ಉಡುಪಿ : ಸಾಮಾನ್ಯ ಯುದ್ಧಕ್ಕಿಂತ ಸೈಬರ್ ಯುದ್ಧದ ಸಾಧ್ಯತೆ ಹೆಚ್ಚುತ್ತಿದೆ ಎಂದು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಕಳವಳ ವ್ಯಕ್ತಪಡಿಸಿದರು.
ಮಣಿಪಾಲ ಎಂಐಟಿಯಲ್ಲಿ ಶನಿವಾರ ಸೈಬರ್ ಅಪರಾಧದ ಕುರಿತು ಮಾತನಾಡಿದ ಅವರು, ಸಾಮಾನ್ಯ ಯುದ್ಧವು ಆಧುನಿಕ ಕಾಲದಲ್ಲಿ ದುಬಾರಿ ಮತ್ತು ಕಡಿಮೆ ಲಾಭದಾಯಕವಾಗಿ ಕಾಣುತ್ತಿದೆ. ಬಹುತೇಕ ರಾಷ್ಟ್ರಗಳು ಸೈಬರ್ ಅಪರಾಧ ಯುದ್ಧಕ್ಕೆ ಆಸಕ್ತಿ ತೋರುತ್ತಿವೆ. ಇದರಿಂದ ಲಾಭ ಅಧಿಕ ಮತ್ತು ಹೆಚ್ಚು ಪರಿಣಾಮಕಾರಿ ಎಂದರು. ಯಾವುದೇ ರಾಷ್ಟ್ರ ಕಾಲು ಕೆರೆದು ಯುದ್ಧಕ್ಕೆ ಬಂದರೂ ಇನ್ನೊಂದು ರಾಷ್ಟ್ರ ಯುದ್ಧಕ್ಕೆ ಹೋಗದ ಸ್ಥಿತಿ ಇದೆ. ಇದರಿಂದ ಯಾರಿಗೂ ಪ್ರಯೋಜನವಿಲ್ಲ ಎಂದರು.
ಅಪಾರ ಅಪರಾಧ: ಸೈಬರ್ ಅಪರಾಧ ಈಗ ಪರಿಹರಿಸಲಾಗದ ದೊಡ್ಡ ಸಮಸ್ಯೆ, ಸವಾಲಾಗಿದೆ. ಈ ಅಪರಾಧಿಗಳನ್ನು ಪತ್ತೆ ಹಚ್ಚುವುದೂ ಕಷ್ಟವಾಗಿದೆ. ಕಾನೂನು ಜಾರಿ ಸಂಸ್ಥೆಗಳೇ ಇದಕ್ಕೆ ಕೊನೆಯ ಉತ್ತರದಾಯಿಗಳು. ಮೊಬೈಲ್ ಆ್ಯಪ್‌ಗ್ಳ ವಿಶ್ವಾಸಾರ್ಹತೆ ನೋಡದೆ ಡೌನ್‌ಲೋಡ್ ಮಾಡಿದರೆ ಬಹಳ ಅಪಾಯವಿದೆ. ಸೆಲ್‌ಫೋನ್‌ಗಳು ಸೈಬರ್ ಅಪರಾಧಗಳ ಕೇಂದ್ರಸ್ಥಾನವಾಗಿವೆೆ. ಮಾ. 31ರಂದು ಒಂದೇ ದಿನ 30 ಟ್ರಿಲಿಯ ಡಾಲರ್ ಮೌಲ್ಯದ 6.2 ಕೋಟಿ ಅಂತಾರಾಷ್ಟ್ರೀಯ ವ್ಯವಹಾರಗಳು ನಡೆದಿವೆ. ಡಾಟಾ ಜಗತ್ತಿಗೆ ದೊಡ್ಡ ಬೆದರಿಕೆ ಇದೆ. ರ್ಯಾನ್‌ಸೋಮ್‌ವೇರ್, ಯೂರೋಪಾ, ಡಾರ್ಕ್‌ವೆಬ್ ಮೊದಲಾದ ಅಪರಾಧಗಳು ವಿಜೃಂಭಿಸುತ್ತಿವೆ. ಮಿರಾಯ್ ಎಂಬ ಇನ್ನೊಂದು ಸೈಬರ್ ಅಪರಾಧ ದೊಡ್ಡ ದೊಡ್ಡ ಕಂಪೆನಿಗಳಿಗೆ ಬೆದರಿಕೆಯಾಗಿದೆ. ಡಾರ್ಕ್ ವೆಬ್ ಎಲ್ಲ ಅಸಾಧ್ಯ ಸೈಬರ್ ಅಪರಾಧಗಳನ್ನು ಸಾಧ್ಯ ಎಂದು ಮಾಡಿತೋರಿಸುತ್ತಿದೆ. ಆಧುನಿಕ ತಂತ್ರಜ್ಞಾನದಿಂದ ಪ್ರಯೋಜನಗಳಿವೆ. ಆದರೆ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಪಾತಕ್ಕೆ ಬೀಳುವುದು ನಿಶ್ಚಿತ ಎಂದು ಹೇಳಿದರು.
ಉಚಿತ ವೈಫೈ ಅಪಾಯ
ಕಾನೂನು ಅನುಷ್ಠಾನ ಸಂಸ್ಥೆಗಳು ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ಉಚಿತ ವೈಫೈ ಸಿಗುತ್ತದೆ ಎಂದು ಮನಬಂದಂತೆ ಬಳಸಿದರೆ ನಿಮ್ಮ ಮೊಬೈಲ್‌ನ ಮಾಹಿತಿಗಳನ್ನು ಕದಿಯಲು ಸಾಧ್ಯ. ಬಾಂಗ್ಲಾದೇಶದ ರಿಸರ್ವ್ ಬ್ಯಾಂಕ್‌ನಿಂದ 100 ಮಿ. ಡಾಲರ್‌ನ್ನು ದೋಚಿದ್ದು ಇನ್ನೂ ಅಪರಾಧಿಗಳು ಸಿಕ್ಕಿಲ್ಲ ಎಂದರು.
ಎಂಐಟಿ ನಿರ್ದೇಶಕ ಡಾ| ಜಿ.ಕೆ.ಪ್ರಭು ಉಪಸ್ಥಿತರಿದ್ದರು. ಟಿವಿ8ನ ಅಶ್ವನ್ ಗುಜ್ರಾಲ್ ಮಾತನಾಡಿದರು.