ಮದ್ದೂರು: ಪಟ್ಟಣದಲ್ಲಿ ಮಂಗಳವಾರ ನಡೆದ 16ನೇ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ತೈಲೂರು ವೆಂಕಟಕೃಷ್ಣ ಅವರನ್ನು ಅದ್ದೂರಿ ಮೆರವಣಿಗೆ ಮೂಲಕ ಮುಖ್ಯ ವೇದಿಕೆಗೆ ಕರೆತರಲಾಯಿತು.
ಮಂಡ್ಯ, ಮದ್ದೂರು, ನಾಗಮಂಗಲ, ಮಳವಳ್ಳಿ ಸೇರಿದಂತೆ ನೆರೆ ಜಿಲ್ಲೆಗಳಿಂದ ಆಗಮಿಸಿದ್ದ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು, ಅಕ್ಷರ ಜಾತ್ರೆಯ ಕನ್ನಡ ಥೇರನ್ನು ಎಳೆದು ಕನ್ನಡಾಭಿಮಾನ ಮೆರೆದರು.
ಮೆರವಣಿಗೆಗೆ ಚಾಲನೆ: ಪಟ್ಟಣದ ಕೋಟೆ ಬೀದಿಯ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲ ಮುಂಭಾಗದಿಂದ ಆರಂಭಗೊಂಡ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಮಾಜಿ ಸಚಿವ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಡಿ.ಸಿ.ತಮ್ಮಣ್ಣ ಮೆರಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು. ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ವಿ.ಹರ್ಷ ಮತ್ತು ಪದಾಧಿಕಾರಿಗಳು ಅಧ್ಯಕ್ಷರನ್ನು ಮೆರವಣಿಗೆ ಮೂಲಕ ಕರೆತಂದರು.
ಕಲಾತಂಡಗಳ ನೃತ್ಯ: ಸರ್ವಾಧ್ಯಕ್ಷರು ಹಾಗೂ ಅವರ ಧರ್ಮಪತ್ನಿ ಮೊಮ್ಮಕ್ಕಳೊಂದಿಗೆ ಬೆಳ್ಳಿ ಮಾದರಿಯ ಸಾರೋಟಿನಲ್ಲಿ ಹೊರಟ ಮೆರವಣಿಗೆ, ಕೋಟೆ ಬೀದಿ ಮತ್ತು ಪೇಟೆ ಬೀದಿ ಮಾರ್ಗವಾಗಿ ತಾಲೂಕು ಕ್ರೀಡಾಂ ಗಣ ದವರೆಗೆ ಮೆರವಣಿಗೆಯಲ್ಲಿ ತರಲಾಯಿತು.
ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ವಿವಿಧ ಶಾಲಾ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ಹೆಜ್ಜೆ ಹಾಕಿದರು. ಮತ್ತೆ ಕೆಲ ವಿದ್ಯಾರ್ಥಿಗಳು ಸುಮಾರು 200 ಅಡಿ ಬಾವುಟ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಕಣ್ಮನ ಸೆಳೆಯಿತು.
ನೆರೆದಿದ್ದ ಕನ್ನಡಾಭಿಮಾನಿಗಳು: ಮೆರವಣಿಗೆ ಸಾಗಿದ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಕನ್ನಡಾಭಿಮಾನಿಗಳು, ಸರ್ವಾಧ್ಯಕ್ಷ ವೆಂಕಟಕೃಷ್ಣ ಅವರಿಗೆ ಮಾಲಾರ್ಪಣೆ ಮಾಡಿದರೆ, ಮತ್ತೆ ಕೆಲವರು ಅಧ್ಯಕ್ಷರತ್ತ ಕೈ ಬೀಸಿ ಶುಭ ಕಾಮನೆಗಳನ್ನು ಸಲ್ಲಿಸಿದರೆ, ಇದಕ್ಕೆ ಪ್ರತಿಯಾಗಿ ಸರ್ವಾಧ್ಯಕ್ಷರು ಕೈಮುಗಿದು ವಂದನೆ ಸಲ್ಲಿಸಿದರು.
ಅಧ್ಯಕ್ಷರ ಮೆರವಣಿಗೆ ತಾಲೂಕು ಕ್ರೀಡಾಂಗಣಕ್ಕೆ ತಲುಪಿತ್ತು. ಶಾಸಕ ಡಿ.ಸಿ.ತಮ್ಮಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ. ರವಿಕುಮಾರ, ಪದಾ—ಕಾರಿಗಳು ಮತ್ತು ವಿವಿಧ ಇಲಾಖೆಗಳ ಅ—ಕಾರಿಗಳು ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಿ ವೇದಿಕೆಗೆ ಕರೆದೊಯ್ದರು.