Advertisement

ಖಾಸಗಿ ಕಾಲೇಜುಗಳಿಗೆ ಸಡ್ಡು ಹೊಡೆದ ಸರಕಾರಿ ಕಾಲೇಜು

08:31 PM Aug 29, 2021 | Team Udayavani |

ಸಿಂಧನೂರು: ಕಳೆದ ಎರಡು ವರ್ಷದ ಹಿಂದೆ ಶೂನ್ಯ ದಾಖಲಾತಿಯಿಂದ ಬಾಗಿಲು ಮುಚ್ಚುವ ಆದೇಶ ಪಡೆದಿದ್ದ ಬಾಲಕರ ಸರಕಾರಿ ಕಾಲೇಜಿನ ವಿಜ್ಞಾನ ವಿಭಾಗ ಈಗ ಖಾಸಗಿ ಕಾಲೇಜುಗಳಿಗೆ ಸಡ್ಡು ಹೊಡೆದು ಪ್ರವೇಶಾತಿಯಲ್ಲಿ ಶತಕ ಬಾರಿಸಿದೆ. ನಗರದ ಪಿಡಬ್ಲ್ಯೂ ಡಿ ಕ್ಯಾಂಪ್‌ನಲ್ಲಿರುವ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗದ ದಾಖಲಾತಿಯಲ್ಲಿ ಈಗ ಜಿಲ್ಲೆಯಲ್ಲೇ ನಂಬರ್‌ ಒನ್‌ ಪಟ್ಟಕ್ಕೇರಲು ಸಜ್ಜಾಗಿದೆ.

Advertisement

2018-19ನೇ ಸಾಲಿನಲ್ಲಿ ಇಲ್ಲಿನ ಕಾಲೇಜಿನ ವಿಜ್ಞಾನ ವಿಭಾಗದ ದಾಖಲಾತಿ ಶೂನ್ಯವಾಗಿತ್ತು. ಸಹಜವಾಗಿಯೇ ಜಿಲ್ಲೆಯ 10 ಸರಕಾರಿ ಪಿಯು ಕಾಲೇಜು ಮುಚ್ಚುವ ಪಟ್ಟಿಯಲ್ಲಿ ಈ ಕಾಲೇಜು ಸೇರಿತ್ತು. ಜಿಲ್ಲೆಯ 9 ಪಿಯು ವಿಜ್ಞಾನ ವಿಭಾಗದ ಕಾಲೇಜು ಮುಚ್ಚಲ್ಪಟ್ಟವು. ಆದರೆ ಇಲ್ಲಿಗೆ ಪ್ರಾಚಾರ್ಯರಾಗಿ ಆಗಮಿಸಿದ ಶಿವರಾಜ್‌. ಎಸ್‌. ಅವರು, ಒಂದು ಸರಕಾರಿ ವಿಜ್ಞಾನ ವಿಭಾಗದ ಕಾಲೇಜು ಕಳೆದುಕೊಳ್ಳದೇ ಅದನ್ನು ಉಳಿಸುವ ಸಂಕಲ್ಪ ತೊಟ್ಟು ಸಿಬ್ಬಂದಿ ಸಹಕಾರದೊಂದಿಗೆ ದಾಖಲಾತಿ ಆಂದೋಲನ ನಡೆಸಿದ್ದರಿಂದ ಇಂದು ಸರಕಾರಿ ಕಾಲೇಜಿಗೆ ಸಂಕ್ರಮಣ ಬಂದಂತಾಗಿದೆ.

