ಹೊಸದಿಲ್ಲಿ : ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರಗಳ ಬಗ್ಗೆ ಗರಂ ಆಗಿರುವ ಸುಪ್ರೀಂ ಕೋರ್ಟ್, ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಬಿಹಾರದ ಆಶ್ರಯ ಗೃಹಗಳಲ್ಲಿ ಅಸಹಾಯಕ ಹೆಣ್ಣು ಮಕ್ಕಳ ಮೇಲೆ ನಡೆದಿರುವ ಅತ್ಯಾಚಾರಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಈ ರೀತಿಯ ಆಶ್ರಯ ಗೃಹಗಳು ತಲೆ ಎತ್ತುವುದಕ್ಕೆ ಬಿಹಾರ ಸರಕಾರ ಅವಕಾಶ ಮಾಡಿಕೊಟ್ಟಿರುವುದಾದರೂ ಹೇಗೆ ಎಂದು ಪ್ರಶ್ನಿಸಿದೆ.
ಎನ್‌ಸಿಆರ್‌ಬಿ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಇವತ್ತು ಪ್ರತೀ ಆರು ತಾಸಿಗೆ ಒಂದರಂತೆ ಹೆಣ್ಣು ಮಕ್ಕಳ ಮೇಲೆ ರೇಪ್ ನಡೆಯುತ್ತಿದೆ. ದೇಶದಲ್ಲಿ 38,000 ರೇಪ್ ಕೇಸ್‌ಗಳು ವರದಿಯಾಗಿವೆ. ಅತ್ಯಧಿಕ ರೇಪ್ ಪಟ್ಟಿಯಲ್ಲಿ ಮಧ್ಯ ಪ್ರದೇಶ ಅಗ್ರ ಸ್ಥಾನದಲ್ಲಿದೆ; ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ; ಈ ದೇಶದಲ್ಲಿ ಏನು ನಡೆಯುತ್ತಿದೆ ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಬೇಕಾಬಿಟ್ಟಿ ರೇಪ್ ಗಳು ನಡೆದಿರುವ ಬಿಹಾರದ ಮುಜಫರಪುರದ ಆಶ್ರಯ ಗೃಹಗಳನ್ನು ನಡೆಸುವ ಎನ್‌ಜಿಓ ಗೆ ಬಿಹಾರ ಸರಕಾರ 2004ರಿಂದ ಹಣಕಾಸು ನೆರವು ನೀಡುತ್ತಿದೆ. ಆದರೆ ಅಲ್ಲಿ ಏನು ನಡೆಯುತ್ತಿದೆ ಎಂಬುದೇ ಸರಕಾರಕ್ಕೆ ಗೊತ್ತಿಲ್ಲ. ಇದು ಹೇಗೆ ಸಾಧ್ಯ ? ಅಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಎಂದಾದರೂ ತನಿಖೆ ನಡೆಸುವ ಆಲೋಚನೆ ನಿಮಗೆ ಬರಲೇ ಇಲ್ವ ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು.
ಮುಜಫರಪುರ ಆಶ್ರಯ ಗೃಹಗಳಲ್ಲಿ ಅತ್ಯಾಚಾರ ನಡೆಸಿರುವ ಅಪರಾಧಿಗಳನ್ನು ಶಿಕ್ಷಿಸಲು ಬಿಹಾರ ಸರಕಾರ ಏನು ಮಾಡಿದೆ ಎಂದು ಸುಪ್ರೀಂ ಪ್ರಶ್ನಿಸಿತು.
“ನಮ್ಮ ಅಧಿಕಾರಿಗಳು ಕಾಲಕಾಲಕ್ಕೆ ಈ ಆಶ್ರಯ ಗೃಹಗಳಿಗೆ ಭೇಟಿ ಕೊಟ್ಟಿದ್ದಾರೆ; ಆದರೆ ಅಲ್ಲಿನ ಯಾರೂ ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ದೂರೇ ಕೊಟ್ಟಿಲ್ಲ” ಎಂದು ಬಿಹಾರ ಸರಕಾರ ಸುಪ್ರೀಂ ಗೆ ಉತ್ತರಿಸಿತು.
ಇದಕ್ಕೆ ಪ್ರತಿಯಾಗಿ ಸುಪ್ರೀಂ ಕೋರ್ಟ್, “ನೀವು ಅಲ್ಲಿನ ಮಕ್ಕಳನ್ನು ನೇರವಾಗಿ ಮಾತನಾಡಿಸಬೇಕಿತ್ತು. ಆಗ ಅವರು ಧೈರ್ಯ ವಹಿಸಿ ಅಲ್ಲೇನಾಗುತ್ತಿದೆ ಎಂದು ಅವರು ಹೇಳುತ್ತಿದ್ದರು. ಅಂತಹ ಪ್ರಯತ್ನವನ್ನು ನೀವು ಮಾಡೇ ಇಲ್ಲ” ಎಂದು ಸುಪ್ರೀಂ ಮತ್ತೆ ಬಿಹಾರ ಸರಕಾರಕ್ಕೆ ಚಾಟಿ ಬೀಸಿತು.