Advertisement

ಉತ್ತಮ ಪುಸ್ತಕಗಳ ಓದು ನೀಡುವ ವೈಚಾರಿಕ ಪ್ರಜ್ಞೆ ಗೂಗಲ್‌ನಲ್ಲಿ ಸಿಗದು

07:56 PM Jun 25, 2019 | sudhir |

ವಿದ್ಯಾನಗರ: ಎಷ್ಟು ಓದುತ್ತೇವೆ ಎನ್ನುವುದಕ್ಕಿಂತ ಏನನ್ನು ಓದುತ್ತೇವೆ ಎನ್ನುವುದು ಮುಖ್ಯ. ಅಂಕದ ದೃಷ್ಟಿಯಿಂದ ಓದುವ ಅನಿವಾರ್ಯ ಓದುವಿಕೆ ಮತ್ತು ಓದುವುದನ್ನು ಹವ್ಯಾಸವನ್ನಾಗಿಸಿ ಓದುವುದು ಬೇರೆ ಬೇರೆ. ನಮ್ಮವರ ಬಗೆಗಿನ ಬರಹಗಳ ಓದು ಸುತ್ತಮುತ್ತಲಿನ ಆಗುಹೋಗುಗಳು, ಏರಿಳಿತಗಳನ್ನು ಪರಿಚಯಿಸುತ್ತದೆ. ಮಾತ್ರವಲ್ಲದೆ ಅದು ಬರಹಗಾರನ ಹೃದಯದ ತುಡಿತ ಮತ್ತು ಆ ನಾಡಿನ ಧ್ವನಿಯಾಗಿರುತ್ತದೆ. ಆಧುನಿಕ ವೈಜ್ಞಾನಿಕ ಜಗತ್ತು ಬೆರಳ ತುದಿಯಲ್ಲಿ ಮಾಹಿತಿಗಳ ಕಣಜವನ್ನು ತಂದಿಟ್ಟಿದೆ. ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವ ಗೂಗಲ್‌ ಪುಸ್ತಕದ ಓದಿನಿಂದ ಲಭಿಸುವ ವೈಚಾರಿಕ ಪ್ರಜ್ಞೆಯನ್ನು ಎಂದೂ ನೀಡಲಾರದು ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್‌ ಎಂ. ಸಾಲ್ಯಾನ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಅವರು ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ವಿಭಾಗ ಸರಕಾರಿ ಕಾಲೇಜು ಕಾಸರಗೋಡು ಜಂಟಿ ಆಶ್ರಯದಲ್ಲಿ ಸರಕಾರಿ ಕಾಲೇಜಿನಲ್ಲಿ ವಾಚನಾ ಪûಾಚರಣೆ ಅಂಗವಾಗಿ ಹಮ್ಮಿಕೊಂಡ ಓದುವಿಕೆಯ ಮಹತ್ವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪುಸ್ತಕಗಳು ಉತ್ತಮ ಸ್ನೇಹಿತರಿದ್ದಂತೆ. ಓದಿದಷ್ಟು ಬಿಟ್ಟಿರಲಾರದಷ್ಟು ಇಷ್ಟವಾಗುವ ಮತ್ತು ಜ್ಞಾನವನ್ನು ವೃದ್ಧಿಸಿ ಮುನ್ನಡೆಸುವ ದೀವಿಗೆ. ನಿರಂತರ ಮತ್ತು ಸೂಕ್ತ ಆಯ್ಕೆಯ ಓದು ಬದುಕಿನ ಹೊಸ ಆಯಾಮವನ್ನು ತೆರೆದಿಡುತ್ತದೆ. ಸರಿಯಾದ ಗ್ರಹಿಕೆ ಮತ್ತು ಮರು ಓದಿನಿಂದ ಒಂದೇ ಪುಸ್ತಕವನ್ನು ವಿಭಿನ್ನವಾದ ಅಗಾಧತೆಯನ್ನು ಅಥೆೈìಸಿ ಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.

ಓದುವಿಕೆಯ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಓದು ಮನಸ್ಸಿಗೆ ಸಂತೋಷ, ಸಮಾಧಾನ ನೀಡಿ ಏಕಾಗ್ರತೆ ಹೆಚ್ಚಿಸುವ ದಿವ್ಯ ಔಷಧ. ತನ್ಮಯತೆ ಮೂಡಿಸುವ ಮತ್ತು ಜ್ಞಾನಾಭಿವೃದ್ಧಿಗೆ ಪೂರಕವಾದ ಓದು ಹೊಸ ಹೊಸ ವಿಷಯ ಮತ್ತು ವಿಚಾರಗಳ ಅರಿವನ್ನು, ಲೋಕಾನುಭವವನ್ನು ಹಾಗೂ ಮಾಹಿತಿಯನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು. ಆತ್ಮೀಯ ವಾದ ರಚನೆಗಳು ಓದುಗನಿಗೆ ಬೇಗನೆ ಹತ್ತಿರವಾಗುತ್ತದೆ.

