Advertisement

ರಾಜ್ಯದ ಎ ಗ್ರೇಡ್‌ ದೇವಾಲಯಗಳಲ್ಲಿ ಗೋಶಾಲೆ: ಕೋಟ ಶ್ರೀನಿವಾಸ ಪೂಜಾರಿ

09:33 AM Feb 28, 2020 | Sriram |

ಬೆಂಗಳೂರು: ರಾಜ್ಯದ ಪ್ರಮುಖ “ಎ’ ಗ್ರೇಡ್‌ ಮುಜರಾಯಿ ದೇವಾಲಯಗಳಲ್ಲಿ ಗೋ ಸಂರಕ್ಷಣೆಗಾಗಿ ಗೋ ಶಾಲೆ ತೆರೆಯಲು ಸರಕಾರ ಮುಂದಾಗಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, 25 ದೇವಾಲಯಗಳಲ್ಲಿ ಗೋ ಶಾಲೆ ತೆರೆಯಲು ತೀರ್ಮಾನಿಸಲಾಗಿದೆ. ಪ್ರತಿ ದೇವಾಲಯದ ಸುತ್ತಮುತ್ತ 10 ರಿಂದ 15 ಎಕರೆಗಳಷ್ಟು ಜಮೀನು ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಗೋ ತಳಿಗಳ ಸಂರಕ್ಷಣೆ, ವಯಸ್ಸಾದ ಗೋವುಗಳ ಆರೈಕೆ ಸಹಿತ ದೇವಾಲಯದ ಟ್ರಸ್ಟ್‌ ವತಿಯಿಂದಲೇ ಗೋ ಶಾಲೆ ನಿರ್ವಹಣೆ ಮಾಡಲಾಗುವುದು. ಈ ವಿಷಯದಲ್ಲಿ ಉತ್ತಮ ಕೆಲಸ ಮಾಡುತ್ತಿರುವ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಮಾರ್ಗದರ್ಶನ ಪಡೆಯಲಾಗುವುದು ಎಂದು ತಿಳಿಸಿದರು.

ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಹುಂಡಿ ಹಣ ಸೋರಿಕೆ, ದೇವಸ್ಥಾನ ಆಸ್ತಿ ಪಾಸ್ತಿ ರಕ್ಷಣೆಗಾಗಿ ಕ್ರಮ ಕೈಗೊಳ್ಳಬೇಕು ಎಂಬ ಮನವಿಗಳು ಬಂದಿದ್ದು, ಅದಕ್ಕಾಗಿ ಇಲಾಖೆಯು ಆಯುಕ್ತರಾದ ರೋಹಿಣಿ ಸಿಂಧೂರಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಮೂರು ತಿಂಗಳುಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. ರಾಜ್ಯದ ಎಲ್ಲ ದೇವಾಲಯಗಳ ಸುಪರ್ದಿಯಲ್ಲಿರುವ ಆಸ್ತಿ, ವಾಣಿಜ್ಯ ಮಳಿಗೆ ಸಹಿತ ಎಲ್ಲ ರೀತಿಯ ಆಸ್ತಿಗಳ ಸಮಗ್ರ ಮಾಹಿತಿ ಸಂಗ್ರಹಿಸಲು ತಿಳಿಸಲಾಗಿದೆ ಎಂದು ಹೇಳಿದರು.

ಸಪ್ತಪದಿ
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಸರಳ ವಿವಾಹ ಕಾರ್ಯಕ್ರಮವಾದ “ಸಪ್ತಪದಿ’ ಮೊದಲ ಹಂತದ ಕಾರ್ಯಕ್ರಮ ಎ. 26ರಂದು ನಡೆಯಲಿದ್ದು, ಇದುವರೆಗೂ 1,218 ಅರ್ಜಿಗಳು ಸಲ್ಲಿಕೆಯಾಗಿ 200 ಅರ್ಜಿಗಳ ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಮಾ. 27 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಇಂತಿಷ್ಟೇ ಮದುವೆಗಳಿಗೆ ಸೀಮಿತ ಎಂದು ನಿರ್ಬಂಧ ಹೇರಿಲ್ಲ. ಎಷ್ಟೇ ಅರ್ಜಿಗಳು ಬಂದರೂ ಮಾನ್ಯ ಮಾಡಲಾಗುವುದು ಎಂದು ಹೇಳಿದರು.

Advertisement

“ಎ’ ಗ್ರೇಡ್‌ ದೇವಾಲಯಗಳು ಇಲ್ಲದ ಕಡೆ “ಬಿ’ ಮತ್ತು “ಸಿ’ ದರ್ಜೆ ದೇವಾಲಯಗಳಲ್ಲಿ ಸಾಮೂಹಿಕ ವಿವಾಹಕ್ಕೆ ಅವಕಾಶ ಕಲ್ಪಿಸಲಾಗುವುದು. “ಬಿ’ ಮತ್ತು “ಸಿ’ ದರ್ಜೆ ದೇವಾಲಯಗಳಲ್ಲಿ ವಿವಾಹಕ್ಕೆ ಭರಿಸುವಷ್ಟು ಆದಾಯ ಇಲ್ಲದಿದ್ದರೆ ಸರಕಾರದಿಂದಲೇ ಭರಿಸಲಾಗುವುದು ಎಂದು ತಿಳಿಸಿದರು.

ಎರಡನೇ ಹಂತದ ಸಪ್ತಪದಿ ಮೇ 24 ಕ್ಕೆ ನಡೆಯಲಿದ್ದು ಎ. 24ರ ವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ಇರಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next