Advertisement

2022ರ ಹೊರಳು ನೋಟ; ವರ್ಷವಿಡೀ ಸದ್ದು ಮಾಡಿದ ಪಿಎಸ್‌ಐ ನೇಮಕಾತಿ ಹಗರಣ

11:49 PM Dec 24, 2022 | Team Udayavani |

2021ರ ಅಕ್ಟೋಬರ್‌ ತಿಂಗಳಲ್ಲಿ  ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಕೆಲವು ಅಭ್ಯರ್ಥಿಗಳು ದೂರಿದ್ದರು. ತೀವ್ರ ಆರೋಪ-ಪ್ರತ್ಯಾರೋಪಗಳ ಬಳಿಕ ಸರಕಾರ ಪ್ರಕರಣವನ್ನು ಎ.10ರಂದು ಸಿಐಡಿಗೆ ವಹಿಸಿತ್ತು.

Advertisement

ಕೇವಲ 21 ಪ್ರಶ್ನೆಗಳಿಗೆ ಉತ್ತರಿಸಿ 100 ಅಂಕಗಳನ್ನು ಪಡೆದಿದ್ದ ವಿರೇಶನನ್ನು ಮೊದಲು ಬಂಧಿಸಲಾಗಿತ್ತು ಹಾಗೂ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಮೂವರು ಪರೀಕ್ಷಾ ಮೇಲ್ವಿ ಚಾರಕರು, ಮೂವರು ಅಭ್ಯರ್ಥಿಗಳು ಹಾಗೂ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿಯ ಪತಿ ರಾಜೇಶ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿ ದ್ದರು. ಆ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ರಾಜ್ಯ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆ ನಡೆಸಿ ಹಂತಹಂತವಾಗಿ ಹಯ್ನಾಳಿ ದೇಸಾಯಿ, ಸಿಎಆರ್‌ ಪೊಲೀಸ್‌ ಪೇದೆ ರುದ್ರಗೌಡ ಪಾಟೀಲ್‌, ಮಹಾಂತೇಶ ಪಾಟೀಲ್‌ ಸೊನ್ನ, ಬ್ಲೂಟೂತ್‌ ಬಳಸಿ ಅಕ್ರಮ ನಡೆಸಿದ ಹಗರಣದ ಕಿಂಗ್‌ಪಿನ್‌ ಅಫ‌ಲ್‌ಪುರದ ರುದ್ರಗೌಡ ಡಿ. ಪಾಟೀಲನನ್ನು ಬಂಧಿಸಿದ್ದರು.

ಪ್ರಕರಣದಿಂದ ಭಾರೀ ಮುಜುಗರಕ್ಕೆ ಒಳಗಾಗಿದ್ದ ಸರಕಾರ ಪೊಲೀಸ್‌ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್‌ ಪೌಲ್‌ ಅವರನ್ನು ಭದ್ರತಾ ವಿಭಾಗಕ್ಕೆ ವರ್ಗಾಯಿಸಿ ಎ.26ರಂದು ಆದೇಶ ಹೊರಡಿಸಿತ್ತು. ಎ. 29ರಂದು ಸಿಐಡಿ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಹಾಗೂ ತಂಡವನ್ನು ಬಂಧಿಸಿದರೆ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಮಂಜುನಾಥ್‌ ಮೇಳಕುಂದಿ ಮತ್ತು ಜ್ಞಾನಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶೀನಾಥ್‌ ಪೊಲೀಸರ ಮುಂದೆ ಶರಣಾದರು.

