Advertisement

ಪ್ರಜಾತಂತ್ರದ ಮುಕುಟಕ್ಕೆ ಜಾಗತಿಕ ದಾಖಲೆಯ ಗರಿ

11:07 PM Jun 03, 2024 | Team Udayavani |

ಲೋಕಸಭಾ ಚುನಾವಣೆಯ ಮತಎಣಿಕೆ ಮತ್ತು ಫ‌ಲಿತಾಂಶ ಘೋಷಣೆಗಾಗಿ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಸಂಜೆಯ ವೇಳೆಗೆ ಫ‌ಲಿತಾಂಶದ ಸ್ಪಷ್ಟ ಚಿತ್ರಣ ಲಭಿಸಲಿದೆ.

Advertisement

ಬರೋಬ್ಬರಿ ಒಂದೂವರೆ ತಿಂಗಳ ಕಾಲ ನಡೆದ ಈ ಸುದೀರ್ಘ‌ ಚುನಾವಣ ಪ್ರಕ್ರಿಯೆಗೆ ಈ ಮೂಲಕ ತೆರೆ ಬೀಳಲಿದೆ. ಈ ಬಾರಿಯ ಲೋಕಸಭೆ ಚುನಾವಣೆ “ನ ಭೂತೊ’ ಎಂಬಂತೆ ನಡೆದಿದ್ದು ದೇಶದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೊಸ ಇತಿಹಾಸವೊಂದನ್ನು ಸೃಷ್ಟಿಸಿದೆ. ಹಾಲಿ ಚುನಾವಣೆಯಲ್ಲಿ 31.2 ಕೋಟಿ ಮಹಿಳೆಯರ ಸಹಿತ ಒಟ್ಟು 64.2 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಭಾರತ ವಿಶ್ವದಾಖಲೆ ಸೃಷ್ಟಿಸಲು ಕಾರಣರಾಗಿದ್ದಾರೆ. ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿರುವ ಮತ್ತು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಭಾರತದ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣ ಮಾತ್ರವಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದೇಶದ ಜನತೆ ಇರಿಸಿರುವ ದೃಢವಾದ ನಂಬಿಕೆ ಮತ್ತು ವಿಶ್ವಾಸದ ದ್ಯೋತಕವೇ ಸರಿ.

ದಶಕಗಳ ಹಿಂದೆ ಚುನಾವಣೆ ಎಂದರೆ ಗದ್ದಲ, ಘರ್ಷಣೆ, ದೊಂಬಿ, ಹಿಂಸಾಚಾರ, ಸಾವು-ನೋವು ಸಾಮಾನ್ಯ ಎಂಬಂತಿದ್ದ ಕಾಲಘಟ್ಟದಿಂದ ದೇಶವೀಗ ಸಾಕಷ್ಟು ಮುಂದೆ ಸಾಗಿ ಬಂದಿದೆ. ಇತ್ತೀಚಿನ ಚುನಾವಣೆಗಳಲ್ಲಿ ಈ ತೆರನಾದ ಘಟನಾವಳಿಗಳು ವಿರಳವಾಗಿದ್ದರೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಂತೂ ಅಲ್ಲೊಂದು ಇಲ್ಲೊಂದು ಎಂಬಂತೆ ನಡೆದಿದೆ. 2019ರ ಲೋಕಸಭಾ ಚುನಾವಣೆಯ ವೇಳೆ ವಿವಿಧ ಕಾರಣಗಳಿಂದಾಗಿ ದೇಶದ ವಿವಿಧೆಡೆಯ 540 ಮತದಾನ ಕೇಂದ್ರಗಳಲ್ಲಿ ಮರು ಮತದಾನ ನಡೆದಿದ್ದರೆ, ಹಾಲಿ ಚುನಾವಣೆಯಲ್ಲಿ ಈ ಸಂಖ್ಯೆ 39ಕ್ಕೆ ಸೀಮಿತವಾಗಿತ್ತು. ಇದು ಈ ಬಾರಿಯ ಚುನಾವಣೆ ಎಷ್ಟು ವ್ಯವಸ್ಥಿತ ರೀತಿಯಲ್ಲಿ ಸುಲಲಿತವಾಗಿ ನಡೆದಿತ್ತು ಎಂಬುದಕ್ಕೆ ಒಂದು ನಿದರ್ಶನ.

