ಬೆಂಗಳೂರು: ನಗರದಲ್ಲಿ ಒಎಫ್ಸಿ (ಆಪ್ಟಿಕಲ್ ಫೈಬರ್ ಕೇಬಲ್) ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಅನುಮತಿ ಇಲ್ಲದೆ ವಿವಿಧ ಉದ್ದೇಶಗಳಿಗೆ ರಸ್ತೆ ಅಗೆಯುವ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಭಾರೀ ಮೊತ್ತದ ದಂಡ ವಿಧಿಸಲು ನಿರ್ಧರಿಸಿದೆ.
ಅನುಮತಿ ಇಲ್ಲದೆ ರಸ್ತೆ ಕತ್ತರಿಸಿರುವ ಸಂಸ್ಥೆಗಳಿಗೆ 25 ಲಕ್ಷ ರೂ. ಹಾಗೂ ಸಾರ್ವಜನಿಕರಿಗೆ 10 ಲಕ್ಷ ರೂ. ದಂಡ ವಿಧಿಸಲಾಗುವುದು. ಜತೆಗೆ ರಸ್ತೆ ಪುನರ್ ನಿರ್ಮಾಣ ಮಾಡಿಸುವುದಾಗಿ ಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ್ ಆದೇಶ ಹೊರಡಿಸಿದ್ದಾರೆ.
ಅಷ್ಟೇ ಅಲ್ಲ, ರಸ್ತೆಗಳಲ್ಲಿ ಡಾಂಬರೀಕರಣದ ಪೂರ್ವದಲ್ಲೇ ರಸ್ತೆ ಕತ್ತರಿಸುವ ಅನುಮತಿ ಪಡೆದಿರುವ ಕಡೆಗಳಲ್ಲಿ ರಸ್ತೆ ಕತ್ತರಿಸಲಿರುವ ಮೊದಲೇ ಡಾಂಬರೀಕರಣ ಕೈಗೊಂಡರೆ, ಗುತ್ತಿಗೆ ಪಡೆದಿರುವ ಅನುಮತಿಯೇ ಅಸಿಂಧುಗೊಳ್ಳಲಿದೆ. ಅದೇ ರೀತಿ, ಹೊಸದಾಗಿ ಡಾಂಬರೀಕರಣ ಮಾಡಿರುವ ರಸ್ತೆಗಳನ್ನು ಕತ್ತರಿಸಿದರೆ, ರಸ್ತೆ ಕತ್ತರಿಸಿರುವ ಸಂಸ್ಥೆಗಳಿಗೆ 25 ಲಕ್ಷ ರೂ. ದಂಡ ವಿಧಿಸಲಾಗುವುದು.
ಗುಂಡಿಗೊಂದು ಲಕ್ಷ!: ಓಎಫ್ಸಿ ಅನುಮತಿ ಪತ್ರಗಳಲ್ಲಿ ನಿಗದಿಪಡಿಸಿರುವ ಸಂಖ್ಯೆಯ ಎಚ್‌ಡಿಡಿ ಅಳವಡಿಕೆ ಗುಂಡಿಗಳಿಗಿಂತ ಹೆಚ್ಚು ಗುಂಡಿಗಳನ್ನು ತೋಡಿದ್ದಲ್ಲಿ, ಆ ರಸ್ತೆ ಭಾಗದ ಪುನರ್‌ನಿರ್ಮಾಣ ಆಯಾ ಸಂಸ್ಥೆಗಳಿಂದಲೇ ಮಾಡಿಸಲಾಗುವುದು. ಜತೆಗೆ ಪ್ರತಿ ಹೆಚ್ಚುವರಿ ಗುಂಡಿಗೆ ಒಂದು ಲಕ್ಷ ದಂಡ ವಿಧಿಸಲಾಗುವುದು ಎಂದೂ ಆದೇಶದಲ್ಲಿ ಎಚ್ಚರಿಸಲಾಗಿದೆ.
ಅದೇ ರೀತಿ, ನಿಗದಿಯಾದ ಉದ್ದಕ್ಕಿಂತ ಹೆಚ್ಚು ಓಎಫ್ಸಿ ಅಳವಡಿಕೆಯಾದಲ್ಲಿ ಹೆಚ್ಚುವರಿ ಉದ್ದಕ್ಕೆ ಅಥವಾ ಹೆಚ್ಚುವರಿ ಕೇಬಲ್ ಮತ್ತು ಡಕ್ಟ್ ಅಳವಡಿಸಿದಲ್ಲಿ ಪ್ರತಿ ಮೀಟರ್‌ಗೆ ನಿಗದಿತ ಶುಲ್ಕದ ಮೂರುಪಟ್ಟು ದಂಡ ವಸೂಲು ಮಾಡಲಾಗುವುದು. ಓಎಫ್ಸಿ ಅಳವಡಿಕೆ ಪೂರ್ಣಗೊಂಡ 96 ಗಂಟೆಗಳಲ್ಲಿ ಎಚ್‌ಡಿಡಿ ಅಳವಡಿಕೆ ಗುಂಡಿಗಳ ರಸ್ತೆ ಪುನಶ್ಚೇತನ ಪೂರ್ಣಗೊಳ್ಳುವ ಪಕ್ಷದಲ್ಲಿ ಪ್ರತಿ ಗುಂಡಿಗೆ ನಿತ್ಯ 10 ಸಾವಿರ ದಂಡ ವಿಧಿಸಲಾಗುವುದು.
ಓಎಫ್ಸಿ ಅಳವಡಿಕೆ ಅನುಮತಿ ಪಡೆದ ಸಂದರ್ಭಗಳಲ್ಲಿ ಆಯಾ ವಲಯ ವ್ಯಾಪ್ತಿಯ ಎಂಜಿನಿಯರ್‌ಗಳಿಗೆ ಲಿಖೀತಪೂರ್ವ ಮಾಹಿತಿ ನೀಡುವುದು ಕಡ್ಡಾಯವಾಗಿದ್ದು, ಪೂರ್ವಮಾಹಿತಿ ನೀಡದ ಸಂಸ್ಥೆಗಳಿಗೆ ಸದರಿ ಅನುಮತಿ ಪಾವತಿಸಿರುವ ಮೇಲ್ವಿಚಾರಣಾ ಶುಲ್ಕದ ಶೇ. 25ರಷ್ಟು ದಂಡ ವಿಧಿಸಲಾಗುವುದು.
ಮೂರು ಬಾರಿಗಿಂತ ಹೆಚ್ಚು ಸಲ ನಿಯಮ ಉಲ್ಲಂ ಸಿ, ದಂಡ ವಿಧಿಸಲಾಗಿರುವ ಸಂಸ್ಥೆಯ ಜತೆಗಿನ ಒಡಂಬಡಿಕೆಯನ್ನು ಬಿಬಿಎಂಪಿ ರದ್ದುಗೊಳಿಸಿ, ಆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದೂ ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.