ಪ್ರಕರಣದ ಸಂಬಂಧ ಅಮೃತ್‌ ಪೌಲ್‌ರನ್ನು ಜು.4ರಂದು ಬಂಧಿಸಲಾಯಿತಾದರೆ ಅಕ್ರಮದ ಸೂತ್ರಧಾರನಾಗಿದ್ದ ಡಿವೈಎಸ್ಪಿ ಶಾಂತಕುಮಾರ್‌ ಅವರನ್ನೂ ತನಿಖಾ ತಂಡ ಬಂಧಿಸಿತ್ತು. ಜು.12ರಂದು ಪ್ರಕರಣದ ಮತ್ತೂಬ್ಬ ಮಧ್ಯವರ್ತಿ ಶಿರಸಿ ಮೂಲದ ಗಣಪತಿ ಭಟ್‌ ಎಂಬಾತನನ್ನು ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

ಪಿಎಸ್‌ಐ ನೇಮಕಾತಿಗಾಗಿ ಮರು ಪರೀಕ್ಷೆ ನಡೆಸ ಲಾಗುವುದು ಎಂದು ಸರಕಾರ ಪ್ರಕಟಿಸಿತ್ತಾದರೂ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾದ್ದರಿಂದ ಮತ್ತು ಪ್ರಕರಣ ನ್ಯಾಯಾಲಯ ದಲ್ಲಿರುವುದರಿಂದ ಈ ಸಂಬಂಧ ಸರಕಾರಕ್ಕೆ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಒಟ್ಟಾರೆ ವರ್ಷವಿಡೀ ಈ ಪ್ರಕರಣ ಭಾರೀ ಸದ್ದು ಮಾಡಿತ್ತು.

Advertisement

ಬಿಜೆಪಿ-ಕಾಂಗ್ರೆಸ್‌ ನಡುವೆ ಪೋಸ್ಟರ್‌ “ಕದನ’
ವಿಧಾನಮಂಡಲದ ಅಧಿವೇಶನದಲ್ಲಿ ಪಿಎಸ್‌ಐ ನೇಮಕಾತಿ ಅಕ್ರಮ, ಶೇ.40 ಪರ್ಸೆಂಟ್‌ ಕಮಿಷನ್‌ ಆರೋಪಗಳ ಗದ್ದಲದ ನಡುವೆಯೇ ಸದನದ ಹೊರಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ಪೋಸ್ಟರ್‌ “ವಾರ್‌’ ಪ್ರಾರಂಭವಾಗಿತ್ತು. ಸೆ.21ರಂದು ವಿಧಾನಸೌಧ, ಮುಖ್ಯಮಂತ್ರಿಗಳ ನಿವಾಸ, ಶಾಸಕರ ಭವನ ಸುತ್ತಮುತ್ತ “ಪೇ ಸಿಎಂ 40 ಪರ್ಸೆಂಟ್‌’ ಹೆಸರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫೋಟೋ ಸಹಿತ ಪೋಸ್ಟರ್‌ ಅಂಟಿಸಲಾಗಿತ್ತು. ಈ ವಿಷಯವಾಗಿ ಉಭಯ ಸದನಗಳಲ್ಲೂ ಆಡಳಿತ ಮತ್ತು ವಿಪಕ್ಷ ಶಾಸಕರ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ಇದು ವಿಪಕ್ಷ ಕಾಂಗ್ರೆಸ್‌ನ ಕೃತ್ಯ ಎಂದು ಬಿಜೆಪಿ ಟೀಕಿಸಿತ್ತು.  ಇದಾದ ಬಳಿಕ ರಾಜ್ಯದೆಲ್ಲೆಡೆ ಮತ್ತು ಸಾಮಾಜಿಕ ಜಾಲತಾಣಗಳಲ್ಲೂ “ಪೇ ಸಿಎಂ’ ಪೋಸ್ಟರ್‌ಗಳು ವ್ಯಾಪಕವಾಗಿ ಹರಿದಾಡಿದ್ದವು. ಇದು ಮುಖ್ಯಮಂತ್ರಿಯಾದಿಯಾಗಿ ಬಿಜೆಪಿ ನಾಯಕರು ಮತ್ತು ಸರಕಾರವನ್ನು ಮುಜುಗರಕ್ಕೀಡುಮಾಡಿತ್ತು.

ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಕಾಂಗ್ರೆಸ್‌ ವಿರುದ್ಧ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿತ್ತು. “ರಿಡೂ ಸಿದ್ದರಾಮಯ್ಯ’, “ಇಡಿ ಡಿಕೆಶಿ’, “ಬರ್ನಾಲ್‌ ಬ್ರದರ್’, “ಕ್ಯಾಶ್‌ ಕಾಂಗ್ರೆಸ್‌’, “ರಾಜ್ಯ ಲೂಟಿ ಮಾಡಿರುವ ಭ್ರಷ್ಟ ಜೋಡಿ ಕಿತ್ತೆಸೆಯಿರಿ’, “ಭಾರತ್‌ ಜೋಡೋ ಯಾತ್ರೆಗೆ ಸಾರ್ವಜನಿಕರಿಂದ ಹಣ ಲೂಟಿ ಮಾಡಲು ಪೆಟಿಎಂ ಹೆಸರು ದುರ್ಬಳಕೆ’ ಎಂಬ ಪೋಸ್ಟರ್‌ಗಳನ್ನು ಹರಿಯಬಿಡುವ ಮೂಲಕ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿತ್ತು.

ಮತದಾರರ ಗೌಪ್ಯ  ಮಾಹಿತಿ ಸೋರಿಕೆ ಪ್ರಕರಣ
ಮತದಾರರ ಪಟ್ಟಿ ಪರಿಷ್ಕರಣೆಗೆ ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡುವ ಮೂಲಕ ಮತದಾರರ ಮಾಹಿತಿ ಕಳವು ಮಾಡಲಾಗಿದೆ ಎಂದು ವಿಪಕ್ಷ ಕಾಂಗ್ರೆಸ್‌ ನ. 17 ರಂದು ಗಂಭೀರ ಆರೋಪ ಮಾಡಿತ್ತು. ಚುನಾವಣ ಆಯೋಗ ಹಗರಣದ ತನಿಖೆಗಾಗಿ ಹಿರಿಯ ಐಎಎಸ್‌ ಅಧಿಕಾರಿ ಆದಿತ್ಯ ಅಮ್ಲಾನ್‌ ಬಿಸ್ವಾಸ್‌ ಅವರನ್ನು ನ. 18ರಂದು ನೇಮಿಸಿ ಆದೇಶ ಹೊರಡಿಸಿತು.

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಸಿದ್ದ “ಚಿಲುಮೆ’ ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರು ಕೆಲವು ದಾಖಲೆಗಳನ್ನು ಜಪ್ತಿ ಮಾಡಿ, ರೇಣುಕಾ ಪ್ರಸಾದ್‌, ಧರ್ಮೇಶ್‌ನನ್ನು ಬಂಧಿಸಿತ್ತು. ನ. 20ರಂದು ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿ ಕುಮಾರ್‌ನನ್ನು ಬಂಧಿಸಲಾಗಿತ್ತು. ಸಂಸ್ಥೆಗೆ “ಸಮೀûಾ’ ಎಂಬ ಆ್ಯಪ್‌ ಸಿದ್ಧಪಡಿಸಿಕೊಟ್ಟಿದ್ದ ಸಾಫ್ಟ್ವೇರ್‌ ಎಂಜಿನಿಯರ್‌ ಸಂಜೀವ್‌ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆ ಬಳಿಕ  ಲೋಕೇಶ್‌ನನ್ನು ನ.22ರಂದು ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಕಾಂಗ್ರೆಸ್‌ ಸಿಎಂ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ಚುನಾವಣ ಆಯೋಗಕ್ಕೆ ದೂರು ನೀಡಿತ್ತು. ಆ ಬಳಿಕ ಚುನಾವಣ ಆಯೋಗ ರಂಗ ಪ್ರವೇಶ ಮಾಡಿದ್ದು ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ, ಮೂವರು ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಿತ್ತು.

