Advertisement

ಅಮೆರಿಕದಿಂದ ನೌಕರಿ ಬಿಟ್ಟು ಬಂದ ತುಳುನಾಡಿನ ಹುಡುಗಿ!

10:04 AM Nov 04, 2019 | mahesh |

ಮಹಾನಗರ: ಸಿನೆಮಾದ ಮೇಲಿನ ಅತಿಯಾದ ಸೆಳೆತದಿಂದಾಗಿ ಅಮೆರಿಕ ಬಿಟ್ಟು ಸ್ವದೇಶಕ್ಕೆ ಮರಳಿದ ಕರಾವಳಿಯ ಕುವರಿ ಗಾನಾ ಭಟ್‌, ಸುಮನ್‌ ನಗರ್‌ಕರ್‌ ನಿರ್ಮಾಣದ “ಬಬ್ರೂ’ ಕನ್ನಡ ಚಲನಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಮೂಲಕ, ಚಂದನವನಕ್ಕೆ ಕರಾವಳಿಯ ಮತ್ತೋರ್ವ ಹುಡುಗಿ ಪರಿಚಿತರಾಗುತ್ತಿದ್ದಾರೆ.

Advertisement

ಸಂಪೂರ್ಣವಾಗಿ ಅಮೆರಿಕದಲ್ಲೇ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ “ಬಬ್ರೂ’ ನವೆಂಬರ್‌ ತಿಂಗಳಾಂತ್ಯಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಮಂಗಳೂರಿನ ಗಾನಾ ಭಟ್‌ ಕನ್ನಡಕ್ಕೆ ಹೊಸಬರು. ಮುಂದೆ ಕನ್ನಡದಲ್ಲೇ ಮುಂದುವರಿಯುವ ಆಸಕ್ತಿ ಹೊಂದಿರುವ ಗಾನಾಗೆ “ಬಬ್ರೂ’ವಿನಲ್ಲಿ ನಟಿಸಿದ ಬಳಿಕ ಅವಕಾಶಗಳೂ ಬರುತ್ತಿವೆಯಂತೆ.

ರಸ್ತೆ ಸಂಚಾರದ ಕಥೆ
“ಬಬ್ರೂ’ ಎಂಬುದು ಕಾರಿನ ಹೆಸರಾಗಿದ್ದು, ಇಬ್ಬರು ಭಾರತೀಯರ ರಸ್ತೆ ಸಂಚಾರದ ಕಥೆಯನ್ನು ಇದರಲ್ಲಿ ತೋರಿಸಲಾಗಿದೆ. ಇದೊಂದು ಥ್ರಿಲ್ಲರ್‌ ಸಿನೆಮಾವಾಗಿದ್ದು, ಚಿತ್ರ ನೋಡಿದ ಮೇಲೆ ಒಳ ತಿರುಳು ಗೊತ್ತಾಗಲಿದೆ ಎನ್ನುತ್ತಾರೆ ಗಾನಾ. ಇದರಲ್ಲಿ ನಿರ್ಮಾಪಕಿ ಸುಮನ್‌ ನಗರ್‌ಕರ್‌ ಅವರು ಮಧ್ಯ ವಯಸ್ಕ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಮತ್ತೂಂದು ವಿಶೇಷ.

ಚಿತ್ರದಲ್ಲಿ ಗಾನಾ ಸಹಿತ ಬಹುತೇಕ ಅನಿವಾಸಿ ಭಾರತೀಯರೂ ನಟಿಸಿದ್ದಾರೆ. ಚಿತ್ರತಂಡದ ಸಹಕಾರದೊಂದಿಗೆ ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದೆವು ಎನ್ನುತ್ತಾರವರು.