ಯಶಸ್ಸಿನ ಮೂಲ ಏನು?: ಜಿಲ್ಲೆಯಲ್ಲಿ ಬರೋಬ್ಬರಿ 9 ವಿಜ್ಞಾನ ವಿಭಾಗದ ಕಾಲೇಜುಗಳಿಗೆ ಪ್ರವೇಶಾತಿಯಿಲ್ಲದೇ ಬಾಗಿಲು ಜಡಿದ ಮೇಲೆ ಅಲ್ಲಿನ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಸಿಂಧನೂರಿನ ಕಾಲೇಜಿಗೂ 2018-19ರಲ್ಲಿ ಇದೇ ಪರಿಸ್ಥಿತಿ ಎದುರಾಗಿತ್ತು. ಶೂನ್ಯ ದಾಖಲಾ ತಿಯಿಂದ ಸ್ಥಗಿತವಾದ ನವಲಿ ಕಾಲೇಜಿನಿಂದ ಗಣಿತ ಉಪನ್ಯಾಸಕ ಸುಜಾವುದ್ದೀನ್‌, ಮಸ್ಕಿಯಲ್ಲಿ ಸ್ಥಗಿತವಾದ ಕಾಲೇಜಿನಿಂದ ಆಗಮಿಸಿದ ಕೆಮಿಸ್ಟ್ರಿ ಉಪನ್ಯಾಸಕ ಸಿದ್ದನಗೌಡ, ಶೂನ್ಯ ದಾಖಲಾತಿ ಕಾರಣಕ್ಕೆ ದಾವಣಗೆರೆಗೆ ನಿಯೋಜನೆ ಹೋಗಿದ್ದ ಭೌತಶಾಸ್ತ್ರ ಉಪನ್ಯಾಸಕ ಅನ್ವರ್‌ ಅವರು ಸಿಂಧನೂರಿನ ಕಾಲೇಜಿಗೆ ಬರುತ್ತಿದ್ದಂತೆ ವಿಜ್ಞಾನ ವಿಭಾಗ ಮರುಜೀವ ಪಡೆದಿದೆ. ಇವರನ್ನೆಲ್ಲ ಕರೆತರುವುದು ಸೇರಿದಂತೆ ದಾಖಲಾತಿ ಆಂದೋಲನ ಆರಂಭಿಸಿದ ಪ್ರಾಚಾರ್ಯ ಶಿವರಾಜ್‌ ಅವರ ಪ್ರಯತ್ನಕ್ಕೆ ಅಂದು ಮಂತ್ರಿಯಾಗಿದ್ದ ವೆಂಕಟರಾವ್‌ ನಾಡಗೌಡ ಅವರು ಸಾಥ್‌ ನೀಡಿದ್ದರಿಂದಲೇ ಯಶಸ್ಸು ಸಾಧ್ಯವಾಗಿದೆ.

ಇದನ್ನೂ ಓದಿ:ಪ್ರೇಮಿಗಳೆ ಟಾರ್ಗೆಟ್| ಮೈಸೂರು ವಿದ್ಯಾರ್ಥಿನಿ ಅತ್ಯಾಚಾರಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗ

