Advertisement

ಫ್ಲ್ಯಾಟ್‌ ಸಾಲ ತೀರಿಸಲು ಚಿನ್ನದಂಗಡಿಗೆ ಕನ್ನ

11:51 AM Jul 29, 2017 | Team Udayavani |

ಬೆಂಗಳೂರು: ಇತ್ತೀಚೆಗೆ ಹೊಂಗಸಂದ್ರದ ಪವನ್‌ ಜ್ಯುವೆಲರ್ಸ್‌ ಅಂಗಡಿಯ ಗೋಡೆ ಕೊರೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳ ಕಳವು ಮಾಡಿದ್ದ ಮೂವರು ಅಂತರರಾಜ್ಯ ಕಳ್ಳರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಮಹಾರಾಷ್ಟ್ರದ ಪ್ರದೀಪ್‌ ದಿಲೀಪ್‌ ಮೋಲೆ (27), ಪ್ರಫ‌ುಲ್‌ ಚಂದ್ರಕಾಂತ್‌ ಶಿಂಧೆ (35), ಜಾರ್ಖಂಡ್‌ನ‌ ಗೌರಂಗ್‌ಮಂಡಲ್‌ ಬಂಧಿತರು.  ಆರೋಪಿಗಳಿಂದ 70 ಲಕ್ಷ ಮೌಲ್ಯದ 2 ಕೆ.ಜಿ. ಚಿನ್ನಾಭರಣ ಮತ್ತು 20 ಕೆ.ಜಿ. ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪೈಕಿ ಪ್ರಫ‌ುಲ್‌ ಚಂದ್ರಕಾಂತ್‌ ಶಿಂಧೆ ಆಟೋ ಚಾಲಕನಾಗಿದ್ದು, ತಾನು ಫ್ಲಾಟ್‌ ಖರೀದಿ ಮಾಡಲು ಮಾಡಿಕೊಂಡಿದ್ದ ಸಾಲ ತೀರಿಸಲು ಇತರರೊಂದಿಗೆ ಸೇರಿಕೊಂಡು ಕೃತ್ಯವೆಸಗಿದ್ದಾನೆ. 

ದರೋಡೆ ಕೃತ್ಯದ ಪೂರ್ವಯೋಜನೆಯಂತೆಯೇ ಪ್ರಫ‌ುಲ್‌ ಬಹಳ ದಿನಗಳಿಂದ ಸಂಚು ರೂಪಿಸಿ, ಚಿನ್ನಾಭರಣ ಅಂಗಡಿ ಹಿಂಭಾಗದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ. ಬಳಿಕ ಇತರೆ ಆರೋಪಿಗಳನ್ನು ನಗರಕ್ಕೆ ಕರೆಸಿಕೊಂಡು ಕೃತ್ಯ ಎಸಗಿದ್ದ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನು ಮೂವರು ನಾಪತ್ತೆಯಾಗಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಫ‌ುಲ್‌ ಚಂದ್ರಕಾಂತ್‌ ಶಿಂಧೆ ಮುಂಬೈನ ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಆರ್ಟಿಸ್ಟ್‌ಗಳು ಮತ್ತು ಸಿಂಗರ್‌ಗಳನ್ನು ಒದಗಿಸುವ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ಆರೋಪಿ ಸಾಲ ಮಾಡಿ ಮುಂಬೈನಲ್ಲಿ ಸ್ವಂತ ಪ್ಲಾಟ್‌ ಖರೀದಿಸಿದ್ದ. ತನಗೆ ಬರುವ ಅಲ್ಪ ಮೊತ್ತದ ಹಣದಲ್ಲಿ ಸಾಲ ತೀರಿಸಲಾಗದೆ, ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಬಿಳೇಕ್‌ಹಳ್ಳಿಯಲ್ಲಿರುವ ಸನಾ ಮಾರುಕಟ್ಟೆ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ.

ಬಳಿಕ ಪ್ರದೀಪ್‌ ಮತ್ತು ಪಶ್ಚಿಮ ಬಂಗಾಳ ಮೂಲಕ ಮನ್ಸೂರ್‌ ಶೇಖ್‌ ಎಂಬಾತನನ್ನು ಕರೆಸಿಕೊಂಡು ಚಿನ್ನಾಭರಣ ದರೋಡೆ ಮಾಡಿದರೆ ಒಮ್ಮೆಯೇ ಎಲ್ಲ ಸಮಸ್ಯೆ ಬಗೆಹರಿಸಬಹುದೆಂದು ಆಮಿಷವೊಡ್ಡಿ ಕೃತ್ಯವೆಸಗಿದ್ದಾನೆ ಎಂದು ಅವರು ತಿಳಿಸಿದರು.

