆರಂಭಿಸಿದರು. ಮುಂದೆ ಇದೇ ಶಿವಸೇನೆಗೆ ಮುಖ್ಯ ಬಂಡವಾಳವಾಯಿತು. 1966-67ರ ಸಮಯದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಪರಾಕಾಷ್ಠೆ ಹಂತ ತಲುಪಿದಾಗ ಬೆಳಗಾವಿ ಭಾಗಕ್ಕೆ ಬಂದಿದ್ದ ಬಾಳಾಸಾಹೇಬ ಠಾಕ್ರೆ ಶಿವಸೇನೆಯಿಂದ ಚುನಾವಣೆ ಎದುರಿಸಲಿಲ್ಲ. ಬದಲಾಗಿ ಎಂಇಎಸ್‌ಗೆ ಬೆಂಬಲವಾಗಿ ನಿಂತರು. ಅಲ್ಲಿಂದ ಇವತ್ತಿನವರೆಗೆ ಗಡಿ ಭಾಗದ ಬೆಳಗಾವಿಯ ಪ್ರತಿಯೊಂದು ಚುನಾವಣೆಯು ಮಹಾರಾಷ್ಟ್ರ ರಾಜಕೀಯ ನಾಯಕರ ನೇರ ಹಸ್ತಕ್ಷೇಪಕ್ಕೆ ಸಾಕ್ಷಿಯಾಗಿವೆ. ಮರಾಠಿ ಅಸ್ಮಿತೆಯನ್ನೇ ಮುಖ್ಯ ಗುರಿಯನ್ನಾಗಿ ಮಾಡಿಕೊಂಡು ಶಿವಸೇನೆ ಈ ಭಾಗದಲ್ಲಿ ಚುನಾವಣೆ ಮಾಡುತ್ತಾ ಬಂದಿದೆ. ಗಡಿ ಮತ್ತು ಭಾಷೆಯ ಹೆಸರಿನಲ್ಲಿ ಮರಾಠಿ ಭಾಷಿಕ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ.
Advertisement
ಮರಾಠಿ ಅಸ್ಮಿತೆಯಿಂದ ಹಿಂದುತ್ವಕ್ಕೆ ಶಿಫ್ಟ್: 1980ರ ದಶಕದಲ್ಲಿ ಶಿವಸೇನೆಯ ಮುಖ್ಯ ಉದ್ದೇಶ ಮರಾಠಿ ಅಸ್ಮಿತೆಯಿಂದ ಹಿಂದುತ್ವ ವಿಷಯಕ್ಕೆ ಬದಲಾಯಿತು. ಆದರೆ ಕರ್ನಾಟಕ ಗಡಿ ಭಾಗದಲ್ಲಿ ತಮ್ಮ ಮೂಲ ಉದ್ದೇಶವನ್ನು ಬದಲಾಯಿಸಿಕೊಳ್ಳಲಿಲ್ಲ. ಮಹಾರಾಷ್ಟ್ರದಲ್ಲಿ ಹಿಂದುತ್ವದ ಆಧಾರದ ಮೇಲೆ ಚುನಾವಣೆ ಮಾಡುವ ಶಿವಸೇನೆ ಕರ್ನಾಟಕದಲ್ಲಿ ಮಾತ್ರ ಮರಾಠಿ ಅಸ್ಮಿತೆ ವಿಷಯದ ಮೇಲೆ ರಾಜಕಾರಣ ಮಾಡುತ್ತಲೇ ಬಂದಿದೆ. ಇದೇ ಕಾರಣದಿಂದ ಆಗಾಗ ಗಡಿ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮವಾಗುತ್ತಲೇ ಬಂದಿದೆ. ರಾಜಕೀಯ ಗಿಮಿಕ್:
ಗಡಿ ಪ್ರದೇಶದಲ್ಲಿನ ಮರಾಠಿ ಭಾಷಿಕ ಮತದಾರರ ಜತೆ ಮರಾಠಿಯೇತರ ಮತದಾರರನ್ನು ಸೆಳೆಯುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ಒಂದಲ್ಲಾ ಒಂದು ಹೊಸ ಯೋಜನೆ ಪ್ರಕಟಿಸುತ್ತಲೇ ಬಂದಿದೆ. ಗಡಿ ಭಾಗದ ಹಳ್ಳಿಗಳ ಜನರಿಗೆ ವಿಶೇಷ ಅನುದಾನ, ಯೋಜನೆ ಜಾರಿ ಮಾಡುತ್ತಿದೆ. ಈಗ ಇದಕ್ಕೆ ಮಹಾತ್ಮಾ ಫುಲೆ ಆರೋಗ್ಯ ವಿಮೆ ಕಾರ್ಡ್ ಯೋಜನೆ ಸೇರಿಕೊಂಡಿದೆ. ಇದು