ಮಂಗಳೂರು: ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಫಲಾನುಭವಿಗಳ ಸಮಾವೇಶಕ್ಕೆ ಬರುತ್ತಿದ್ದ ಬಸ್‌ಗೆ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜಿನ ಬಳಿ ಗೂಡ್ಸ್ ವಾಹನ ಢಿಕ್ಕಿಯಾಗಿ ಬಸ್ ಜಖಂಗೊಂಡಿದೆ.
ಗುರುವಾರ ಬೆಳಗ್ಗೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಜನರನ್ನು ಬಸ್‌ನಲ್ಲಿ ಕರೆದುಕೊಂಡು ಬರಲಾಗುತಿತ್ತು. ಬೆಳಗ್ಗೆ 10-15ರ ವೇಳೆಗೆ ಸಹ್ಯಾದ್ರಿ ಕಾಲೇಜು ಬಳಿ ತಲುಪುತ್ತಿದ್ದಂತೆ ರಾ.ಹೆದ್ದಾರಿಯಲ್ಲಿ ಬಿ.ಸಿ. ರೋಡ್ ಕಡೆಗೆ ಸಂಚರಿಸುತ್ತಿದ್ದ ಗೂಡ್ಸ್ ವಾಹನವೊಂದು ಚಾಲಕನ ದುಡುಕುತನ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಡಿವೈಡರ್ ದಾಟಿ ವಿರುದ್ಧ ದಿಕ್ಕಿನ ರಸ್ತೆಗೆ ಬಂದು ಬಸ್‌ನ ಮುಂಭಾಗಕ್ಕೆ ವಾಹನ ಢಿಕ್ಕಿಯಾಗಿದೆ.
ಘಟನೆಯಲ್ಲಿ ಬಸ್ಸಿನ ಮುಂಭಾಗದ ಗ್ಲಾಸ್ ಒಡೆದಿದ್ದು, ಬಲಬದಿ ಜಖಂಗೊಂಡಿದೆ. ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.