ಈಗ ಹೌಸ್‌ಫುಲ್‌: ರಾಯಚೂರು ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲೇ ಅತಿ ಹೆಚ್ಚು ಖಾಸಗಿ ಪಿಯು ಕಾಲೇಜುಗಳನ್ನು ಹೊಂದಿದ ಕೀರ್ತಿ
ಸಿಂಧನೂರಿಗಿದೆ. ಖಾಸಗಿ ಸಂಸ್ಥೆ ಹೆಚ್ಚಾಗುವ ಮುನ್ನ 2003ರಲ್ಲಿ ಇಲ್ಲಿನ ಬಾಲಕರ ಸರಕಾರಿ ಪಿಯು ಕಾಲೇಜು 1,150 ವಿದ್ಯಾರ್ಥಿಗಳನ್ನು
ಹೊಂದಿತ್ತು. 2010ರಿಂದ ಇಳಿಕೆಯತ್ತ ಸಾಗಿ ಶೂನ್ಯಕ್ಕೆ ಹೋದ ಕಾಲೇಜು ಎರಡು ದಶಕದಲ್ಲೇ ಮೊದಲ ಬಾರಿಗೆ ಜೀವಂತಿಕೆ ಪಡೆದಿದೆ. ಸದ್ಯ 36
ಪಿಯು ಕಾಲೇಜುಗಳು ಸಿಂಧನೂರಿನಲ್ಲಿವೆ. 28 ಖಾಸಗಿಯಾದರೆ, 8 ಸರಕಾರಿ ಕಾಲೇಜುಗಳು ಸರಕಾರಿ ಕಾಲೇಜುಗಳ ಪೈಕಿ ಇಲ್ಲಿನ ಕಾಲೇಜು
ಪ್ರವೇಶಾತಿಯಲ್ಲಿ ಮುನ್ನಡೆ ಸಾಧಿಸಿದೆ. 2019-20ನೇ ಸಾಲಿನಲ್ಲಿ 14 ವಿದ್ಯಾರ್ಥಿಗಳ ಪ್ರವೇಶ ಮೂಲಕ ಮರು ಜೀವ ಪಡೆದ ಕಾಲೇಜು,2020-21ನೇ ಸಾಲಿನಲ್ಲಿ 72 ವಿದ್ಯಾರ್ಥಿಗಳ ದಾಖಲಾತಿಯಿಂದ ಚೇತರಿಸಿಕೊಂಡಿದೆ. ವಿಜ್ಞಾನ ವಿಭಾಗಕ್ಕೆ 30 ವಿದ್ಯಾರ್ಥಿಗಳು ದಾಖಲಾದರೆ ಸಾಕು
ಎನ್ನುತ್ತಿದ್ದರು. 135 ವಿದ್ಯಾರ್ಥಿಗಳು ಪ್ರವೇಶ ಪಡೆದ ಪರಿಣಾಮ ಎರಡು ಸೆಕ್ಷನ್‌ ಮಾಡುವ ಸಂದರ್ಭ ಒದಗಿದೆ. ಜತೆಗೆ ನಿತ್ಯವೂ ಬಡ ವಿದ್ಯಾರ್ಥಿಗಳು ಸರಕಾರಿ ಪಿಯು ಕಾಲೇಜಿನಲ್ಲೇ ಪ್ರವೇಶ ಪಡೆಯಲು ಬಯಸಿ ತೆರಳುತ್ತಿದ್ದು, ಈ ಸಂಖ್ಯೆ ಹೆಚ್ಚಳವಾಗುವ ಮುನ್ಸೂಚನೆ ಲಭಿಸಿದೆ.

Advertisement

ಪ್ರಯೋಗಾಲಯಕ್ಕೆ 10 ಲಕ್ಷ ರೂ.
ವಿಜ್ಞಾನ ವಿಭಾಗಕ್ಕೆ ಜೀವ ತುಂಬುವ ಕಾಲೇಜು ಸಿಬ್ಬಂದಿ ಪ್ರಯತ್ನಕ್ಕೆ ಸರಕಾರವೂ ಕೈ ಜೋಡಿಸಿದಂತಾಗಿದೆ. ಇಲ್ಲಿನ ವಿಜ್ಞಾನ ವಿಭಾಗದಲ್ಲಿ
ಹೈಟೆಕ್‌ ಪ್ರಯೋಗಾಲಯ ಆರಂಭಿಸಲು ಬರೋಬ್ಬರಿ 10 ಲಕ್ಷ ರೂ. ಬಿಡುಗಡೆಯಾಗಿದೆ. ಕೊತ್ತಲಬಸವೇಶ್ವರ ಸಂಸ್ಥೆ ವತಿಯಿಂದ 4 ಲಕ್ಷ ರೂ.ವೆಚ್ಚದಲ್ಲಿ ಕುಡಿವ ನೀರಿನ ಶುದ್ಧೀಕರಣ ಘಟಕ ಆರಂಭಿಸಲಾಗಿದೆ. ಮೈದಾನ, ಕಟ್ಟಡ, ಪ್ರಯೋಗಾಲಯ, ಸಿಬ್ಬಂದಿ ಸೇರಿ ಯಾವುದರಲ್ಲೂ ಕೊರತೆ ಇಲ್ಲದ ಸುಸಜ್ಜಿತ ಕಾಲೇಜೆಂಬ ಕೀರ್ತಿಗೆ ಸರಕಾರಿ ಪಿಯು ಕಾಲೇಜು ಪಾತ್ರವಾಗಿದೆ.

