Advertisement

ನಾವು ಮರೆತ ಆಟ: ಗಜ್ಜುಗದ ಕಾಯಿ ತನ್ನಿ, ಗುಡ್ನಾ ಆಡೋಣ..

03:31 PM Jul 28, 2020 | mahesh |

ಗ್ರಾಮೀಣ ಕ್ರೀಡೆಗಳೆಂದರೆ ಅತೀ ಕಡಿಮೆ ಹಾಗೂ ಸುಲಭದಲ್ಲಿ ದೊರಕುವ ಸಾಮಗ್ರಿಗಳನ್ನು ಬಳಸಿಕೊಂಡು ಆಟವಾಡಿ, ನೆರೆದವರನ್ನು ರಂಜಿಸುವುದು. ಈ ಆಟಗಳು ಎಳೆಯರ ಸತ್ವಪೂರ್ಣ ಬೆಳವಣಿಗೆಗೆ ಸಹಕಾರಿಯಾಗಬಲ್ಲವು.

Advertisement

ಹೆಣ್ಣುಮಕ್ಕಳು ಆಡುವ ಒಳಾಂಗಣ ಆಟವಾದ ಗುಡ್ನಾ ಕುರಿತು ನೋಡೋಣ. ಗಜ್ಜುಗದ ಗಾತ್ರ ಇರುವ ದುಂಡನೆಯ ಐದು ಕಲ್ಲುಗಳಿಂದ ಎಷ್ಟು ಜನರಾದರೂ ಈ
ಆಟವನ್ನು ಆಡಬಹುದು. ಎರಡು ಕಲ್ಲುಗಳಿಗೆ ಒಂದು “ಅಚ್ಚು’ ಎಂದು ಕರೆಯುವುದರಿಂದ, ಈ ಆಟಕ್ಕೆ ಅಚ್ಚ ಕಲ್ಲಾಟ ಎಂಬ ಹೆಸರೂ ಇದೆ. ಆಟ ಆರಂಭಿಸುವ ಆಟಗಾರ್ತಿ, ಮೊದಲು ಐದು ಕಲ್ಲುಗಳನ್ನು ಕೈಯೊಳಗಿನ ಮುಷ್ಟಿಯಲ್ಲಿ ಹಿಡಿದು ಕುಲುಕಿ ನೆಲದ ಮೇಲೆ ಎಸೆಯುತ್ತಾಳೆ.

ನಂತರ ಐದರಲ್ಲಿ ಒಂದು ಕಲ್ಲನ್ನು ಮೇಲಕ್ಕೆಸೆದು ಅದು ಕೆಳಗೆ ಬೀಳುವಷ್ಟರಲ್ಲಿ, ನೆಲದ ಮೇಲಿನ ಉಳಿದ ನಾಲ್ಕರಿಂದ ಒಂದು ಕಲ್ಲನ್ನು ಎತ್ತಿಕೊಂಡು ಬೀಳುತ್ತಿರುವ ಕಲ್ಲನ್ನು ಹಿಡಿದುಕೊಳ್ಳುತ್ತಾಳೆ. ಮೇಲಿಂದ ಬೀಳುವ ಕಲ್ಲು ಕೈ ತಪ್ಪಿದರೆ ಆಟ ಸೋತಂತೆ. ಇದೇ ರೀತಿ ಐದು ಸಲ ಆಡುವುದಕ್ಕೆ ಒಂದು ಗುಚ್ಚಿ ಆಟ ಎನ್ನುತ್ತಾರೆ. ಇಂತಹ ಐದು ಗುಚ್ಚಿ ಆಟಗಳನ್ನು ಆಡುವರು. ಇದಾದ ನಂತರ ಎರಡು ಕಲ್ಲು, ಮೂರು ಕಲ್ಲು, ನಾಲ್ಕು ಕಲ್ಲುಗಳನ್ನು ಒಟ್ಟೊಟ್ಟಿಗೆ ಎತ್ತಿಕೊಳ್ಳುವರು. ಕೊನೆಯಲ್ಲಿ ಐದು ಕಲ್ಲುಗಳನ್ನು ಮೇಲೆಸೆದು ಬೊಗಸೆಯಲ್ಲಿ ಹಿಡಿದುಕೊಳ್ಳುವರು.

ಅಣ್ಣ ಕಲ್ಲಾಟ (ಬಯಲು ಸೀಮೆಯಲ್ಲಿ ಇದಕ್ಕೆ ಅಣ್ಣೆ ಕಲ್ಲಿನ ಆಟ ಎಂಬ ಹೆಸರಿದೆ) ಆಡುವಾಗ ಕಲ್ಲಿಗೆ ಕಲ್ಲು, ಕೈಗೆ ಕೈ ತಾಗಬಾರದು. ಮೇಲೆ ಎಸೆಯುವ ಕಲ್ಲು ಕೆಳಗೆ ಬೀಳಬಾರದು. ಹಸ್ತ ಮತ್ತು ಬೆರಳುಗಳಿಗೆ ಅತ್ಯುತ್ತಮವಾಗಿ ವ್ಯಾಯಾಮವನ್ನು ಒದಗಿಸುವ ಈ ಆಟದಲ್ಲಿ, ಗುದ್ದಿನ ಆಟ, ಗೆದಿಯುವ ಆಟ, ಸೆಣೆಯುವ ಆಟ, ಗಿಚ್ಚಿಯಾಟ, ಐದು ಗುಂಜು ಆಟ ಮೊದಲಾದ ಬಗೆಗಳಿವೆ. ಗುಡ್ನಾ, ಗುಟ್ಟೆ, ಪಚೆಟಾ ಇತ್ಯಾದಿ ಹೆಸರುಗಳು ಈ ಆಟಕ್ಕೆ ಇವೆ. ಗಜ್ಜುಗಕ್ಕೆ ಇರುವ ಔಷಧಿಯ ಗುಣಗಳನ್ನು ಗಮನಿಸಿ, ಗಜ್ಜುಗದ ಕಾಯಿಗಳನ್ನು ಈ ಆಟದಲ್ಲಿ ಉಪಯೋಗಿ ಸುವ ಅಭ್ಯಾಸವೂ ಕೆಲವೆಡೆ ಇದೆ. ಗಜ್ಜುಗದ ಕಾಯಿ ಸಿಗದೇ ಹೋದಾಗ, ಸಣ್ಣಕಲ್ಲುಗಳನ್ನು ಬಳಸಿಯೂ ಈ ಆಟವನ್ನು ಆಡಬಹುದು. ಮನೆಯಲ್ಲಿ ಆರಾಮವಾಗಿ ಕುಳಿತು, ಮಕ್ಕಳೊಂದಿಗೆ ಸಣ್ಣವರು, ದೊಡ್ಡವರು ಎಂಬ ಬೇಧವಿಲ್ಲದೇ ಆಡಬಹುದಾದ ಆಟವಿದು. ಒಮ್ಮೆ ಆಡಿ ನೋಡಿ.

ಸಾವಿತ್ರಿ ಶ್ಯಾನುಭಾಗ

Advertisement
Advertisement

Udayavani is now on Telegram. Click here to join our channel and stay updated with the latest news.

Next