ಎಂಜಿನಿಯರ್‌ ಹುಡುಗಿಗೆ ಸಿನೆಮಾದ್ದೇ ಕನಸು
ಮಂಗಳೂರಿನಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿದ ಬಳಿಕ ಗಾನಾ ಹಾರಿದ್ದು ಅಮೆರಿಕದತ್ತ. ಅಲ್ಲಿ ಯಾಹೂ ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಕೈ ತುಂಬ ಸಂಬಳ ಪಡೆಯುತ್ತಿದ್ದವರು. ಆದರೆ ಎಳವೆಯಲ್ಲೇ ಸಿನೆಮಾದೆಡೆಗೆ ಇದ್ದ ಆಸಕ್ತಿ, ಗಾನಾರನ್ನು ಅಮೆರಿಕ ತ್ಯಜಿಸಿ ಭಾರತಕ್ಕೆ ಮರಳುವಂತೆ ಮಾಡಿತು. 2015ರಿಂದೀಚೆಗೆ ತಮ್ಮ ಸಿನಿ ಜರ್ನಿಯನ್ನು ಆರಂಭಿಸಿದ್ದ ಗಾನಾ, ಅಮೆರಿಕದಲ್ಲಿದ್ದಾಗಲೇ ಕೆಲವು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದರು. ನಾಗರಾಜ್‌ ಭಟ್‌ ನಿರ್ದೇಶನದ “ಟ್ಯಾಕ್ಸಿ 24×7′ ಹಿಂದಿ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಎಲ್ಲ ಅವಕಾಶಗಳು ಅವರನ್ನು ಸಿನೆಮಾ ಲೋಕಕ್ಕೆ ಪರಿಚಯಿಸಿತು.

Advertisement

ಡ್ಯಾನ್ಸ್‌ ಬಿತ್ತರಕ್ಕೆ ಯೂಟ್ಯೂಬ್‌ ಚಾನೆಲ್‌
ಗಾನಾ ಅವರೊಬ್ಬ ಡ್ಯಾನ್ಸರ್‌ ಕೂಡ ಹೌದು. ತಮ್ಮದೇ ಯೂಟ್ಯೂಬ್‌ ಚಾನೆಲ್‌ ಮಾಡಿಕೊಂಡು ತಮ್ಮ ವಿವಿಧ ಪ್ರಯೋಗಾತ್ಮಕ ನೃತ್ಯಗಳನ್ನು ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಚುರಪಡಿಸುತ್ತಿದ್ದರು. ಗಾನಾ ಸಿನಿ ಪಯಣಕ್ಕೆ ಇದು ಕೂಡ ಪ್ಲಸ್‌ ಪಾಯಿಂಟ್‌ ಆಗಿದೆ ಎನ್ನುತ್ತಾರೆ ಅವರು. ಪ್ರಸ್ತುತ ಬೆಂಗಳೂರಿನ ಯಾಹೂ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದುಕೊಂಡೇ ತಮ್ಮ ಸಿನೆಮಾ ಪಯಣವನ್ನು ಮುಂದುವರಿಸುತ್ತಿದ್ದಾರೆ.

ತುಳು ಸಿನೆಮಾಗಳಲ್ಲೂ ನಟಿಸುವಾಸೆ
ಗಾನಾ ಆಸಕ್ತಿಯ ಕ್ಷೇತ್ರ ಸಿನೆಮಾ. ಅದರಲ್ಲೂ ಕನ್ನಡ ಸಿನೆಮಾಗಳ ಕಡೆ ಹೆಚ್ಚಿನ ಒಲವು. ಅವಕಾಶಗಳು ಬರುತ್ತಿದ್ದರೂ ಉತ್ತಮ ಕಥೆಗಳಿಗಾಗಿ ಎದುರು ನೋಡುತ್ತಿದ್ದೇನೆ ಎನ್ನುವ ತುಳುನಾಡಿನ ಕುವರಿ ಗಾನಾಗೆ, ತುಳು ಚಿತ್ರಗಳಲ್ಲಿಯೂ ನಟಿಸುವಾಸೆಯಂತೆ. ಹೆಚ್ಚಿನ ಎಲ್ಲ ತುಳು ಸಿನೆಮಾಗಳು ಕಾಮಿಡಿ ಆಧಾರಿತವಾಗಿದ್ದು, ಇದು ನನಗೆ ಹೆಚ್ಚು ಖುಷಿ ಕೊಡುತ್ತದೆ. ತುಳುನಾಡಿನ ನನ್ನ ಜನಗಳ ಪ್ರೋತ್ಸಾಹವೂ ನನಗೆ ತುಂಬಾ ಸಿಗುತ್ತಿದೆ. ಹಾಗಾಗಿ ತುಳು ಸಿನೆಮಾದಲ್ಲಿ ನಟಿಸುವ ಅವಕಾಶ ಬಂದರೆ ಖಂಡಿತಾ ಒಪ್ಪಿಕೊಳ್ಳುವೆ ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡರು.

-   ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next