Advertisement

ಬಾಡಿಗೆ ಮನೆಯಲ್ಲಿ ವಾಸ: ಆರೋಪಿಗಳು ಮೊದಲೇ ಸಂಚು ರೂಪಿಸಿದಂತೆ ಹೊಂಗಸಂದ್ರದ ಪವನ್‌ ಜ್ಯುವೆಲ್ಲರ್ಸ್‌ನಲ್ಲಿ ಕಳವಿಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ಬಳಿಕ ಮಳಿಗೆಯ ಹಿಂಭಾಗದಲ್ಲಿರುವ ಬಾಡಿಗೆ ಮನೆಯಲ್ಲಿ ನೆಲೆಸಿದರೆ ಕಳವು ಮಾಡಬಹುದೆಂದು ನಿರ್ಧರಿಸಿ, 25 ಸಾವಿರ ರೂ. ಮುಂಗಡ ಹಣ ನೀಡಿ ಪ್ರದೀಪ್‌ ಹೆಸರಿನಲ್ಲಿ ಬಾಡಿಗೆ ಪಡೆದುಕೊಂಡಿದ್ದರು. ನಂತರ ಸಂಚು ರೂಪಿಸಿದ್ದಂತೆ ಗೋಡೆ ಕೊರೆಯುವುದರಲ್ಲಿ ಪರಿಣಿತನಾಗಿದ್ದ ಜಾರ್ಖಂಡ್‌ನ‌ ಗೌರಂಗ್‌ ಮಂಡಲ್‌ ಮತ್ತು ಪಶ್ಚಿಮ ಬಂಗಾಳದಿಂದ ಇತರೆ ಇಬ್ಬರು ಆರೋಪಿಗಳನ್ನು ಕರೆಸಿಕೊಂಡಿದ್ದಾರೆ.

ಗೋಡೆ ಕೊರೆದ ಆರೋಪಿಗಳು: ಜ್ಯುವೆಲ್ಲರಿ ಅಂಗಡಿ ಮುಚ್ಚಿದ ನಂತರ ತಡರಾತ್ರಿಯಲ್ಲಿ ಸತತ ನಾಲ್ಕೈದು ದಿನಗಳ ಕಾಲ ಗ್ಯಾಸ್‌ ಕಟ್ಟರ್‌ ಮತ್ತು ಗ್ಯಾಸ್‌ ಸಿಲಿಂಡರ್‌ ಬಳಸಿ ಗೋಡೆ ಕೊರೆದಿದ್ದಾರೆ. ಅಂತಿಮವಾಗಿ ಜೂನ್‌ 29ರಂದು ತಡರಾತ್ರಿ 1 ಗಂಟೆ ಸುಮಾರಿಗೆ ಮಳಿಗೆಯ ಒಳಗೆ ನುಗ್ಗಿ ಚಿನ್ನಾಭರಣಗಳು ಮತ್ತು ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿದ್ದಾರೆ. ಅಲ್ಲದೇ ಗ್ಯಾಸ್‌ ಕಟ್ಟರ್‌ನಿಂದ ಮಳಿಗೆಯಲ್ಲಿದ್ದ ಸೇಫ್ಲಾಕರ್‌ಗಳನ್ನು ಕತ್ತರಿಸಿ ಅದರಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿ ಮಹಾರಾಷ್ಟ್ರ ಮತು ಜಾರ್ಖಂಡ್‌ನ‌ಲ್ಲಿ ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಕೊಟ್ಟಿಗೆಯಲ್ಲಿತ್ತು ಚಿನ್ನ, ಬೆಳ್ಳಿ: ಆರೋಪಿಗಳ ಪೈಕಿ ಪ್ರದೀಪ್‌ ಕಳವು ಮಾಡಿ ಚಿನ್ನಾಭರಣ ಸಮೇತ ತನ್ನ ಸ್ವಂತ ಊರಾದ ಮಾಹಾರಾಷ್ಟ್ರದ ಕೊಲ್ಲಾಪುರಕ್ಕೆ ತೆರಳಿದ್ದ. ಬಳಿಕ ತನ್ನ ಮನೆಯ ಹಿಂಭಾಗದಲ್ಲಿರುವ ಕೊಟ್ಟಿಗೆಯಲ್ಲಿ ಗುಂಡಿ ತೆಗೆದು ಕೆಜಿಗಟ್ಟಲೇ ಚಿನ್ನಾಭರಣವನ್ನು ಅಡಗಿಸಿಟ್ಟು ಮೂರು ದಿನಗಳ ಬಳಿಕ ಎಲ್ಲರೂ ಸಮನಾಗಿ ಹಂಚಿಕೊಂಡಿದ್ದರು ಎಂದು ಪ್ರವೀಣ್‌ ಸೂದ್‌ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ, ಬೊಮ್ಮಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ ರಾಜೇಶ್‌ ಉಪಸ್ಥಿತರಿದ್ದರು.