ಲೈಂಗಿಕ ದೌರ್ಜನ್ಯಆರೋಪ: ಮುರುಘಾ ಶ್ರೀ ಬಂಧನ
ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ ಚಿತ್ರದುರ್ಗದ ಮುರುಘಾ ಶ್ರೀ ಸಹಿತ ಐವರ ವಿರುದ್ಧ ಆ. 27ರಂದು ಪೋಕೊÕà ಕಾಯಿದೆ ಯಡಿ ಪ್ರಕರಣ ದಾಖ ಲಾಗಿತ್ತು.ಜಿÇÉಾ ಮಕ್ಕಳ ರಕ್ಷಣ ಘಟಕದ ದೂರಿನನ್ವಯ ಮುರುಘಾ ಶ್ರೀ ಸಹಿತ ವಸತಿ ನಿಲಯದ ವಾರ್ಡನ್‌ ರಶ್ಮಿ, ಮಠದ ಮರಿಸ್ವಾಮಿ, ಪರಮಶಿವಯ್ಯ, ವಕೀಲ ಗಂಗಾಧರಯ್ಯ ಅವರ ವಿರುದ್ಧ ಮೈಸೂರಿನ ನಜರ್‌ಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖ ಲಾಗಿತ್ತು.  ಇದೇ ವೇಳೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಅರೋಪದಡಿ ಮುರುಘಾ ಮಠದ ಆಡಳಿತಾಧಿಕಾರಿ ಎಸ್‌.ಕೆ. ಬಸವರಾಜನ್‌ ಹಾಗೂ ಅವರ ಪತ್ನಿ ಸೌಭಾಗ್ಯಬಸವರಾಜನ್‌ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಮುರುಘಾ ಶರಣರ ವಿರುದ್ಧ ದೂರು ದಾಖಲಿಸಿದ್ದ ಬಾಲಕಿಯರನ್ನು ಮೈಸೂರಿನ ಒಡನಾಡಿ ಸಂಸ್ಥೆಯ ಪ್ರತಿನಿಧಿ, ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಆ.28ರಂದು ಚಿತ್ರ ದುರ್ಗಕ್ಕೆ ಕರೆತಂದು, ಬಿಗಿ ಪೊಲೀಸ್‌ ಬಂದೋಬಸ್ತ್ ನಲ್ಲಿ ಬಾಲ ಮಂದಿರದಲ್ಲಿ ಇರಿಸಿದ್ದರು.

ಇದಾದ ಬಳಿಕ ಸ್ಥಳೀಯ ನ್ಯಾಯಾಲಯದಲ್ಲಿ ಬಾಲಕಿಯರ ವಿಚಾರಣೆ ನಡೆಸಿದ್ದು, ಸೆ.1ರಂದು ಮುರುಘಾ ಮಠದ ಶ್ರೀ ಶಿವಮೂರ್ತಿ ಶರಣರನ್ನು ಬಂಧಿಸಲಾಗಿತ್ತು. ಮಠದ ವ್ಯವಸ್ಥಾಪಕ ಪರಮ ಶಿವಯ್ಯ ಅವರನ್ನೂ ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಪ್ರಕರಣದ ಎ-2 ಆರೋಪಿ ಹಾಸ್ಟೆಲ್‌ ವಾರ್ಡನ್‌ ರಶ್ಮಿ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.

ಇದೇ ವೇಳೆ ಶಿವಮೂರ್ತಿ ಶರಣರ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಸಂತ್ರಸ್ತ ವಿದ್ಯಾರ್ಥಿನಿ ಯರಿಗೆ ಕುಮ್ಮಕ್ಕು ನೀಡಿದ ಆರೋಪದಡಿ ಮಠದ ಮಾಜಿ ಆಡಳಿತಾಧಿಕಾರಿ ಎಸ್‌.ಕೆ.ಬಸವರಾಜನ್‌ ಹಾಗೂ ಶಿಕ್ಷಕ ಬಸವರಾಜೇಂದ್ರ ಅವರನ್ನೂ ಬಂಧಿಸಿತ್ತು. ಏತನ್ಮಧ್ಯೆ ಎಸ್‌.ಕೆ.ಬಸವರಾಜನ್‌ಗೆ ಹೈಕೋರ್ಟ್‌ ಡಿ. 22ರಂದು ಜಾಮೀನು ನೀಡಿತ್ತು.

ರಾಜ್ಯ ಸರಕಾರ ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ವಸ್ತ್ರದ ಅವರನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠಕ್ಕೆ ಆಡಳಿತಾಧಿ ಕಾರಿಯನ್ನಾಗಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ನ ಮೆಟ್ಟಿಲೇರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next