ಪ್ಯಾರಿಸ್: ಕಪ್ ಕಳೆದುಕೊಂಡು ಮಾಜಿಯಾದರೂ ಎಲ್ಲರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದ ಫ್ರಾನ್ಸ್ ತಂಡಕ್ಕೆ ತವರಲ್ಲಿ ಭವ್ಯ ಸ್ವಾಗತ ಲಭಿಸಿತು. ಪ್ಯಾರಿಸ್ ತಲುಪಿದ ಫುಟ್‌ಬಾಲ್ ತಂಡವನ್ನು ಎದುರು ಗಾಣಿಸಲು ಸಾವಿರಾರು ಮಂದಿ ನೆರೆದಿದ್ದರು.
ಇನ್ನೇನು ಫ್ರಾನ್ಸ್ ಸುಲಭವಾಗಿ ಶರಣಾಗುತ್ತದೆ ಎಂದು ಭಾವಿಸಿದವರನ್ನೆಲ್ಲ ದಂಗುಪಡಿಸಿ ಪಂದ್ಯಕ್ಕೆ ಬೇರೆಯದೇ ಆದ ತಿರುವು ಕೊಟ್ಟ ಹ್ಯಾಟ್ರಿಕ್ ಹೀರೋ ಕೈಲಿಯನ್ ಎಂಬಪೆ ಪ್ರಧಾನ ಆಕರ್ಷಣೆ ಆಗಿದ್ದರು. ಕೋಚ್ ದಿದಿಯರ್ ಡಿಶಾಂಪ್ಸ್, ನಾಯಕ ಹ್ಯೂಗೊ ಲಾರಿಸ್ ಕೂಡ ಜನಾಕರ್ಷಣೆಯ ಕೇಂದ್ರವಾದರು.
ಮೊದಲು ಪ್ಯಾರಿಸ್ ವಿಮಾನದ ನಿಲ್ದಾಣದ ಅಧಿಕಾರಿಗಳು, ಸಿಬಂದಿ ರನ್ನರ್ ಅಪ್ ತಂಡ ವನ್ನು ಆತ್ಮೀಯ ವಾಗಿ ಬರಮಾಡಿಕೊಂಡರು.
ಬಳಿಕ ತಂಡ “ಹೊಟೇಲ್ ಡಿ ಕ್ರಿಲ್ಲಾನ್’ನ ಬಾಲ್ಕನಿಯಲ್ಲಿ ಒಟ್ಟುಗೂಡಿತು. ಎಲ್ಲರೂ ಅಭಿಮಾನಿಗಳತ್ತ ಕೈಬೀಸಿದರು. ಸೋತರೂ ತಂಡದ ಮೇಲೆ ತೋರಿದ ಅಭಿಮಾನಕ್ಕೆ ಧನ್ಯವಾದ ಸಲ್ಲಿಸಿದರು. ಎಂಬಪೆ ಆಗಮಿಸಿ ದಾಗ ಲಂತೂ ಹರ್ಷೋದ್ಗಾರ ಮುಗಿಲು ಮುಟ್ಟಿತು. ಇದರೊಂದಿಗೆ ಅವರ ಬರ್ತ್‌ಡೇ ಸಡಗರವೂ ಮೇಳೈಸಿತು. “ಗೋಲ್ಡನ್ ಬೂಟ್’ ಗೆದ್ದ ಎಂಬಪೆಗೆ ಡಿ. 20 ಜನ್ಮದಿನವಾಗಿತ್ತು.
ಈ ಸಂದರ್ಭದಲ್ಲಿ ಫ್ರಾನ್ಸ್ ರಾಷ್ಟ್ರಗೀತೆ ಮೊಳಗಿತು, ರಾಷ್ಟ್ರಧ್ವಜ ಹಾರಾಡಿತು, ಆಕರ್ಷಕ ಸುಡುಮದ್ದು ಪ್ರದರ್ಶನದಿಂದಲೂ ಪ್ಯಾರಿಸ್ ರಂಗೇರಿಸಿಕೊಂಡಿತು.