ಗ್ಯಾಸ್‌ ಕಟ್ಟರ್‌ ಗೌರಂಗ್‌ ಮಂಡಲ್‌: ಜಾರ್ಖಂಡ್‌ ಮೂಲದ ಗೌರಂಗ್‌ ಮಂಡಲ್‌ ವೃತ್ತಿಯಲ್ಲಿ ಗ್ಯಾಸ್‌ ಕಟರ್‌ ಕೆಲಸ ಮಾಡಿಕೊಂಡಿದ್ದು, ಕೃತ್ಯಕ್ಕಾಗಿ ಗ್ಯಾಸ್‌ ಕಟರ್‌ ಮತ್ತು ಸಿಲಿಂಡರ್‌ಗಳನ್ನು ನಗರಕ್ಕೆ ತಂದಿದ್ದ. ಕೃತ್ಯವೆಸಗಿದ ಬಳಿಕ ತನ್ನ ವಸ್ತುಗಳನ್ನು ವಾಪಸ್‌ ಕೊಂಡೊಯ್ದಿದ್ದಾನೆ. ಈ ಹಿಂದೆಯೂ ಕೇರಳ ಮತ್ತು ಮುಂಬೈನಲ್ಲಿ ಚಿನ್ನಾಭರಣ ಅಂಗಡಿಯಲ್ಲಿ ಈತನ ತಂಡವೇ ಕಳವು ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಕ್ಕಿದ್ದು ಹೇಗೆ?: ತನಿಖೆ ನಡೆಯುತ್ತಿದ್ದ ಬೊಮ್ಮನಹಳ್ಳಿ ಪೊಲೀಸರು ಇದೇ ರೀತಿ ಕೃತ್ಯವೆಸಗುವ ತಂಡಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಆರೋಪಿಗಳ ಮನೆ ಬಳಿಯ ಸಿಸಿಟಿವಿಯಲ್ಲಿ ಇವರ ಚಲನವಲನಗಳ ಬಗ್ಗೆ ಸಾಕ್ಷಿ ಸಿಕ್ಕಿತ್ತು. ಹತ್ತಿರದ ಔಷಧಿ ಅಂಗಡಿಯೊಂದರ ಮಾಲೀಕರು ಆರೋಪಿಗಳು ಸಾಮಾನ್ಯವಾಗಿ ಓಡಾಡುವ ಸ್ಥಳದ ಬಗ್ಗೆ ಮಾಹಿತಿ ನೀಡಿದರು. ಇದನ್ನೆ ಬೆನ್ನು ಹತ್ತಿದ್ದ ತನಿಖಾ ತಂಡ ಈ ಮೊದಲು ನೆಲೆಸಿದ್ದ ಮನೆಯ ವಿಳಾಸ ಪತ್ತೆ ಮಾಡಿ, ಅಲ್ಲಿ ವಿಚಾರಣೆ ನಡೆಸಿದರು. ತದನಂತರ ಮಾಹಾರಾಷ್ಟ್ರ, ಪಂಡರಾಪುರ ಹಾಗೂ ಪಶ್ಚಿಮ ಬಂಗಾಳ, ಜಾರ್ಖಂಡ್‌ಗಳಲ್ಲಿ ಆರೋಪಿಗಳಿಗಾಗಿ ಸುತ್ತಾಟ ನಡೆಸಿ ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next