ರಾಜಕೀಯ ಗಿಮಿಕ್ ಅಲ್ಲದೇ ಮತ್ತೇನೂ ಅಲ್ಲ ಎಂಬುದು ಶಿವಸೇನೆಯನ್ನು ಹತ್ತಿರದಿಂದ ನೋಡಿದವರ ಅಭಿಪ್ರಾಯ. ಇದಕ್ಕೆ ಮುಖ್ಯ ಕಾರಣ ಈಗಾಗಲೇ ಗಡಿ ಪ್ರದೇಶದಲ್ಲಿನ ಶೇ.50ರಷ್ಟು ಮರಾಠಿ ಭಾಷಿಕ ಜನರು ಮುಖ್ಯ ವಾಹಿನಿಗೆ ಬಂದು ಹಿಂದುತ್ವದ ಹೆಸರಿನಲ್ಲಿ ರಾಷ್ಟ್ರೀಯ ಪಕ್ಷಗಳನ್ನು ವಿಶೇಷವಾಗಿ ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ತಮ್ಮನ್ನು ಬಿಟ್ಟು ಬಿಜೆಪಿ ಜತೆ ಹೋಗಿರುವ ಮರಾಠಿ ಭಾಷಿಕರನ್ನು ಮರಳಿ ಕರೆತರುವ ಸವಾಲು ಶಿವಸೇನೆ ಮುಂದಿದೆ. ಹೀಗಾಗಿ ಆರೋಗ್ಯ ವಿಮೆಯಂತಹ ಯೋಜನೆಗಳನ್ನು ಪ್ರಕಟಿಸಿ ಈ ಜನರನ್ನು ಸೆಳೆಯಲು ಪ್ರಯತ್ನ ನಡೆಸಿದೆ. ಅಭಿವೃದ್ಧಿ ಕಾರ್ಯಗಳ ವಿರುದ್ಧ ಪ್ರತಿಭಟನೆ!
ಮರಾಠಿ ಭಾಷಿಕ ಮತ್ತು ಮರಾಠಿಯೇತರ ಜನರನ್ನು ಸೆಳೆಯುವ ಉದ್ದೇಶದಿಂದ ಶಿವಸೇನೆ ಮತ್ತು ಎಂಇಎಸ್ ಕಳೆದ ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಅಭಿವೃದ್ಧಿ ಕಾರ್ಯಗಳ ವಿರುದ್ಧ ಪ್ರತಿಭಟನೆ ಮಾಡುತ್ತ ಬಂದಿದೆ. ಜನರನ್ನು ಎತ್ತಿ ಕಟ್ಟುತ್ತಿದೆ. ರಿಂಗ್ ರೋಡ್ ನಿರ್ಮಾಣದ ವಿಷಯದಲ್ಲಿ ರೈತರನ್ನು ಎತ್ತಿ ಕಟ್ಟಿ ಯೋಜನೆಗೆ ಅಡ್ಡಿಯಾಗುತ್ತಿದೆ. ಈಗ ಆರೋಗ್ಯ ವಿಮೆ ಕಾರ್ಡ್ ಯೋಜನೆಯಲ್ಲೂ ಶಿವಸೇನೆ ಇದೇ ರಾಜಕಾರಣಕ್ಕೆ ಮುಂದಾಗಿದೆ. ಕರ್ನಾಟಕದ 865 ಹಳ್ಳಿಗಳಲ್ಲಿ ಜಾರಿ ಮಾಡಲು ಉದ್ದೇಶಿಸಿರುವ ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಯೋಜನೆ ಜಾರಿ ಮಾಡಲು ಸಾಧ್ಯವಾಗದೇ ಇದ್ದರೆ ಆಗ ಕರ್ನಾಟಕ ಸರ್ಕಾರ ಮರಾಠಿ ಭಾಷಿಕ ಮತ್ತು ಮರಾಠಿಯೇತರ ಜನರ ವಿರುದ್ಧವಾಗಿದೆ ಎಂದು ಬಿಂಬಿಸುವುದು ಮತ್ತು ಮುಂದೆ ಇದನ್ನೇ ಚುನಾವಣೆ ವಿಷಯವನ್ನಾಗಿ ಮಾಡಿಕೊಳ್ಳುವುದು ಶಿವಸೇನೆಯ ದೂರಾಲೋಚನೆ. ಮರಾಠಿ ಭಾಷಿಕ ಮತ್ತು ಗಡಿ ಪ್ರದೇಶದ ಜನರು ಶಿವಸೇನೆಯ ಈ ರಾಜಕೀಯ ಕುತಂತ್ರಕ್ಕೆ ಯಾವ ರೀತಿ ಮನ್ನಣೆ ಕೊಡುತ್ತಾರೆ ಎಂಬ ಕುತೂಹಲದ ಪ್ರಶ್ನೆ ಈಗ ಎಲ್ಲರಲ್ಲಿದೆ. -ಕೇಶವ ಆದಿ