ಕೊಪ್ಪಳ: ಗಂಗಾವತಿ ಪ್ರಾಣೇಶ ಅವರು ಹಾಸ್ಯ ಸಾಹಿತಿ ಬೀಚಿಯವರ ಸಾಹಿತ್ಯವನ್ನು ಅಭ್ಯಾಸ ಮಾಡಿ, ಅವರ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿ ತಾವು ಹಾಸ್ಯ ಭಾಷಣದಿಂದ ಜನರನ್ನು ರಂಜಿಸುತ್ತಾ, ಸಮಾಜಕ್ಕೆ ಸಂದೇಶ ನೀಡುತ್ತಿದ್ದಾರೆ ಎಂದು ಚುಸಾಪ ಅಧ್ಯಕ್ಷ
ಹನುಮಂತಪ್ಪ ಅಂಡಗಿ ಅವರು ಹೇಳಿದರು.
ಗಂಗಾವತಿ ಜಯನಗರದ ಬಿ. ಪ್ರಾಣೇಶ ಅವರ ಮನೆಯಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಾಗೂ ಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾವತಿ ಪ್ರಾಣೇಶ ಅವರನ್ನು ಸನ್ಮಾನಿಸಿ ಮಾತನಾಡಿದರು.
ಹಾಸ್ಯ ದಿಗ್ಗಜ ಪ್ರಾಣೇಶ ಅವರು ಹಾಸ್ಯದ ಮೂಲಕ ಗಂಗಾವತಿಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ್ದಾರೆ. ಇದು ಜಿಲ್ಲೆಯ ಹೆಮ್ಮೆಯೇ ಸರಿ. ಅವರು ಉತ್ತರ ಕರ್ನಾಟಕದ ಭಾಷಾ ಶೈಲಿಯಲ್ಲಿಯೇ ಹಾಸ್ಯದ ತುಣುಕುಗಳನ್ನು ಹೇಳುತ್ತಾ ಜನರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತಾರೆ. ಅವರ ಭಾಷನ ವೈಖರಿಯೇ ಎಲ್ಲರಲ್ಲೂ ನಗು ತರಿಸುವಂತಿರುತ್ತದೆ. ಉತ್ತರ ಕರ್ನಾಟಕದಲ್ಲಿನ ಸೊಗಡನ್ನು ಸರಳವಾಗಿ ಅತ್ಯಂತ ನಯವಾಗಿಯೇ ಎಲ್ಲರಿಗೂ ಉಣಬಡಿಸುವ ಮೂಲಕ ಈ ಭಾಗದಲ್ಲಿ ನಡೆಯುವ ಸ್ವಾರಸ್ಯಕರ ವಿಚಾರಗಳನ್ನು ರಸವತ್ತಾಗಿ ಹೇಳುತ್ತಾರೆ.
ಅಮೆರಿಕಾದ ಅಕ್ಕ ಸಂಸ್ಥೆಯು ಅಲ್ಲಿನ 19 ಪ್ರಮುಖ ನಗರಗಳಲ್ಲಿ ಅವರು ಹಾಸ್ಯ ಕಾರ್ಯಕ್ರಮ ನಡೆಸಿದ್ದಾರೆ. ಹಾಸ್ಯದ ಕುರಿತು ಸಾಕಷ್ಟು ಪುಸ್ತಕಗಳನ್ನು, ಧ್ವನಿಸುರುಳಿಗಳನ್ನು ಹೊರ ತಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಹಾಸ್ಯ ಭಾಷಣ ಕೇಳುವ ಅಸಂಖ್ಯಾತ ವೀಕ್ಷಕರಿದ್ದಾರೆ. ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.
ಗಂಗಾವತಿ ತಾಲೂಕು ಚುಸಾಪ ಅಧ್ಯಕ್ಷ ಅಶೋಕ ಗುಡಿಕೋಟೆ ಮಾತನಾಡಿ, ಗಂಗಾವತಿ ಪ್ರಾಣೇಶ ಅವರು ನನ್ನ ಗುರುಗಳು. ಯಾವಾಗಲೂ ನನ್ನ ಏಳ್ಗೆಯನ್ನು ಬಯಸಿದವರು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ನಮ್ಮ ಗಂಗಾವತಿಗೆ ಸಂದ ಗೌರವವಾಗಿದೆ ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾವತಿಯ ಬಿ. ಪ್ರಾಣೇಶ ಉಪಸ್ಥಿತರಿದ್ದರು.