ಇಡೀ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುವಲ್ಲಿ ಚುನಾವಣ ಆಯೋಗ, ಸರಕಾರದ ವಿವಿಧ ಅಂಗಸಂಸ್ಥೆಗಳು, ಭದ್ರತಾ ಪಡೆಗಳ ಪಾತ್ರ ಗಮನಾರ್ಹ. ಇವೆಲ್ಲದಕ್ಕಿಂತ ಮುಖ್ಯವಾಗಿ ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರು ಮತ್ತು ಸಾರ್ವಜನಿಕರು ಚುನಾವಣೆಯ ಮಹತ್ವವನ್ನು ಅರಿತು ಶಾಂತಿಯುತವಾಗಿ ಸಹಕರಿಸಿರುವುದರಿಂದಾಗಿಯೇ ಈ ಸಾಧನೆ, ದಾಖಲೆ ಸಾಧ್ಯವಾಗಿದೆ. 18ನೇ ಲೋಕಸಭೆ ರಚನೆಗಾಗಿ ನಡೆದ ಈ ಚುನಾವಣೆಯ ವೇಳೆ ಮತದಾರರಿಗೆ ಹಂಚಲೆಂದು ನಗದು, ಉಚಿತ ಕೊಡುಗೆಗಳು, ಡ್ರಗ್ಸ್‌, ಮದ್ಯ ಸಹಿತ ಒಟ್ಟು 10,000 ಕೋ.ರೂ.ಗಳಷ್ಟು ಮೌಲ್ಯದ ಚುನಾವಣ ಅಕ್ರಮಗಳನ್ನು ವಶಪಡಿಸಿಕೊಂಡಿರುವುದು ಒಂದು ನಕಾರಾತ್ಮಕ ದಾಖಲೆ. ಚುನಾವಣ ಅಕ್ರಮಗಳನ್ನು ತಡೆಯಲು ಚುನಾವಣ ಆಯೋಗ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರಿಂದಾಗಿ ವಶಪಡಿಸಿಕೊಳ್ಳಲಾದ ಅಕ್ರಮಗಳ ಮೌಲ್ಯ ಹೆಚ್ಚಿದೆ ಎಂದು ಹೇಳಿ ಸಮಾಧಾನಪಟ್ಟುಕೊಳ್ಳಬಹುದಾದರೂ ಇನ್ನೂ ದೇಶದ ಚುನಾವಣ ವ್ಯವಸ್ಥೆಯಲ್ಲಿ ಇಷ್ಟೊಂದು ಬೃಹತ್‌ ಪ್ರಮಾಣದಲ್ಲಿ ಮತದಾರರಿಗೆ ಆಮಿಷವೊಡ್ಡುವ ಪ್ರಯತ್ನಗಳು ನಡೆಯುತ್ತಿರುವುದು ಚಿಂತನಾರ್ಹ. ಈ ವಿಚಾರವಾಗಿ ದೇಶದ ಎಲ್ಲ ರಾಜಕೀಯ ಪಕ್ಷಗಳು, ನಾಯಕರು, ಚುನಾವಣ ಆಯೋಗ ಮಾತ್ರವಲ್ಲದೆ ದೇಶದ ಜನತೆ ಕೂಡ ಪ್ರಜ್ಞಾಪೂರ್ವಕವಾಗಿ ಚಿಂತನೆ ನಡೆಸಬೇಕು.

ಮತದಾನ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು, ನಾಯಕರು, ಕಾರ್ಯಕರ್ತರು ಮತ್ತು ಬೆಂಬಲಿಗರು ತೋರಿದ ಸಹನೆ, ತಾಳ್ಮೆ, ಶಾಂತಚಿತ್ತತೆಯನ್ನು ಮಂಗಳವಾರ ಪ್ರಕಟಗೊಳ್ಳಲಿರುವ ಫ‌ಲಿತಾಂಶದ ಬಳಿಕವೂ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯ. ಚುನಾವಣ ಫ‌ಲಿತಾಂಶ ಏನೇ ಇರಲಿ, ಜನತಾ ಜನಾರ್ದನನ ತೀರ್ಪನ್ನು ವಿಶಾಲ ಮನಸ್ಕರಾಗಿ, ಸಮಚಿತ್ತದಿಂದ ಸ್ವೀಕರಿಸಿ, ದೇಶದ ಅಭಿವೃದ್ಧಿ ಪಥದಲ್ಲಿ ತಾವೂ ಹೆಜ್ಜೆ ಹಾಕಬೇಕು. ನಾಯಕರ ಸಹಿತ ದೇಶದ ಜನತೆಯ ಇಂತಹ ಪ್ರಬುದ್ಧತೆ ದೇಶದ ಪ್ರಜಾಪ್ರಭುತ್ವವನ್ನು ಇನ್ನಷ್ಟು ಶಕ್ತಿಶಾಲಿಯನ್ನಾಗಿಸುವುದರ ಜತೆಯಲ್ಲಿ ವಿಶ್ವಮಾನ್ಯವಾಗಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next