ಹಳ್ಳಿ ಮತ್ತು ಸಿಟಿ, ಈ ಎರಡೂ ಕಡೆಗಳಲ್ಲಿ ಹೆಣ್ಣು ಮಕ್ಕಳು ಬಹಳ ಸಂಭ್ರಮದಿಂದ ಆಡುತ್ತಿದ್ದ ಆಟವೆಂದರೆ, ಐ ಸ್ಪೈ. ತಮಾಷೆ ಅಂದರೆ, ಅದನ್ನು ಎಲ್ಲರೂ ಐಸ್ ಪೈಸ್ ಎಂದು ಕರೆಯುತ್ತಿದ್ದುದು. ಈಗಲೂ ಹೆಚ್ಚಿನವರು ಐಸ್ ಪೈಸ್ ಎಂದೇ ಕರೆಯುವುದುಂಟು. ಐ ಸ್ಪೈ ಅಂದರೆ, ನಾನು ಪತ್ತೆಹಚ್ಚಿದೆ ಎಂದು ಅಥವಾ ನಾನು ಕಂಡುಹಿಡಿದೆ ಎಂದು ಅರ್ಥ. ಹುಡುಗರು, ಹುಡುಗಿಯರು ಒಟ್ಟಿಗೇ ಸೇರಿ, ಅಥವಾ ಪ್ರತ್ಯೇಕವಾಗಿ ಈ ಆಟ ಆಡಬಹುದು.
ಇದನ್ನು ಹೆಚ್ಚಾಗಿ ಹೆಣ್ಣುಮಕ್ಕಳು ಮಾತ್ರ ಆಡುವುದರಿಂದ, ಹುಡುಗಿಯರ ಆಟವೆಂದೇ ಪ್ರಸಿದ್ಧಿ. ಮನೆಗಳ ಎದುರು ಇರುವ ಗೋಡೆಯೇ ಈ ಆಟದ ಸ್ಟಾರ್ಟಿಂಗ್ ಪಾಯಿಂಟ್. ಇನ್ನು ಈ ಆಟದ ವಿಧಾನವೂ ಸೊಗಸಿನದ್ದೇ. ಆಟಕ್ಕೆ 10 ಜನ ಸೇರಿರುತ್ತಾರೆ ಅಂದುಕೊಳ್ಳೋಣ. ಆ ಹತ್ತು ಜನರೂ ಮೊದಲು ಪ್ಲಸ್ ಹಾಕುತ್ತಾರೆ. ಯಾರು ಫೇಲ್ ಆಗುತ್ತಾರೋ, ಅವರಿಗೆ ಉಳಿದವರನ್ನು ಹಿಡಿಯಬೇಕಾದ ಕೆಲಸ. ಆಟ ಶುರುವಾಗುವುದು ಹೀಗೆ- ಪ್ಲಸ್ ಹಾಕಿದಾಗ ಪಾಸ್ ಆಗದೆ ಉಳಿಯುತ್ತಾರಲ್ಲ,
ಅವರು ಗೋಡೆಗೆ ಮುಖ ಮುಚ್ಚಿಕೊಂಡು ನಿಂತು 1 ರಿಂದ 10 ರವರೆಗೆ ಎಣಿಸಬೇಕು. (ಕೆಲವು ಕಡೆ ಯಾವುದಾದರೂ ಹಾಡು ಹೇಳುವ ಪದತಿಯೂ ಇದೆ.) 10 ಎಂದು ಎಣಿಸಿ ಮುಗಿಸುವುದರೊಳಗೆ ಎಲ್ಲರೂ ಗೋಡೆಯ ಆಚೀಚೆ, ಮನೆಯ ಮೂಲೆ, ಬಾಗಿಲಿನ ಮರೆ…ಹೀಗೆ, ಎಲ್ಲೆಲ್ಲೋ ಅಡಗಿಕೊಳ್ಳಬೇಕು. 10 ಎಣಿಸಿದ್ದು ಮುಗಿದ ತಕ್ಷಣ, ಯಾರ್ಯಾರು ಎಲ್ಲೆಲ್ಲಿ ಅಡಗಿದ್ದಾರೆ ಎಂದು ನೋಡಿ, ಅವರಿಗಿಂತ ಮೊದಲೇ ಗೋಡೆಯ ಬಳಿ ಬಂದು, ಅದನ್ನು ಮುಟ್ಟಿ, ಕಮಲಾ ಐ ಸ್ಪೈ, ಸೋನು ಐ ಸ್ಪೈ, ಪ್ರಿಯಾ ಐ ಸ್ಪೈ ಎಂದು ಹೇಳಬೇಕು.
ಹೀಗೇ ಆಟಕ್ಕೆ ಸೇರಿರುವ ಎಲ್ಲರನ್ನೂ ಪತ್ತೆ ಹಚ್ಚಬೇಕು. ಮೊದಲು ಸಿಕ್ಕಿಬಿದ್ದರಲ್ಲ: ಅವರು ಆಟ ಮುಂದುವರಿದಾಗ, ಗೋಡೆಗೆ ಮುಖ ಹಚ್ಚಿ, ಒಂದು- ಎರಡು ಹೇಳಿ, ಉಳಿದವರನ್ನು ಹಿಡಿಯುವ ಕೆಲಸ ಮಾಡಬೇಕು. ಅಕಸ್ಮಾತ್, ಅಡಗಿದ್ದವರು ಬೇಗ ಓಡಿ ಬಂದು ತಾವೇ ಮೊದಲು ಗೋಡೆ ಮುಟ್ಟಿ, ಐ ಸ್ಪೈ ಅಂದುಬಿಟ್ಟರೆ, ಮೊದಲು ಹಿಡಿಯಲು ನಿಂತಿದ್ದವರೇ ಮತ್ತೆ ಅದೇ ಕೆಲಸ ಮಾಡಬೇಕು! ಇದು, ಐ ಸ್ಪೈ ಆಟದ ಗಮ್ಮತ್ತು. ಹೆಣ್ಣುಮಕ್ಕಳು ಮನೆಯ ಮುಂದೆಯೇ ಇದ್ದು ಆಡಬಲ್ಲಂಥ ಆಟ ಇದು. ಹಾಗಾಗಿ, ಈ ಆಟಕ್ಕೆ ಮನೆಯ ಹೆಂಗಸರ/ ಹಿರಿಯರ ಆಕ್ಷೇಪ ಇರಲಿಲ್ಲ. ಇದು ಹೆಣ್ಣು ಮಕ್ಕಳ ಪಾಲಿಗೆ ಕಳ್ಳ- ಪೊಲೀಸ್ ಥರದ ಆಟ ಆಗಿದ್ದರಿಂದ, ಅವರೂ ಆಟವನ್ನು ಎಂಜಾಯ್ ಮಾಡುತ್ತಿದ್ದರು.