ಸಕಾರಾತ್ಮಕ ಆಲೋಚನೆಗೆ ಪ್ರೇರಣೆಯಾಗುತ್ತದೆ. ವೈಚಾರಿಕ ನೆಲೆಗಟ್ಟಿನಲ್ಲಿ ಓದುವ ಹವ್ಯಾಸವು ಆರೋಗ್ಯವಂತ ಮನಸ್ಸಿನ ಮತ್ತು ವ್ಯಕ್ತಿತ್ವದ ವಿಕಾಸಕ್ಕೆ ಕಾರಣವಾಗುತ್ತದೆ. ಹಾಗೆಯೇ ಓದುವಿಕೆಯಿಂದ ಪುಸ್ತಕಗಳಲ್ಲಿ ಅಧ್ಯಯನ ಮತ್ತು ಅನುಭವದ ಹಿನ್ನೆಲೆಯಲ್ಲಿ ಸಾರ್ವಕಾಲಿಕವಾಗಿ ಸಲ್ಲುವ ಸತ್ವ ಮತ್ತು ತತ್ವವನ್ನು ಒಳಗೊಂಡಿರುವುದನ್ನು ಕಾಣಬಹುದು. ದೃಶ್ಯ ಮಾಧ್ಯಮದ ಮೂಲಕ ಜಗತ್ತನ್ನು ವೀಕ್ಷಿಸಬಹುದು. ಆದರೆ ಅನುಭವದ ಸವಿ ನೀಡಲು ಪುಸ್ತಕಗಳಿಂದ ಮಾತ್ರ ಸಾಧ್ಯ. ಪುಸ್ತಕಗಳು ಯಶಸ್ವೀ ಜೀವನದ ಹಾದಿ ತೋರುವ ಮಾರ್ಗದರ್ಶಕಗಳು. ಪುಸ್ತಕದ ಮೂಲಕ ಜನರಿಗೆ ಹತ್ತಿರವಾದ ಅದೆಷ್ಟೋ ಬರಹಗಾರರು ನಮ್ಮೊಂದಿಗಿದ್ದಾರೆ. ಸೋಲುವವನಿಗೆ ಸಾಂತ್ವನವಾಗುವ, ನೊಂದವರಿಗೆ ಆಸರೆಯಾಗುವ ಗುಣ ಓದುವಿಕೆಯಿಂದ ಬರುವಂತದ್ದು. ನಮ್ಮಿಂದ ಸಮಾಜಕ್ಕೆ ಏನು ಮಾಡಬಹುದು ಎಂಬ ಪ್ರಶ್ನೆಗೆ ಉತ್ತರ ನೀಡುವಲ್ಲಿ ಮತ್ತು ಜೀವನವನ್ನು ಸೂಕ್ತ ರೀತಿಯಲ್ಲಿ ಮುನ್ನಡೆಸುವಲ್ಲಿ ಓದುವಿಕೆಯಿಂದ ಗಳಿಸಿದ ಸಾಮಾಜಿಕ ಕಳಕಳಿ ಮತ್ತು ಪ್ರಜ್ಞೆಯ ಮಹತ್ವ ಅರಿವಾಗುತ್ತದೆ. ಮನಸ್ಸಿಗೆ ಪ್ರಫುಲ್ಲತೆಯನ್ನು ನೀಡುವ, ಅರಿವನ್ನು ವೃದ್ಧಿಗೊಳಿಸುವ ಓದು ಮೆದುಳನ್ನು ಹರಿತಗೊಳಿಸುವ ಶಕ್ತಿಯುತವಾಗಿಸುವ ಆಯುಧ ಎಂದು ಹೇಳಿದರು.

Advertisement

ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತಾ ಎಸ್‌. ಅಧ್ಯಕ್ಷತೆ ವಹಿಸಿದರು.
ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನ, ಇತಿಹಾಸ ವಿಭಾಗದ ಮುಖ್ಯಸ್ಥ, ಕಣ್ಣೂರು ವಿಶ್ವವಿದ್ಯಾಲಯದ ಸೆನೆಟ್‌ ಸದಸ್ಯ ವಿಜಯನ್‌, ಸಹಾಯಕ ಜಿಲ್ಲಾ ಮಾಹಿತಿ ಅಧಿಕಾರಿ ವಿ.ಜಿ. ಕಾಸರಗೋಡು ಶುಭಾಶಂಸನೆಗೈದರು. ನಿವೃತ್ತ ಉಪನ್ಯಾಸಕ ಪ್ರೊ| ಶ್ರೀನಾಥ್‌, ಉಪನ್ಯಾಸಕರಾದ ರಾಧಾಕೃಷ್ಣ ಬೆಳ್ಳೂರು ಮುಂತಾದವರು ಉಪಸ್ಥಿತರಿದ್ದರು.

ಉಪನ್ಯಾಸಕ ಡಾ| ಬಾಲಕೃಷ್ಣ ಹೊಸಂಗಡಿ ಸ್ವಾಗತಿಸಿದರು. ಡಾ| ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next