ಇತಿಹಾಸದಲ್ಲೇ
ಮೊದಲು ಈ ಕೀರ್ತಿ
ಪ್ರಥಮ ಪಿಯುಸಿ ಮುಗಿಸಿದ ಮೇಲೆ ದ್ವಿತೀಯ ಪಿಯು ಸರಕಾರಿ ಕಾಲೇಜಿನಿಂದ ಖಾಸಗಿಯತ್ತ ಹೋಗುವುದು ಸಾಮಾನ್ಯವಾಗಿತ್ತು. ಇದನ್ನು
ಸರಕಾರಿ ದಾಖಲೆಗಳೇ ಸಾಬೀತು ಪಡಿಸುತ್ತಿದ್ದವು. ಸದ್ಯ ಸಿಂಧನೂರಿನ 7 ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದಲೇ 15 ವಿದ್ಯಾರ್ಥಿಗಳು ದ್ವಿತೀಯ
ಪಿಯುಸಿಗೆ ಇಲ್ಲಿನ ಸರಕಾರಿ ಪಿಯು ವಿಜ್ಞಾನ ವಿಭಾಗಕ್ಕೆ ಪ್ರವೇಶ ವರ್ಗಾಯಿಸಿದ್ದಾರೆ. ಸರಕಾರಿ ಕಾಲೇಜಿನಲ್ಲಿ ಶುಲ್ಕವೂ ಕಡಿಮೆ ಎನ್ನುವ ಮನೋಭಾವದ ಜತೆಗೆ ನುರಿತ ಹಿರಿಯ ಉಪನ್ಯಾಸಕರು ಇಲ್ಲಿದ್ದಾರೆಂಬ ನಂಬಿಕೆ ವಿಜ್ಞಾನ ವಿಭಾಗದ ಬಲ ಹೆಚ್ಚಲು ಕಾರಣವಾಗಿದೆ

ಸಿಂಧನೂರು ಸಿಟಿಯಲ್ಲೇ ಒಂದೇ ಒಂದು ವಿಜ್ಞಾನ ಕಾಲೇಜಿಲ್ಲವೆಂದಾದರೆ, ಬಡ ಮಕ್ಕಳು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ನಿಟ್ಟಿನಲ್ಲಿ ಶಾಸಕ ವೆಂಕಟರಾವ್‌ ನಾಡಗೌಡರೊಟ್ಟಿಗೆ ಚರ್ಚಿಸಿ, ಅಗತ್ಯ ಸೌಲಭ್ಯ ಪಡೆದ ಪರಿಣಾಮ ವಿಜ್ಞಾನ ವಿಭಾಗ ಉಳಿದಿದೆ. ಇಂದಿನ ಹೌಸ್‌ಫುಲ್‌ ಪ್ರವೇಶಕ್ಕೂ ಎಲ್ಲರ ಪರಿಶ್ರಮವೇ ಕಾರಣವಾಗಿದೆ.
-ಶಿವರಾಜ್‌.ಎಸ್‌, ಪ್ರಾಚಾರ್ಯರು,
ಬಾಲಕರ ಸರಕಾರಿ ಪಿಯು ಕಾಲೇಜು, ಸಿಂಧನೂರು.

ನನ್ನೂರಿನ ಕಾಲೇಜಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ ಇಲ್ಲಿಗೆ ಬಂದೆ. ನಮ್ಮ ಪ್ರಾಚಾರ್ಯರು ಕೂಡ ಸಾಥ್‌ ನೀಡಿದ್ದರಿಂದ ಶೂನ್ಯದಿಂದ ದಾಖಲಾತಿಯಲ್ಲಿ ಶತಕ ದಾಟಿ ದ್ವಿಶತಕದ ಗುರಿಯತ್ತ ಸಾಗಲು ಕಾರಣವಾಗಿದೆ.
-ಸುಜಾವುದ್ದೀನ್‌, ಗಣಿತ ಉಪನ್ಯಾಸಕರು, ಸರಕಾರಿ
ಪಿಯು ಕಾಲೇಜು, ಸಿಂಧನೂರು.

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next